ಕನ್ನಡಿಗರ ಮನೆ ಮಗ ವಿರಾಟ್ ಕೊಹ್ಲಿ; ಕರುನಾಡ ಜನತೆಗೆ ಆರ್ಸಿಬಿ ಮಾಜಿ ನಾಯಕನೆಂದರೆ ಅಷ್ಟೇಕೆ ಇಷ್ಟ?
Virat Kohli: ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಗೆದ್ದಿಲ್ಲ. ಐಪಿಎಲ್ ಶುರುವಾದಾಗಿನಿಂದಲೂ ಒಂದೇ ತಂಡವನ್ನು ಪ್ರತಿನಿಧಿಸುತ್ತಿರುವ ವಿರಾಟ್ ಕೊಹ್ಲಿ ಅಂದರೆ ಕರ್ನಾಟಕದ ಜನರಿಗೆ ಎಲ್ಲಿಲ್ಲದ ಪ್ರೀತಿ.
ವಿರಾಟ್ ಕೊಹ್ಲಿ... ಈ ಹೆಸರಿಗಿರುವ ಶಕ್ತಿನೇ ಬೇರೆ. ಅವರನ್ನು ವಿಶ್ವ ಕ್ರಿಕೆಟ್ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಎಂದೇ ಕರೆಯುತ್ತಾರೆ. ಕ್ರಿಕೆಟ್ ಮೈದಾನದಲ್ಲಿ ದಾಖಲೆಗಳ ಶೂರ. ಆಫ್ ದ ಫೀಲ್ಡ್ನಲ್ಲಿ ಅಸಂಖ್ಯ ಅಭಿಮಾನಿಗಳ ಸರದಾರ. ಜಗತ್ತಿನ ಯಾವುದೇ ಮೂಲೆಗೆ ಹೋದರೂ ಕೊಹ್ಲಿಯನ್ನು ಆರಾಧಿಸುವ ಅಭಿಮಾನಿಗಳೇ ಕಣ್ಣಿಗೆ ಕಾಣುತ್ತಾರೆ. ಆಧುನಿಕ ಯುಗದಲ್ಲಿ ಕೊಹ್ಲಿಯಷ್ಟು ಜನ್ರಪ್ರಿಯ ಕ್ರಿಕೆಟ್ ಮತ್ತೊಬ್ಬ ಇಲ್ಲ. ಕೋಟ್ಯಂತರ ಜನರಿಗೆ ಸ್ಪೂರ್ತಿಯ ಚಿಲುಮೆಯಾದ ಆರ್ಸಿಬಿ ಮಾಜಿ ನಾಯಕನನ್ನು ಕಂಡರೆ ಅಷ್ಟೇಕೆ ಕರ್ನಾಟಕದ ಜನರಿಗೇಕೆ ಅಷ್ಟೊಂದು ಇಷ್ಟ?
ವಿರಾಟ್ ಕೊಹ್ಲಿ ಒಬ್ಬ ನಿಜವಾದ ಹೋರಾಟಗಾರ. ಅವರ ಹೋರಾಟದ ಮನೋಭಾವ ಎಂತಹವರಿಗೂ ಸ್ಫೂರ್ತಿ. ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಗೆದ್ದಿಲ್ಲ. ಐಪಿಎಲ್ ಶುರುವಾದಾಗಿನಿಂದಲೂ ಒಂದೇ ತಂಡವನ್ನು ಪ್ರತಿನಿಧಿಸುತ್ತಿರುವ ಕೊಹ್ಲಿ ಅಂದರೆ ಕರ್ನಾಟಕದ ಜನರಿಗೆ ಎಲ್ಲಿಲ್ಲದ ಪ್ರೀತಿ. ಅದು ಆರ್ಸಿಬಿ ತಂಡವನ್ನೇ ಪ್ರತಿನಿಧಿಸಲಿ ಅಥವಾ ಭಾರತ ತಂಡವನ್ನೇ ಪ್ರತಿನಿಧಿಸಲಿ ಅಷ್ಟೇ ಪ್ರೀತಿ ತೋರುತ್ತಾರೆ ಕನ್ನಡಿಗರು. ಕೊಹ್ಲಿಯನ್ನು ನಮ್ಮ ಮನೆ ಮಗ ಎಂದೇ ಕರೆಯುತ್ತಾರೆ. ಕೊಹ್ಲಿಯನ್ನು ಈ ಪಾಟಿ ಇಷ್ಟಪಡಲು ಕಾರಣವೇನು? ಇಲ್ಲಿದೆ ಉತ್ತರ.
