ಆರ್‌ಸಿಬಿ vs ಸಿಎಸ್‌ಕೆ: ಬೆಂಗಳೂರಲ್ಲಿ ಭಾರಿ ಮಳೆ; ಕನಿಷ್ಠ 5 ಓವರ್‌ ಪಂದ್ಯ ನಡೆಸಲು ಎಷ್ಟು ಗಂಟೆಯವರೆಗೆ ಸಮಯವಿದೆ?
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ Vs ಸಿಎಸ್‌ಕೆ: ಬೆಂಗಳೂರಲ್ಲಿ ಭಾರಿ ಮಳೆ; ಕನಿಷ್ಠ 5 ಓವರ್‌ ಪಂದ್ಯ ನಡೆಸಲು ಎಷ್ಟು ಗಂಟೆಯವರೆಗೆ ಸಮಯವಿದೆ?

ಆರ್‌ಸಿಬಿ vs ಸಿಎಸ್‌ಕೆ: ಬೆಂಗಳೂರಲ್ಲಿ ಭಾರಿ ಮಳೆ; ಕನಿಷ್ಠ 5 ಓವರ್‌ ಪಂದ್ಯ ನಡೆಸಲು ಎಷ್ಟು ಗಂಟೆಯವರೆಗೆ ಸಮಯವಿದೆ?

RCB vs CSK: ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಪಂದ್ಯಗಳಿಗೆ ಮಳೆ ಅಡ್ಡಿಯಾಗುವ ಸಂಭವವಿದೆ. ಈಗಾಗಲೇ ಬೆಂಗಳೂರಿನ ಹಲವು ಭಾಗಗಳಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ಪಂದ್ಯ ಮುಂದೂಡಿಕೆ ಆಗುವುದು ಬಹುತೇಕ ಖಚಿತ. ಹಾಗಿದ್ದರೆ, ಪಂದ್ಯಕ್ಕೆ ಮಳೆ ಅಡ್ಡಿಯಾದರೆ, ಪಂದ್ಯ ನಡೆಸಲು ರಾತ್ರಿ ಎಷ್ಟು ಗಂಟೆಯವರೆಗೆ ಸಮಯವಿದೆ ಎಂಬುದನ್ನು ನೋಡೋಣ.

ಕನಿಷ್ಠ 5 ಓವರ್‌ ಪಂದ್ಯ ನಡೆಸಲು ಎಷ್ಟು ಗಂಟೆಯವರೆಗೆ ಸಮಯವಿದೆ?
ಕನಿಷ್ಠ 5 ಓವರ್‌ ಪಂದ್ಯ ನಡೆಸಲು ಎಷ್ಟು ಗಂಟೆಯವರೆಗೆ ಸಮಯವಿದೆ? (ANI)

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (RCB vs CSK) ತಂಡಗಳ ನಡುವಿನ ಐಪಿಎಲ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಭೀತಿ ಇದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಇಂದು ಹಲವೆಡೆ ಮಳೆಯಾಗುತ್ತಿದೆ. ಎಂ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಶೇ. 80ರಷ್ಟು ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ. ಹೀಗಾಗಿ ಅಭಿಮಾನಿಗಳಿಗೆ ಪಂದ್ಯ ರದ್ದಾಗುವ ಚಿಂತೆ ಇದೆ. ಒಂದು ವೇಳೆ ಪಂದ್ಯ ರದ್ದಾದರೆ, ಆರ್‌ಸಿಬಿಯು ಐಪಿಎಲ್‌ 2024ರಿಂದ ಹೊರಬೀಳಲಿದೆ. ಹಾಗಿದ್ದರೆ, ಮಳೆಯಾದ ಸಂದರ್ಭದಲ್ಲಿ ಪಂದ್ಯ ನಡೆಸಲು ಅವಕಾಶ ಎಷ್ಟು ಸಮಯದವರೆಗೆ ಇರುತ್ತದೆ? ಕನಿಷ್ಠ ಎಷ್ಟು ಓವರ್‌ಗಳ ಪಂದ್ಯ ನಡೆಸಬೇಕು ಎಂಬುದನ್ನು ನೋಡೋಣ.

