ತಮಿಳುನಾಡು ಕ್ರಿಕೆಟಿಗರ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಪಕ್ಷಪಾತ; ನಟರಾಜನ್ ಕೈಬಿಟ್ಟಿದ್ದಕ್ಕೆ ಮಾಜಿ ಆಟಗಾರ ಗಂಭೀರ ಆರೋಪ
T Natarajan: ಟಿ20 ವಿಶ್ವಕಪ್ ಟೂರ್ನಿಗೆ ವೇಗದ ಬೌಲರ್ ಟಿ ನಟರಾಜನ್ ಅವರನ್ನು ಆಯ್ಕೆ ಮಾಡದ ಕಾರಣ ಸುಬ್ರಮಣ್ಯಂ ಬದ್ರಿನಾಥ್ ಅವರು ಬಿಸಿಸಿಐ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಜೂನ್ 1ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ ಪ್ರಾರಂಭವಾಗುವ ಟಿ20 ವಿಶ್ವಕಪ್ ಟೂರ್ನಿಗೆ ಏಪ್ರಿಲ್ 30ರಂದು ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿತು. ಆದರೆ ಅದಕ್ಕೆ ಸಂಬಂಧಿಸಿದ ಚರ್ಚೆಗಳು ಇನ್ನೂ ನಿಂತಿಲ್ಲ. ಹಿರಿಯ ಕ್ರಿಕೆಟಿಗರು ಮತ್ತು ತಜ್ಞರ ನಡುವಿನ ಚರ್ಚೆಗಳು ದಿನೇ ದಿನೇ ತಾರಕ್ಕೇರುತ್ತಿವೆ. ರಿಂಕು ಸಿಂಗ್ ಅವರನ್ನು ಹೊರಗಿಟ್ಟಿರುವ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿರುವ ನಡುವೆ ವೇಗದ ಬೌಲರ್ ಟಿ ನಟರಾಜನ್ ಆಯ್ಕೆ ಮಾಡದಿರುವ ಬಗ್ಗೆಯೂ ಟೀಕೆ ಎದುರಾಗಿವೆ. ಬಿಸಿಸಿಐ ಪಕ್ಷಪಾತ ಮಾಡುತ್ತಿದೆ ಎಂದು ಭಾರತದ ಮಾಜಿ ಆಟಗಾರ ಆರೋಪಿಸಿದ್ದಾರೆ.
ವೇಗದ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಅವರಿಗೆ ಅದ್ಭುತ ಸಾಥ್ ನೀಡುವ ಪ್ರಮುಖ ಬೌಲರ್ ಆಯ್ಕೆಗೆ ಸಂಬಂಧಿಸಿ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿತ್ತು. ಇದರ ನಡುವೆ ಅಳೆದು ತೂಗಿ ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ಐಪಿಎಲ್ನಲ್ಲಿ ದುಬಾರಿ ಬೌಲರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇಬ್ಬರ ಆಯ್ಕೆ, ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ, ಅತ್ಯುತ್ತಮ ಪ್ರದರ್ಶನ ನೀಡಿದ್ದರ ಹೊರತಾಗಿಯೂ ನಟರಾಜನ್ ಅನ್ಯಾಯಕ್ಕೆ ಒಳಗಾಗಿದ್ದಾರೆ. ಎಡಗೈ ವೇಗಿ 8 ಪಂದ್ಯಗಳಲ್ಲಿ 15 ವಿಕೆಟ್ ಉರುಳಿಸಿ ಮಿಂಚಿದ್ದಾರೆ.
