ಗಡುವು ಮುಗಿದರೂ ಚಾಂಪಿಯನ್ಸ್ ಟ್ರೋಫಿಗೆ ಇನ್ನೂ ತಂಡವನ್ನೇಕೆ ಪ್ರಕಟಿಸಿಲ್ಲ ಪಾಕಿಸ್ತಾನ; ಅಸಲಿ ಕಾರಣ ಇಲ್ಲಿದೆ
ICC Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಗೆ ಪಾಕಿಸ್ತಾನ ಇನ್ನೂ ತಂಡವನ್ನು ಪ್ರಕಟಿಸಿಲ್ಲ. ಜನವರಿ 12ರಂದು ಗಡುವು ಮುಕ್ತಾಯಗೊಂಡಿದ್ದರೂ ತಂಡ ಪ್ರಕಟಿಸದೇ ಇರಲು ಕಾರಣ ಇಲ್ಲಿದೆ ನೋಡಿ.

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 (ICC Champions Trophy 2025) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 19 ರಿಂದ ಮೆಗಾ ಟೂರ್ನಿ ಶುರುವಾಗಲಿದೆ. ಆದರೆ ಐಸಿಸಿ ಪಂದ್ಯಾವಳಿಗೆ ತಂಡ ಪ್ರಕಟಿಸಲು ಜನವರಿ 12 ಗಡುವು ಮುಕ್ತಾಯಗೊಂಡು 10 ದಿನವಾದರೂ ಆತಿಥೇಯ ಪಾಕಿಸ್ತಾನ ಇನ್ನೂ ಅಂತಿಮಗೊಳಿಸಿಲ್ಲ. ಈಗಾಗಲೇ ಎಲ್ಲಾ ಕ್ರಿಕೆಟ್ ಮಂಡಳಿಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ. ಆದರೆ ಪಾಕಿಸ್ತಾನ ಇನ್ನು ತಂಡ ಅಂತಿಮಗೊಳಿಸಿಲ್ಲ. ಐಸಿಸಿ ಬಳಿ ಸಮಯ ಕೇಳಿದ್ದ ಭಾರತ, ಜನವರಿ 18ರಂದು 15 ಸದಸ್ಯರ ತಂಡವನ್ನು ತಡವಾಗಿ ಪ್ರಕಟಿಸಿತ್ತು.
ಇಂಗ್ಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಸಮಯಕ್ಕೆ ಸರಿಯಾಗಿ ತಂಡಗಳನ್ನು ಪ್ರಕಟಿಸಿದ್ದವು. ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ತಿಂಗಳಿಗಿಂತ ಕಡಿಮೆ ಅವಧಿ ಇರುವಾಗ ಪಾಕ್ ತಮ್ಮ ತಂಡವನ್ನು ಘೋಷಿಸದ ಏಕೈಕ ತಂಡವಾಗಿ ಉಳಿದಿದೆ. ಫೆಬ್ರವರಿ 12ರೊಳಗೆ ಪ್ರಕಟಿಸಿದ ತಂಡಗಳಲ್ಲಿ ಬದಲಾವಣೆಗೆ ಅವಕಾಶ ಇದೆ. ತಾಂತ್ರಿಕವಾಗಿ, ಪಾಕಿಸ್ತಾನಕ್ಕೆ ತಮ್ಮ ಅಂತಿಮ ತಂಡವನ್ನು ಹೆಸರಿಸಲು ಇನ್ನೂ ಸಮಯವಿದೆ. ಆದರೆ ತಂಡವನ್ನು ಘೋಷಿಸಲು ವಿಳಂಬಕ್ಕೆ ಕಾರಣವೇನು? ಪಿಸಿಬಿ ಅಥವಾ ಆಯ್ಕೆದಾರರಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಸೈಮ್ ಅಯೂಬ್ ಫಿಟ್ನೆಸ್ಗೆ ಕಾಯುತ್ತಿದ್ಯಂತೆ ಪಿಸಿಬಿ
ಈ ಬಗ್ಗೆ ಮಾತನಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಅವರು, ‘ಸೈಮ್ ಅಯೂಬ್ ಅವರ ಫಿಟ್ನೆಸ್ ಅಪ್ಡೇಟ್ಗಾಗಿ ಕಾಯಲಾಗುತ್ತಿದೆ’ ಎಂದು ಹೇಳಿದ್ದಾರೆ. ಪಾಕಿಸ್ತಾನ ತನ್ನ ತಂಡವನ್ನು ಘೋಷಿಸಲು ಹೆದರುತ್ತಿದೆಯೇ? ಇಲ್ಲ. ಕಾರಣ ಅದಲ್ಲ. ಸೈಮ್ ಅಯೂಬ್ ಫಿಟ್ ಆಗಿ ಮರಳಬಹುದೇ ಅಥವಾ ಇಲ್ಲವೇ ಎಂಬುದು ದೊಡ್ಡ ಸಮಸ್ಯೆಯಾಗಿದೆ. ಅದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಕುರಿತು ಖಚಿತ ಮಾಹಿತಿ ಸಿಗುತ್ತಿಲ್ಲ ಎಂದು ಬಾಸಿತ್ ತಮ್ಮ ಯೂಟ್ಯೂಬ್ ಚಾನೆಲ್ನ ವಿಡಿಯೋದಲ್ಲಿ ಹೇಳಿದ್ದಾರೆ.