ಪ್ರಸಕ್ತ ಆವೃತ್ತಿಯನ್ನು ತೀರಾ ಕಳಪೆ ರೀತಿಯಲ್ಲಿ ಆರಂಭಿಸಿದ ಆರ್‌ಸಿಬಿ, ಪಂದ್ಯಾವಳಿಯ ದ್ವಿತೀಯಾರ್ಧದಲ್ಲಿ ಅಮೋಘ ಪ್ರದರ್ಶನ ನೀಡಿದೆ. ಸತತ 5 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಇದೀಗ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವಿನ ಅಗತ್ಯವಿದೆ. ಸಿಎಸ್‌ಕೆ ವಿರುದ್ಧ ಇಂದು ಬೆಂಗಳೂರು ತಂಡವು ಒಂದಾ 18ಕ್ಕೂ ಹೆಚ್ಚು ರನ್‌ಗಳ ಅಂತರದಿಂದ ಗೆಲ್ಲಬೇಕು ಅಥವಾ 11 ಎಸೆತಗಳನ್ನು ಉಳಿಸಿ ಚೇಸ್‌ ಮಾಡಬೇಕು. ಆಗ ಮಾತ್ರ ಪ್ಲೇಆಫ್‌ಗೆ ಲಗ್ಗೆ ಹಾಕುತ್ತದೆ.

ಪಂದ್ಯಕ್ಕೆ ಮಳೆ ಅಡ್ಡಿಯಾದರೆ, ಸಂಪೂರ್ಣ 20 ಓವರ್‌ಗಳ ಪಂದ್ಯ ನಡೆಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಓವರ್‌ಗಳನ್ನು ಕಡಿತಗೊಳಿಸಿದರೆ, ಆ ಸಂದರ್ಭದಲ್ಲೂ ಆರ್‌ಸಿಬಿಗೆ ಮೇಲಿನ ಅಂತರದ ಗೆಲುವು ಅತ್ಯಗತ್ಯ. ಅದು 5 ಓವರ್‌ಗಳ ಪಂದ್ಯಾವದಾರೂ ಸರಿ. 18 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಂದ ಗೆಲ್ಲಬೇಕಾಗುತ್ತದೆ. ಒಂದು ವೇಳೆ 5 ಓವರ್‌ಗಳ ಪಂದ್ಯ ನಡೆದು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್‌ಕೆ 70 ರನ್‌ ಗಳಿಸಿದರೆ, ಆರ್‌ಸಿಬಿಯು ಅದನ್ನು 3.1 ಓವರ್‌ಗಳಲ್ಲಿ ಚೇಸ್‌ ಮಾಡಬೇಕಾಗುತ್ತದೆ. ಅಂದರೆ, 11 ಎಸೆತಗಳನ್ನು ಉಳಿಸಲೇಬೇಕು. ಆಗ ಮಾತ್ರ ಆರ್‌ಸಿಬಿಯು ಚೆನ್ನೈ ನೆಟ್ ರನ್ ರೇಟ್ ಮೀರಿಸಿ ಪ್ಲೇಆಫ್‌ ಪ್ರವೇಶಿಸುತ್ತದೆ.

ಇದನ್ನೂ ಓದಿ | ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿವು; ಮ್ಯಾಚ್‌ ನೋಡಲು ಬಂದವರು ಮಿಸ್‌ ಮಾಡದೆ ನೋಡಿ

ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಟಾಸ್‌ ಪ್ರಕ್ರಿಯೆ ವಿಳಂಬವಾಗುತ್ತದೆ. ಪೂರ್ವ ನಿರ್ಧರಿತ ಸಮಯದ ಪ್ರಕಾರ, ಟಾಸ್‌ ಪ್ರಕ್ರಿಯೆ ಸಂಜೆ 7.00 ಗಂಟೆಗೆ ನಡೆಯಬೇಕು. ಪಂದ್ಯವು 7.30ಕ್ಕೆ ಆರಂಭವಾಗಬೇಕು. ಮಳೆಯಿಂದಾಗಿ ಇದು ಸಾಧ್ಯವಾಗದಿದ್ದರೆ ಟಾಸ್ ಮುಂದೂಡಲಾಗುತ್ತದೆ. ಮಳೆ ನಿಂತ ಬಳಿಕ, ಸಮಯದ ಆಧಾರದಲ್ಲಿ ಓವರ್‌ ಕಡಿತಗೊಳಿಸಿ ಪಂದ್ಯ ನಡೆಸಲಾಗುತ್ತದೆ.‌

