ನತಾಶಾ ಸ್ಟಾಂಕೋವಿಕ್ ಯಾರು; ಹಾರ್ದಿಕ್ ಪಾಂಡ್ಯ ವಿಚ್ಛೇದಿತ ಪತ್ನಿ ಮೊದಲು ಪ್ರೀತಿಸಿದ್ದು ಯಾರನ್ನು?
Who is Natasa Stankovic: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನ ಪಡೆದ ನತಾಶಾ ಸ್ಟಾಂಕೋವಿಕ್ ಅವರು ಮೊದಲು ಪ್ರೀತಿಸಿದ್ದು ಯಾರನ್ನು? ನತಾಶಾ ಹುಟ್ಟಿದ್ದೆಲ್ಲಿ? ಇಲ್ಲಿದೆ ವಿವರ.
ಪ್ರಸ್ತುತ ಗೂಗಲ್ನಲ್ಲಿ ಹೆಚ್ಚು ಹುಡುಕಾಟ ನಡೆಯುತ್ತಿರುವ ಹೆಸರು ಅಂದರೆ ಅದು ನತಾಶಾ ಸ್ಟಾಂಕೋವಿಕ್. ಹೌದು, ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರೊಂದಿಗೆ ವಿಚ್ಛೇದನ ಪಡೆದ ನಂತರ ನತಾಶಾ ಯಾರು? ಹಿನ್ನೆಲೆ ಏನು ಎಂಬುದನ್ನು ತಿಳಿಯಲು ಕುತೂಹಲ ತೋರಿಸುತ್ತಿದ್ದಾರೆ. ಹಾರ್ದಿಕ್ರನ್ನು ಎರಡೆರಡು ಬಾರಿ ವರಿಸಿದ ಬ್ಯೂಟಿ ಈಗ ಭಾರತ ತೊರೆದು ತನ್ನ ಮಗ ಅಗಸ್ತ್ಯನೊಂದಿಗೆ ತವರು ದೇಶ ಸರ್ಬಿಯಾಗೆ ಹೋಗಿದ್ದಾರೆ. ಲವ್ ಮ್ಯಾರೇಜ್ ಆದವಳು ಕ್ರಿಕೆಟಿಗನೊಂದಿಗೆ ಜೀವನ ನಡೆಸಿದ್ದು ಕೇವಲ ನಾಲ್ಕೇ ವರ್ಷಗಳು!
ಬಾಲಿವುಡ್ನಲ್ಲಿ ಮಿಂಚು
ಮನರಂಜನೆಯ ಕ್ಷೇತ್ರದಲ್ಲಿ ಅಪಾರ ಹೆಸರು ಸಂಪಾದಿಸಿದ ನತಾಶಾ, ಭಾರತೀಯ ಸಿನಿಮಾದಲ್ಲಿ ಛಾಪು ಮೂಡಿಸುವುದಕ್ಕೂ ಮೊದಲು ಮಾಡೆಲ್ ಆಗಿ ತನ್ನ ವೃತ್ತಿಜೀವನ ಪ್ರಾರಂಭಿಸಿದ್ದರು. 1992ರ ಮಾರ್ಚ್ 2ರಂದು ಜನಿಸಿದ ಸರ್ಬಿಯಾದ ಬೆಡಗಿ ನತಾಶಾ, 2013ರಲ್ಲಿ ಪ್ರಕಾಶ್ ಝಾ ಅವರ 'ಸತ್ಯಾಗ್ರಹ' ಚಿತ್ರದೊಂದಿಗೆ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ಅಜಯ್ ದೇವಗನ್ ಜತೆಗೆ 'ಐಯೋ ಜಿ' ಹಾಡಿಗೆ ಸೊಂಟ ಬಳುಕಿಸಿದ್ದರು. ಆ್ಯಂಥಮ್ ಸಾಂಗ್ 'ಡಿಜೆ ವಾಲಿ ಬಾಬು'ನಲ್ಲೂ ಆಕೆ ಕಾಣಿಸಿಕೊಂಡಿದ್ದ ನತಾಶಾ ಹೆಚ್ಚು ಖ್ಯಾತಿ ಪಡೆದರು.
