ವಿಘ್ನೇಶ್ ಪುತ್ತೂರ್ ಕಿವಿಯಲ್ಲಿ ಎಂಎಸ್ ಧೋನಿ ಹೇಳಿದ್ದೇನು; ಕೊನೆಗೂ ಸಸ್ಪೆನ್ಸ್ ಅಂತ್ಯಗೊಳಿಸಿದ ಸ್ನೇಹಿತ
ವಿಘ್ನೇಶ್ ಪುತ್ತೂರ್ ಅವರಿಗೆ ಎಂಎಸ್ ಧೋನಿ ಕಿವಿಯಲ್ಲಿ ಏನು ಹೇಳಿದರು ಎಂಬ ಬಗ್ಗೆ ಅವರ ಆಪ್ತ ಸ್ನೇಹಿತ ಶ್ರೀರಾಗ್ ಹೇಳಿಕೊಂಡಿದ್ದಾರೆ. ಕೊನೆಗೂ ಈ ಕುರಿತ ಸಸ್ಪೆನ್ಸ್ ಅಂತ್ಯವಾಗಿದೆ.

ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ ವಿಘ್ನೇಶ್ ಪುತ್ತೂರ್ (Vignesh Puthur), ದೇಶದಲ್ಲಿ ಈಗ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಸಿಎಸ್‌ಕೆ ತಂಡದ ವಿರುದ್ಧದ ಪಂದ್ಯದಲ್ಲಿ ಪ್ರಮುಖ ಬ್ಯಾಟರ್‌ಗಳ ವಿಕೆಟ್ ಪಡೆದು ಮಿಂಚಿದ ಕೇರಳದ ಹುಡುಗ, ಪಂದ್ಯ ಮುಗಿದು ದಿನಗಳು ಉರುಳುತ್ತಿದ್ದರೂ ಸುದ್ದಿಯಲ್ಲಿದ್ದಾರೆ. ಪಂದ್ಯದಲ್ಲಿ ಮುಂಬೈ ತಂಡ ಸೋತರೂ, ವಿಘ್ನೇಶ್ ಹಲವರ ಹೃದಯ ಗೆದ್ದಿದ್ದಾರೆ. ಹೊರಗಿನವರು ಬೇಕಿಲ್ಲ. ಎದುರಾಳಿ ತಂಡವಾದ ಸಿಎಸ್‌ಕೆ ದಿಗ್ಗಜ ಆಟಗಾರ ಧೋನಿ ಕೂಡಾ ಕೇರಳ ಹುಡುಗನನ್ನು ಮೆಚ್ಚಿಕೊಂಡಿದ್ದಾರೆ. ಪಂದ್ಯದ ಬಳಿಕ ವಿಘ್ನೇಶ್ ಜೊತೆಗೆ ಮೈದಾನದಲ್ಲಿ ಧೋನಿ ಹತ್ತಿರದಿಂದ ಮಾತನಾಡುವ ದೃಶ್ಯಗಳು ವೈರಲ್ ಆಗಿದ್ದವು.
ಸೀನಿಯರ್ ಮಟ್ಟದಲ್ಲಿ ಎಂದಿಗೂ ಟಿ20 ಪಂದ್ಯವನ್ನು ಆಡದ ಕೇರಳದ 24 ವರ್ಷದ ಆಟಗಾರ, ಚೆಪಾಕ್‌ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮೂರು ಪ್ರಮುಖ ವಿಕೆಟ್‌ಗಳನ್ನು ಪಡೆದರು. ಆ ಮೂಲಕ ಮಧ್ಯಮ ಓವರ್‌ಗಳಲ್ಲಿ ಚೆನ್ನೈ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಯುವ ಆಟಗಾರನ ಬೌಲಿಂಗ್ ಅನ್ನು ಮೆಚ್ಚಿದ ಧೋನಿ, ಪಂದ್ಯದ ನಂತರ ಮಾತನಾಡಿದರು.
