140 ಕಿಮೀ ವೇಗದಲ್ಲಿ ಬೌಲ್ ಮಾಡಿದರೆ ಜೊಲ್ಲು ಸುರಿಸುತ್ತೇವೆ, ಆದರೆ ಅವಕಾಶ ಏಕೆ ಕೊಡಲ್ಲ; ಸುನಿಲ್ ಗವಾಸ್ಕರ್ ಪ್ರಶ್ನೆ
Sunil Gavaskar on Sandeep Sharma: ಚೆನ್ನೈನಲ್ಲಿ ನಡೆದ ಐಪಿಎಲ್ 2024 ಕ್ವಾಲಿಫೈಯರ್ 2ರಲ್ಲಿ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದ ನಂತರ ಆರ್ಆರ್ ಬೌಲರ್ ಸಂದೀಪ್ ಶರ್ಮಾ ಅವರನ್ನು ಸುನಿಲ್ ಗವಾಸ್ಕರ್ ಶ್ಲಾಘಿಸಿದ್ದಾರೆ.

ಯಾವುದೇ ಬೌಲರ್ 140 ಕಿಲೋ ಮೀಟರ್ಗಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡಿದರೆ ನಾವು ಜೊಲ್ಲು ಸುರಿಸಿಕೊಂಡು ನೋಡುತ್ತೇವೆ, ವ್ಹಾವ್ ಎಂದು ಉದ್ಘರಿಸುತ್ತೇವೆ. ಆದರೆ ಅಂತಹ ಬೌಲರ್ಗಳಿಗೆ ಭಾರತ ತಂಡದಲ್ಲಿ ಅವಕಾಶ ಏಕೆ ಕೊಡುವುದಿಲ್ಲ ಎಂದು ರಾಜಸ್ಥಾನ್ ರಾಯಲ್ಸ್ ವೇಗಿ ಸಂದೀಪ್ ಶರ್ಮಾ ಪರ ಬ್ಯಾಟ್ ಬೀಸಿದ ಸುನಿಲ್ ಗವಾಸ್ಕರ್ (Sunil Gavaskar on Sandeep Sharma), ಭಾರತದ ಆಯ್ಕೆದಾರರಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಆರಂಭಿಕ ಎಡಗೈ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ಅವರನ್ನು ಜಾಣತನದಿಂದ ಔಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಬೌಲರ್ ಸಂದೀಪ್ ಶರ್ಮಾ ಅವರ ಬೌಲಿಂಗ್ ವಿಧಾನ ಮತ್ತು ಮೊದಲ 3 ಓವರ್ಗಳಲ್ಲಿ ಕೇವಲ 19 ರನ್ಗಳನ್ನು ಬಿಟ್ಟುಕೊಟ್ಟಿದ್ದಕ್ಕೆ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಶ್ಲಾಘಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಗೆ ತಂಡದ ಆಯ್ಕೆಗೆ ಸಂಬಂಧಿಸಿ ಚರ್ಚೆಗಳು ಆರಂಭಗೊಂಡಾಗ ಆರ್ಆರ್ ಪರ ಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದ ಸಂದೀಪ್ ಶರ್ಮಾಗೂ ಮಣೆ ಹಾಕಬೇಕೆಂದು ಕ್ರಿಕೆಟ್ ತಜ್ಞರು ಮತ್ತು ಮಾಜಿ ಕ್ರಿಕೆಟರ್ಗಳು ಬಿಸಿಸಿಐಗೆ ಸಲಹೆ ನೀಡಿದ್ದರು. ಪವರ್ಪ್ಲೇನಲ್ಲಿ ಪ್ರಭಾವಶಾಲಿ ಅಂಕಿ-ಅಂಶಗಳನ್ನು ಕಾಪಾಡಿಕೊಂಡು ಸ್ಲಾಗ್ ಓವರ್ಗಳಲ್ಲಿ ಹಳೆಯ ಚೆಂಡಿನೊಂದಿಗೆ ಸುಧಾರಿತ ಪ್ರದರ್ಶನ ನೀಡಿದ್ದರು.
ಆದರೂ ವೇಗಿಯನ್ನು ಕಡೆಗಣಿಸಲಾಯಿತು. ಭಾರತ ತಂಡ ಪ್ರಕಟವಾದಾಗಲೂ ಆಯ್ಕೆ ಮಾಡದ್ದಕ್ಕೆ ಟೀಕೆ ವ್ಯಕ್ತವಾಗಿತ್ತು. ಇದೀಗ ಈ ಬಗ್ಗೆ ಮಾತನಾಡಿದ ಗವಾಸ್ಕರ್, ಬಿಸಿಸಿಐ ಆಯ್ಕೆದಾರರು ಸಂದೀಪ್ ಬಗ್ಗೆ ಗಮನ ಹರಿಸಬೇಕೆಂದು ಬಯಸಿದ್ದಾರೆ. 31 ವರ್ಷದ ಸಂದೀಪ್ ಅವರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ. ಆತ ಅತ್ಯಂತ ಬುದ್ಧಿವಂತಿಕೆ ಬೌಲರ್ ಎಂದು ಗುಣಗಾನ ಮಾಡಿದ್ದಾರೆ.
