Explainer: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ 2 ಸ್ಥಳಗಳೇಕೆ? ಲಾಹೋರ್-ದುಬೈ ನಡುವೆ ಎಲ್ಲಿ ನಡೆಯಲಿದೆ ಫೈನಲ್?
Champions Trophy 2025: ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಎರಡು ಮೈದಾನಗಳನ್ನು ಆತಿಥ್ಯ ಸ್ಥಳವಾಗಿ ಐಸಿಸಿ ಘೋಷಿಸಿದೆ. ಆದರೆ, ಭಾರತ ಕ್ರಿಕೆಟ್ ತಂಡವು ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯುತ್ತಾ, ಇಲ್ಲವೇ ಎಂಬ ಆಧಾರದಲ್ಲಿ ಇದನ್ನು ನಿರ್ಧರಿಸಲಾಗುತ್ತದೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ (ICC Champions Trophy 2025) ವೇಳಾಪಟ್ಟಿ ಪ್ರಕಟವಾಗಿದೆ. ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ಪಾಕಿಸ್ತಾನ ಮತ್ತು ಯುಎಇ ಆತಿಥ್ಯದಲ್ಲಿ ಟೂರ್ನಿ ನಡೆಯಲಿದ್ದು, ಇನ್ನು ಎರಡು ತಿಂಗಳಷ್ಟೇ ಬಾಕಿ ಉಳಿದಿವೆ. ಎರಡು ದೇಶಗಳ 4 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಆದರೆ, ಫೈನಲ್ ಪಂದ್ಯಕ್ಕಾಗಿ ಎರಡು ಮೈದಾನವನ್ನು ಆತಿಥ್ಯ ಸ್ಥಳವಾಗಿ ಇರಿಸಲಾಗಿದೆ. ದುಬೈ ಜೊತೆಗೆ ಪಾಕಿಸ್ತಾನದ ಲಾಹೋರ್ ಮೈದಾನವನ್ನು ಕೂಡಾ ಫೈನಲ್‌ಗೆ ಆತಿಥ್ಯ ಸ್ಥಳವಾಗಿ ಗುರುತಿಸಲಾಗಿದೆ. ಒಂದೇ ಪಂದ್ಯಕ್ಕೆ ಎರಡು ಸ್ಥಳ ಯಾಕೆ ಎಂಬುದು ಸದ್ಯದ ಪ್ರಶ್ನೆ. ಆದರೆ, ಭಾರತಕ್ಕಾಗಿಯೇ ಈ ನಿರ್ಧಾರಕ್ಕೆ ಬರಲಾಗಿದೆ.
1996ರ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿಯೊಂದು ನಡೆಯುತ್ತಿದೆ. ಇದಕ್ಕಾಗಿ ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯನ್ನು ಆತಿಥ್ಯ ಸ್ಥಳಗಳಾಗಿ ನಿಯೋಜಿಸಲಾಗಿದೆ. ಇದೇ ವೇಳೆ UAEಯಲ್ಲಿನ ಎಲ್ಲಾ ಪಂದ್ಯಗಳು ದುಬೈ ಸ್ಟೇಡಿಯಂನಲ್ಲಿ ನಡೆಯಲಿವೆ. ಭದ್ರತಾ ಕಾರಣಗಳಿಂದಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದ ಕಾರಣದಿಂದಾಗಿ, ಹೈಬ್ರಿಡ್ ಮಾಡೆಲ್ ಪರಿಚಯಿಸಲಾಗಿದೆ.
