ಸ್ಫೋಟಕ 64 ರನ್ ಸಿಡಿಸಿ ಸನ್‌ರೈಸರ್ಸ್ ಹೈದರಾಬಾದ್ ಗೆಲ್ಲಿಸಿದ ನಿತೀಶ್ ಕುಮಾರ್ ರೆಡ್ಡಿ ಯಾರು? ಈತ ವಿರಾಟ್‌ ಫ್ಯಾನ್
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಫೋಟಕ 64 ರನ್ ಸಿಡಿಸಿ ಸನ್‌ರೈಸರ್ಸ್ ಹೈದರಾಬಾದ್ ಗೆಲ್ಲಿಸಿದ ನಿತೀಶ್ ಕುಮಾರ್ ರೆಡ್ಡಿ ಯಾರು? ಈತ ವಿರಾಟ್‌ ಫ್ಯಾನ್

ಸ್ಫೋಟಕ 64 ರನ್ ಸಿಡಿಸಿ ಸನ್‌ರೈಸರ್ಸ್ ಹೈದರಾಬಾದ್ ಗೆಲ್ಲಿಸಿದ ನಿತೀಶ್ ಕುಮಾರ್ ರೆಡ್ಡಿ ಯಾರು? ಈತ ವಿರಾಟ್‌ ಫ್ಯಾನ್

Nitish Kumar Reddy Profile: ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ ಕೇವಲ 37 ಎಸೆತಗಳಲ್ಲಿ 64 ರನ್ ಸಿಡಿಸಿದರು. ಸ್ಫೋಟಕ ಇನ್ನಿಂಗ್ಸ್‌ ಮೂಲಕ ತಂಡವನ್ನು ಗೆಲ್ಲಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಐಪಿಎಲ್‌ ಯುವ ಪ್ರತಿಭೆ ನಿತೀಶ್‌ ಕುಮಾರ್‌ ಕುರಿತ ಮಾಹಿತಿ ಇಲ್ಲಿದೆ.

ಸನ್‌ರೈಸರ್ಸ್ ಹೈದರಾಬಾದ್ ಗೆಲ್ಲಿಸಿದ ನಿತೀಶ್ ಕುಮಾರ್ ರೆಡ್ಡಿ ಯಾರು
ಸನ್‌ರೈಸರ್ಸ್ ಹೈದರಾಬಾದ್ ಗೆಲ್ಲಿಸಿದ ನಿತೀಶ್ ಕುಮಾರ್ ರೆಡ್ಡಿ ಯಾರು

ಐಪಿಎಲ್‌ ಪಂದ್ಯಾವಳಿಯಲ್ಲಿ ಪ್ರತಿ ಪಂದ್ಯದಲ್ಲೂ ಕನಿಷ್ಠ ಒಬ್ಬರಾದರೂ ಅಬ್ಬರಿಸುತ್ತಾರೆ. ಇದೇ ವೇಳೆ ಹೊಸ ಹೊಸ ಯುವ ಪ್ರತಿಭೆಗಳು ಕ್ರಿಕೆಟ್‌ ಲೋಕದ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಅಂಥವರಲ್ಲಿ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಕೂಡಾ ಒಬ್ಬರು. ಸನ್‌ರೈಸರ್ಸ್ ಹೈದರಾಬಾದ್ ತಂಡದ ಈ ಮಧ್ಯಮ ಕ್ರಮಾಂಕದ ಆಟಗಾರ, ಏಪ್ರಿಲ್‌ 9ರ ಮಂಗಳವಾರ ನಡೆದ ಪಂದ್ಯದಲ್ಲಿ ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ವಿರುದ್ಧ ಸಿಡಿದೆದ್ದರು. ಬಲಿಷ್ಠ ಹಾಗೂ ಅನುಭವಿ ಆಟಗಾರರೇ ವಿಫಲರಾದಾಗ, ಸ್ಫೋಟಕ ಬ್ಯಾಟಿಂಗ್‌ ನಡೆಸಿ ತಂಡದ ಮೊತ್ತ ಹೆಚ್ಚಿಸಿದರು. ಅಲ್ಲದೆ, ತಂಡದ ರೋಚಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿ ಪಂದ್ಯಶ್ರೇಷ್ಠ‌ ಪ್ರಶಸ್ತಿ ಗೆದ್ದರು.

2018ರಲ್ಲಿ ಅತ್ಯಂತ ಭರವಸೆಯ ಆಟಗಾರ ಎಂದು ಬಿಸಿಸಿಐನಿಂದ ಗುರುತಿಸಲ್ಪಟ್ಟ ನಿತೀಶ್‌ ರೆಡ್ಡಿ, ಮುಲ್ಲಾನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದರು. ಆ ಮೂಲಕ ಪ್ಯಾಟ್ ಕಮಿನ್ಸ್ ಬಳಗವನ್ನು ಭಾರಿ ಬ್ಯಾಟಿಂಗ್ ಕುಸಿತದಿಂದ ರಕ್ಷಿಸಿದರು. ಇವರ ಆಟವೇ ತಂಡಕ್ಕೆ ಗೆಲುವು ತಂದುಕೊಟ್ಟಿತು.

