ಆಟಗಾರರ ಬ್ಯಾಟ್ ಪರಿಶೀಲನೆ ಐಪಿಎಲ್ನಲ್ಲಿ ಇದೇ ಮೊದಲು; ಇಷ್ಟಕ್ಕೂ ಬ್ಯಾಟ್ ಅಗಲ, ಆಳ, ಅಂಚು ಎಷ್ಟಿರಬೇಕು? ಇಲ್ಲಿದೆ ಮಾಹಿತಿ
ಏಪ್ರಿಲ್ 13ರಂದು ನಡೆದ ಡಬಲ್ ಹೆಡ್ಡರ್ ಪಂದ್ಯಗಳಲ್ಲಿ ಸಾಧನ ಬಳಸಿ ಫಿಲ್ ಸಾಲ್ಟ್, ಶಿಮ್ರಾನ್ ಹೆಟ್ಮೆಯರ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಬ್ಯಾಟ್ಗಳನ್ನು ಅಂಪೈರ್ಗಳು ಪರಿಶೀಲನೆ ನಡೆಸಿದರು. ಇದು ಕ್ರಿಕೆಟ್ ಅಭಿಮಾನಿಗಳ ಗೊಂದಲ ಹೆಚ್ಚಿಸಿದೆ.

2025ರ ಇಂಡಿಯನ್ ಪ್ರೀಮಿಯರ್ ಲೀಗ್ 28 ಮತ್ತು 29ನೇ ಪಂದ್ಯದಲ್ಲಿ ಬ್ಯಾಟರ್ಗಳ ಬ್ಯಾಟನ್ನು ಮೈದಾನದ ಅಂಪೈರ್ಸ್ ಪರಿಶೀಲಿಸಿದ ಘಟನೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸಾಧನವೊಂದನ್ನು ಬಳಸಿ ಬ್ಯಾಟ್ ಅಗಲ, ಎತ್ತರ ಪರಿಶೀಲನೆ ನಡೆಸಲಾಯಿತು. ಐಪಿಎಲ್ ಇತಿಹಾಸದಲ್ಲಿ ಇಂತಹ ಘಟನೆ ನಡೆದಿದ್ದು ಇದೇ ಮೊದಲು. ಹೀಗೆ ಬ್ಯಾಟ್ ಅಳೆಯಲು ಕಾರಣ ಏನೆಂದು ಕ್ರಿಕೆಟ್ ಪ್ರಿಯರು ಗೊಂದಲಕ್ಕೆ ಸಿಲುಕಿದ್ದಾರೆ. ಹಾಗಿದ್ದರೆ ಬ್ಯಾಟ್ ಎಷ್ಟು ಇಂಚು ಇರಬೇಕು? ಇಲ್ಲಿದೆ ಮಾಹಿತಿ.
ಏಪ್ರಿಲ್ 13ರಂದು ನಡೆದ ಡಬಲ್ ಹೆಡ್ಡರ್ ಪಂದ್ಯಗಳಲ್ಲಿ ಸಾಧನ ಬಳಸಿ ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಬ್ಯಾಟ್ಗಳನ್ನು ಅಂಪೈರ್ಗಳು ಪರಿಶೀಲನೆ ನಡೆಸಿದರು. ಗಾತ್ರದ ಮಿತಿಗಿಂತ ಹೆಚ್ಚಿದ್ದ ಬ್ಯಾಟ್ಗಳನ್ನು ಬದಲಿಸಲಾಗಿದೆ. ಹಾರ್ದಿಕ್ ಅವರ ಬ್ಯಾಟ್ 4.25 ಇಂಚುಗಳ ಅನುಮತಿ ನೀಡಿರುವ ಅಳತೆಯಲ್ಲೇ ಇತ್ತು. ಆದರೆ ಡಬಲ್ ಹೆಡ್ಡರ್ನ ಆರಂಭಿಕ ಪಂದ್ಯದಲ್ಲಿ ಫಿಲ್ ಸಾಲ್ಟ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರ ಬ್ಯಾಟ್ಗಳು ನಿಯಮಿತ ಅಳತೆ ಇಲ್ಲದ ಕಾರಣ ಬ್ಯಾಟ್ ಬದಲಾಯಿಸಲು ಸೂಚನೆ ನೀಡಿದರು.
