ವಿಶ್ವಕಪ್ಗೆ ಇಶಾನ್ ಕಿಶನ್ ಆಯ್ಕೆ ಮಾಡಿ ಒಂದೇ ಕಲ್ಲಿಗೆ ಎರಡಲ್ಲ, 3 ಹಕ್ಕಿ ಹೊಡೆದ ಬಿಸಿಸಿಐ!
ICC ODI World Cup 2023, Ishan Kishan: ಏಕದಿನ ವಿಶ್ವಕಪ್ ಟೂರ್ನಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡುವ ಮೂಲಕ ಬಿಸಿಸಿಐ ಒಂದೇ ಕಲ್ಲಿಗೆ ಮೂರು ಹಕ್ಕಿಗಳನ್ನು ಹೊಡೆದಿದೆ. ಅದು ಹೇಗೆ ಎಂಬುದನ್ನು ಈ ಮುಂದೆ ತಿಳಿಯೋಣ.
ಏಕದಿನ ವಿಶ್ವಕಪ್ ಟೂರ್ನಿಗೆ (ICC ODI World Cup 2023) ಭಾರತ ತನ್ನ 15 ಸದಸ್ಯರ ಬಲಿಷ್ಠ ತಂಡವನ್ನೇ ಕಟ್ಟಿದೆ. ಏಷ್ಯಾಕಪ್ಗೆ (Asia Cup 2023) ಪ್ರಕಟಿಸಿದ ತಂಡವನ್ನೇ ಕ್ರಿಕೆಟ್ ಹಬ್ಬಕ್ಕೂ ಆಯ್ಕೆ ಮಾಡಿದೆ. ತಂಡ ಆಯ್ಕೆಯಾಗಿ ಹಲವು ದಿನಗಳೇ ಕಳೆದರೂ ಅದಕ್ಕೆ ಸಂಬಂಧಿಸಿದ ಚರ್ಚೆಗಳು ಇನ್ನೂ ನಿಂತಿಲ್ಲ. ಶಿಖರ್ ಧವನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್ ಸೇರಿದಂತೆ ಹಿರಿಯ ಆಟಗಾರರಿಗೆ ಅವಕಾಶ ನೀಡಿಲ್ಲ ಎಂಬ ಚರ್ಚೆ ಒಂದೆಡೆಯಾದರೆ, ಮತ್ತೊಂದೆಡೆ ಅನಾನುಭವಿ ಇಶಾನ್ ಕಿಶನ್ ಆಯ್ಕೆಯನ್ನು ಪ್ರಶ್ನೆ ಮಾಡಲಾಗುತ್ತಿದೆ.
ಇಶಾನ್ ಕಿಶನ್ ಆಯ್ಕೆ ಚರ್ಚೆ
ಪ್ರಸ್ತುತ ಇಶಾನ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಸತತ ನಾಲ್ಕು ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅದರಲ್ಲೂ ಮೊನ್ನೆ ಪಾಕಿಸ್ತಾನದ ವಿರುದ್ಧ ಆಡಿದ ಆಟವಂತೂ ಎಲ್ಲರನ್ನೂ ಬೆರಗಾಗಿಸಿದೆ. ಮಾಜಿ ಕ್ರಿಕೆಟರ್ಸ್ ಫಿದಾ ಆಗಿದ್ದಾರೆ. ಇದರ ನಡುವೆಯೂ ಟೀಕೆಗಳು ನಿಂತಿಲ್ಲ. ಏಕದಿನ ವಿಶ್ವಕಪ್ ಟೂರ್ನಿಗೆ ಇಶಾನ್ ಅಗತ್ಯ ಇರಲಿಲ್ಲ. ಅನಾನುಭವಿ ಬದಲಿಗೆ ಅನುಭವಿ ಆಟಗಾರರಿಗೆ ಮಣೆ ಹಾಕಬೇಕಿತ್ತು. ಹಾಗೇ ಹೀಗೆ ಎಂಬ ಮಾತುಗಳು ಹೆಚ್ಚಾಗಿವೆ. ಆದರೆ ಇಶಾನ್ರನ್ನು ಆಯ್ಕೆ ಮಾಡುವ ಮೂಲಕ ಬಿಸಿಸಿಐ ಒಂದೇ ಕಲ್ಲಿಗೆ ಮೂರು ಹಕ್ಕಿಗಳನ್ನು ಹೊಡೆದಿದೆ. ಅದು ಹೇಗೆ ಎಂಬುದನ್ನು ಈ ಮುಂದೆ ತಿಳಿಯೋಣ.