ಭಾರತದ ಮಾಜಿ ಅಂಡರ್ 19 ಸ್ಟಾರ್‌, ಪಂಜಾಬ್ ಕಿಂಗ್ಸ್ ವಿರುದ್ಧ ಪ್ರಬುದ್ಧ ಆಟವಾಡಿದರು. ಟ್ರಾವಿಸ್‌ ಹೆಡ್, ಐಡೆನ್‌ ಮರ್ಕ್ರಾಮ್‌, ಅಭಿಷೇಕ್‌ ಶರ್ಮಾ, ರಾಹುಲ್ ತ್ರಿಪಾಠಿ, ಇನ್‌ ಫಾರ್ಮ್ ಬ್ಯಾಟರ್‌ ಹೆನ್ರಿಚ್ ಕ್ಲಾಸೆನ್ ಸೇರಿದಂತೆ ಬಲಾಢ್ಯರೇ ವಿಫಲರಾದಾಗ; ಅಬ್ಬರಿಸಿದ್ದು ನಿತೀಶ್ ಕುಮಾರ್ ರೆಡ್ಡಿ ಒಬ್ಬರೇ. ಕೇವಲ 37 ಎಸೆತಗಳಲ್ಲಿ 5 ಸ್ಫೋಟಕ ಸಿಕ್ಸರ್‌ ಸಹಿತ 64 ರನ್ ಸಿಡಿಸುವ ಮೂಲಕ ರೆಡ್ಡಿ ತಮ್ಮ ಐಪಿಎಲ್ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ ಗಳಿಸಿದರು. 172.97ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿ, ತಂಡವು ಸವಾಲಿನ ಮೊತ್ತ ಕಲೆಹಾಕುವಲ್ಲಿ ನೆರವಾದರು.

ನಿತೀಶ್ ಕುಮಾರ್ ರೆಡ್ಡಿ ಯಾರು?

2003ರ ಮೇ 26ರಂದು ಜನಿಸಿದ ನಿತೀಶ್‌ ರೆಡ್ಡಿಗೆ ಈಗ 20 ವರ್ಷ ವಯಸ್ಸು. ಕಳೆದ ವರ್ಷ, ಅಂದರೆ 2023ರ ಐಪಿಎಲ್‌ ಋತುವಿನಲ್ಲಿ ನಿತೀಶ್‌ ಐಪಿಎಲ್‌ ಪದಾರ್ಪಣೆ ಮಾಡಿದರು. ಮುತ್ತಿನ ನಗರಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಇದೇ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿದರು. ಬಾಲ್ಯದಿದಲೂ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಆರಾಧಿಸುವ ನಿತೀಶ್, ತಮ್ಮ ಪದಾರ್ಪಣೆ ಪಂದ್ಯವನ್ನು ಜೀವನ ಪರ್ಯಂತ ನೆನಪಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದರು.

2023ರ ಐಪಿಎಲ್‌ ಆವೃತ್ತಿಗೂ ಮುಂಚಿತವಾಗಿ ನಡೆದ ಹರಾಜಿನಲ್ಲಿ ರೆಡ್ಡಿ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ತನ್ನ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿತ್ತು.‌ ಮೊದಲ ಆವೃತ್ತಿಯಲ್ಲಿ ಬಂದ ಸಂಪಾದನೆಯಿಂದ ರೆಡ್ಡಿ ತಮ್ಮ ಪೋಷಕರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ‌

ಪಂಜಾಬ್‌ ಕಿಂಗ್ಸ್‌ ವಿರುದ್ಧ ಆಡಿದ ನಿತೀಶ್‌ ಅವರ ಪಾಲಿಗೆ ಇದು ಕೇವಲ ಐದನೇ ಐಪಿಎಲ್‌ ಪಂದ್ಯ. ರಣಜಿ ಟ್ರೋಫಿಯಲ್ಲಿ ಆಂಧ್ರ ಪರ ಆಡುವ ಆಲ್‌ರೌಂಡರ್‌, ಮುಂಬೈ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಪಡೆದಿದ್ದರು. ಆಂಧ್ರ ಪರ‌ ಇವರು ಆರಂಭಿಕನಾಗಿ ಬ್ಯಾಟಿಂಗ್ ಮಾಡಿದ್ದಾರೆ. 2018-19ರ ಋತುವಿನಲ್ಲಿ ಅಂಡರ್-19 ಚಾಲೆಂಜರ್ ಟ್ರೋಫಿಯಲ್ಲಿ ಇಂಡಿಯಾ ಗ್ರೀನ್ ಪರ ಇನ್ನಿಂಗ್ಸ್ ಆರಂಭಿಸಿದ ಅನುಭವ ಹೊಂದಿದ್ದಾರೆ.

ವಿಶ್ವ ಕ್ರಿಕೆಟ್‌ನ ದಿಗ್ಗಜ ಕ್ರಿಕೆಟ್‌ ವಿರಾಟ್ ಕೊಹ್ಲಿ ಅವರ ಅಪ್ಪಟ ಅಭಿಮಾನಿಯಾಗಿ ಆರಾಧಿಸುವ ರೆಡ್ಡಿ, ಅವರನ್ನೇ ಆದರ್ಶವಾಗಿ ಆಡುತ್ತಾರೆ. ಆಲ್‌ರೌಂಡ್‌ ಪ್ರದರ್ಶನದೊಂದಿಗೆ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯವಿರುವ ಆಟಗಾರ ಟೀಮ್‌ ಇಂಡಿಯಾಗೆ ಕಾಲಿಡುವ ಸಂದರ್ಭ ಬೇಗನೆ ಬಂದರೂ ಅಚ್ಚರಿಯಿಲ್ಲ.

Whats_app_banner