Gus Atkinson: ಅಂತಾರಾಷ್ಟ್ರೀಯ ಪಂದ್ಯವನ್ನೇ ಆಡದಾತನಿಗೆ ಇಂಗ್ಲೆಂಡ್ ಅವಕಾಶ; ಆರ್ಚರ್​ರಂತೆ ಅಪಾಯಕಾರಿಯಾದ ಬೌಲರ್ ಗಸ್ ಅಟ್ಕಿನ್ಸನ್ ಯಾರು?
ಕನ್ನಡ ಸುದ್ದಿ  /  ಕ್ರಿಕೆಟ್  /  Gus Atkinson: ಅಂತಾರಾಷ್ಟ್ರೀಯ ಪಂದ್ಯವನ್ನೇ ಆಡದಾತನಿಗೆ ಇಂಗ್ಲೆಂಡ್ ಅವಕಾಶ; ಆರ್ಚರ್​ರಂತೆ ಅಪಾಯಕಾರಿಯಾದ ಬೌಲರ್ ಗಸ್ ಅಟ್ಕಿನ್ಸನ್ ಯಾರು?

Gus Atkinson: ಅಂತಾರಾಷ್ಟ್ರೀಯ ಪಂದ್ಯವನ್ನೇ ಆಡದಾತನಿಗೆ ಇಂಗ್ಲೆಂಡ್ ಅವಕಾಶ; ಆರ್ಚರ್​ರಂತೆ ಅಪಾಯಕಾರಿಯಾದ ಬೌಲರ್ ಗಸ್ ಅಟ್ಕಿನ್ಸನ್ ಯಾರು?

who is Gus Atkinson: ಜೋಫ್ರಾ ಆರ್ಚರ್ ಏಕದಿನ ವಿಶ್ವಕಪ್ ತನಕ ಫಿಟ್ ಆಗಿಲ್ಲ ಎಂಬ ಕಾರಣಕ್ಕೆ ಆಯ್ಕೆ ಮಾಡಲಾಗಿಲ್ಲ. ಆದರೆ, ಆತನ ಸ್ಥಾನದಲ್ಲಿ ಅವಕಾಶ ದಕ್ಕಿಸಿಕೊಂಡಿರುವ ಹೊಸ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಎಲ್ಲರನ್ನೂ ಕುತೂಹಲ ನಡೆಗೆ ದೂಡಿದ್ದಾರೆ. ಆತ ಯಾರು ಎಂಬುದನ್ನು ಈ ಮುಂದೆ ನೋಡೋಣ.

ಜೋಫ್ರಾ ಆರ್ಚರ್​ ಮತ್ತು ಗಸ್​ ಅಟ್ಕಿನ್ಸನ್.
ಜೋಫ್ರಾ ಆರ್ಚರ್​ ಮತ್ತು ಗಸ್​ ಅಟ್ಕಿನ್ಸನ್.

ಅಕ್ಟೋಬರ್​ 5ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್​​​ ಟೂರ್ನಿಗೂ ಮುನ್ನ ಇಂಗ್ಲೆಂಡ್​ ತನ್ನ ಸಂಭವನೀಯ ತಂಡವನ್ನು ಪ್ರಕಟಿಸಿದೆ. ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ತಂಡಕ್ಕೆ ಪ್ರಕಟಿಸಿರುವ ತಂಡವೇ ಬಹುತೇಕ ವಿಶ್ವಕಪ್​ ಟೂರ್ನಿಗೆ ಅಂತಿಮ ಎಂದು ಹೇಳಲಾಗಿದೆ. ತಂಡದ ಪ್ರಮುಖ ಬೌಲರ್​​ ಆಗಿದ್ದ ಜೋಫ್ರಾ ಆರ್ಚರ್​ ಆಯ್ಕೆಯಾಗದಿರುವುದು ಅಚ್ಚರಿ ಮೂಡಿಸಿದೆ. ಆದರೆ ಹೊಸ ಬೌಲರ್​​ ಆಯ್ಕೆಯು ಎಲ್ಲರನ್ನೂ ಅಚ್ಚರಿ ಮೂಡಿಸಿದೆ.

