ಕನ್ನಡ ಸುದ್ದಿ  /  Cricket  /  When I Wake Up And Feel I Am Not Good Enough Then I Will Retire Straightaway Says Team India Captain Rohit Sharma Prs

ಆ ದಿನ ನಿವೃತ್ತಿ ಪಡೆಯುತ್ತೇನೆ; ಕ್ರಿಕೆಟ್​ಗೆ ವಿದಾಯ ಘೋಷಿಸುವ ಕುರಿತು ತುಟಿಬಿಚ್ಚಿದ ರೋಹಿತ್​ ಶರ್ಮಾ

Rohit Sharma : ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಗೆದ್ದುಕೊಂಡ ನಂತರ ಜಿಯೋ ಸಿನಿಮಾದಲ್ಲಿ ರೋಹಿತ್ ಶರ್ಮಾ ವಿದಾಯ ಕುರಿತು ಸ್ಪಷ್ಟಪಡಿಸಿದ್ದಾರೆ. ನಿವೃತ್ತಿಯಾಗುವ ಸಮಯವನ್ನೂ ಬಹಿರಂಗಪಡಿಸಿದ್ದಾರೆ.

ಕ್ರಿಕೆಟ್​ಗೆ ವಿದಾಯ ಘೋಷಿಸುವ ಕುರಿತು ತುಟಿಬಿಚ್ಚಿದ ರೋಹಿತ್​ ಶರ್ಮಾ
ಕ್ರಿಕೆಟ್​ಗೆ ವಿದಾಯ ಘೋಷಿಸುವ ಕುರಿತು ತುಟಿಬಿಚ್ಚಿದ ರೋಹಿತ್​ ಶರ್ಮಾ

ಧರ್ಮಶಾಲಾದಲ್ಲಿ ನಡೆದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್​​ ಮತ್ತು 64 ರನ್​​ಗಳಿಂದ ಭಾರತ ತಂಡ ಗೆದ್ದು ಬೀಗಿದೆ. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1ರಲ್ಲಿ ವಶಪಡಿಸಿಕೊಂಡಿದೆ. ಕೊನೆಯ ಟೆಸ್ಟ್​​​ ಗೆದ್ದ ಬಳಿಕ ಮಾತನಾಡಿದ ನಾಯಕ ರೋಹಿತ್​ ಶರ್ಮಾ ಅವರು ತನ್ನ ನಿವೃತ್ತಿಯ ಕುರಿತು ಎದ್ದಿದ್ದ ವದಂತಿಗಳಿಗೆ ಉತ್ತರ ನೀಡಿದ್ದಾರೆ.

ಪಂದ್ಯದ ಮುಗಿದ ಬಳಿಕ ಜಿಯೋ ಸಿನಿಮಾದಲ್ಲಿ ರೋಹಿತ್ ಶರ್ಮಾ ವಿದಾಯ ಕುರಿತು ಸ್ಪಷ್ಟಪಡಿಸಿದ್ದಾರೆ. ನಿವೃತ್ತಿಯಾಗುವ ಸಮಯವನ್ನು ಬಹಿರಂಗಪಡಿಸಿದ್ದಾರೆ. ಒಂದು ದಿನ ರಾತ್ರಿ ಮಲಗಿ ಬೆಳಿಗ್ಗೆ ಏಳುವಾಗ ಇನ್ಮುಂದೆ ಕ್ರಿಕೆಟ್​​ ಆಡಲು ಸಾಧ್ಯವಿಲ್ಲ ಎಂದು ನನಗೆ ಅನಿಸುತ್ತದೋ ಅಂದು ನಾನು ಕ್ರಿಕೆಟ್​​​ನಿಂದ ಹಿಂದೆ ಸರಿಯುತ್ತೇನೆ. ಕಳೆದ ಎರಡು ಮೂರು ವರ್ಷಗಳಿಂದ ಆಟದಲ್ಲಿ ಸುಧಾರಿಸಿದ್ದೇನೆ ಎಂದು ಭಾವಿಸುತ್ತೇನೆ. ಆದರೆ ಈ ಸದ್ಯಕ್ಕೆ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸುವುದಿಲ್ಲ ಎಂದು ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಯುವ ಆಟಗಾರರ ಸಾಧನೆ ಕೊಂಡಾಡಿದ ರೋಹಿತ್