ಗಂಭೀರ ಆರೋಪ ಮಾಡಿದ ಸುಬ್ರಮಣ್ಯಂ ಬದ್ರಿನಾಥ್
ಎಸ್ಆರ್ಹೆಚ್ ಪರ ಹಳೆಯ ಮತ್ತು ಹೊಸ ಚೆಂಡಿನೊಂದಿಗೆ ಅದ್ಭುತ ಪ್ರದರ್ಶನ ನೀಡುತ್ತಿರುವ ನಟರಾಜನ್, ಪ್ರಸ್ತುತ ಐಪಿಎಲ್ 2024 ರಲ್ಲಿ ಕೇವಲ 8 ಪಂದ್ಯಗಳಲ್ಲಿ 8.96 ಎಕಾನಮಿ ರೇಟ್ನಲ್ಲಿ 15 ವಿಕೆಟ್ಗಳೊಂದಿಗೆ ಪ್ರಮುಖ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರ ಬೌಲಿಂಗ್ ಸ್ಟ್ರೈಕ್ ರೇಟ್ ಕೇವಲ 12.8. ಟಿ20 ವಿಶ್ವಕಪ್ಗೆ ಆಯ್ಕೆದಾರರು 33 ವರ್ಷದ ವೇಗಿಯನ್ನು ಕಡೆಗಣಿಸಿದ್ದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಸುಬ್ರಮಣ್ಯಂ ಬದ್ರಿನಾಥ್ ಅವರು ಆಯ್ಕೆ ವಿಚಾರದಲ್ಲಿ ಬಿಸಿಸಿಐ ಪಕ್ಷಪಾತ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಭಾರತ ತಂಡದಲ್ಲಿ ಸ್ಥಾನ ಪಡೆಯಲು ಇತರ ಆಟಗಾರರಿಗೆ ಹೋಲಿಸಿದರೆ ತಮಿಳುನಾಡು ಆಟಗಾರರು ಯಾವಾಗಲೂ ದ್ವಿಗುಣ ಪ್ರಯತ್ನ ನೀಡಬೇಕಾಗುತ್ತದೆ. ತಮಿಳುನಾಡಿನ ಕೆಲವು ಕ್ರಿಕೆಟಿಗರು ಪ್ರವೇಶಿಸಲು ಎರಡು ಪಟ್ಟು ಹೆಚ್ಚು ಪ್ರದರ್ಶನ ನೀಡಬೇಕೇ? ಅವರು ನೀಡುತ್ತಿರುವ ಪ್ರದರ್ಶನ ಸಾಲುತ್ತಿಲ್ಲವೇ? ಆದರೂ ಅವರಿಗೆ ಹೆಚ್ಚಿನ ಬೆಂಬಲ ಸಿಗುತ್ತಿಲ್ಲ. ತಮಿಳುನಾಡು ಕ್ರಿಕೆಟಿಗರ ಆಯ್ಕೆಯ ವಿಚಾರದಲ್ಲಿ ಪಕ್ಷಪಾತ ನಡೆಯುತ್ತಿದೆ. ನಟರಾಜನ್ ಅವರನ್ನು ಖಂಡಿತವಾಗಿಯೂ ವಿಶ್ವಕಪ್ ಭಾರತೀಯ ತಂಡದಲ್ಲಿ ಸೇರಿಸಿಕೊಳ್ಳಬೇಕು ಎಂದು ಬದ್ರಿನಾಥ್ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ನಟರಾಜನ್ಗೆ ಶೇನ್ ವಾಟ್ಸನ್ ಬೆಂಬಲ
ಜಿಯೋ ಸಿನೆಮಾದೊಂದಿಗೆ ಮಾತನಾಡಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವ್ಯಾಟ್ಸನ್ ಕೂಡ ಭಾರತ ವಿಶ್ವಕಪ್ ತಂಡದಲ್ಲಿ ನಟರಾಜನ್ ಅವರ ಅನುಪಸ್ಥಿತಿಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಯಾರ್ಕರ್ ಬೌಲಿಂಗ್ ಹಾಕುವ ಸಾಮರ್ಥ್ಯ ಅದ್ಭುತವಾಗಿದೆ. ಡಿಫ್ರೆಂಟ್ ವೇರಿಯೇಷನ್ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ. ದಿನದಿಂದ ದಿನಕ್ಕೆ ವಿಭಿನ್ನ ಬೌಲಿಂಗ್ ಮಾಡುತ್ತಿದ್ದಾರೆ. ಆದರೆ ಇಂತಹ ಬೌಲರ್ ಭಾರತೀಯ ಟಿ20 ತಂಡದಲ್ಲಿ ಇಲ್ಲದಿರುವುದು ನನಗೆ ಆಶ್ಚರ್ಯವನ್ನುಂಟುಮಾಡಿತು ಎಂದು ಶೇನ್ ವ್ಯಾಟ್ಸನ್ ಹೇಳಿದ್ದಾರೆ.
ಬ್ಯಾಟ್ಸ್ಮನ್ ಪ್ರಬಲವಾಗುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರು ಹೆಮ್ಮೆಪಡುವಂತೆ ಮಾಡುತ್ತಾರೆ ನಟರಾಜನ್ ಎಂದಿದ್ದಾರೆ ವಾಟ್ಸನ್. ಭಾರತದ ಪರ 7 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ನಟ್ಟು, 2021ರ ಜನವರಿಯಲ್ಲಿ ಗಾಯದಿಂದ ಹೊರಗುಳಿದಿದ್ದಾರೆ. ಆ ಬಳಿಕ ತಂಡದಲ್ಲಿ ಅವಕಾಶ ಪಡೆಯಲು ವಿಫಲರಾಗಿದ್ದಾರೆ.