ಹೌದು, ಜೋಫ್ರಾ ಆರ್ಚರ್ ಏಕದಿನ ವಿಶ್ವಕಪ್ ತನಕ ಫಿಟ್ ಆಗಿಲ್ಲ ಎಂಬ ಕಾರಣಕ್ಕೆ ಆಯ್ಕೆ ಮಾಡಲಾಗಿಲ್ಲ. ಆದರೆ, ಆತನ ಸ್ಥಾನದಲ್ಲಿ ಅವಕಾಶ ದಕ್ಕಿಸಿಕೊಂಡಿರುವ ಹೊಸ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಎಲ್ಲರನ್ನೂ ಕುತೂಹಲ ನಡೆಗೆ ದೂಡಿದ್ದಾರೆ. ಯಾಕೆಂದರೆ ಗಸ್ ಅಟ್ಕಿನ್ಸನ್ ಈವರೆಗೆ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಕೌಂಟಿ ಮತ್ತು ಹಂಡ್ರೆಡ್​ ಟೂರ್ನಿಯಲ್ಲಷ್ಟೇ ಆಡಿದ್ದಾರೆ. ಹಾಗಾದರೆ ಆತ ಯಾರು? ಬನ್ನಿ ನೋಡೋಣ.

ಡೆಡ್ಲಿ ಬೌಲರ್​​ ಈ ಗಸ್ ಅಟ್ಕಿನ್ಸನ್

ಅಂತಾರಾಷ್ಟ್ರೀಯ ಕ್ರಿಕೆಟ್​ ಆಡದಿದ್ದರೂ, ಆತನ ಬೆಂಕಿ ಬೌಲಿಂಗ್​​ಗೆ ಎಲ್ಲರೂ ಫಿದಾ ಆಗಿದ್ದಾರೆ. ತನ್ನ ಭಯಾನಕ ಬೌಲಿಂಗ್​ ಮೂಲಕ ಬ್ಯಾಟ್ಸ್​​ಮನ್​​ಗಳಿಗೆ ಹೆದರಿಸುವ ಗಸ್ ಆಟ್ಕಿನ್ಸನ್​, ಎತ್ತರ 6.2 ಅಡಿ. ಜೋಫ್ರಾ ಆರ್ಚರ್ ಅವರಂತೆಯೇ ವೇಗವಾಗಿ ಮತ್ತು ತೀಕ್ಷ್ಣವಾಗಿ ಬೌಲ್ ಮಾಡುತ್ತಾರೆ. ಗುಸ್ ಅಟ್ಕಿನ್ಸನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತನ್ನ ಮೊದಲ ವಿಕೆಟ್​ ಪಡೆದಿದ್ದು ದಿಗ್ಗಜ ಅಲೆಸ್ಟೆರ್ ಕುಕ್ ಅವರದ್ದು. ಅವರು ಸರ್ರೆ ತಂಡದ ಪರ ಆಡುತ್ತಿದ್ದಾರೆ.

ಅತ್ಯಂತ ವೇಗವಾಗಿ ಬೌಲಿಂಗ್​ ಮಾಡುವ ಸಾಮರ್ಥ್ಯ ಹೊಂದಿದ್ದರೂ, ಅವರು ನಿಧಾನಗತಿ ಚೆಂಡು ಎಸೆಯುವುದಲ್ಲೂ ನಿಸ್ಸೀಮ. ಇತ್ತೀಚೆಗೆ ಗಂಟೆಗೆ 95 ಕಿಲೋ ಮೀಟರ್ ವೇಗದಲ್ಲೂ ಬೌಲಿಂಗ್ ಮಾಡಿದ್ದರು. ಡೆಡ್ಲಿ ಬೌನ್ಸರ್​, ಯಾರ್ಕರ್​​ಗಳ ಮೂಲಕ ಗಮನ ಸೆಳೆದಿರುವ ಈತ ಒತ್ತಡವನ್ನೂ ನಿಭಾಯಿಸುವ ತಾಕತ್ತೂ ಹೊಂದಿದ್ದಾರೆ. ಭಾರತದ ಪಿಚ್​​ಗಳಿಗೆ ಸರಿಹೊಂದುವ ಈತನ ಬೌಲಿಂಗ್​ ಅನ್ನು ಪರಿಗಣಿಸಿಯೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮಣೆ ಹಾಕಿದೆ ಎನ್ನುವುದು ತಜ್ಞರ ಅಭಿಪ್ರಾಯ.