ಬ್ಯಾಕಪ್ ವಿಕೆಟ್ ಕೀಪರ್ ಆಗಿ ಇಶಾನ್ ಆಯ್ಕೆ
ವಿಶ್ವಕಪ್ ಪ್ರಧಾನ ತಂಡದಲ್ಲಿ ಕೆಎಲ್ ರಾಹುಲ್, ಮೊದಲ ವಿಕೆಟ್ ಕೀಪರ್ ಆಗಿ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯಲಿದ್ದಾರೆ. ಹಾಗಾಗಿ ಅವರಿಗೆ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಇರಲಿದ್ದಾರೆ. ಇಶಾನ್ ಸದ್ಯ ಭರ್ಜರಿ ಫಾರ್ಮ್ನಲ್ಲಿದ್ದರೂ, ರಾಹುಲ್ಗೆ ಮೊದಲ ಆಯ್ಕೆಯಾಗುತ್ತಾರೆ ಎಂಬುದು ಖಚಿತ. ಇಶಾನ್ ಫಾರ್ಮ್ನಲ್ಲಿ ಇರುವುದೇ ಆಯ್ಕೆಗೆ ಕಾರಣ ಎನ್ನಲಾಗಿದೆ. ಹಾಗಾಗಿಯೇ ಸಂಜು ಸ್ಯಾಮ್ಸನ್ಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದು.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್
ವಿಕೆಟ್ ಕೀಪಿಂಗ್ ನಿಭಾಯಿಸುವುದರ ಜೊತೆಗೆ ಮಧ್ಯಮ ಕ್ರಮಾಂಕದಲ್ಲೂ ಉತ್ತಮ ಬ್ಯಾಟಿಂಗ್ ಕೌಶಲ್ಯವನ್ನು ಹೊಂದಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಅಂದರೆ, ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯವೇ ಸಾಕ್ಷಿ. ಅಗ್ರಕ್ರಮಾಂಕ ಕುಸಿದರೂ, ಒತ್ತಡ ನಿಭಾಯಿಸಿ ಆಕರ್ಷಕ ಇನ್ನಿಂಗ್ಸ್ ಕಟ್ಟಿದ್ದರು. ಒಂದು ವೇಳೆ ಮಿಡಲ್ ಆರ್ಡರ್ನಲ್ಲಿ ಶ್ರೇಯಸ್ ಅಯ್ಯರ್, ರಾಹುಲ್ ಯಾರೇ ಇಂಜುರಿಯಾದರೂ ಅವರ ಸ್ಥಾನವನ್ನು ಇಶಾನ್ ಸಮರ್ಥವಾಗಿ ತುಂಬಬಲ್ಲರು. ಮಧ್ಯಮ ಕ್ರಮಾಂಕಕ್ಕೆ ಆಧಾರವಾಗಲಿದ್ದಾರೆ ಎಂಬುದು ಟೀಮ್ ಮ್ಯಾನೇಜ್ಮೆಂಟ್ ನಂಬಿಕೆ.
ಆರಂಭಿಕ ಆಟಗಾರನಾಗಿಯೂ ಅಬ್ಬರ!
ವಾಸ್ತವವಾಗಿ ಇಶಾನ್ ಕಿಶನ್ ಆರಂಭಿಕ ಆಟಗಾರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಟೂರ್ನಿಯಲ್ಲಿ ರೋಹಿತ್ ಅಥವಾ ಶುಭ್ಮನ್ ಗಿಲ್ ಇಂಜುರಿ ಸಮಸ್ಯೆಗೆ ಸಿಲುಕಿದ್ದೇ ಆದರೆ ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಅಥವಾ ರಾಹುಲ್ರನ್ನು ಓಪನರ್ ಆಗಿ ಕಣಕ್ಕಿಳಿಸಿ ಕಿಶನ್ರನ್ನು ಮಧ್ಯಮ ಕ್ರಮಾಂಕದಲ್ಲಿ ಮುಂದುವರೆಸಿದರೂ ಅಚ್ಚರಿ ಇಲ್ಲ. ಏಕದಿನ ಕ್ರಿಕೆಟ್ನಲ್ಲಿ ಕಿಶನ್, ಆರಂಭಿಕರಾಗಿಯೂ ಅದ್ಭುತ ದಾಖಲೆ ಹೊಂದಿದ್ದಾರೆ. ಇತ್ತೀಚೆಗೆ ಮುಗಿದ ವೆಸ್ಟ್ ಇಂಡೀಸ್ ಸರಣಿಯಲ್ಲಿ ಸತತ ಮೂರು ಅರ್ಧಶತಕ ಸಿಡಿಸಿದ್ದರು. ಅಲ್ಲದೆ, ಕಳೆದ ವರ್ಷ ಬಾಂಗ್ಲಾ ವಿರುದ್ಧ ದ್ವಿ ಶತಕ ಸಿಡಿಸಿದ್ದರು.
ಈ 3 ಅಂಶಗಳ ಬಗ್ಗೆ ಚಿಂತನ-ಮಂಥನ ನಡೆಸಿಯೇ ಟೀಮ್ ಮ್ಯಾನೇಜ್ಮೆಂಟ್ ಮತ್ತು ಆಯ್ಕೆ ಸಮಿತಿ ಇಶಾನ್ ಕಿಶನ್ಗೆ ಮಣೆ ಹಾಕಿದೆ. ಸಂಜು ಸ್ಯಾಮ್ಸನ್ ಕೂಡ ಈ ರೇಸ್ನಲ್ಲಿದ್ದರು. ಆದರೆ ಅವರಿಗೆ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾದರು. ಇದೇ ಕಾರಣಕ್ಕೆ ಅವರನ್ನು ಆಯ್ಕೆಗೆ ಪರಿಗಣಿಸಲಿಲ್ಲ. ಹಾಗಂತ ಇದೇ ತಂಡವೇ ಅಂತಿಮ ಎಂದಲ್ಲ. ಒಂದು ವೇಳೆ ರಾಹುಲ್ ಅಥವಾ ಇಶಾನ್ ಇಬ್ಬರಲ್ಲಿ ಗಾಯಗೊಂಡರೆ, ಆಗ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಸಂಜುಗೆ ಕರೆ ಬಂದರೂ ಅಚ್ಚರಿ ಇಲ್ಲ. ಒಟ್ನಲ್ಲಿ ಇಶಾನ್ ಕಿಶನ್ ಆಯ್ಕೆ ಮಾಡಿದ ಬಿಸಿಸಿಐ ಒಂದೇ ಕಲ್ಲಿಗೆ 3 ಹಕ್ಕಿಗಳನ್ನು ಉರುಳಿಸಿದಂತಿದೆ.