ಪಾಕಿಸ್ತಾನ ತಂಡದಲ್ಲಿ ಯಾರಿಗೆಲ್ಲಾ ಸಿಗಲಿದೆ ಅವಕಾಶ?
ಫಾರ್ಮ್‌ನಲ್ಲಿಲ್ಲದ ಆರಂಭಿಕ ಬ್ಯಾಟ್ಸ್‌ಮನ್ ಅಬ್ದುಲ್ಲಾ ಶಫೀಕ್ ಮತ್ತು ಉಸ್ಮಾನ್ ಖಾನ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಆದರೆ ಫಖರ್ ಜಮಾನ್ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಮಾಮ್-ಉಲ್-ಹಕ್ ಮತ್ತು ಉದಯೋನ್ಮುಖ ಆಟಗಾರ ಹಸೀಬುಲ್ಲಾ ಅವರೂ ಆಯ್ಕೆಗೆ ಲಭ್ಯರು ಎನ್ನಲಾಗುತ್ತಿದೆ. ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್, ಸಲ್ಮಾನ್ ಆಘಾ, ತಯ್ಯಬ್ ತಾಹಿರ್, ಇರ್ಫಾನ್ ಖಾನ್ ಅವರಂತಹ ಪ್ರಸಿದ್ಧ ಆಟಗಾರರು ಇರಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ಹಸ್ನೈನ್ ಇರಲಿದ್ದಾರೆ.
ಕಮ್ರಾನ್ ಗುಲಾಮ್, ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಮತ್ತು ಯುವ ಸ್ಪಿನ್ನರ್ ಸುಫಿಯಾನ್ ಮುಖೀಮ್ ಹೆಚ್ಚುವರಿಯಾಗಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಈ ಬಗ್ಗೆಯೂ ಪ್ರತಿಕ್ರಿಯಿಸಿದ ಬಸಿತ್ ಅಲಿ, ‘ತಯ್ಯಬ್ ತಾಹಿರ್, ಸೌದ್ ಮತ್ತು ಕಮ್ರಾನ್ ಗುಲಾಮ್ ಐಸಿಸಿ ಟೂರ್ನಿಗಳಲ್ಲಿ ಆಡಿಲ್ಲ. ಅದಕ್ಕಾಗಿಯೇ ಈ ಸಮಯದಲ್ಲಿ ಸ್ಪಿನ್ ಆಲ್ರೌಂಡರ್ ಶದಾಬ್ ಖಾನ್ಗೆ ಅವಕಾಶ ನೀಡುವ ಅಗತ್ಯ ಇದೆ. ಸೈಮ್ ಫಿಟ್ ಆಗಿದ್ದರೆ, ಸೈಮ್ ಮತ್ತು ಫಖರ್ ಜಮಾನ್ ಅತ್ಯುತ್ತಮ ಆರಂಭಿಕ ಜೋಡಿಯಾಗಲಿದ್ದಾರೆ. ಇದೀಗ ತಂಡವನ್ನು ಘೋಷಿಸಲು ಸಜ್ಜಾಗಿದೆ. ಆದರೆ ಅಯೂಬ್ ಲಭ್ಯತೆ ಖಚಿತಪಡಿಸಲು ತಂಡ ಕಾಯುತ್ತಿದೆ’ ಎಂದರು. ಫೆಬ್ರವರಿ 19 ರಂದು ಕರಾಚಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತನ್ನ ಮೊದಲ ಪಂದ್ಯವನ್ನು ಪ್ರಾರಂಭಿಸಲಿದೆ.