ದುಬೈ ಮತ್ತು ಲಾಹೋರ್ ಸ್ಟೇಡಿಯಂಗಳು ಕ್ರಮವಾಗಿ ಮಾರ್ಚ್ 4 ಮತ್ತು 5ರಂದು ನಡೆಯವು ಸೆಮಿಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಮಾರ್ಚ್ 9ರಂದು ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಜತೆಗೆ ಲಾಹೋರ್‌ನ ಗಡಾಫಿ ಕ್ರೀಡಾಂಗಣವನ್ನು ಕೂಡಾ ಆತಿಥ್ಯ ಸ್ಥಳವಾಗಿ ನಿಗದಿಪಡಿಸಲಾಗಿದೆ. ಆದರೆ, ಮೊದಲ ಸೆಮಿಫೈನಲ್ ಪಂದ್ಯದ ನಂತರ ಮಾರ್ಚ್ 4ರಂದು ಪಂದ್ಯಾವಳಿಯ ಫೈನಲ್ ಸ್ಥಳ ಅಂತಿಮವಾಗಬಹುದು.
ಒಂದು ಪಂದ್ಯಕ್ಕೆ ಎರಡು ಆತಿಥ್ಯ ಸ್ಥಳ
ಟೂರ್ನಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಖಚಿತಪಡಿಸಿದೆ. ಹೀಗಾಗಿಯೇ ಪಂದ್ಯಾವಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅನ್ನು ಸಹ-ಆತಿಥೇಯರಾಗಿ ದೇಶವಾಗಿ ಆಯ್ಕೆ ಮಾಡಲಾಯ್ತು. ಅದರಂತೆ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗುತ್ತಿದೆ. ಹೀಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯ ಸೇರಿದಂತೆ ಭಾರತ ಕ್ರಿಕೆಟ್ ತಂಡದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಮಾರ್ಚ್ 4ರಂದು ದುಬೈನಲ್ಲಿ ಮೊದಲ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ. ಒಂದು ವೇಳೆ ಭಾರತ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ಆ ಪಂದ್ಯ ಕೂಡಾ ದುಬೈನಲ್ಲಿ ನಡೆಯಲಿದೆ.
ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಅರ್ಹತೆ ಪಡೆದರೆ, ತಂಡವು ಪಾಕಿಸ್ತಾನವನ್ನು ಎದುರಿಸುತ್ತಿದ್ದರೂ ಆ ಪಂದ್ಯ ದುಬೈನಲ್ಲಿ ನಡೆಯಲಿದೆ. ಭಾರತದ ಎದುರಾಳಿ ಯಾರೇ ಆದರೂ ಪಂದ್ಯ ಮಾತ್ರ ದುಬೈನಲ್ಲೇ ನಡೆಯಲಿದೆ. ಒಂದು ವೇಳೆ ಭಾರತವು ಫೈನಲ್ ಪ್ರವೇಶಿಸಲು ವಿಫಲವಾದರೆ, ಅಂತಹ ಸಮಯದಲ್ಲಿ ನಿರ್ಣಾಯಕ ಮುಖಾಮುಖಿ ಲಾಹೋರ್‌ನಲ್ಲಿ ನಡೆಯುತ್ತದೆ.
2008ರ ಏಷ್ಯಾಕಪ್ ನಂತರ ಭಾರತ ತಂಡವು ಪಾಕಿಸ್ತಾನ ನೆಲದಲ್ಲಿ ಯಾವುದೇ ಕ್ರಿಕೆಟ್ ಪಂದ್ಯಗಳನ್ನು ಆಡಿಲ್ಲ. ಕಳೆದ ಬಾರಿ ಏಷ್ಯಾಕಪ್ ಪಂದ್ಯಾವಳಿಯು ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿತ್ತು. ಆದರೆ, ಫೈನಲ್ ಸೇರಿದಂತೆ ಭಾರತದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸಲಾಯ್ತು. ಉಭಯ ರಾಷ್ಟ್ರಗಳ ನಡುವೆ ಹಲವು ವರ್ಷಗಳಿಂದ ರಾಜಕೀಯ ಉದ್ವಿಗ್ನತೆ ಇದೆ. ಅಲ್ಲದೆ ಭದ್ರತಾ ಕಾಳಜಿಯಿಂದ ಪಾಕ್‌ಗೆ ತಂಡವನ್ನು ಕಳುಹಿಸಲು ಬಿಸಿಸಿಐ ಹಿಂಜರಿಯುತ್ತಿದೆ.