ಕದನ ವಿರಾಮದ ಬಳಿಕ ಐಪಿಎಲ್ ಮತ್ತೆ ಮುಂದುವರೆಯುತ್ತಾ; ಆತಿಥ್ಯಕ್ಕೆ 3 ಸ್ಥಳಗಳ ಪಟ್ಟಿ ಸಿದ್ಧ; ಮೇ 12ರ ಬಳಿಕ ಅಂತಿಮ ನಿರ್ಧಾರ ಸಾಧ್ಯತೆ
ಕದನ ವಿರಾಮ ಘೋಷಣೆಯ ಬಳಿಕ, ಐಪಿಎಲ್ ಪಂದ್ಯಾವಳಿಯನ್ನು ಶೀಘ್ರದಲ್ಲೇ ಪುನರಾರಂಭ ಮಾಡುವ ಸಾಧ್ಯತೆ ಇದೆ. ಸರ್ಕಾರದ ಅನುಮತಿ ಸಿಕ್ಕರೆ, ಕೆಲವೇ ದಿನಗಳಲ್ಲಿ ಟೂರ್ನಿಯ ಉಳಿದ ಭಾಗವನ್ನು ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಲಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಕೊನೆಗೂ ಕದನ ವಿರಾಮ ಘೋಷಣೆಯಾಗಿದೆ. ಭಾರತ ಮತ್ತು ಪಾಕಿಸ್ತಾನ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದು, ಯುದ್ಧದ ಭೀತಿ ಕಡಿಮೆಯಾಗಿದೆ. ಮುಂದೆ ಉಭಯ ರಾಷ್ಟ್ರಗಳಲ್ಲಿ ಸಹಜ ಸನ್ನಿವೇಶ ಮುಂದುವರೆಯಲಿದೆ. ಹೀಗಾಗಿ ಐಪಿಎಲ್ 2025ರ ಉಳಿದ ಋತುವನ್ನು ಈ ತಿಂಗಳಲ್ಲಿಯೇ ಪುನರಾರಂಭಿಸುವ ಸಾಧ್ಯತೆ ಇದೆ. ಭಾರತ ಸರ್ಕಾರ ಅನುಮತಿ ನೀಡಿದರೆ ಬಿಸಿಸಿಐ ಈ ಒಂದು ವಾರದೊಳಗೆ ಟೂರ್ನಿಯನ್ನು ಪುನರಾರಂಭಿಸುವ ಸಾಧ್ಯತೆ ಇದಕ್ಕೆ. ಇದಕ್ಕೆ ಪೂರ್ವಭಾವಿಯಾಗಿ ಭಾರತವು ಮೂರು ಆಥಿಥ್ಯ ಸ್ಥಳಗಳನ್ನು ಪಟ್ಟಿ ಮಾಡಿಕೊಂಡಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿದ್ದರಿದ, ಐಪಿಎಲ್ ಪಂದ್ಯಾವಳಿಯ 18ನೇ ಆವೃತ್ತಿಯನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಲಾಯಿತು. ಇದೀಗ, ಕದನ ವಿರಾಮ ಘೋಷಣೆಯಾಗಿದ್ದು ಬಿಸಿಸಿಐ ಮುಂದಿನ ನಿರ್ಧಾರವನ್ನು ಶೀಘ್ರವೇ ಪ್ರಕಟಿಸುವ ನಿರೀಕ್ಷೆ ಇದೆ.
ಕದನ ವಿರಾಮ ಘೋಷಣೆಗೂ ಮುನ್ನ ಇಎಸ್ಪಿಎನ್ ಕ್ರಿಕ್ಇನ್ಫೋ ಮಾಡಿದ ವರದಿಯ ಪ್ರಕಾರ, ಪ್ಲೇಆಫ್ ಸೇರಿದಂತೆ ಐಪಿಎಲ್ 2025ರ ಉಳಿದ 16 ಪಂದ್ಯಗಳನ್ನು ಆಯೋಜಿಸಲು ಭಾರತೀಯ ಕ್ರಿಕೆಟ್ ಮಂಡಳಿ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಗರಗಳನ್ನು ಆಯ್ಕೆ ಮಾಡಿದೆ. ಆದರೆ, ಯುದ್ಧ ಭೀತಿ ಸಂಪೂರ್ಣ ಅಂತ್ಯವಾಗಿರುವುದರಿಂದ ಟೂರ್ನಿಯು ಈ ಹಿಂದೆ ಯೋಜನೆಗೊಂಡಂತೆ ಆಯಾ ಆತಿಥ್ಯ ಸ್ಥಳಗಳಲ್ಲೇ ನಡೆಯುವ ಸಾಧ್ಯತೆ ಇದೆ. ಇದು ಇನ್ನಷ್ಟೇ ಅಧಿಕೃತವಾಗಬೇಕಿದೆ.