ಬೆಂಗಳೂರು ನನ್ನ ಎರಡನೇ ತವರು ಎಂದಿರುವ ಕೊಹ್ಲಿ
ವಿರಾಟ್ ಹುಟ್ಟಿದ್ದು ದೆಹಲಿಯಲ್ಲಿ. ಆದರೆ ಹೆಚ್ಚು ಪ್ರೀತಿಸುವುದು ಬೆಂಗಳೂರು ಜನರನ್ನು. ಐಪಿಎಲ್ನಲ್ಲಿ ಬೆಂಗಳೂರು ಹೊರತುಪಡಿಸಿ ಇತರೆ ತಂಡದೊಂದಿಗೆ ಕಣಕ್ಕಿಳಿಯಲು ಇಷ್ಟವಿಲ್ಲ. ಬೆಂಗಳೂರು ನನ್ನ 2ನೇ ತವರು. ಒಂದು ವೇಳೆ ಅಂತಹ ದಿನ ಬಂದರೆ ಆರ್ಸಿಬಿಯೊಂದಿಗೆ ನನ್ನ ಕೊನೆಯ ಪಂದ್ಯವಾಗಲಿದೆ ಎಂದು ಕೊಹ್ಲಿ ಭಾವುಕರಾಗಿದ್ದರು. ಸಂದರ್ಶನವೊಂದರಲ್ಲಿ ಹಿಂದೆ ಕೊಹ್ಲಿ ಹೇಳಿದ್ದ ಈ ಮಾತು ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಉಳಿದಿದೆ.
ಆರ್ಸಿಬಿಗೆ ಕೊಹ್ಲಿ ನಿಷ್ಠೆ
2008 ರಿಂದ ಇದುವರೆಗೂ ಒಂದೇ ಫ್ರಾಂಚೈಸಿ ಪರ ಆಡುತ್ತಿರುವ ವಿಶ್ವದ ಏಕೈಕ ಆಟಗಾರ ಎಂಬ ದಾಖಲೆಯನ್ನೂ ವಿರಾಟ್ ಬರೆದಿದ್ದಾರೆ. ಬೇರೆ ಬೇರೆ ಫ್ರಾಂಚೈಸ್ಗಳಿಂದ ದೊಡ್ಡ ಆಫರ್ ಬಂದಿದ್ದರೂ ಎಲ್ಲವನ್ನೂ ತಿರಸ್ಕರಿಸಿರುವ ಕೊಹ್ಲಿ ಆರ್ಸಿಬಿಗೆ ನಿಷ್ಠೆ ತೋರಿದ್ದಾರೆ. ನಮ್ಮ ತಂಡಕ್ಕೆ ಬಂದರೆ ಖಾಲಿ ಚೆಕ್ ಕೊಡ್ತೇವೆ ಎಂದು ಎಂಐ ಮಾಲೀಕರು ಆಫರ್ ಕೊಟ್ಟಿದ್ದರೂ ಕೊಹ್ಲಿ ರಿಜೆಕ್ಟ್ ಮಾಡಿದ್ದರು ವರದಿಯಿದೆ. ಆದರೆ ಎಷ್ಟು ಸತ್ಯ ಎಂಬುದು ಗೊತ್ತಿಲ್ಲ. ಆರ್ಸಿಬಿ ಮಾಜಿ ನಾಯಕನನ್ನು ಅಭಿಮಾನಿಗಳು ಹೆಚ್ಚು ಇಷ್ಟಪಡಲು ಇದು ಪ್ರಮುಖ ಕಾರಣವಾಗಿದೆ.