ಸಂದೀಪ್ ಶರ್ಮಾಗೇಕಿಲ್ಲ ಅವಕಾಶ ಎಂದು ಗವಾಸ್ಕರ್ ಪ್ರಶ್ನೆ
'ಯಾರಾದರೂ 140 ಕಿಲೋ ಮೀಟರ್ಗಿಂತ ಹೆಚ್ಚಿನ ಬೌಲಿಂಗ್ ಮಾಡಿದಾಗಲೆಲ್ಲಾ, ನಾವು ಜೊಲ್ಲು ಸುರಿಸಲು ಪ್ರಾರಂಭಿಸುತ್ತೇವೆ. ಆದರೆ ಯಾರೂ ಅಂತಹ ಬೌಲರ್ ಅನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡುವುದಿಲ್ಲ. ಆತನ ಬಗ್ಗೆ ಚರ್ಚೆಯೂ ನಡೆಸುವುದಿಲ್ಲ. ಸಂದೀಪ್ ಶರ್ಮಾ ನಿಧಾನಗತಿಯ ಬೌಲಿಂಗ್ ನೋಡಿ, ಅದು ಎಷ್ಟು ಬುದ್ಧಿವಂತಿಕೆ ಇದೆ ಎಂಬುದನ್ನು ತೋರಿಸುತ್ತದೆ ಎಂದು ಆಯ್ಕೆದಾರರಿಗೆ ತಿಳಿಸಿದ್ದಾರೆ.
ಐಪಿಎಲ್ 2024 ರಲ್ಲಿ ರಾಜಸ್ಥಾನ್ ಪರ 10 ಪಂದ್ಯಗಳಲ್ಲಿ 11 ವಿಕೆಟ್ಗಳನ್ನು ಪಡೆದ ಸಂದೀಪ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕೆಂದು ಬಿಸಿಸಿಐಗೆ ಗವಾಸ್ಕರ್ ಕರೆ ಕೊಟ್ಟಿದ್ದಾರೆ. ಸಂದೀಪ್ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆ ಇಲ್ಲ. ಏಕೆಂದರೆ ಆಯ್ಕೆದಾರರು ಈ ವರ್ಷದ ಜೂನ್ನಲ್ಲಿ ನಡೆಯುವ ಐಸಿಸಿ ಟೂರ್ನಿಯ ನಂತರ ಮುಂದಿನ ಟಿ20 ವಿಶ್ವಕಪ್ಗೆ ಯುವ ತಂಡವನ್ನು ನಿರ್ಮಿಸಲು ಬಿಸಿಸಿಐ ನೋಡುತ್ತಿದೆ.
ಸಿಕ್ಕ ಅವಕಾಶದಲ್ಲಿ ಕೈಚೆಲ್ಲಿದ್ದ ಸಂದೀಪ್
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಮೊದಲ ಮೂರು ಋತುಗಳಲ್ಲಿ (2013-15), ಆಗ ಪಂಜಾಬ್ ಕಿಂಗ್ಸ್ ಭಾಗವಾಗಿದ್ದ ಸಂದೀಪ್ ಶರ್ಮಾ 39 ವಿಕೆಟ್ ಪಡೆದಿದ್ದರು. ಉತ್ತಮ ಪ್ರದರ್ಶನದೊಂದಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ವೇಗಿ, ಜಿಂಬಾಬ್ವೆ ವಿರುದ್ಧ ಆಡಿದ 2 ಟಿ20 ಪಂದ್ಯಗಳಲ್ಲಿ ನಿರೀಕ್ಷೆಗೆ ಪ್ರದರ್ಶನ ನೀಡಲು ವಿಫಲರಾದರು. ಸಾಕಷ್ಟು ರನ್ ಸೋರಿಕೆ ಮಾಡಿದರು.
ತದನಂತರ ಇಂಜುರಿಗೆ ತುತ್ತಾದ ಸಂದೀಪ್ ಅವರನ್ನು ತಂಡದಿಂದ ಕೈಬಿಡಲಾಯಿತು. ಈ ಗಾಯವು ಸುಮಾರು ಎರಡು ವರ್ಷಗಳ ಕಾಲ ಕ್ರಿಕೆಟ್ನಿಂದ ದೂರವಿಟ್ಟಿತು. ಗಾಯದ ನಂತರ ಅವರು ಹೆಚ್ಚು ಪ್ರಬುದ್ಧ ಮತ್ತು ತಂತ್ರಗಾರಿಕೆಯ ಬೌಲರ್ ಆಗಿ ಮರಳಿದರೂ ಭಾರತ ತಂಡಕ್ಕೆ ಎಂದೂ ಅವಕಾಶ ಪಡೆಯಲಿಲ್ಲ. ಪ್ರಸ್ತುತ ಟಿ20 ವಿಶ್ವಕಪ್ಗೆ ಆಯ್ಕೆ ಆಗದಿದ್ದರೂ ದ್ವಿಪಕ್ಷೀಯ ಸರಣಿಗಳಿಗಾದರೂ ಅವಕಾಶ ಪಡೆಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
