ಭಾರತ ತಂಡ ಪ್ರಕಟ; ಇದ್ದರೂ ಇಲ್ಲದಂತೆ ಜಸ್ಪ್ರೀತ್ ಬುಮ್ರಾ ಪರಿಸ್ಥಿತಿ, ಮೊಹಮ್ಮದ್ ಸಿರಾಜ್ ಕೈಬಿಟ್ಟಿದ್ದೇಕೆ?
ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆದರೆ ವೇಗಿ ಜಸ್ಪ್ರೀತ್ ಬುಮ್ರಾ ಇದ್ದರೂ ಇಲ್ಲದಂತೆ ಪರಿಸ್ಥಿತಿಗೆ ಸಿಲುಕಿದ್ದಾರೆ. ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಕೈಬಿಟ್ಟಿದ್ದೇಕೆ? ಇಲ್ಲಿದೆ ವಿವರ.

ಫೆಬ್ರವರಿ 19ರಿಂದ ಶುರುವಾಗುವ ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದರೆ, ಶುಭ್ಮನ್ ಗಿಲ್ ಉಪನಾಯಕನಾಗಿ ಸೇವೆ ಸಲ್ಲಿಸಲಿದ್ದಾರೆ. ಅಳೆದು ತೂಗಿ ಅನುಭವಿಗಳಿಂದ ಕೂಡಿರುವ ತಂಡವನ್ನೇ ಪ್ರಕಟಿಸಲಾಗಿದೆ. ಅವಕಾಶ ಪಡೆಯುವುದು ಅನುಮಾನ ಎನ್ನಲಾಗುತ್ತಿದ್ದ ಜಸ್ಪ್ರೀತ್ ಬುಮ್ರಾ ಅವರನ್ನೂ ತಂಡದಲ್ಲಿ ಸೇರಿಸಲಾಗಿದೆ. ಆದರೆ, ಅವರು ತಂಡದಲ್ಲಿ ಇದ್ದರೂ ಇಲ್ಲದಂತೆ! ಕಾರಣವೇನು? ಇಲ್ಲಿದೆ ವಿವರ.
ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ ವೇಳೆ ಬೆನ್ನುನೋವಿಗೆ ತುತ್ತಾದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಲಭ್ಯತೆಯ ಬಗ್ಗೆ ಅನುಮಾನ ಇತ್ತು. ಭಾರತ ತಂಡದಿಂದ ಬುಮ್ರಾ ಹೊರಗುಳಿಯಬಹುದು ಎಂಬ ಊಹಾಪೋಹಗಳು ಹರಡಿದ್ದವು. ಬುಮ್ರಾ ಈ ವರದಿಗಳನ್ನು ತಳ್ಳಿ ಹಾಕಿದ್ದರು. ವದಂತಿ ಸುದ್ದಿಗಳನ್ನು ನೋಡಿದರೆ ನಗು ಬರುತ್ತಿದೆ ಎಂದು ಟ್ವೀಟ್ ಕೂಡ ಮಾಡಿದ್ದರು. ಆದರೀಗ ಐಸಿಸಿ ಟೂರ್ನಿಗೆ ಪ್ರಕಟವಾದ ತಂಡದಲ್ಲಿ ಬುಮ್ರಾ ಹೆಸರನ್ನು ಸೇರಿಸಲಾಗಿದೆ. ತಂಡದಲ್ಲಿ ಸ್ಥಾನ ಪಡೆದರೂ ಆಡುವುದು ಅನುಮಾನ.
ಜಸ್ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿ ಆಡುತ್ತಾರಾ?
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಭಾರತ ತಂಡದಲ್ಲಿ ಸ್ಥಾನ ಪಡೆದರೂ ಅವರು ಆಡುವುದು ಅವರ ಫಿಟ್ನೆಸ್ಗೆ ಒಳಪಟ್ಟಿರುತ್ತದೆ. ಬುಮ್ರಾ ಗರಿಷ್ಠ ಫಿಟ್ನೆಸ್ ಪಡೆಯಲು ವಿಫಲವಾದರೆ, ಅವರು ಆಡುವುದಿಲ್ಲ. ಹೀಗಾಗಿ, ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಜಸ್ಪ್ರೀತ್ ಬುಮ್ರಾ ಬದಲಿಗೆ ಹರ್ಷಿತ್ ರಾಣಾ ಅವರನ್ನು ಆಯ್ಕೆ ಮಾಡಲಾಗಿದೆ. ಜಸ್ಪ್ರೀತ್ ಬುಮ್ರಾ ಅವರ ಫಿಟ್‌ನೆಸ್ ಅಪ್‌ಡೇಟ್‌ಗಾಗಿ ಕಾಯುತ್ತಿದ್ದೇವೆ. ಫೆಬ್ರವರಿ ಆರಂಭದಲ್ಲಿ ಬಿಸಿಸಿಐ ವೈದ್ಯಕೀಯ ತಂಡ ಅಪ್ಡೇಟ್ ನೀಡಲಿದೆ ಎಂದು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಹೇಳಿದ್ದಾರೆ.
ಮೊಹಮ್ಮದ್ ಸಿರಾಜ್ ಕೈಬಿಟ್ಟಿದ್ದೇಕೆ?
ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈಬಿಡುವ ಮೂಲಕ ದೊಡ್ಡ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗೆ ಕಳಪೆ ಪ್ರದರ್ಶನ ನೀಡಿದ ಕಾರಣ ಸಿರಾಜ್ರನ್ನು ಡ್ರಾಪ್ ಮಾಡಲಾಗಿದೆ. ಆದಾಗ್ಯೂ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್ ಪುನರಾಗಮನ ಮಾಡಿದರು. ರವೀಂದ್ರ ಜಡೇಜಾ ಕೂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಕರುಣ್ ನಾಯರ್ ವಿಜಯ್ ಹಜಾರೆ ಟ್ರೋಫಿಯನ್ನು ರನ್ ಮಳೆ ಹರಿಸಿದರೂ ಆತನ ಆಯ್ಕೆಯ ಕುರಿತು ಚರ್ಚೆಯೇ ನಡೆದಿಲ್ಲ. ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ. ಭಾರತ ತನ್ನ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಬಾಂಗ್ಲಾದೇಶ ವಿರುದ್ಧ ಫೆಬ್ರವರಿ 20 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರಾರಂಭಿಸಲಿದೆ.
ಚಾಂಪಿಯನ್ಸ್ ಟ್ರೋಫಿ ಮತ್ತು ಇಂಗ್ಲೆಂಡ್ ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ. (ಹರ್ಷಿತ್ ರಾಣಾ- ಇಂಗ್ಲೆಂಡ್ ಸರಣಿಗೆ ಆಯ್ಕೆ. ಉಳಿದಂತೆ ಒಂದೇ ತಂಡ)
