ಆಸ್ಟ್ರೇಲಿಯಾ ಜೊತೆಗೆ ಭಾರತ ತಂಡಕ್ಕೂ ಮಣ್ಣುಮುಕ್ಕಿಸಿ ಸರಣಿ ಗೆದ್ದಿರುವ ಶ್ರೀಲಂಕಾ ಚಾಂಪಿಯನ್ಸ್ ಟ್ರೋಫಿ ಆಡುತ್ತಿಲ್ಲವೇಕೆ?
ಕನ್ನಡ ಸುದ್ದಿ  /  ಕ್ರಿಕೆಟ್  /  ಆಸ್ಟ್ರೇಲಿಯಾ ಜೊತೆಗೆ ಭಾರತ ತಂಡಕ್ಕೂ ಮಣ್ಣುಮುಕ್ಕಿಸಿ ಸರಣಿ ಗೆದ್ದಿರುವ ಶ್ರೀಲಂಕಾ ಚಾಂಪಿಯನ್ಸ್ ಟ್ರೋಫಿ ಆಡುತ್ತಿಲ್ಲವೇಕೆ?

ಆಸ್ಟ್ರೇಲಿಯಾ ಜೊತೆಗೆ ಭಾರತ ತಂಡಕ್ಕೂ ಮಣ್ಣುಮುಕ್ಕಿಸಿ ಸರಣಿ ಗೆದ್ದಿರುವ ಶ್ರೀಲಂಕಾ ಚಾಂಪಿಯನ್ಸ್ ಟ್ರೋಫಿ ಆಡುತ್ತಿಲ್ಲವೇಕೆ?

Sri Lanka: ತವರಿನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಏಕದಿನ ಸರಣಿಯನ್ನು 2-0 ಅಂತರದಿಂದ ವೈಟ್‌ವಾಶ್ ಮಾಡಿದ ಶ್ರೀಲಂಕಾ ತಂಡ, ಫೆಬ್ರವರಿ 19ರಿಂದ ಪ್ರಾರಂಭವಾಗುವ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತಿಲ್ಲ ಏಕೆ?

ಆಸ್ಟ್ರೇಲಿಯಾ ವಿರುದ್ಧ ಸೇರಿ ಸತತ 7 ಏಕದಿನ ಸರಣಿ ಗೆದ್ದಿರುವ ಶ್ರೀಲಂಕಾ ಚಾಂಪಿಯನ್ಸ್ ಟ್ರೋಫಿ ಆಡುತ್ತಿಲ್ಲವೇಕೆ?
ಆಸ್ಟ್ರೇಲಿಯಾ ವಿರುದ್ಧ ಸೇರಿ ಸತತ 7 ಏಕದಿನ ಸರಣಿ ಗೆದ್ದಿರುವ ಶ್ರೀಲಂಕಾ ಚಾಂಪಿಯನ್ಸ್ ಟ್ರೋಫಿ ಆಡುತ್ತಿಲ್ಲವೇಕೆ?

ನವದೆಹಲಿ (ಫೆ 14): ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಎರಡು ಪಂದ್ಯಗಳ ಸರಣಿಯ 2ನೇ ಏಕದಿನದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ 174 ರನ್‌ಗಳ ಗೆಲುವು ಸಾಧಿಸಿದ ಶ್ರೀಲಂಕಾ ತಂಡ ಒಡಿಐ ಕ್ರಿಕೆಟ್‌ನಲ್ಲಿ ತನ್ನ ಅಬ್ಬರ ಮುಂದುವರಿಸಿದೆ. ಮೊದಲ ಏಕದಿನ ಪಂದ್ಯದಲ್ಲಿ 49 ರನ್​ಗಳಿಂದ ಜಯಿಸಿದ್ದ ಲಂಕಾ, ಇದೀಗ ವಿಶ್ವ ಚಾಂಪಿಯನ್ನರ ವಿರುದ್ಧ 2-0 ಅಂತರದಿಂದ ಸರಣಿ ವಶಪಡಿಸಿಕೊಂಡು ದಾಖಲೆ ನಿರ್ಮಿಸಿದೆ. ತವರಿನಲ್ಲಿ ಗೆದ್ದ ಸತತ 7 ಏಕದಿನ ಸರಣಿ ಇದಾಗಿದೆ.