ನಟಿ, ರೂಪದರ್ಶಿ ಮತ್ತು ನರ್ತಕಿಯಾಗಿದ್ದ ನತಾಶಾ, ರಿಯಾಲಿಟಿ ಶೋ, ಬೆಳ್ಳಿತೆರೆ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. 2014ರಲ್ಲಿ 8ನೇ ಸೀಸನ್'ಬಿಗ್ ಬಾಸ್' ಮನೆಗೆ ನತಾಶಾ ಎಂಟ್ರಿಕೊಟ್ಟಿದ್ದರು. ಅವರಿದ್ದದ್ದು ಕೆಲವೇ ವಾರಗಳಾದರೂ ಲಕ್ಷಾಂತರ ಜನರ ಮನಸ್ಸಿನಲ್ಲಿ ಅವರ ಹೆಸರನ್ನು ಮುದ್ರಿಸಿದ್ದರು. ಇದರ ನಂತರ ಅವರು 'ನಾಚ್ ಬಲಿಯೆ' ಡ್ಯಾನ್ಸ್ ಶೋ 9ನೇ ಸೀಸನ್‌ನಲ್ಲಿ ಅಂದಿನ ಆಕೆಯ ಗೆಳೆಯ ಅಲಿ ಗೋನಿ ಅವರೊಂದಿಗೆ ತಮ್ಮ ನೃತ್ಯ ಪ್ರದರ್ಶಿಸಿದರು. ಇದು ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಆಕೆ ಅಸ್ತಿತ್ವ ಮತ್ತಷ್ಟು ಗಟ್ಟಿಗೊಳಿಸಿತ್ತು.
ಮೊದಲು ಲವ್ ಮಾಡಿದ್ದು ಯಾರನ್ನು?
ಬಾಲಿವುಡ್ಗೆ ಪ್ರವೇಶಿಸಿದ ನಂತರ ಆಕೆ ಹೊಸ ಗಾಸಿಪ್ ಲೋಕವನ್ನು ಸೃಷ್ಟಿಸಿದರು. ಅಭಿಮಾನಿಗಳನ್ನು ಸದಾ ಆಕರ್ಷಿಸುತ್ತಿದ್ದ ನತಾಶಾ, ತನ್ನ ಮೊದಲ ಗೆಳೆಯ ಹಾಗೂ ಪ್ರಿಯಕರ ಅಲಿ ಗೋನಿ ಅವರೊಂದಿಗೆ ಜಗಳ ಮಾಡಿಕೊಂಡಿದ್ದರು. ಆದರೆ ಅಂದು ಬಾಲಿವುಡ್ನಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಹಲವು ವರ್ಷಗಳ ಕಾಲ ಇಬ್ಬರು ಡೇಟಿಂಗ್ ನಡೆಸಿದ್ದಲ್ಲದೆ, ವಿಶೇಷ ಸಂಬಂಧವನ್ನೂ ಹೊಂದಿದ್ದರೂ ಎಂದು ಗಾಸಿಫ್ ಹುಟ್ಟಿಕೊಂಡಿತ್ತು. ನಂತರ ಹಾರ್ದಿಕ್ ಪಾಂಡ್ಯ ಬಲೆಗೆ ಬಿದ್ದ ನತಾಶಾ, ಗೋನಿ ಜೊತೆಗೆ ಜಗಳದಿಂದ ಹಿಡಿದು ಹಾರ್ದಿಕ್ ನಂತರದ ಪ್ರಣಯ ಮತ್ತು ವಿವಾಹದವರೆಗೆ ಆಕೆಯ ಪ್ರೇಮ ಜೀವನವು ಗಾಸಿಪ್ಗಳಾಗಿಯೇ ಉಳಿದುಕೊಂಡವು.