ಐಪಿಎಲ್ ಆಟದ ನಿಯಮಗಳು ಹೇಳುವುದೇನು?
ಪ್ರಸಕ್ತ ಆವೃತ್ತಿಯಲ್ಲಿ ಪವರ್ ಹಿಟ್ಟಿಂಗ್ ಹೆಚ್ಚಾದ ಹಿನ್ನೆಲೆಯಲ್ಲಿ ಅಂಪೈರ್ಗಳು ಬ್ಯಾಟ್ಗಳ ಗಾತ್ರ ಪರೀಕ್ಷೆ ಆರಂಭಿಸಿದ್ದಾರೆ. ಮೇಲೆ ಹೇಳಿದ ಆಟಗಾರರ ಬ್ಯಾಟ್ ಮಾತ್ರವಲ್ಲದೆ, ಸೂರ್ಯಕುಮಾರ್ ಸೇರಿದಂತೆ ಇನ್ನಷ್ಟು ಕ್ರಿಕೆಟಿಗ ಬ್ಯಾಟ್ ಅನ್ನು ಚೆಕ್ ಮಾಡಲಾಗಿದೆ. ಪಾಂಡ್ಯ ಅಂತೆಯೇ ಸೂರ್ಯ ಬ್ಯಾಟ್ ಕೂಡ ನಿಗದಿತ ಅಳತೆಯನ್ನು ಮೀರಿಲ್ಲ ಎಂದು ಖಚಿತವಾಯಿತು. ಶ್ರೀಮಂತ ಲೀಗ್ ನಿಯಮಗಳ ಪ್ರಕಾರ, ಯಾವುದೇ ಬ್ಯಾಟ್ 4.25 ಇಂಚು ಅಥವಾ 10.8 ಸೆಂಟಿಮೀಟರ್ ಅಗಲವನ್ನು ಮೀರುವಂತಿಲ್ಲ.
ಬ್ಯಾಟ್ ಅಗಲ: 4.25 ಇಂಚು/10.8 ಸೆಂಟಿಮೀಟರ್
ಬ್ಯಾಟ್ ಆಳ: 2.64 ಇಂಚು / 6.7 ಸೆಂಟಿಮೀಟರ್
ಬ್ಯಾಟ್ ಅಂಚುಗಳು: 1.56 ಇಂಚು / 4.0 ಸೆಂಟಿಮೀಟರ್ ಮೀರುವಂತಿಲ್ಲ.
ಪ್ರಸ್ತುತ ಎಲ್ಲಾ ತಂಡಗಳು 200 ರನ್ಗಳನ್ನು ನೀರು ಕುಡಿದಂತೆ ಗಳಿಸುತ್ತಿವೆ. ಹಾಗಾಗಿ ಬ್ಯಾಟರ್ಗಳು ಯಾವುದೇ ಅಕ್ರಮ ಲಾಭ ಪಡೆಯದಂತೆ ಅಂಪೈರ್ಗಳು ನೋಡಿಕೊಳ್ಳಬೇಕಿದೆ. ಮತ್ತೊಂದೆಡೆ ತೂಕಕ್ಕೆ ನಿರ್ದಿಷ್ಟ ಮಿತಿ ಇಲ್ಲ. ಆದರೆ, ಆಟಗಾರರು ಸಾಮಾನ್ಯವಾಗಿ ತಮಗೆ ಅನುಕೂಲವಾಗುವ ತೂಕ ಆಯ್ಕೆ ಮಾಡುತ್ತಾರೆ. ಅಂದರೆ 1.1 ಕೆಜಿ ತೂಕ ಇರುತ್ತದೆ. ಮುಂದಿನ ಪಂದ್ಯಗಳಲ್ಲೂ ಬ್ಯಾಟ್ ಪರಿಶೀಲನೆ ಮುಂದುವರೆಯಲಿದೆ.
