‘ಯಾವಾಗಲೂ ವಿರಾಟ್ ಕೊಹ್ಲಿ ಮೇಲೆಯೇ ಏಕೆ ಬೆಳಕು ಚೆಲ್ಲಬೇಕು, ಅವರ ಪಾಡಿಗೆ ಅವರನ್ನು ಬಿಟ್ಟುಬಿಡಿ’
Virat Kohli: ವಿರಾಟ್ ಕೊಹ್ಲಿ ಅವರೇ ತಮ್ಮ ಭವಿಷ್ಯವನ್ನು ನಿರ್ಧರಿಸಬೇಕು. ಬ್ಯಾಟಿಂಗ್ನಲ್ಲಿ ಸಮಸ್ಯೆಗಳಿದ್ದರೆ ಅವರು ಭಾರತದ ದಿಗ್ಗಜ ಆಟಗಾರರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ ರಣತುಂಗ ಹೇಳಿದ್ದಾರೆ.
ನಿಜ, ಸದ್ಯಕ್ಕೆ ವಿರಾಟ್ ಕೊಹ್ಲಿ ಪ್ರದರ್ಶನ ಅಷ್ಟಕಷ್ಟೆ. 2023ರ ಕ್ಯಾಲೆಂಡರ್ ವರ್ಷದಲ್ಲಿ ನಿರೀಕ್ಷೆಗೂ ಮೀರಿ ಪ್ರದರ್ಶನ ತೋರಿದ್ದ ಕೊಹ್ಲಿ, 2024ರಲ್ಲಿ ಬ್ಯಾಟ್ ಮೂಲಕ ಸದ್ದು ಮಾಡಿದ್ದಕ್ಕಿಂತ ಟೀಕೆಗೆ ಗುರಿಯಾಗಿದ್ದೇ ಹೆಚ್ಚು. ಆದರೆ ಅವರು ಕಂಬ್ಯಾಕ್ ಮಾಡಲು ಬೇಕಿರುವುದು ಒಂದು ಇನ್ನಿಂಗ್ಸ್ ಮಾತ್ರ ಎನ್ನುವುದನ್ನು ಮರೆಯುವಂತಿಲ್ಲ. ಅದ್ಭುತ ಪ್ರದರ್ಶನ ನೀಡುತ್ತಿದ್ದಾಗ ಅವರಿಗೆ ಸರಿಸಾಟಿ ಯಾರಿಲ್ಲ ಎನ್ನುತ್ತಿದ್ದವರೇ ಈಗ ಟೀಕೆಯ ಹೊಳೆ ಹರಿಸುತ್ತಿರುವುದು ಅಚ್ಚರಿಯ ಸಂಗತಿ. ಇದೇ ವೇಳೆ ಕೊಹ್ಲಿ ಭವಿಷ್ಯದ ಕುರಿತೂ ಚರ್ಚೆಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಶ್ರೀಲಂಕಾದ ದಿಗ್ಗಜ ಅರ್ಜುನ ರಣತುಂಗ ಪ್ರತಿಕ್ರಿಯಿಸಿ ಯಾವಾಗಲೂ ಕೊಹ್ಲಿ ಮೇಲೆ ಬೆಳಕು ಚೆಲ್ಲುವುದನ್ನು ನಿಲ್ಲಿಸಿ ಎಂದಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ 50 ಶತಕಗಳ ಸರದಾರ ಕಿಂಗ್ ಕೊಹ್ಲಿ, ಚೇಸಿಂಗ್ ಮಾಸ್ಟರ್ ಎಂದೂ ಕರೆಸಿಕೊಳ್ಳುತ್ತಾರೆ. ಕ್ರೀಸ್ ಕಚ್ಚಿ ನಿಂತರೆ ಎಂತಹದ್ದೇ ದೊಡ್ಡ ಸ್ಕೋರ್ ಇದ್ದರೂ ನೀರು ಕುಡಿದಷ್ಟೇ ಸುಲಭವಾಗಿ ಚೇಸ್ ಮಾಡುತ್ತಾರೆ. ಅವರ ಆಟ ಹೇಗಿರುತ್ತದೆ ಎಂದು ಲಸಿತ್ ಮಾಲಿಂಗ, ಉಮರ್ ಗುಲ್, ಜೇಮ್ಸ್ ಫಾಲ್ಕನರ್ ಮತ್ತು ಹ್ಯಾರಿಸ್ ರೌಫ್ ಅವರನ್ನು ಕೇಳಿದರೆ, ಅವರೇ ವಿವರಿಸುತ್ತಾರೆ. ಬ್ಯಾಟಿಂಗ್ನಲ್ಲಿ ಕ್ರೂರಿಯಾಗಿದ್ದ ಕೊಹ್ಲಿ, ಪ್ರಸ್ತುತ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಅಬ್ಬರಿಸುವ ಅಗತ್ಯ ಇದೆ. ಇದರೊಂದಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಲಯಕ್ಕೆ ಮರಳುವುದು ತೀರಾ ಅನಿವಾರ್ಯ. ಇದರ ನಡುವೆ ಅವರನ್ನು 1996ರ ಏಕದಿನ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗ ಅವರು ಕೊಹ್ಲಿಗೆ ಭವಿಷ್ಯದ ಬಗ್ಗೆ ತುಟಿಬಿಚ್ಚಿದ್ದಾರೆ.
