ಕನ್ನಡ ಸುದ್ದಿ  /  Cricket  /  What Is The Speciality Icc Odi Cricket World Cup Trophy Worth Size Weight And What Is It Made Of Ind Vs Aus Final Prs

ವಿಶ್ವಕಪ್ ಟ್ರೋಫಿ ವೈಶಿಷ್ಟ್ಯ ಏನು, ತೂಕ-ಎತ್ತರ ಎಷ್ಟಿದೆ, ಚಿನ್ನದ್ದಾ ಬೆಳ್ಳಿಯದ್ದಾ; ಇಲ್ಲಿದೆ ಆಸಕ್ತಿಕರ ಮಾಹಿತಿ

(ICC ODI Cricket World Cup: ಏಕದಿನ ವಿಶ್ವಕಪ್ ಟ್ರೊಫಿ ವಿಶೇಷತೆಗಳ ಕುರಿತು ಗೂಗಲ್​ನಲ್ಲಿ ಹೆಚ್ಚು ಹುಡುಕಾಟ ನಡೆಯುತ್ತಿದೆ‌‌. ಈ ಟ್ರೋಫಿ ಬಗ್ಗೆ ನಿಮಗೆಷ್ಟು ಗೊತ್ತು? ಈ ಟ್ರೋಫಿ ಚಿನ್ನದ್ದಾ ಬೆಳ್ಳಿಯದ್ದಾ? ತೂಕ ಎಷ್ಟಿದೆ? ಇದರ ಬೆಲೆ ಎಷ್ಟು? ಎಷ್ಟು ಅಡಿ ಎತ್ತರ ಇದೆ? ಇಲ್ಲಿದೆ ಆಸಕ್ತಿಕರ ಮಾಹಿತಿ.

ವಿಶ್ವಕಪ್ ಟ್ರೋಫಿಯೊಂದಿಗೆ ಪ್ಯಾಟ್ ಕಮಿನ್ಸ್.
ವಿಶ್ವಕಪ್ ಟ್ರೋಫಿಯೊಂದಿಗೆ ಪ್ಯಾಟ್ ಕಮಿನ್ಸ್. (REUTERS)

2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ (ICC ODI Cricket World Cup 2023) ಅದ್ಧೂರಿ ತೆರೆ ಬಿದ್ದಿದೆ. ಟೀಮ್ ಇಂಡಿಯಾ ನಿರಾಶಾದಾಯಕ ಸೋಲಿನೊಂದಿಗೆ ಅಭಿಯಾನ ಮುಗಿಸಿದೆ. ಆಸ್ಟ್ರೇಲಿಯಾ ವಿಶ್ವದಾಖಲೆಯ ಆರನೇ ಟ್ರೋಫಿ (India vs Australia) ಗೆದ್ದಿದೆ. ಆದರೆ, ಆಸೀಸ್​ ಟ್ರೋಫಿ ಗೆದ್ದಾಗಿನಿಂದ ಭಾರತೀಯರಿಗೆ ಅದರ ಮೇಲೆಯೇ ಕಣ್ಣು ಬಿದ್ದಿದೆ.

ಸದ್ಯ ಟ್ರೊಫಿ ವಿಶೇಷತೆಗಳ ಕುರಿತು ಗೂಗಲ್​ನಲ್ಲಿ ಹೆಚ್ಚು ಹುಡುಕಾಟ ನಡೆಯುತ್ತಿದೆ‌‌. ಏಕದಿನ ವಿಶ್ವಕಪ್ ಟ್ರೋಫಿ ಬಗ್ಗೆ ನಿಮಗೆಷ್ಟು ಗೊತ್ತು? ಈ ಟ್ರೋಫಿ ಚಿನ್ನದ್ದಾ ಬೆಳ್ಳಿಯದ್ದಾ? ತೂಕ ಎಷ್ಟಿದೆ? ಇದರ ಬೆಲೆ ಎಷ್ಟು? ಎಷ್ಟು ಅಡಿ ಎತ್ತರ ಇದೆ? ಗೆದ್ದವರಿಗೆ ಈ ಟ್ರೋಫಿ ಕೊಡಲ್ಲ ಏಕೆ? ಇಲ್ಲಿದೆ ಆಸಕ್ತಿಕರ ಮಾಹಿತಿ.

ವಿನ್ಯಾಸಗೊಳಿಸಿದ್ದು ಯಾವಾಗ?

1975ರಲ್ಲಿ ಏಕದಿನ ವಿಶ್ವಕಪ್ ಆರಂಭಗೊಂಡರೂ ಅಧಿಕೃತ ಟ್ರೋಫಿ ವಿನ್ಯಾಸಗೊಳಿಸಿದ್ದು 1999ರಲ್ಲಿ. ಅದಕ್ಕೂ ಮುನ್ನ 1975-1996ರ ನಡುವೆ ಜರುಗಿದ 6 ವಿಶ್ವಕಪ್‌ಗಳಲ್ಲಿ ವಿಭಿನ್ನ ವಿಭಿನ್ನ ವಿನ್ಯಾಸ ಹೊಂದಿದ್ದ ಟ್ರೋಫಿಗಳನ್ನು ನೀಡಲಾಗಿತ್ತು.

