20 ಲಕ್ಷಕ್ಕೆ ಮಾರಾಟ, ಕಳೆದ ಬಾರಿ ಗಾಯವೇ ವಿಲನ್; ವೇಗದ ಚೆಂಡೆಸೆದು ಸಂಚಲನ ಸೃಷ್ಟಿಸಿದ ಮಯಾಂಕ್ ಯಾದವ್ ಯಾರು?
Mayank Yadav : ಐಪಿಎಲ್ನ 11ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡದ ಯುವ ವೇಗದ ಬೌಲರ್ ಮಯಾಂಕ್ ಯಾದವ್ ಅವರು ಗಂಟೆಗೆ 155.8 ಕಿ.ಮೀ ವೇಗದ ಬೌಲಿಂಗ್ ಮಾಡುವ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಏಕಾನಾ ಸ್ಟೇಡಿಯಂನಲ್ಲಿ ಮಾರ್ಚ್ 30ರಂದು ಶನಿವಾರ ರಾತ್ರಿ ನಡೆದ ಐಪಿಎಲ್ 2024ರ 11ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್‌ನ ಅನ್‌ಕ್ಯಾಪ್ಡ್ ಭಾರತೀಯ ವೇಗದ ಬೌಲರ್ ಮಯಾಂಕ್ ಯಾದವ್ ಅವರು ತಮ್ಮ ವೇಗದ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಮಯಾಂಕ್ ತನ್ನ ಚೊಚ್ಚಲ ಪಂದ್ಯದಲ್ಲೇ ಪ್ರಭಾವ ಬೀರಿದ್ದು, ಲಕ್ನೋಗೆ ಋತುವಿನ ಮೊದಲ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
21 ವರ್ಷದ ವೇಗಿಯ ಕಿಲ್ಲರ್ ಬೌಲಿಂಗ್ನಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಲು ನೆರವಾಯಿತು. 4 ಓವರ್ಗಳಲ್ಲಿ ಕೇವಲ 27 ರನ್ ಬಿಟ್ಟುಕೊಟ್ಟು ನಿರ್ಣಾಯಕ ಮೂರು ವಿಕೆಟ್ ಪಡೆದ ಮಯಾಂಕ್, ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು. ಈ ಪಂದ್ಯಕ್ಕೂ ಮುನ್ನ ಯಾರಿಗೂ ತಿಳಿಯದ ಮಯಾಂಕ್, ಈಗ ಇಡೀ ಕ್ರಿಕೆಟ್ ಜಗತ್ತಿಗೆ ಪರಿಚಿತರಾಗಿದ್ದಾರೆ. ಅದು ಕೂಡ ಗಂಟೆಗೆ 155.8 ಕಿಮೀ ವೇಗದ ಬೌಲಿಂಗ್ ಮೂಲಕ ಎಂಬುದು ವಿಶೇಷ. ಭಾರತೀಯ ಕ್ರಿಕೆಟ್‌ನಲ್ಲಿ ವೇಗದ ಹೊಸ ರಾಜನಾಗಿ ಹೊರಹೊಮ್ಮಿರುವ ಮಯಾಂಕ್ ಯಾದವ್ ಯಾರು? ಇಲ್ಲಿದೆ ವಿವರ.
20 ಲಕ್ಷಕ್ಕೆ ಲಕ್ನೋ ಪಾಲು
ಲಕ್ನೋ ಸೂಪರ್‌ಜೆಂಟ್ಸ್ 2022ರ ಋತುವಿನ ಮೆಗಾ ಹರಾಜಿನಲ್ಲಿ 20 ಲಕ್ಷ ರೂಪಾಯಿ ಮೂಲ ಬೆಲೆಗೆ ಮಯಾಂಕ್ರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಆದರೆ, ಆ ಋತುವಿನಲ್ಲಿ ಲಕ್ನೋ ಪರ ಒಂದು ಪಂದ್ಯವನ್ನೂ ಆಡಲಾಗಲಿಲ್ಲ. ಕಳೆದ ಋತುವಿನಲ್ಲಿ ಮಯಾಂಕ್ ಗಾಯದ ಕಾರಣದಿಂದ ಇಡೀ ಋತುವಿನಿಂದ ಹೊರಗುಳಿದಿದ್ದರು. ಕಳೆದ ಆವೃತ್ತಿಯಲ್ಲಿ ತಂಡದ ಮೊದಲ ಅಭ್ಯಾಸ ಪಂದ್ಯದ ನಂತರ ಮಯಾಂಕ್ ಗಾಯಗೊಂಡರು. ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ತಂಡವನ್ನು ಪ್ರತಿನಿಧಿಸುತ್ತಾರೆ.
ಮಯಾಂಕ್ ಪ್ರದರ್ಶನ ಹೇಗಿದೆ ನೋಡಿ
2023ರಲ್ಲಿ ನಡೆದ ಕರ್ನಲ್ ಸಿಕೆ ನಾಯುಡು ಟ್ರೋಫಿಯಲ್ಲಿ ಮಯಾಂಕ್ ಪ್ರಬಲ ಪ್ರದರ್ಶನ ನೀಡಿದ್ದರು. ಆರು ಪಂದ್ಯಗಳಲ್ಲಿ 15 ವಿಕೆಟ್ ಪಡೆದು ಮಿಂಚಿದ್ದರು. ಛತ್ತೀಸ್‌ಗಢ ವಿರುದ್ಧದ ಒಂದೇ ಪಂದ್ಯದಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದಲ್ಲದೇ ಮಯಾಂಕ್ ಬ್ಯಾಟಿಂಗ್‌ನೊಂದಿಗೆ 66 ರನ್‌ಗಳ ಕೊಡುಗೆ ನೀಡಿದ್ದರು. ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ನಾಲ್ಕು ಪಂದ್ಯಗಳಲ್ಲಿ 5 ವಿಕೆಟ್ ಪಡೆದಿದ್ದ ಮಯಾಂಕ್ ಎಕಾನಮಿ 6.5 ಕ್ಕಿಂತ ಕಡಿಮೆಯಿತ್ತು.