ಇದನ್ನೂ ಓದಿ: ಋತುರಾಜ್ ಬದಲಿಗೆ 17 ವರ್ಷದ ಆಟಗಾರನಿಗೆ ಅವಕಾಶ?
ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ಕಥೆ ಬರೆದ ರೋಹಿತ್, ಹೇಗೆ?
ಮಾಜಿ ಅಂಪೈರ್ ಹೇಳಿದ್ದೇನು?
ಆಟಗಾರರಿಗೆ ಅನಾನುಕೂಲತೆ ತಪ್ಪಿಸಲು ಬ್ಯಾಟ್ ತಪಾಸಣೆಯು ಟೂರ್ನಿಯ ಪ್ರೋಟೋಕಾಲ್ನ ಭಾಗವಾಗಿದೆ. ಯಾವುದೇ ಬ್ಯಾಟ್ ಅನ್ನು ಡ್ರೆಸ್ಸಿಂಗ್ ರೂಮ್ಗಳಲ್ಲಿ ಮಾಡಿದಾಗ ಪರಿಶೀಲಿಸಲು ಪಂದ್ಯದ ಅಧಿಕಾರಿಗಳಿಗೆ ಬಿಸಿಸಿಐ ಅಧಿಕಾರ ನೀಡಿದೆ. ಪಿಟಿಐ ಜೊತೆ ಮಾತನಾಡಿದ ಬಿಸಿಸಿಐನ ಮಾಜಿ ಅಂಪೈರ್ವೊಬ್ಬರು, 'ಅಂಪೈರ್ಗಳು ಬ್ಯಾಟ್ ಗೇಜ್ ಹೊಂದಿರುತ್ತಾರೆ. ಬ್ಯಾಟ್ ಗೇಜ್ ಮೂಲಕ ಹಾದುಹೋದರೆ, ಅದನ್ನು ಸ್ವೀಕಾರಾರ್ಹವೆಂದು ಪರಿಗಣಿಸಲಾಗುತ್ತದೆ. ಡ್ರೆಸ್ಸಿಂಗ್ ರೂಮ್ ಒಳಗೆ ಇನ್ನಿಂಗ್ಸ್ ಪ್ರಾರಂಭವಾಗುವ ಮೊದಲು ನಾವೆಲ್ಲರೂ ಬ್ಯಾಟ್ ತಪಾಸಣೆ ನಡೆಸಿದ್ದೇವೆ ಎಂದಿದ್ದಾರೆ.
‘ಡ್ರೆಸ್ಸಿಂಗ್ನಲ್ಲಿ ಒಂದು ಬ್ಯಾಟ್ ತಪಾಸಣೆ ಮಾಡಿದರೆ, ಮೈದಾನಕ್ಕೆ ಮತ್ತೊಂದು ಬ್ಯಾಟ್ ತರುವ ಸಾಧ್ಯತೆಗಳು ಹೆಚ್ಚಿವೆ. ಏಕೆಂದರೆ ಆಟಗಾರರ ಕಿಟ್ನಲ್ಲಿ ಅನೇಕ ಬ್ಯಾಟ್ಗಳು ಇರುತ್ತವೆ. ತೂಕವು ಬದಲಾಗಬಹುದಾದರೂ, ಎತ್ತರ, ಅಗಲ (ಬ್ಯಾಟ್ ಮುಖ), ಆಳ (ಬ್ಲೇಡ್ನ ಮಧ್ಯ) ಮತ್ತು ಅಂಚಿನ ಅಗಲವು ಐಸಿಸಿ ಸೂಚಿಸಿದ ನಿರ್ದಿಷ್ಟ ಮಿತಿಯೊಳಗೆ ಇರಬೇಕು’ ಎಂದು ಮಾಜಿ ಅಂಪೈರ್ ಹೇಳಿದ್ದಾರೆ.
ಇದನ್ನೂ ಓದಿ: ಇತಿಹಾಸ ನಿರ್ಮಿಸಿದ ಕರುಣ್ ನಾಯರ್
