ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲಲು ಐಸಿಸಿ ಸಹಾಯ; ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗಂಭೀರ ಆರೋಪ
Michael Vaughan: ಟೀಮ್ ಇಂಡಿಯಾ ಟಿ20 ವಿಶ್ವಕಪ್ 2024 ಗೆಲ್ಲಲು ಅನುಕೂಲವಾಗುವಂತೆ ಐಸಿಸಿ ಸೆಮಿಫೈನಲ್ ವೇಳಾಪಟ್ಟಿಯನ್ನು ರೂಪಿಸಲಾಗಿದೆ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಆರೋಪಿಸಿದ್ದಾರೆ.
ಭಾರತ ತಂಡಕ್ಕೆ ಅನುಕೂಲವಾಗುವಂತೆ ಟಿ20 ವಿಶ್ವಕಪ್ 2024 (T20 World Cup 2024) ಸೆಮಿಫೈನಲ್ ವೇಳಾಪಟ್ಟಿಯನ್ನು ಮೊದಲೇ ನಿರ್ಧರಿಸಲಾಗಿದೆ ಎಂದು ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಮೈಕೆಲ್ ವಾನ್ ಅವರು (Michael Vaughan) ಗಂಭೀರವಾಗಿ ಆರೋಪಿಸಿದ್ದಾರೆ. ಟ್ರಿನಿಡಾಡ್ನಲ್ಲಿ ನಡೆದ ಮೊದಲ ಸೆಮಿಫೈನಲ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ ತಂಡ ಸೋಲಲು ವೇಳಾಪಟ್ಟಿಯೇ ಕಾರಣ ಎಂದು ಹೇಳಿದ್ದಾರೆ.
ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Brian Lara Stadium) ಮೊದಲು ಬ್ಯಾಟಿಂಗ್ ನಡೆಸಿ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ನಡೆಸಿತು. ಆದರೆ ದಕ್ಷಿಣ ಆಫ್ರಿಕಾ ಬೌಲರ್ಗಳ ದಾಳಿಗೆ ನಲುಗಿದ ಆಫ್ಘನ್ ಕೇವಲ 56 ರನ್‌ಗಳಿಗೆ ಆಲೌಟ್ ಆಯಿತು. ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ ಮತ್ತು ಆನ್ರಿಚ್ ನೋಕಿಯಾ ದಾಳಿಗೆ ತತ್ತರಿಸಿತು. ಈ ಗುರಿ ಬೆನ್ನಟ್ಟಿದ ಆಫ್ರಿಕಾ 8.5 ಓವರ್ಗಳಲ್ಲಿ ಜಯದ ನಗೆ ಬೀರಿತು.
ಮೈಕಲ್ ವಾನ್ ಗಂಭೀರ ಆರೋಪ
ಆಫ್ಘನ್ ಟೂರ್ನಿಯಿಂದಲೇ ಹೊರಬಿದ್ದ ಬೆನ್ನಲ್ಲೇ ಐಸಿಸಿ ನಿರ್ಧಾರಕ್ಕೆ ಟೀಕೆ ವ್ಯಕ್ತವಾಗಿದೆ. ಜೂನ್ 25ರ ಬೆಳಿಗ್ಗೆ 6 ಗಂಟೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಜಯಿಸಿದ ಅಫ್ಘಾನಿಸ್ತಾನ ತಂಡ ಸೆಮಿಫೈನಲ್ಗೆ ಅಭ್ಯಾಸ ನಡೆಸಲು ಸಮಯ ಸಿಕ್ಕಿರಲಿಲ್ಲ. ಮೈಕಲ್ ವಾನ್, ನನ್ನ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಮೊದಲು ನಡೆಯಬೇಕಿತ್ತು ಎಂದು ಹೇಳಿದ್ದಾರೆ.