ಯುವಕನ ಬಳಿ ಹೋದ ಧೋನಿ, ಆತನ ಬೆನ್ನನ್ನು ತಟ್ಟಿದರು. ಮೊದಲ ಬಾರಿ ಪ್ರಬಲ ಆಟಗಾರರೊಂದಿಗೆ ಆಡಿದ ವಿಘ್ನೇಶ್ ಪಾಲಿಗೆ ಇದು ಕಲ್ಪನೆಗೂ ಮೀರಿದ ಕ್ಷಣವಾಗಿತ್ತು. ಧೋನಿಯಂಥ ದಿಗ್ಗಜನ ಬಳಿ ನಿಂತು ಮಾತನಾಡುವುದು, ಅವರ ಸಲಹೆ ಕೇಳುವುದು ಯುವ ಆಟಗಾರರಿಗೆ ಕನಸು ನನಸಾಗುವ ಕ್ಷಣ.
ಅಂದು, ವಿಘ್ನೇಶ್ ಜೊತೆಗೆ ಧೋನಿ ಏನು ಮಾತನಾಡಿದ್ದರು ಎಂಬ ಬಗ್ಗೆ ಬಹಿರಂಗವಾಗಿರಲಿಲ್ಲ. ಇದೀಗ ಅದು ಕೂಡಾ ಬಹಿರಂಗವಾಗಿದೆ.
ಧೋನಿ ಹೇಳಿದ್ದೇನು?
ಮರುದಿನ ಬೆಳಿಗ್ಗೆ, ವಿಘ್ನೇಶ್ ಆಪ್ತ ಸ್ನೇಹಿತ ಶ್ರೀರಾಗ್, ವಿಘ್ನೇಶ್‌ಗೆ ಕರೆ ಮಾಡಿ ಕೇಳಿದ ಮೊದಲ ಪ್ರಶ್ನೆ ಇದೇ ಆಗಿತ್ತು. ಎಲ್ಲರ ಮನಸ್ಸಿನಲ್ಲಿ ಇರುವಂತೆ "ಎಡಾ, ಪುಲ್ಲಿ ಎಂದ ಡಾ ಪರಂಜು?" (ಧೋನಿ ಏನು ಹೇಳಿದರು) ಎಂದು ಮಲಯಾಳಂನಲ್ಲಿ ಕೇಳಿದ್ದಾರೆ. "ನಾನು ಮೊದಲು ಕೇಳಿದ್ದು ಇದನ್ನೇ, ಏಕೆಂದರೆ ನನ್ನ ಪೋಷಕರು ಸಹ ತಿಳಿದುಕೊಳ್ಳಲು ಉತ್ಸುಕರಾಗಿದ್ದರು,"ಎಂದು ಶ್ರೀರಾಗ್ ಹೇಳಿಕೆಯನ್ನು ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ತರಬೇತಿ ಪಡೆಯಲು ವಿಘ್ನೇಶ್ ಅವರನ್ನು ಶ್ರೀರಾಗ್ ತಮ್ಮ ಬೈಕಿನಲ್ಲಿ ಕರೆದೊಯ್ಯುತ್ತಿದ್ದರಂತೆ. “ವಿಘ್ನೇಶ್ ವಯಸ್ಸು ಎಷ್ಟು ಎಂದು ಧೋನಿ ಕೇಳಿದ್ದಾರೆ. ಅಲ್ಲದೆ ಐಪಿಎಲ್‌ಗೆ ಬರಲು ಕಾರಣವಾದ ಅದೇ ಕೆಲಸಗಳನ್ನು ಮುಂದುವರಿಸಲು ವಿಘ್ನೇಶ್ ಅವರಿಗೆ ಸಲಹೆ ನೀಡಿದರು” ಎಂದು ಶ್ರೀರಾಗ್ ಹೇಳಿದ್ದಾರೆ.
ಸಿಎಸ್‌ಕೆ ತಂಡದ ನಾಯಕ ಋತುರಾಜ್ ಗಾಯಕ್ವಾಡ್, ಶಿವಂ ದುಬೆ ಮತ್ತು ದೀಪಕ್ ಹೂಡಾ ಅವರ ವಿಕೆಟ್‌ಗಳನ್ನು ವಿಘ್ನೇಶ್ ಪಡೆದಿದ್ದರು. ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಅಮೋಘ ಪ್ರದರ್ಶನ ನೀಡಿ, ಪ್ರತಿಭೆ ಪ್ರದರ್ಶಿಸಿದರು.