ಇದಲ್ಲದೆ ವಿಜಯ್ ಹಜಾರೆ ಏಕದಿನ ಟ್ರೋಫಿಯಲ್ಲೂ ಮಯಾಂಕ್ ಅದ್ಭುತ ಪ್ರದರ್ಶನ ನೀಡಿ ಆರು ವಿಕೆಟ್ ಕಬಳಿಸಿದ್ದರು. ಮಯಾಂಕ್ 2023ರ ದೇವಧರ್ ಟ್ರೋಫಿಯಲ್ಲಿ ಉತ್ತರ ವಲಯ ತಂಡವನ್ನು ಪ್ರತಿನಿಧಿಸಿ 5 ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದರು. ಮಯಾಂಕ್ ಇದುವರೆಗೆ ಒಂದೇ ಒಂದು ಪ್ರಥಮ ದರ್ಜೆ ಪಂದ್ಯವನ್ನು ಆಡಿರುವ, ಮಯಾಂಕ್ 17 ಲಿಸ್ಟ್-ಎ, 10 ಟಿ20 ಪಂದ್ಯಗಳಲ್ಲಿ ತಮ್ಮ ತಂಡವನ್ನು ಪ್ರತಿನಿಧಿಸಿದ್ದಾರೆ. ಮಯಾಂಕ್ ಲಿಸ್ಟ್-ಎನಲ್ಲಿ 34 ವಿಕೆಟ್ ಪಡೆದಿದ್ದು, 5.35 ಎಕಾನಮಿ ಹೊಂದಿದ್ದಾರೆ.
ನಾಂಡ್ರೆ ಬರ್ಗರ್ ದಾಖಲೆ ಉಡೀಸ್
ಪಂಜಾಬ್ ಕಿಂಗ್ಸ್ ವಿರುದ್ಧ ಐಪಿಎಲ್ 2024ರ ವೇಗದ ಚೆಂಡನ್ನು ಮಯಾಂಕ್ ಬೌಲ್ ಮಾಡಿದರು. ಮಯಾಂಕ್ 155.8 ಕಿಮೀ ವೇಗದ ಚೆಂಡು ಎಸೆದು ನಾಂಡ್ರೆ ಬರ್ಗರ್ ಅವರನ್ನು ಹಿಂದಿಕ್ಕಿದರು. 12ನೇ ಓವರ್‌ನ ಮೊದಲ ಎಸೆತವನ್ನು ಗಂಟೆಗೆ 155.8 ಕಿ.ಮೀ ವೇಗದಲ್ಲಿ ಎಸೆದರು. ಇದಕ್ಕೂ ಮುನ್ನ ನಾಂಡ್ರೆ ಬರ್ಗರ್ ಗಂಟೆಗೆ 153 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದಿದ್ದರು. ಮಯಾಂಕ್ ಒಟ್ಟು 7 ಬಾರಿ 150ಕ್ಕಿಂತ ಹೆಚ್ಚು ವೇಗದಲ್ಲಿ ಚೆಂಡು ಹಾಕಿದ್ದಾರೆ.
ದಿಗ್ಗಜರು ಪಡೆದಿದ್ದ ಅಕಾಡೆಮಿಯಲ್ಲಿ ಮಯಾಂಕ್ ತರಬೇತಿ
ಪಂಜಾಬ್ ವಿರುದ್ಧ ತನ್ನ ವೇಗವನ್ನು ಸಾಬೀತುಪಡಿಸಿದ ಮಯಾಂಕ್ ಪಂದ್ಯದ ವೇಳೆ ಕಾಮೆಂಟ್ ಮಾಡುವ ಮೂಲಕ ಕಾಮೆಂಟೇಟರ್ಗಳು 'ರಾಜಧಾನಿ ಎಕ್ಸ್‌ಪ್ರೆಸ್' ಎಂದು ಅಡ್ಡಹೆಸರು ಪಡೆದಿದ್ದಾರೆ. ದೆಹಲಿಯ ಈ ಯುವ ಪ್ರತಿಭೆ ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಾರೆ. ಆದ್ದರಿಂದ ಅವರ ಅಡ್ಡಹೆಸರು ರಾಜಧಾನಿ ಎಕ್ಸ್‌ಪ್ರೆಸ್ ಎಂದು ಇಡಲಾಗಿದೆ. ಮಯಾಂಕ್ ಯಾದವ್ ದೆಹಲಿಯ ಸೋನೆಟ್ ಕ್ರಿಕೆಟ್ ಕ್ಲಬ್‌ನಲ್ಲಿ ತರಬೇತಿ ಪಡೆದಿದ್ದಾರೆ. ಇದೇ ಅಕಾಡೆಮಿಯಿಂದ ರಿಷಭ್ ಪಂತ್, ಶಿಖರ್ ಧವನ್ ಮತ್ತು ಆಶಿಶ್ ನೆಹ್ರಾ ಅವರಂತಹ ಕ್ರಿಕೆಟಿಗರು ಹೊರಹೊಮ್ಮಿದ್ದಾರೆ.