ಪ್ರಸ್ತುತ ಸರಣಿಯಲ್ಲಿ ಕಣಕ್ಕಿಳಿದ ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ವಿರಾಟ್ 5 ರನ್ ಗಳಿಸಿ ನಿರಾಸೆ ಮೂಡಿಸಿದರು. ಅದಕ್ಕೂ ಮುನ್ನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಒಂದು ಶತಕ ಸಹಿತ 9 ಇನ್ನಿಂಗ್ಸ್ಗಳಲ್ಲಿ ಗಳಿಸಿದ್ದು 190 ರನ್ ಮಾತ್ರ. ಇದಕ್ಕೂ ಮೊದಲು ನಡೆದಿದ್ದ ನ್ಯೂಜಿಲೆಂಡ್ ಸರಣಿಯಲ್ಲಿ ಗಳಿಸಿದ್ದು ಕೇವಲ 90 ರನ್. ಹೀಗಾಗಿ, ಅವರ ಸತತ ವೈಫಲ್ಯಕ್ಕೆ ಸಾಕಷ್ಟು ಟೀಕೆ ಎದುರಿಸುವಂತಾಗಿದೆ. ರಣಜಿಯಲ್ಲೂ ಸದ್ದೇ ಮಾಡಲಿಲ್ಲ. ಕಳಪೆ ಫಾರ್ಮ್ ಮುಂದುವರೆದಿರುವ ಮಾತನಾಡಿರುವ ರಣತುಂಗ, 'ವಿರಾಟ್ ಮೇಲೆ ನಿರಂತರವಾಗಿ ಬೆಳಕು ಚೆಲ್ಲುವುದು ಅನಗತ್ಯ. ಸ್ಟಾರ್ ಬ್ಯಾಟ್ಸ್‌ಮನ್‌ಗೆ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡಬೇಕು' ಎಂದಿದ್ದಾರೆ.
ಕೊಹ್ಲಿಗೆ ಬಿಟ್ಟು ಬಿಡಿ ಎಂದು ರಣತುಂಗ
ಟೆಲಿಗ್ರಾಫ್ನೊಂದಿಗೆ ಮಾತನಾಡಿದ ಅವರು, ‘ಕೊಹ್ಲಿಯ ಭವಿಷ್ಯದ ನಿರ್ಧಾರವನ್ನು ಅವರ ಕೈಗೆ ಬಿಟ್ಟುಬಿಡಬೇಕು. ಸ್ಟಾರ್ ಬ್ಯಾಟ್ಸ್‌ಮನ್ ತನ್ನದೇ ಆದ ಹಾದಿಯನ್ನು ಕಂಡುಕೊಳ್ಳಲು ಇದು ನೆರವಾಗುತ್ತದೆ. ಅತಿ ಹೆಚ್ಚು ರನ್ ಗಳಿಸಿರುವ ಕೊಹ್ಲಿಯಂತಹ ಆಟಗಾರನೇ ತನ್ನ ಭವಿಷ್ಯದ ನಿರ್ಧಾರ ಕೈಗೊಂಡರೆ ಉತ್ತಮ ಎಂದು ಭಾವಿಸುತ್ತೇನೆ. ಇದು ಕೊಹ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರ. ನಾವು-ನೀವು ಚರ್ಚಿಸಬೇಕಾದ ವಿಷಯ ಅಲ್ಲ. ಯಾವಾಗಲೂ ಕೊಹ್ಲಿ ಮೇಲೆ ಏಕೆ ಬೆಳಕು ಚೆಲ್ಲಬೇಕು? ಅದು ತುಂಬಾ ಅನಗತ್ಯ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ. ‘ಕಳಪೆ ಫಾರ್ಮ್ನಲ್ಲಿರುವ ಕೊಹ್ಲಿಗೆ ಅಗತ್ಯವಿದ್ದರೆ ದಂತಕಥೆಗಳಿಂದ ಸಹಾಯವನ್ನು ಕೇಳಿ’ ಎಂದೂ ತಿಳಿಸಿದ್ದಾರೆ.
'ದಿಗ್ಗಜರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ'
‘ಬ್ಯಾಟಿಂಗ್ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದರೆ, ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಭಾರತದ ದಿಗ್ಗಜ ಆಟಗಾರರನ್ನು ಸಂಪರ್ಕಿಸಿ. ಇದು ಮುಜುಗರ ತರುವಂತಹ ವಿಷಯ ಏನಲ್ಲಎಂದು ರಣತುಂಗಾ ಅಭಿಪ್ರಾಯಪಟ್ಟಿದ್ದಾರೆ. ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ಸರ್ಕರ್ ಅಥವಾ ರಾಹುಲ್ ದ್ರಾವಿಡ್ ಅವರಂತಹ ಘಟಾನುಘಟಿ ಆಟಗಾರರ ಜೊತೆಗೆ ಸಂಪರ್ಕ ಸಾಧಿಸಿ ಅಗತ್ಯ ಬ್ಯಾಟಿಂಗ್ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಅದನ್ನೇ ಅವರು ಮಾಡಬಲ್ಲರು. ಖಂಡಿತವಾಗಿಯೂ ಇದು ಕೊಹ್ಲುಗೆ ತುಂಬಾ ಸಹಾಯ ಆಗಬಹುದು’ ಎಂದು ಅವರು ಹೇಳಿದ್ದಾರೆ.