ಕೊಹ್ಲಿ ಅಗ್ರೆಸ್ಸಿವ್ ಆಟ ಎಲ್ಲರಿಗೂ ಇಷ್ಟ
ವಿರಾಟ್ ಕೊಹ್ಲಿ ಅಗ್ರೆಸ್ಸಿವ್ಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಮೈದಾನದಲ್ಲಿ ಅವರ ಆಕ್ರಮಣಕಾರಿ ವರ್ತನೆ ಎಲ್ಲರಿಗೂ ಇಷ್ಟ. ತಂಡವನ್ನ ಗೆಲ್ಲಿಸಬೇಕು ಎಂಬ ಗುರಿಯೊಂದಿಗೆ ಕಣಕ್ಕಿಳಿಯುವ ಕೊಹ್ಲಿ, ಮೈದಾನದಲ್ಲಿ ತುಂಬಾ ಚುರುಕಾಗಿರುತ್ತಾರೆ. ಬ್ಯಾಟಿಂಗ್, ಫೀಲ್ಡಿಂಗ್.. ಏನೇ ಆಗಿರಲಿ ಅವರಷ್ಟು ಚುರುಕು ಯಾರಿರಲ್ಲ. ಯಾರಾದರೂ ಕೆಣಕಿದರೆ ಅವರ ಕಥೆ ಮುಗೀತೆಂದೇ ಅರ್ಥ. ಗಂಡುಗಲಿ ವೀರನಂತೆ ಜಗಳಕ್ಕಿಳಿದೇ ಬಿಡುತ್ತಾರೆ. ಕೊಹ್ಲಿಯ ಉಗ್ರಾವತಾರ ಸಹಿಸಿಕೊಳ್ಳಲಾಗದೇ ಎದುರಾಳಿಗಳು ನಡುಗಿದ ಅದೆಷ್ಟೋ ಉದಾಹರಣೆಗಳು ಕಣ್ಮುಂದಿವೆ. ಕೊಹ್ಲಿಯ ಈ ಹೋರಾಟದ ಮನೋಭಾವ ಎಲ್ಲರಿಗೂ ಸಖತ್ ಇಷ್ಟ.
ಅಭಿಮಾನಿಗಳು ಅಂದ್ರೆ ಕೊಹ್ಲಿಗೆ ಪ್ರಾಣ.!
ವಿಶ್ವದ ದೊಡ್ಡ ಸೂಪರ್ ಸ್ಟಾರ್, ಕಿಂಗ್ ಕೊಹ್ಲಿ ತಲೆ ಬಾಗುವುದು ಅಭಿಮಾನಿಗಳಿಗೆ ಮಾತ್ರ.. ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿ, ಎಂದಿಗೂ ಬೇಸರ ತರಿಸಿದವರಲ್ಲ.. ಎಷ್ಟೇ ಒತ್ತಡದಲ್ಲಿದ್ದರೂ ಅಭಿಮಾನಿಗಳಿಗೆ ಸಮಯ ಕೊಟ್ಟೇ ಕೊಡುತ್ತಾರೆ. 2019ರ ವಿಶ್ವಕಪ್ನಲ್ಲಿ ಪಂದ್ಯ ನೋಡಲು ಬಂದಿದ್ದ 87 ವರ್ಷದ ಅಜ್ಜಿಯನ್ನು ಖುದ್ದಾಗಿ ಕೊಹ್ಲಿಯೇ ಭೇಟಿ ಆಗಿದ್ದರು. ವಿಕಲಚೇತನ ಅಭಿಮಾನಿಗೆ ಮಂಡಿಯೂರಿ ಕೊಹ್ಲಿ ಆಟೋಗ್ರಾಫ್ ಕೊಟ್ಟಿದ್ದರು. ಮೈದಾನಕ್ಕೆ ನುಗ್ಗಿ ಬಿಗಿದಪ್ಪಿದರೂ ಕೊಹ್ಲಿ ಅಭಿಮಾನಿಗಳೊಂದಿಗೆ ಶಾಂತ ರೀತಿಯಲ್ಲೇ ವರ್ತಿಸಿದ್ದಾರೆ. ಇತಂಹ ಘಟನೆಗಳು ಸಾಕಷ್ಟಿವೆ. ಮೈದಾನದಲ್ಲಿ ಎಷ್ಟೇ ಆಕ್ರಮಣಕಾರಿ ಆಗಿದ್ದರೂ ಮೈದಾನದ ಹೊರಗೆ ಅವರು ತುಂಬಾ ಸರಳ ಜೀವಿ.