5 ಓವರ್‌ಗಳ ಪಂದ್ಯ ನಡೆಯಲೇಬೇಕು

ಎಷ್ಟೇ ಮಳೆಯಾದರೂ, ಐಪಿಎಲ್‌ ಟಿ20 ಪಂದ್ಯದ ಫಲಿತಾಂಶ ಪಡೆಯಲು ಕನಿಷ್ಠ 5 ಓವರ್‌ಗಳ ಪಂದ್ಯವನ್ನು ನಡೆಸಲೇಬೇಕು. ಅದಕ್ಕಿಂತ ಕಡಿಮೆ ಓವರ್‌ಗಳ ಪಂದ್ಯ ನಡೆಸುವುದಿಲ್ಲ. 5 ಓವರ್‌ ಪಂದ್ಯ ನಡೆಸಲು ಕೂಡಾ ಮಳೆ ಅವಕಾಶ ನೀಡದೆ ಹೋದರೆ, ಅಧಿಕೃತವಾಗಿ ಪಂದ್ಯವನ್ನು ರದ್ದು ಮಾಡಲಾಗುತ್ತದೆ. ಹಾಗಿದ್ದರೆ ಈ 5 ಓವರ್‌ಗಳ ಪಂದ್ಯ ನಡೆಸಲು ಎಷ್ಟು ಗಂಟೆಗಳ ಸಮಯವಿದೆ ಎಂಬುದನ್ನು ನೋಡೋಣ.

ರಾತ್ರಿ 10:56ರ ಒಳಗೆ ಪಂದ್ಯ ಆರಂಭವಾಗಬೇಕು

ಕನಿಷ್ಠ ತಲಾ 5 ಓವರ್‌ಗಳ ಆಟಕ್ಕೆ ಕಟ್-ಆಫ್ ಸಮಯ ರಾತ್ರಿ 10:56. ಅಂದರೆ, ಈ ಸಮಯದ ಒಳಗಡೆ ಪಂದ್ಯ ಆರಂಭ ಆಗಬೇಕು. ಇದರರ್ಥ ಸಬ್‌ಏರ್‌ ವ್ಯವಸ್ಥೆ ಇರುವ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕನಿಷ್ಠ 10:15ರ ವೇಳೆಗೆ ಮಳೆ ನಿಂತಿರಬೇಕು. ಅದಾಗಿ 15-20 ನಿಮಿಷಗಳ ಕಾಲ ಮೈದಾನ ಪಂದ್ಯಕ್ಕೆ ಸಜ್ಜಾದರೆ, ಅಧಿಕಾರಿಗಳು ಮೈದಾನವನ್ನು ಪರಿಶೀಲಿಸಿ ಪಂದ್ಯಕ್ಕೆ ಗ್ರೀನ್‌ ಸಿಗ್ನಲ್‌ ಕೊಡುತ್ತಾರೆ. ಹೀಗಾಗಿ ಕನಿಷ್ಠ 10.45ರ ಒಳಗೆ ಟಾಸ್‌ ಪ್ರಕ್ರಿಯೆ ನಡೆಸಬೇಕು. ಅಷ್ಟರವರೆಗೆ ಮಳೆ ನಿಲ್ಲುವ ಸಾಧ್ಯತೆ ಇಲ್ಲ ಎಂದರೆ ಪಂದ್ಯವನ್ನು ಅಧಿಕೃತವಾಗಿ ರದ್ದು ಮಾಡಲಾಗುತ್ತದೆ. ಹೀಗಾಗಿ 10.30ರ ವೇಳೆಗೆ ಮಳೆಯ ಸ್ಥಿತಿಗತಿ ಆಧಾರದಲ್ಲಿ ಪಂದ್ಯ ನಡೆಸಲು ಸಾಧ್ಯವೇ ಅಥವಾ ಇಲ್ಲವೇ ಎಂಬುದನ್ನು ಅಂಪೈರ್‌ಗಳು ನಿರ್ಧರಿಸುತ್ತಾರೆ. ಸಾಧ್ಯ ಇಲ್ಲ ಎಂದಾದರೆ ಪಂದ್ಯ ರದ್ದಾಗುತ್ತದೆ. ಹೀಗಾದರೆ, ಆರ್‌ಸಿಬಿ ಟೂರ್ನಿಯಿಂದ ನಿರ್ಗಮಿಸುತ್ತದೆ.

ಇದನ್ನೂ ಓದಿ | ಆರ್‌ಸಿಬಿ vs ಸಿಎಸ್‌ಕೆ ಪಂದ್ಯದ ಟಿಕೆಟ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್;‌ 1500 ರೂ ಟಿಕೆಟ್‌ ಬೆಲೆ ಐದಂಕಿಗೆ ಏರಿಕೆ!

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner