Who Is Harjas Singh: ಅಂಡರ್ 19 ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಸೋಲಿಗೆ ಮುನ್ನುಡಿ ಬರೆದ ಹರ್ಜಾಸ್ ಸಿಂಗ್ ಯಾರು?
Harjas Singh: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಸೋಲಿಗೆ ಮುನ್ನುಡಿ ಬರೆದಿದ್ದೇ ಹರ್ಜಾಸ್ ಸಿಂಗ್. ಇವರ ಅರ್ಧಶತಕದ ನೆರವಿಂದ ಆಸೀಸ್ 50 ಓವರ್‌ಗಳಲ್ಲಿ 253 ರನ್ ಕಲೆ ಹಾಕಿತು. ಅಲ್ಲದೆ ಭಾರತವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಅಂಡರ್ 19 ವಿಶ್ವಕಪ್ ಪಂದ್ಯಾವಳಿಯ (ICC Under 19 World Cup 2024) ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ (India U19 vs Australia U19 Final) ಭರ್ಜರಿ ಜಯ ಸಾಧಿಸಿತು. ಆ ಮೂಲಕ ನಾಲ್ಕನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು. ಪಂದ್ಯದಲ್ಲಿ ಆಸೀಸ್ ಗೆಲುವಿಗೆ ಕಾರಣರಾದವರಲ್ಲಿ ಹರ್ಜಾಸ್ ಸಿಂಗ್(Harjas Singh) ಕೂಡಾ ಒಬ್ಬರು. ಹೆಸರೇ ಹೇಳುವಂತೆ, ಸಿಂಗ್ ಅವರ ಕುಟುಂಬಸ್ಥರು ಭಾರತ ಮೂಲದವರು. ಅವರ ಕುರಿತಂತೆ ಇನ್ನಷ್ಟು ಮಾಹಿತಿ ಈ ಸುದ್ದಿಯಲ್ಲಿದೆ.
ಭಾರತ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಗೆಲ್ಲಿಸಿ, ಭಾರತದ ಸೋಲಿಗೆ ಮುನ್ನುಡಿ ಬರೆದಿದ್ದೇ ಹರ್ಜಾಸ್ ಸಿಂಗ್. ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಪರ, ಅವರು 64 ಎಸೆತಗಳಲ್ಲಿ 55 ರನ್ ಗಳಿಸಿದರು. ಇವರ ಅರ್ಧಶತಕದ ನೆರವಿಂದ ಆಸೀಸ್ 50 ಓವರ್‌ಗಳಲ್ಲಿ 253 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ ಅತ್ಯಂತ ಕೆಟ್ಟ ಪ್ರದರ್ಶನ ನೀಡಿತು. 43.5 ಓವರ್‌ಗಳಲ್ಲಿ 174 ರನ್ಗಳಿಸಲಷ್ಟೇ ಶಕ್ತವಾಗಿ ಆಲೌಟ್ ಆಯಿತು.
ಇದನ್ನೂ ಓದಿ | ಅಂಡರ್-19 ವಿಶ್ವಕಪ್; ಭಾರತದ 6ನೇ ಟ್ರೋಫಿ ಕನಸು ಭಗ್ನ, ನಾಲ್ಕನೇ ಬಾರಿಗೆ ಚಾಂಪಿಯನ್ ಆದ ಆಸ್ಟ್ರೇಲಿಯಾ
ಸಿಂಗ್, ಈ ಹಿಂದಿನ ಪಂದ್ಯಗಳಲ್ಲಿ ಹೇಳಿಕೊಳ್ಳುವಂಥಾ ಪ್ರದರ್ಶನ ನೀಡಿರಲಿಲ್ಲ. ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 49 ರನ್ ಗಳಿಸಿದ್ದರು. ಆದರೆ, ನಿರ್ಣಾಯಕ ಪಂದ್ಯದಲ್ಲಿ ನಿರ್ಣಾಯಕ ಪ್ರದರ್ಶನ ನೀಡಿ ಮಿಂಚಿದರು.
ಚಂಡೀಗಢ ಮೂಲದವರು ಹರ್ಜಾಸ್ ಸಿಂಗ್
ಹರ್ಜಾಸ್ ಅವರು 2005ರಲ್ಲಿ ಆಸ್ಟ್ರೇಲಿಯಾದ ಪ್ರಮುಖ ನಗರ ಸಿಡ್ನಿಯಲ್ಲಿ ಜನಿಸಿದರು. ಅವರ ತಂದೆ ಇಂದರ್‌ಜಿತ್ ಸಿಂಗ್, ಹರ್ಜಾಸ್ ಜನಿಸುವುದಕ್ಕಿಂತ ಐದು ವರ್ಷಗಳಿಗಿಂದ ಮುನ್ನವೇ ಭಾರತದ ಪ್ರಮುಖ ನಗರ ಚಂಡೀಗಢದಿಂದ ಆಸ್ಟ್ರೇಲಿಯಾಗೆ ಹಾರಿದ್ದರು. ಅಲ್ಲೇ ತಮ್ಮ ಕುಟುಂಬ ಕಟ್ಟಿಕೊಂಡಿದ್ದರು. ಹರ್ಜಾಸ್ ಅವರನ್ನು ಎಂಟು ವರ್ಷ ವಯಸ್ಸಿನಲ್ಲೇ ರೆವ್ಸ್ಬಿ ವರ್ಕರ್ಸ್ ಕ್ರಿಕೆಟ್ ಕ್ಲಬ್‌ಗೆ ಸೇರಿಸಿ ತರಬೇತಿ ಕೊಡಿಸಿದರು. ಸಣ್ಣ ವಯಸ್ಸಿನಲ್ಲೇ ಕ್ರಿಕೆಟ್ ಪ್ರಯಾಣವನ್ನು ಆರಂಭಿಸಿದರು.
ಅಪ್ಪ - ಅಮ್ಮ ಇಬ್ಬರೂ ಕ್ರೀಡಾಪಟುಗಳು
ಹರ್ಜಾಸ್ ತಂದೆ ಇಂದರ್‌ಜಿತ್ ಸಿಂಗ್, ಪಂಜಾಬ್‌ನ ರಾಜಧಾನಿ ಚಂಡೀಗಢದಲ್ಲಿ ರಾಜ್ಯ ಬಾಕ್ಸಿಂಗ್ ಚಾಂಪಿಯನ್ ಆಗಿದ್ದರು. ಅವರ ತಾಯಿ ಅವಿಂದರ್ ಕೌರ್ ರಾಜ್ಯ ಮಟ್ಟದ ಲಾಂಗ್ ಜಂಪರ್ ಆಗಿದ್ದರು. ಇಬ್ಬರೂ ಕೂಡಾ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಹೀಗಾಗಿ ಮಗನ ರಕ್ತದಲ್ಲಿಯೂ ಕ್ರೀಡೆಯ ಸ್ಫೂರ್ತಿ ಇತ್ತು.
ವಿಶ್ವಕಪ್‌ಗೆ ಮುಂಚಿತವಾಗಿ, ಹರ್ಜಾಸ್ ಅವರು ತಮ್ಮ ಕುಟುಂಬಸ್ಥರು ಈಗಲೂ ಭಾರತದಲ್ಲಿ ಇದ್ದಾರೆ ಎಂದು ಹೇಳಿದ್ದರು. ಅವರು ಕೊನೆಯದಾಗಿ 2015ರಲ್ಲಿ ಭಾರತಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದರು.
ಇದನ್ನೂ ಓದಿ | ಮೊಹಮ್ಮದ್ ಕೈಫ್‌ರಿಂದ ಯಶ್ ದುಲ್‌ವರೆಗೆ; ಅಂಡರ್ 19 ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ಟ್ರೋಫಿ ತಂದುಕೊಟ್ಟ ನಾಯಕರು ಇವರೇ
“ನನ್ನ ಕುಟುಂಬದವರು ಈಗಲೂ ಚಂಡೀಗಢ ಮತ್ತು ಅಮೃತಸರದಲ್ಲಿ ಇದ್ದಾರೆ. ನಮಗೆ ಸೆಕ್ಟರ್ 44-Dಯಲ್ಲಿ ಮನೆ ಇದೆ. ಆದರೆ ನಾನು ಕೊನೆಯ ಬಾರಿಗೆ 2015ರಲ್ಲಿ ಇದ್ದೆ ಭಾರತಕ್ಕೆ ಬಂದಿದ್ದೆ. ಆ ನಂತರ, ಕ್ರಿಕೆಟ್ ಆಟದಲ್ಲಿ ನಿರತನಾದೆ. ಹೀಗಾಗಿ ಮತ್ತೆ ಭಾರತಕ್ಕೆ ಹೋಗುವ ಅವಕಾಶ ನನಗೆ ಸಿಗಲಿಲ್ಲ. ನನ್ನ ಚಿಕ್ಕಪ್ಪ ಇನ್ನೂ ಅಲ್ಲಿ ವಾಸಿಸುತ್ತಿದ್ದಾರೆ" ಎಂದು ಹರ್ಜಾಸ್ ಹೇಳಿದ್ದಾರೆ.
ಇದನ್ನೂ ಓದಿ | ಕಿರಿಯರ ವಿಶ್ವಕಪ್ ಫೈನಲ್ನಲ್ಲೂ ಸೋಲು; 8 ತಿಂಗಳ ಅಂತರದಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಬಾರಿ ಫೈನಲ್ ಸೋತ ಭಾರತ
(This copy first appeared in Hindustan Times Kannada website. To read more like this please logon to kannada.hindustantimes.com)