ಅಂಕಿ-ಅಂಶ ಹೀಗಿದೆ!

ಇದುವರೆಗೆ ದೇಶೀಯ ಮಟ್ಟದಲ್ಲಿ ಲೀಸ್ಟ್​​ ಎ 50 ಓವರ್​​​​ ಮಾದರಿಯಲ್ಲಿ 2 ಪಂದ್ಯಗಳನ್ನೇ ಆಡಿದ್ದು, 5 ವಿಕೆಟ್​ ಉರುಳಿಸಿದ್ದಾರೆ. 25 ವರ್ಷದ ಈ ಬೌಲರ್​​ ಈ ಎರಡೂ ಪಂದ್ಯಗಳನ್ನು ಆಡಿದ್ದು 2021ರಲ್ಲಿ. 7.6ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟಿರುವ ಈ ವೇಗಿ, 43 ರನ್ ನೀಡಿ 4 ವಿಕೆಟ್​ ಪಡೆದಿರುವುದು ಅತ್ಯುತ್ತಮ ಬೌಲಿಂಗ್​ ಆಗಿದೆ.

ಆಂಗ್ಲ ತಂಡದ ಇತರ ವೇಗದ ಬೌಲರ್‌ಗಳಾದ ಜೋಫ್ರಾ ಆರ್ಚರ್, ಮಾರ್ಕ್ ವುಡ್ ಮತ್ತು ಆಲಿ ಸ್ಟೋನ್ ಅವರಂತೆ ಗಸ್ ಅಟ್ಕಿನ್ಸನ್ ಕೂಡ ಒತ್ತಡದ ಮುರಿತದ ಗಾಯಗಳಿಗೆ ತುತ್ತಾಗಿದ್ದರು. 25 ವರ್ಷದ ಅಟ್ಕಿನ್ಸನ್ 2017, 2018 ಮತ್ತು 2019ರಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಇದು ಅವರ ವೃತ್ತಿಜೀವನವನ್ನು ಹಳಿ ತಪ್ಪಿಸಲು ಕಾರಣವಾಯಿತು. ಆದರೆ ಇದಾದ ಬಳಿಕ ಛಲ ಬಿಡದ ಅವರು, ಫಿಟ್​ನೆಸ್​ ಮೇಲೆ ಹೆಚ್ಚು ಫೋಕಸ್ ಮಾಡಿದ್ದರು. ಇದೀಗ ಇಂಗ್ಲೆಂಡ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

14 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿದ ಗಸ್ ಅಟ್ಕಿನ್ಸನ್, 45 ವಿಕೆಟ್ ಉರುಳಿಸಿದ್ದಾರೆ. ಅಲ್ಲದೆ, 41 ಟಿ20 ಪಂದ್ಯಗಳನ್ನಾಡಿದ್ದು, 55 ವಿಕೆಟ್​ ಪಡೆದಿದ್ದಾರೆ. ಈ ಬಲಗೈ ಮಧ್ಯಮ ವೇಗಿ ಹುಟ್ಟಿದ್ದು, 1998ರ ಜನವರಿ 19ರಂದು. ಮಿಡ್ಲ್ಸೆಕ್ಸ್​ನ ಚೆಲ್ಸಿಯಾ ಎಂಬಲ್ಲಿ ಜನಿಸಿದ ಈತ, ಬ್ರಾಡ್‌ಫೀಲ್ಡ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು.

Whats_app_banner