ವಿನ್ಯಾಸಗೊಳಿಸಿದ ಕಂಪನಿ ಯಾವುದು?

1999ರ ವಿಶ್ವಕಪ್‌ನಲ್ಲಿ ಟ್ರೋಫಿಯನ್ನು ವಿನ್ಯಾಸಗೊಳಿಸಿ, ಅಧಿಕೃತವಾಗಿ ಬಳಸಲಾಯಿತು. ಅಂದಿನಿಂದ ಈವರೆಗೂ ಇದೇ ಟ್ರೋಫಿಯನ್ನು ಬಳಸಲಾಗುತ್ತಿದೆ. ಲಂಡನ್‌ನ ಗೆರಾರ್ಡ್ ಮತ್ತು ಕಂಪೆನಿ ಕ್ರಿಕೆಟ್​ ವಿಶ್ವಕಪ್ ಟ್ರೋಫಿಯನ್ನು ವಿನ್ಯಾಸಗೊಳಿಸಿದೆ. 24 ವರ್ಷಗಳಿಂದ ಒಡಿಐ ವಿಶ್ವಕಪ್ ಟ್ರೋಫಿಯಾಗಿ ಇದನ್ನೇ ಬಳಸಲಾಗುತ್ತಿದೆ.

ಚಿನ್ನದ್ದಾ ಬೆಳ್ಳಿಯದ್ದಾ?

ಟ್ರೋಫಿಯಲ್ಲಿ ಕಾಣುವ ಗೋಳವು ಕ್ರಿಕೆಟ್ ಚೆಂಡನ್ನು ಪ್ರತಿನಿಧಿಸುತ್ತದೆ. ಬೆಳ್ಳಿ ಮತ್ತು ಚಿನ್ನದಿಂದ ಟ್ರೋಫಿಯನ್ನು ತಯಾರಿಸಲಾಗಿದೆ. ಟ್ರೋಫಿಯಲ್ಲಿರುವ ಚೆಂಡಿನ ಆಕಾರವಿರುವ ಗೋಳವು ಚಿನ್ನದ ಬಣ್ಣದಿಂದ ಮತ್ತು ಮೂರು ಕಂಬಗಳನ್ನು (ವಿಕೆಟ್​ಗಳ ರೂಪ) ಬೆಳ್ಳಿಯಿಂದ ತಯಾರಿಸಲಾಗಿದೆ.

ಟ್ರೋಫಿ ಬೆಲೆ ಎಷ್ಟು?

ಈ ಟ್ರೋಫಿಯು ಕ್ರಿಕೆಟ್ ಶ್ರೇಷ್ಠತೆಯ ಸಂಕೇತವಾಗಿದೆ. ಈವರೆಗೂ ನೀಡಲಾಗಿರುವ ದುಬಾರಿ ಕ್ರೀಡಾ ಟ್ರೋಫಿಗಳ ಪಟ್ಟಿಯಲ್ಲಿ ಇದಕ್ಕೆ ಅಗ್ರಸ್ಥಾನ ಸಿಕ್ಕಿದೆ. ಈ ಟ್ರೋಫಿಯ ಅಂದಾಜು ವೆಚ್ಚ 30,000 ಡಾಲರ್. ಭಾರತದ ಕರೆನ್ಸಿಯಲ್ಲಿ 25 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ವಿಶ್ವದ ಅತ್ಯಂತ ದುಬಾರಿ ಕ್ರೀಡಾ ಟ್ರೋಫಿಗಳ ಅಗ್ರ 10ರಲ್ಲಿ ಒಂದು. ಇದು ಯಾವುದೇ ಕ್ರಿಕೆಟ್ ಪ್ರೇಮಿ ಹೆಮ್ಮೆಪಡುವ ಸಂಗತಿ ಎನ್ನಬಹುದು.

ತೂಕ, ಎತ್ತರ ಎಷ್ಟಿದೆ?

ವಿಶ್ವಕಪ್ ಟ್ರೋಫಿ 650 ಮಿಲಿಮೀಟರ್ ಎತ್ತರ ಇದೆ. ವಿಕಿಪೀಡಿಯಾದ ಪ್ರಕಾರ ಅಂದಾಜು ತೂಕ 11.567 ಕಿಲೋಗ್ರಾಮ್ ಇದೆ. ಇನ್ನು ವಿಶ್ವಕಪ್ ಗೆದ್ದಾಗ ಮೂಲ ಟ್ರೋಫಿಯನ್ನು ವಿಜೇತರಿಗೆ ಹಸ್ತಾಂತರಿಸಲಾಗುತ್ತದೆ. ಬಳಿಕ ವಿಜೇತರಿಗೆ ಅದೇ ಮಾದರಿಯಲ್ಲಿರುವ ಪ್ರತಿಕೃತಿ ಟ್ರೋಫಿ ನೀಡಲಾಗುತ್ತದೆ. ಟ್ರೋಫಿಯನ್ನು ಯುನೈಟೆಡ್ ಸ್ಟೇಟ್ಸ್​ ಎಮಿರೇಟ್ಸ್​ನಲ್ಲಿರುವ (ಯುಎಇ) ಪ್ರಧಾನ ಕಚೇರಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಮರಳಿಸಲಾಗುತ್ತದೆ.