ಮೂಲ ವೇಳಾಪಟ್ಟಿಯ ಪ್ರಕಾರ, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನವು ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಬೇಕಿತ್ತು. ಇಎಸ್ಪಿಎನ್ ವರದಿ ಪ್ರಕಾರ, ಅದು ದಕ್ಷಿಣ ಭಾರತಕ್ಕೆ ಶಿಫ್ಟ್ ಆಗಲಿದೆ. ಕದನ ವಿರಾಮ ಘೋಷಣೆಯಾದ ನಂತರ ಬಿಸಿಸಿಐ ಸೂಕ್ತ ನಿರ್ಧಾರ ತೆಗೆದುಕೊಂಡು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ.
ದಕ್ಷಿಣ ಭಾರತದ ಮೂರು ನಗರಗಳಲ್ಲಿ ಟೂರ್ನಿ ನಡೆಸುವ ಕುರಿತು, ಬಿಸಿಸಿಐ ಫ್ರಾಂಚೈಸಿ ಅಧಿಕಾರಿಗಳಿಗೆ ಅನೌಪಚಾರಿಕವಾಗಿ ಮಾಹಿತಿ ನೀಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅತ್ತ ಈಗಾಗಲೇ ಹಲವು ವಿದೇಶಿ ಆಟಗಾರರು ತಮ್ಮ ತಮ್ಮ ದೇಶಗಳಿಗೆ ತೆರಳಲು ಆರಂಭಿಸಿದ್ದಾರೆ. ಈಗ ಆಟಗಾರರನ್ನು ಮರಳಿ ಭಾರತಕ್ಕೆ ಕರೆಸುವುದು ಭಾರತೀಯ ಕ್ರಿಕೆಟ್ ಮಂಡಳಿಗೆ ದೊಡ್ಡ ಸವಾಲಾಗಿದೆ.
ಐಪಿಎಲ್ 2025ರಲ್ಲಿ ಒಟ್ಟು 57 ಪಂದ್ಯಗಳು ಪೂರ್ಣಗೊಂಡಿವೆ. ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಗುರುವಾರ ನಡೆಯಬೇಕಿದ್ದ ಋತುವಿನ 58ನೇ ಪಂದ್ಯವನ್ನು 10.1 ಓವರ್ಗಳ ಆಟದ ನಂತರ ರದ್ದುಗೊಳಿಸಲಾಯಿತು. ಈ ಪಂದ್ಯವನ್ನು ಮರುಪ್ರಾರಂಭಿಸುವ ಸಾಧ್ಯತೆ ಇದೆ. ನಾಲ್ಕು ಪ್ಲೇಆಫ್ ಪಂದ್ಯಗಳನ್ನು ಹೊರತುಪಡಿಸಿ 12 ಲೀಗ್ ಪಂದ್ಯಗಳು ಉಳಿದಿವೆ. ಫೈನಲ್ ಪಂದ್ಯ 2025ರ ಮೇ 25ರಂದು ನಡೆಯಬೇಕಿತ್ತು. ಇದು ಕೂಡಾ ಮುಂದೆ ಹೋಗಲಿದೆ.
ಇಂಗ್ಲೆಂಡ್ನಲ್ಲಿ ನಡೆಸಿ ಎಂದ ಇಸಿಬಿ
ಐಪಿಎಲ್ ಒಂದು ವಾರ ಮುಂದೂಡಿಕೆಯಾದ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಬಿಸಿಸಿಐಗೆ ತನ್ನ ಬೆಂಬಲ ನೀಡಿದೆ. ಆಟಗಾರರು ಭಾರತದಿಂದ ಹೊರಹೋಗುತ್ತಿರುವುದರಿಂದ ಮತ್ತು ಋತುವಿನ ಭವಿಷ್ಯದ ಬಗ್ಗೆ ಅನಿಶ್ಚಿತತೆ ಇರುವುದರಿಂದ, ಐಪಿಎಲ್ ಅನ್ನು ಭಾರತದಿಂದ ಹೊರಗೆ ನಡೆಸಲು ಬಿಸಿಸಿಐ ನಿರ್ಧರಿಸಿದರೆ, ಉಳಿದ ಪಂದ್ಯಗಳಿಗೆ ಆತಿಥ್ಯ ವಹಿಸುವ ಬಯಕೆಯನ್ನು ಇಂಗ್ಲೆಂಡ್ ವ್ಯಕ್ತಪಡಿಸಿದೆ. ಆದರೆ, ಕದನ ವಿರಾಮ ಘೋಷಣೆಯಾಗಿರುವುದರಿಂದ ಈ ಸಾಧ್ಯತೆ ಕಡಿಮೆ ಇದೆ.
ಮೇ 12ರ ನಂತರ ಅಂತಿಮ ನಿರ್ಧಾರ ಸಾಧ್ಯತೆ
ಮೇ 10ರ ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿಯಾಗಿದೆ. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಭಾರತದ ಡಿಜಿಎಂಒಗೆ ಕರೆ ಮಾಡಿ ಎರಡು ದೇಶಗಳ ನಡುವೆ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಕುರಿತು ಒಪ್ಪಂದ ಮಾಡಿಕೊಳ್ಳಲಾಯಿತು. ಮುಂದೆ, ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಮೇ 12ರಂದು ಮತ್ತೆ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ. ಬಹುಶಃ, ಈ ಮಾತುಕತೆ ನಂತರ ಐಪಿಎಲ್ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.