ಟ್ರಾವಿಸ್ ಹೆಡ್ ಕ್ಲೀನ್ ಬೋಲ್ಡ್; ಸಂಜೀವ್ ಗೋಯೆಂಕಾ ಚಪ್ಪಾಳೆ ಗಿಟ್ಟಿಸಿಕೊಂಡ ಪ್ರಿನ್ಸ್ ಯಾದವ್ ಯಾರು?
ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡದ 23 ವರ್ಷದ ಬೌಲರ್ ಪ್ರಿನ್ಸ್ ಯಾದವ್ ಅದ್ಭುತ ಪ್ರದರ್ಶನ ನೀಡಿದರು. ಟ್ರಾವಿಸ್ ಹೆಡ್ ಅವರನ್ನು ತಮ್ಮ ಮೊದಲ ಐಪಿಎಲ್ ವಿಕೆಟ್ ಆಗಿ ಪಡೆದು ಮಿಂಚಿದರು.

ಬ್ಯಾಟಿಂಗ್‌ಗೆ ಇಳಿದರೆ ಸಾಕು ಒಬ್ಬರ ನಂತರ ಮತ್ತೊಬ್ಬರಂತೆ ಅಬ್ಬರಿಸುವ ಸನ್‌ರೈಸರ್ಸ್ ಹೈದರಾಬಾದ್ ತಂಡವು, ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ವಿರುದ್ಧ ತುಸು ಅಬ್ಬರ ಕಡಿಮೆ ಮಾಡಿತು. ಎಲ್‌ಎಸ್‌ಜಿ ವೇಗಿಗಳ ಬೌಲಿಂಗ್ ದಾಳಿ ಖರಾರುವಕ್ ಆಗಿತ್ತು. 230ಕ್ಕೂ ಅಧಿಕ ರನ್ ಫಿಕ್ಸ್ ಎಂಬ ಪಂದ್ಯದಲ್ಲಿ, ಆತಿಥೇಯ ಎಸ್‌ಆರ್‌ಎಚ್ ತಂಡ 190 ರನ್‌ಗಳಿಗೆ ಸೀಮಿತವಾಯ್ತು. ಹೈದರಾಬಾದ್‌ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಎಸ್‌ಆರ್‌ಎಚ್ ಹಾಗೂ ಎಲ್‌ಎಸ್‌ಜಿ ತಂಡಗಳು ಮುಖಾಮುಖಿಯಾದವು. ಪಂದ್ಯದಲ್ಲಿ ಲಕ್ನೋ ತಂಡದ ಹೊಸ ಪ್ರತಿಭೆ ಪ್ರಿನ್ಸ್ ಯಾದವ್ ಕೇಂದ್ರಬಿಂದುವಾದರು.
ಐಪಿಎಲ್ 2025ರ ಆವೃತ್ತಿಯ ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತ ಗಳಿಸಿದರೂ ಸೋತಿದ್ದ ಲಕ್ನೋ, ಎರಡನೇ ಪಂದ್ಯದಲ್ಲಿ ಮತ್ತೆ ಸೋಲಲು ಸಿದ್ಧವಿರಲಿಲ್ಲ. ಈ ಪಂದ್ಯದಲ್ಲಿ ತಂಡದ ನಾಯಕ ರಿಷಭ್ ಪಂತ್, ಹೊಸ ಅಸ್ತ್ರವನ್ನು ಬಳಸಿದರು. ಪ್ರತಿ ಬಾರಿ ಎಸ್‌ಆರ್‌ಎಚ್ ತಂಡದ ಪಂದ್ಯದಲ್ಲಿ ಎದುರಾಳಿಗಳನ್ನು ಹೆಚ್ಚು ಕಾಡುವುದು ಟ್ರಾವಿಸ್ ಹೆಡ್. ಇವರನ್ನು ಔಟ್ ಮಾಡಲು 23 ವರ್ಷದ ಪ್ರಿನ್ಸ್ ಯಾದವ್ ಬರಬೇಕಾಯ್ತು. ಟಿ20ಯ ನಂಬರ್ ವನ್ ಬ್ಯಾಟರ್ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಚೊಚ್ಚಲ ಐಪಿಎಲ್ ವಿಕೆಟ್ ಪಡೆದರು.