ಫಿಟ್ನೆಸ್ ಕಿಂಗ್ ಎಂದೇ ಕರೆಸಿಕೊಳ್ಳುತ್ತಾರೆ ವಿರಾಟ್
ಒಬ್ಬ ಕ್ರೀಡಾಪಟು ಹೇಗಿರಬೇಕೆಂಬುದಕ್ಕೆ ವಿರಾಟ್ ಅತ್ಯುತ್ತಮ ಉದಾಹರಣೆ. ವಯಸ್ಸು 35 ಆಗಿದ್ದರೂ ಈಗ ಚಿರಯುವಕನಂತಿದ್ದಾರೆ. ಅದಕ್ಕೆ ಕಾರಣ ಅವರ ಫಿಟ್ನೆಸ್ ಮತ್ತು ಡಯೆಟ್ ಪ್ಲಾನ್. ಗಂಟೆಗಟ್ಟಲ್ಲೆ ಜಿಮ್ನಲ್ಲಿ ಕಳೆಯುವುದರ ಜತೆಗೆ ಆಹಾರ ಕ್ರಮವನ್ನು ಅಚ್ಚುಕಟ್ಟಾಗಿ ಅನುಕರಿಸುತ್ತಿದ್ದಾರೆ. ಮಾಂಸವನ್ನೇ ತಿನ್ನುವುದನ್ನು ಬಿಟ್ಟಿದ್ದಾರೆ. ಗಂಟೆಗಟ್ಟಲೇ ನೆಟ್ ಪ್ರಾಕ್ಟೀಸ್ ಮಾಡುತ್ತಾರೆ. ಬೇರೆ ಆಟಗಾರರು ಪಂದ್ಯಗಳಲ್ಲಿ ಪದೆಪದೇ ಇಂಜುರಿಯಾದರೆ, ವಿರಾಟ್ ಗಾಯಗೊಂಡ ಇತಿಹಾಸವೇ ಇಲ್ಲ.
ಕೊಹ್ಲಿ ಒಬ್ಬ ಬ್ಯಾಟಿಂಗ್ ಸೂಪರ್ ಸ್ಟಾರ್
ವಿರಾಟ್ಗೆ ಅಭಿಮಾನಿ ಬಳಗ ಹೆಚ್ಚಾಗಲು ಅವರ ಬ್ಯಾಟಿಂಗ್ ವೈಭವ. ವಿಶ್ವದ ಯಾವುದೇ ಪಿಚ್ನಲ್ಲಿ ಬೇಕಾದರೂ ರನ್ ಗಳಿಸುವ ಸಾಮರ್ಥ್ಯ ಅವರಿಗಿದೆ. ಬೌಲರ್ ಯಾರೇ ಇರಲಿ, ಅವರನ್ನು ದಂಡಿಸುವುದೇ ಅವರ ಕಾಯಕ. ಚೇಸಿಂಗ್ ನಡೆಸುವ ಸಂದರ್ಭದಲ್ಲಂತೂ ಅಕ್ಷರಶಃ ವಿರಾಟ ರೂಪ ತಾಳುತ್ತಾರೆ. ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ನಡೆಸುವ ಕೊಹ್ಲಿ, ಅದೆಷ್ಟೋ ಪಂದ್ಯಗಳಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ ಆಪತ್ಭಾಂದವನಂತೆ ಗೆಲುವು ತಂದುಕೊಟ್ಟಿದ್ದಾರೆ.
