Team India: ಟೀಮ್ ಇಂಡಿಯಾ ಮುಂದಿನ ಎದುರಾಳಿ ಯಾರು, ಯಾವಾಗ, ಎಲ್ಲಿ? ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
Indian Cricket Team: ಆಸ್ಟ್ರೇಲಿಯಾ ಪ್ರವಾಸ ಮುಗಿಸಿರುವ ಭಾರತೀಯ ಕ್ರಿಕೆಟ್ ತಂಡ ತನ್ನ ಮುಂದಿನ ಸರಣಿಯಲ್ಲಿ ಯಾರ ವಿರುದ್ಧ ಸೆಣಸಾಟ ನಡೆಸಲಿದೆ? ಯಾವಾಗ, ಎಲ್ಲಿ? ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 1-3 ಅಂತರದಿಂದ ಸೋಲೋಪ್ಪಿಕೊಂಡಿದೆ. ಸತತ ಐದನೇ ಬಾರಿಗೆ ಈ ಸರಣಿಯನ್ನು ಉಳಿಸಿಕೊಳ್ಳುವಲ್ಲಿ ಭಾರತ ತಂಡ ಸಂಪೂರ್ಣ ವಿಫಲವಾಯಿತು. ತಂಡದ ಈ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್ ವಿಭಾಗವೇ ಪ್ರಮುಖ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಡೀ ಸರಣಿಯಲ್ಲಿ ಟೀಮ್ ಇಂಡಿಯಾ ವೇಗಿಗಳು ನೀಡಿದ ಹೋರಾಟದಷ್ಟು ಬ್ಯಾಟಿಂಗ್ ವಿಭಾಗ ನೀಡಲೇ ಇಲ್ಲ ಎಂಬುದು ಬೇಸರದ ಸಂಗತಿ. ಹೀಗಾಗಿ, ಆಸ್ಟ್ರೇಲಿಯಾ ನೆಲದಲ್ಲಿ ಸತತ 3ನೇ ಬಾರಿಗೆ ಪ್ರತಿಷ್ಠಿತ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ.
ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸ ಮುಗಿಸಿರುವ ಟೀಮ್ ಇಂಡಿಯಾದ ಮುಂದಿನ ಸರಣಿ ಯಾವಾಗ? ಯಾರ ವಿರುದ್ಧ? ಯಾವ ಸರಣಿಯಲ್ಲಿ ಆಡಲಿದೆ ಎನ್ನುವುದನ್ನು ಈ ಮುಂದೆ ತಿಳಿಯೋಣ. ಆಸ್ಟ್ರೇಲಿಯಾ ಪ್ರವಾಸವನ್ನು ಸೋಲಿನೊಂದಿಗೆ ಅಂತ್ಯಗೊಳಿಸಿದ ಭಾರತ, ಇದೀಗ ಸೀಮಿತ ಓವರ್‌ಗಳಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಸರಣಿಗಾಗಿ ಇಂಗ್ಲೆಂಡ್ ತಂಡ, ಭಾರತಕ್ಕೆ ಬರಲಿದೆ. ಉಭಯ ತಂಡಗಳ ನಡುವೆ 5 ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಮೊದಲು ಟಿ20 ಸರಣಿ ನಡೆಯಲಿದ್ದು, ಜನವರಿ 22ರಿಂದ ಆರಂಭವಾಗಲಿದೆ. ಈ ಸರಣಿಗೆ ಇಂಗ್ಲೆಂಡ್ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಆತಿಥೇಯ ಭಾರತ ತಂಡವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.
ಟಿ20 ಸರಣಿಯ ಮೊದಲ ಪಂದ್ಯ ಜನವರಿ 22 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಫೆಬ್ರವರಿ 2 ರಂದು ಮುಂಬೈನಲ್ಲಿ ಚುಟುಕು ಸರಣಿಯ ಅಂತಿಮ ಪಂದ್ಯ ನಡೆಯಲಿದೆ. ನಂತರ ಫೆಬ್ರವರಿ 6 ರಿಂದ ಫೆಬ್ರವರಿ 12 ರವರೆಗೆ 3 ಏಕದಿನ ಸರಣಿ ನಡೆಯಲಿದೆ. ಮೊದಲ ಏಕದಿನ ಪಂದ್ಯ ನಾಗ್ಪುರದಲ್ಲಿ, 2ನೇ ಪಂದ್ಯ ಕಟಕ್‌ನಲ್ಲಿ ಮತ್ತು ಮೂರನೇ ಏಕದಿನ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ಇದಾದ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೂಡ ಏಕದಿನ ಮಾದರಿಯಲ್ಲಿ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಉಭಯ ತಂಡಗಳಿಗೆ ಈ ಸರಣಿ ಉತ್ತಮ ಅಭ್ಯಾಸವಾಗಲಿದೆ.
ಟಿ20 ಸರಣಿ ವೇಳಾಪಟ್ಟಿ
ಮೊದಲ ಟಿ20: ಜನವರಿ 22, ಕೋಲ್ಕತ್ತಾ
ಎರಡನೇ ಟಿ20: ಜನವರಿ 25, ಚೆನ್ನೈ
ಮೂರನೇ ಟಿ20: ಜನವರಿ 28, ರಾಜ್‌ಕೋಟ್
ನಾಲ್ಕನೇ ಟಿ20: ಜನವರಿ 31, ಪುಣೆ
ಐದನೇ ಟಿ20: ಫೆಬ್ರವರಿ 2, ಮುಂಬೈ
ಏಕದಿನ ಸರಣಿ ವೇಳಾಪಟ್ಟಿ
ಮೊದಲ ಏಕದಿನ: ಫೆಬ್ರವರಿ 6, ನಾಗ್ಪುರ
ಎರಡನೇ ಏಕದಿನ: ಫೆಬ್ರವರಿ 9, ಕಟಕ್
ಮೂರನೇ ಏಕದಿನ: 12 ಫೆಬ್ರವರಿ, ಅಹಮದಾಬಾದ್
ಏಕದಿನ ಸರಣಿಗೆ ಇಂಗ್ಲೆಂಡ್ ತಂಡ
ಜೋಸ್ ಬಟ್ಲರ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೇಡೆನ್ ಕಾರ್ಸಿ, ಬೆನ್ ಡಕೆಟ್, ಜೇಮೀ ಓವರ್ಟನ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್ಸ್ಟನ್, ಆದಿಲ್ ರಶೀದ್, ಜೋ ರೂಟ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.
ಟಿ20ಐ ಸರಣಿಗೆ ಇಂಗ್ಲೆಂಡ್ ತಂಡ
ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.