ಇನ್ನು ಟೆಸ್ಟ್​ ಸರಣಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವ ಆಟಗಾರರ ಪ್ರದರ್ಶನವನ್ನು ರೋಹಿತ್​ ಶರ್ಮಾ ಕೊಂಡಾಡಿದ್ದಾರೆ. ಕೆಲವು ಹಂತಗಳಲ್ಲಿ ಆಟಗಾರರು ತಂಡಕ್ಕೆ ಬರುತ್ತಾರೆ, ಹೋಗುತ್ತಾರೆ. ಅದು ನಮಗೆ ತಿಳಿದಿದೆ. ಆದರೆ ತಂಡದಲ್ಲಿದ್ದ ಆಟಗಾರರಿಗೆ ಹೆಚ್ಚಿನ ಅನುಭವದ ಕೊರತೆ ಇದೆ. ಆದರೂ ಒತ್ತಡವನ್ನು ನಿಭಾಯಿಸಿ ಭರ್ಜರಿ ಪ್ರದರ್ಶನ ನೀಡಿದರು. ಸರಣಿ ಗೆಲುವಿನ ಕ್ರೆಡಿಟ್​ ಇಡೀ ತಂಡಕ್ಕೆ ನೀಡುತ್ತೇನೆ. ಆಟಗಾರರ ಪ್ರದರ್ಶನ ತುಂಬಾ ಖುಷಿ ನೀಡಿತು ಎಂದು ಹಿಟ್​ಮ್ಯಾನ್ ಹೇಳಿದ್ದಾರೆ.

ಸರಣಿ ಗೆದ್ದಾಗ ನಾವು ರನ್ ಗಳಿಸುವ ಮತ್ತು ಶತಕಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಬೌಲರ್​​​ಗಳ ಕುರಿತು ಮಾತನಾಡುವುದು ತುಂಬಾ ವಿರಳ. ಪಂದ್ಯ ಗೆಲ್ಲಲು 20 ವಿಕೆಟ್​​ಗಳನ್ನು ಅಷ್ಟು ಸುಲಭವಲ್ಲ. ಬೌಲರ್‌ಗಳು ಜವಾಬ್ದಾರಿ ನಿಭಾಯಿಸಿದ ರೀತಿ ನೋಡಿ ಖುಷಿಯಾಯಿತು. ಕುಲ್ದೀಪ್ ಯಾದವ್ ಗಾಯದಿಂದ ಮರಳಿದ ಬಳಿಕ ನಾವು ಮಾತುಕತೆ ನಡೆಸಿದ್ದೆವು. ಸಾಕಷ್ಟು ಸಾಮರ್ಥ್ಯ ಹೊಂದಿರುವ ಕುಲ್ದೀಪ್​, ಸರಣಿಯಲ್ಲಿ ಅತ್ಯಂತ ಅದ್ಭುತ ಪ್ರದರ್ಶನ ನೀಡಿದರು. ಮತ್ತೊಂದು ಸಂತೋಷಕರ ಸಂಗತಿ ಏನೆಂದರೆ ಕುಲ್ದೀಪ್ ಬ್ಯಾಟಿಂಗ್​. ಬೌಲಿಂಗ್ ಜೊತೆಗೆ ಬ್ಯಾಟಿಂಗ್​​ನಲ್ಲೂ ಕಾಣಿಕೆ ನೀಡಿದರು ಎಂದು ರೋಹಿತ್ ಹೇಳಿದ್ದಾರೆ.

2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತ ತಂಡ ಸಖತ್ ಪ್ರದರ್ಶನ ಕೊಟ್ಟಿತ್ತು. ಟೂರ್ನಿಯಲ್ಲಿ ಲೀಗ್​​ನಿಂದ ಫೈನಲ್​​ವರೆಗೆ ಸತತ 10 ಪಂದ್ಯಗಳಲ್ಲಿ ಜಯಿಸಿದ್ದ ಭಾರತ, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಸೋಲನುಭವಿಸಿತ್ತು. ಫೈನಲ್ ನಂತರ ಎರಡು ತಿಂಗಳ ಕಾಲ ಕ್ರಿಕೆಟ್​ನಿಂದ ದೂರ ಇದ್ದ ರೋಹಿತ್ ಕುರಿತು ನಿವೃತ್ತಿ ವದಂತಿಗಳು ಹಬ್ಬಿದ್ದವು. ಆಗ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿದು ವದಂತಿಗಳಿಗೆ ತೆರೆ ಎಳೆದಿದ್ದರು.

ರೋಹಿತ್ ಶರ್ಮಾ ಅವರು ಈವರೆಗೆ 59 ಟೆಸ್ಟ್, 262 ಏಕದಿನ ಮತ್ತು 151 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಟೆಸ್ಟ್‌ನಲ್ಲಿ 12 ಶತಕ, 17 ಅರ್ಧಶತಕ ಒಳಗೊಂಡಂತೆ 4138 ರನ್‌ ಕಲೆ ಹಾಕಿದ್ದಾರೆ. ಏಕದಿನದಲ್ಲಿ ರೋಹಿತ್ 31 ಶತಕ, 55 ಅರ್ಧಶತಕಗಳೊಂದಿಗೆ 10709 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ರೋಹಿತ್ 5 ಶತಕ ಹಾಗೂ 29 ಅರ್ಧಶತಕ ಸಹಿತ 3974 ರನ್ ಗಳಿಸಿದ್ದಾರೆ.

IPL_Entry_Point