ಆನ್ಫೀಲ್ಡ್ನಲ್ಲಿ ಪ್ರೇಕ್ಷಕರಗೆ ಭರಪೂರ ಮನರಂಜನೆ
ಆನ್ಫೀಲ್ಡ್ನಲ್ಲಿ ವಿರಾಟ್ ಕೊಹ್ಲಿ ಒಬ್ಬ ಎಂಟರ್ಟೈನರ್ ಕೂಡ ಹೌದು. ಆರ್ಸಿಬಿ ಪಂದ್ಯ ಗೆಲ್ಲುತ್ತೋ, ಸೋಲುತ್ತೋ, ಆದರೆ ಎಂಟರ್ಟೇನ್ಮೆಂಟ್ಗೆ ಮಾತ್ರ ಬರ ಇರಲ್ಲ. ಡ್ಯಾನ್ಸ್ ಮಾಡುವುದು, ಸಹ ಆಟಗಾರರನ್ನು ಗೇಲಿ ಮಾಡುವುದು, ತಮಾಷೆ ಮಾಡುವುದು, ಆಟಗಾರರನ್ನು ಹುರಿದುಂಬಿಸುವುದು, ಎದುರಾಳಿ ಆಟಗಾರರಿಗೆ ತೀಟೆ ಮಾಡುವುದು, ಸ್ಲೆಡ್ಜಿಂಗ್ ಮಾಡುವುದು.. ಹೀಗೆ ಮೈದಾನದಲ್ಲಿ ದಶಾವತಾರ ತೋರುತ್ತಾರೆ. ಆ ಮೂಲಕ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡುತ್ತಾರೆ.
ಕೊಹ್ಲಿಯಿಂದಲೇ ಆರ್ಸಿಬಿಗೆ ಇಷ್ಟೊಂದು ಫ್ಯಾನ್ಸ್
ಆರ್ಸಿಬಿ ಕೋಟ್ಯಂತರ ಅಭಿಮಾನಿಗಳ ಹೊಂದಲು ಪ್ರಮುಖ ಕಾರಣಾನೇ ವಿರಾಟ್ ಕೊಹ್ಲಿ. ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಕೊಹ್ಲಿಗಿರೋವಷ್ಟು ಫ್ಯಾನ್ಸ್, ಯಾವ ಕ್ರಿಕೆಟರ್ಗೂ ಇಲ್ಲ. ಇದರಿಂದ ಕೊಹ್ಲಿ ಅಭಿಮಾನಿಗಳೆಲ್ಲಾ ಆರ್ಸಿಬಿಗೆ ಬೆಂಬಲ ಕೊಡುತ್ತಾರೆ. ಆರ್ಸಿಬಿ ಕರ್ನಾಟದ ತಂಡ, ಅದರಲ್ಲೂ ಬೆಂಗಳೂರನ್ನ ಪ್ರತಿನಿಧಿಸುವ ತಂಡ. ಕನ್ನಡಿಗರದ್ದು ನಿಯತ್ತು ಅಂದರೆ ನಿಯತ್ತು. ಅಂತಹ ರಾಜ್ಯದ ಫ್ರಾಂಚೈಸಿ ಪ್ರತಿನಿಧಿಸುತ್ತಿರುವ ಕೊಹ್ಲಿಯೂ ಅಷ್ಟೇ ನಿಯತ್ತಾಗಿ ತನ್ನ ಫ್ರಾಂಚೈಸಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕೊಹ್ಲಿಯನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ. ಆರ್ಸಿಬಿ ಕಪ್ ಗೆಲ್ಲದೇ ಹೋದರೂ ಕೊಹ್ಲಿಯನ್ನು ಬಿಟ್ಟುಕೊಡೋ ಮಾತೇ ಇಲ್ಲ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)