ಹಾರ್ದಿಕ್ ಜೊತೆ ಸುತ್ತಾಡಿದ್ದು ಯಾರಿಗೂ ಗೊತ್ತಿರಲಿಲ್ಲ
ಗೋನಿ ನಂತರ ಹಾರ್ದಿಕ್ ಜೊತೆಗೆ ಸಂಬಂಧ ಬೆಳೆಸಿದ್ದು ಸಹ ದೊಡ್ಡ ಗಾಸಿಫ್ ಆಗಿಯೇ ಹರಿದಾಡಿತ್ತು. ಇಬ್ಬರೂ 2018 ರಲ್ಲಿ ಮುಂಬೈನ ನೈಟ್‌ಕ್ಲಬ್‌ನಲ್ಲಿ ಭೇಟಿಯಾಗಿದ್ದರು ಎಂದು ವರದಿಯಾಗಿದೆ. ಅಂದಿನಿಂದ ಇಬ್ಬರು ರಹಸ್ಯವಾಗಿ ಡೇಟಿಂಗ್ ನಡೆಸುತ್ತಿದ್ದರು. 2019ರಲ್ಲಿ ನತಾಸಾ ಅವರು ಹಾರ್ದಿಕ್ ಅವರನ್ನು ತನ್ನ ಆತ್ಮೀಯ ಸ್ನೇಹಿತ ಎಂದು ಕರೆದಿದ್ದರು. ಆದರೆ, 2020ರ ಜನವರಿಯಲ್ಲಿ ಇಬ್ಬರು ಮೊದಲ ಬಾರಿಗೆ ಸುಂಟರಗಾಳಿಯಂತೆ ಕಾಣಿಸಿಕೊಂಡು ಇಡೀ ಕ್ರಿಕೆಟ್ ಹಾಗೂ ಬಾಲಿವುಡ್ ಅನ್ನೇ ದಿಗ್ಭ್ರಮೆಗೊಳಿಸಿದರು. ಆಕೆ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು.
ಲಾಕ್ಡೌನ್ ಅವಧಿಯಲ್ಲೇ ಈ ಜೋಡಿ ಹಕ್ಕಿ ಮದುವೆಯಾಗಿತ್ತು. ಮಗ ಅಗಸ್ತ್ಯ ಜನನವಾದ ಎರಡು ವರ್ಷಗಳ ನಂತರ ಅಂದರೆ 2023ರ ಫೆಬ್ರವರಿ 14ರಂದು ಹಾರ್ದಿಕ್-ನತಾಶಾ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಅದ್ಧೂರಿಯಾಗಿ ಕಾಲಿಟ್ಟರು. ಅದು ಕೂಡ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮದ ಪ್ರಕಾರ ಪ್ರತ್ಯೇಕವಾಗಿ ಮದುವೆಯಾದರು. 2018ರಲ್ಲಿ ಮೊದಲ ಬಾರಿಗೆ ಭೇಟಿಯಾದ ಈ ದಂಪತಿ, 2020ರಲ್ಲಿ ವಿವಾಹವಾದರು. ಇದೀಗ ನಾಲ್ಕೇ ವರ್ಷಗಳಲ್ಲಿ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ.
ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಇತ್ತೀಚಿಗೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಹಾಗಾಗಿ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿತ್ತು. ಆಗ ಇಬ್ಬರಿಗೂ ವಿಚ್ಛೇದನವಾಗಿದೆ ಎಂದು ವದಂತಿ ಹರಡಿತ್ತು. ಉನ್ನತ ಮೂಲಗಳು ಸಹ ಖಚಿತಪಡಿಸಿದ್ದವು. ಆದರೆ ಅಧಿಕೃತವಾಗಿ ಇಬ್ಬರು ಸಹ ಎಲ್ಲೂ ಮಾತನಾಡಿರಲಿಲ್ಲ. ಇದೀಗ ಅಂತಿವಾಗಿ ಜುಲೈ 18ರಂದು ಡಿವೋರ್ಸ್ ಪಡೆದಿದ್ದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ ಇಬ್ಬರೂ ಬೇರ್ಪಡಲು ನಿಖರವಾದ ಕಾರಣ ಏನೆಂಬುದು ಇದುವರೆಗೂ ಗೊತ್ತಿಲ್ಲ.