ದೆಹಲಿ ಮೂಲದ ಪ್ರಿನ್ಸ್ ಯಾದವ್, ಕಳೆದ ವರ್ಷ ನಡೆದ ದೆಹಲಿ ಪ್ರೀಮಿಯರ್ ಲೀಗ್‌ನ ಆರಂಭಿಕ ಆವೃತ್ತಿಯಲ್ಲಿ ತಮ್ಮ ಹಿಟ್-ದಿ-ಡೆಕ್ ಸಾಮರ್ಥ್ಯದಿಂದ ಎಲ್‌ಎಸ್‌ಜಿ ತಂಡದ ಸ್ಕೌಟ್‌ಗಳ ಮನಗೆದ್ದಿದ್ದರು. ಅವರ ಸಾಮರ್ಥ್ಯ ನೋಡಿದ ಬೆನ್ನಲ್ಲೇ, ಕಳೆದ ನವೆಂಬರ್‌ನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಅವರನ್ನು 30 ಲಕ್ಷದ ಮೂಲ ಬೆಲೆಗೆ ತಂಡಕ್ಕೆ ಕರೆಸಿಕೊಳ್ಳಲಾಯ್ತು. ಡೊಮೆಸ್ಟಿಕ್ ಟಿ20 ಟೂರ್ನಮೆಂಟ್‌ನಲ್ಲಿ ಆಡಿದ 10 ಇನ್ನಿಂಗ್ಸ್‌ಗಳಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದ ಯಾದವ್, 2024-25ರ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ದೆಹಲಿಯ ಪ್ರಮುಖ ವಿಕೆಟ್ ಟೇಕಿಂಗ್ ಬೌಲರ್ ಆಗಿ ಅಬ್ಬರಿಸಿದ್ದರು. 6 ಪಂದ್ಯಗಳಲ್ಲಿ 22ರ ಸರಾಸರಿಯಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದರು.
ಜಹೀರ್ ಖಾನ್ ಶ್ಲಾಘನೆ
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪವರ್‌ಪ್ಲೇ ಮುಗಿದ ತಕ್ಷಣ ಯಾದವ್ ಅವರನ್ನು ಬೌಲಿಂಗ್‌ಗೆ ಇಳಿಸಲಾಯ್ತು. ಅವರು ತಕ್ಷಣವೇ ವಿಕೆಟ್ ಟೇಕಿಂಗ್ ಪ್ರದರ್ಶನ ನೀಡಿದರು. ಐಪಿಎಲ್‌ನಲ್ಲಿ ತಮ್ಮ ಮೊದಲ ಎಸೆತದಲ್ಲಿ ಫೋರ್ ಬಿಟ್ಟುಕೊಟ್ಟ ಬೌಲರ್, ಎರಡನೇ ಎಸೆತದಲ್ಲೇ ಡೇಂಜರಸ್ ಬ್ಯಾಟರ್ ಅನ್ನು ಔಟ್ ಮಾಡಿದರು. ಅದ್ಭುತ ಯಾರ್ಕರ್‌ನೊಂದಿಗೆ ಅಪಾಯಕಾರಿ ಹೆಡ್ ಅವರನ್ನು ಔಟ್ ಮಾಡಿ ಸಂಭ್ರಮಿಸಿದರು. ಆಸ್ಟ್ರೇಲಿಯಾದ ಆಟಗಾರ ಕ್ಲೀನ್ ಬೋಲ್ಡ್ ಆದರು. ಈ ವೇಳೆ ಎಲ್‌ಎಸ್‌ಜಿ ಮೆಂಟರ್ ಜಹೀರ್ ಖಾನ್ ಕೂಡಾ ಡಗೌಟ್‌ನಿಂದ ಪ್ರಿನ್ಸ್ ಯಾದವ್ ಶ್ಲಾಘಿಸಿದರು.
ಕ್ಲಾಸೆನ್ ಔಟ್
ಯಾದವ್ ಪ್ರಯತ್ನ ಅಲ್ಲಿಗೆ ನಿಲ್ಲಲಿಲ್ಲ. ಅವರು ಅಪಾಯಕಾರಿ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಅವರನ್ನು ಔಟ್ ಮಾಡಿದರು. 12ನೇ ಓವರ್‌ನ ಅಂತಿಮ ಎಸೆತದಲ್ಲಿ ನಿತಿಶ್ ರೆಡ್ಡಿ ಹೊಡೆದ ಶಾಟ್, ಬೌಲರ್ ಪ್ರಿನ್ಸ್ ದೇಹಕ್ಕಿ ತಾಗಿ ನಾನ್ ಸ್ಟ್ರೈಕರ್ ಬಳಿಯ ವಿಕೆಟ್‌ಗೆ ಬಿದ್ದಿತು. ಅಲ್ಲಿದ್ದ ಕ್ಲಾಸೆನ್‌ಗೆ ಅದೃಷ್ಟ ಕೈಕೊಟ್ಟಂತಿತ್ತು. ಬೇರೆ ದಾರಿಯಿಲ್ಲದೆ ಡಗೌಟ್‌ಗೆ ನಡೆಯಬೇಕಾಯ್ತು. ಈ ವೇಳೆ ಪ್ರಿನ್ಸ್‌ಗೆ ಸಣ್ಣ ಗಾಯವೂ ಆಯ್ತು. ಯಾದವ್ ಅವರ ಅಮೋಘ ಪ್ರಯತ್ನಕ್ಕೆ ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ಕೂಡಾ ವೀಕ್ಷಕರ ಗ್ಯಾಲರಿಯಿಂದ ಶ್ಲಾಘಿಸಿದರು.