2ನೇ ಸೆಮಿಫೈನಲ್ನಲ್ಲಿ ಸೌತ್ ಆಫ್ರಿಕಾ ಮತ್ತು ಆಫ್ಘನ್ ತಂಡಗಳು ಸೆಣಸಾಟ ನಡೆಸಬೇಕಿತ್ತು. ಆದರೆ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲು ನೆರವಾಗುವಂತೆ ಎರಡನೇ ಸೆಮಿಫೈನಲ್ ಆಡುವಂತೆ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಇದು ಪಕ್ಷಪಾತ ಧೋರಣೆಯಾಗಿದೆ. ಬೇರೆ ತಂಡಗಳಿಗೂ ಅನ್ಯಾಯ ಮಾಡಿದಂತಾಗಿದೆ ಎಂದು ವಾನ್ ಹೇಳಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದು, ಐಸಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಫ್ಘನ್ ತಂಡಕ್ಕೆ ಅನ್ಯಾಯ ಎಂದ ವಾನ್
ವೇಳಾಪಟ್ಟಿಯ ಪ್ರಕಾರ ಗ್ರೂಪ್ 1 ರಲ್ಲಿ ಅಗ್ರಸ್ಥಾನದಲ್ಲಿರುವ ತಂಡವು ಮೊದಲ ಸೆಮಿ-ಫೈನಲ್ ಅನ್ನು ಆಡಬೇಕಿತ್ತು. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಸೆಮಿಫೈನಲ್ ನಡೆಯಬೇಕಿತ್ತು. ಎರಡನೇ ಸೆಮೀಸ್ನಲ್ಲಿ ದಕ್ಷಿಣ ಆಫ್ರಿಕಾ-ಅಫ್ಘಾನಿಸ್ತಾನ ನಡುವೆ ಜರುಗಬೇಕಿತ್ತು. ಆದಾಗ್ಯೂ, ಗಯಾನಾದಲ್ಲಿ ಭಾರತೀಯ ಸ್ಟ್ಯಾಂಡರ್ಡ್ ಸಮಯಕ್ಕೆ ಸರಿ ಹೊಂದುವಂತೆ 2ನೇ ಸೆಮಿಫೈನಲ್ ವೇಳಾಪಟ್ಟಿ ರೂಪಿಸಲಾಗಿದೆ. ಹೀಗಾಗಿ ಆಫ್ಘನ್ ತಂಡಕ್ಕೆ ಅನ್ಯಾಯ ಎಸೆಗಲಾಯಿತು ಎಂದಿದ್ದಾರೆ.
ಅಫ್ಘಾನಿಸ್ತಾನ ತಂಡವು ರಾತ್ರಿ ಸೇಂಟ್ ವಿನ್ಸೆಂಟ್‌ನಲ್ಲಿ ವಿಶ್ವಕಪ್ ಸೆಮಿಫೈನಲ್ಗೆ ಅರ್ಹತೆ ಪಡೆಯಿತು. ಮಂಗಳವಾರ ಟ್ರಿನಿಡಾಡ್‌ಗೆ ತಲುಪಲು ವಿಮಾನ 4 ಗಂಟೆಗಳ ಕಾಲ ವಿಳಂಬವಾಯಿತು. ಹೀಗಾಗಿ ಅಭ್ಯಾಸ ಮಾಡಲು ಅಥವಾ ಹೊಸ ಸ್ಥಳಕ್ಕೆ ಒಗ್ಗಿಕೊಳ್ಳಲು ಸಮಯ ಸಿಗಲಿಲ್ಲ. ಹೀಗಾಗಿ ಸೆಮಿಫೈನಲ್ನಲ್ಲೇ ಸೋಲುವಂತಾಯಿತು ಎಂದು ವಾನ್ ಬೇಸರ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾವು ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್ ಗೆದ್ದಿದೆ. ಚೊಕರ್ಸ್ ಹಣೆಪಟ್ಟಿ ತಪ್ಪಿಸಿ ಚೊಚ್ಚಲ ಫೈನಲ್ ತಲುಪಿದೆ. ಹಾಗಾಗಿ ಟ್ರೋಫಿ ಎತ್ತಿ ಹಿಡಿದು ಐತಿಹಾಸಿಕ ದಾಖಲೆ ನಿರ್ಮಿಸಲು ಸೌತ್ ಆಫ್ರಿಕಾ ಸಜ್ಜಾಗಿದೆ. ಗಯಾನಾದಲ್ಲಿ ಜೂನ್ 27ರ ಗುರುವಾರ ರಾತ್ರಿ 8 ಗಂಟೆಗೆ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. 2022ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ ಗೆದ್ದು ಫೈನಲ್ ಪ್ರವೇಶಿಸಿತ್ತು. ಇದೀಗ ಅದರ ಸೇಡಿಗೆ ಭಾರತ ತಂಡ ಸಜ್ಜಾಗಿದೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