1996ರ ವಿಶ್ವಕಪ್ ಚಾಂಪಿಯನ್ ತಂಡವು 2024ರ ಆರಂಭದಿಂದ ಇಲ್ಲಿಯತನಕ ಆಡಿದ 23 ಏಕದಿನ ಪಂದ್ಯಗಳಲ್ಲಿ15ರಲ್ಲಿ ಗೆದ್ದು ಬೀಗಿದೆ. ಕೇವಲ 5ರಲ್ಲಿ ಸೋತಿರುವ ಶ್ರೀಲಂಕಾ, 2023ರ ವಿಶ್ವಕಪ್ ಫೈನಲಿಸ್ಟ್​ಗಳಾದ ಭಾರತ ಮತ್ತು ಆಸ್ಟ್ರೇಲಿಯಾ ಎರಡರ ವಿರುದ್ಧವೂ 2-0 ಸರಣಿ ಗೆಲುವು ಕಂಡಿರುವುದು ವಿಶೇಷ. 2024ರಿಂದ ಶ್ರೀಲಂಕಾ ಹೊರತುಪಡಿಸಿ ಬೇರೆ ಯಾವುದೇ ತಂಡವು 10ಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆದ್ದಿಲ್ಲ. ಇತ್ತೀಚೆಗೆ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ತಂಡಗಳಿಗೆ ಮಣ್ಣುಮುಕ್ಕಿಸಿದೆ ಲಂಕಾ. ಹೀಗಿದ್ದರೂ ದ್ವೀಪ ರಾಷ್ಟ್ರ ಚಾಂಪಿಯನ್ಸ್ ಟ್ರೋಫಿ ಆಡುತ್ತಿಲ್ಲ ಏಕೆ?

ಶ್ರೀಲಂಕಾ ಚಾಂಪಿಯನ್​ ಟ್ರೋಫಿಗೆ ಅರ್ಹತೆ ಪಡೆದಿಲ್ಲ ಏಕೆ?

ಚರಿತ್ ಅಸಲಂಕಾ ನಾಯಕತ್ವ ವಹಿಸಿಕೊಂಡ ಬಳಿಕ ಇನ್ನಷ್ಟು ಆತ್ಮ ವಿಶ್ವಾಸದಿಂದ ಪ್ರದರ್ಶನ ನೀಡುತ್ತಿರುವ ಶ್ರೀಲಂಕಾ, ಏಕದಿನ ಕ್ರಿಕೆಟ್​ನಲ್ಲಿ ತನ್ನ ಪಾರಮ್ಯ ಮುಂದುವರೆಸಿದೆ. ಸತತ 7 ಸರಣಿಗಳನ್ನು ಗೆದ್ದ ಲಂಕನ್ನರು, ಫೆಬ್ರವರಿ 19ರಿಂದ ಶುರುವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಏಕೆ ಅರ್ಹತೆ ಪಡೆದಿಲ್ಲ ಎನ್ನುವುದು ಹಲವರ ಪ್ರಶ್ನೆ. ಆದರೆ ಚಾಂಪಿಯನ್ಸ್ ಟ್ರೋಫಿಗೆ ತಂಡಗಳ ಅರ್ಹತಾ ಅವಧಿ 2023 ರಲ್ಲೇ ಮುಗಿದಿತ್ತು. ಅದು ಕೂಡ ಏಕದಿನ ವಿಶ್ವಕಪ್​​ ಟೂರ್ನಿಯಲ್ಲಿ. ಈ ಟೂರ್ನಿಗೆ ಒಟ್ಟಾರೆ ಎಂಟು ತಂಡಗಳು ಮಾತ್ರ ಕ್ವಾಲಿಫೈ ಆಗಿವೆ.

2023ರ ವಿಶ್ವಕಪ್ ಅಂಕಪಟ್ಟಿಯ ಅಗ್ರ-8 ತಂಡಗಳು ಅರ್ಹತೆ

ಭಾರತದಲ್ಲಿ ಜರುಗಿದ 2023ರ ಏಕದಿನ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ 8ರಲ್ಲಿ ಕಾಣಿಸಿಕೊಂಡ ತಂಡಗಳು ಐಸಿಸಿ ಚಾಂಪಿಯನ್ಸ್​ಗೆ ಅರ್ಹತೆ ಪಡೆದಿದೆ. ಆದರೆ ಶ್ರೀಲಂಕಾ ಅಗ್ರ-8ರಲ್ಲಿ ಸ್ಥಾನ ಪಡೆದಿರಲಿಲ್ಲ. ಅಂದು ಪಾಯಿಂಟ್ಸ್ ಟೇಬಲ್​​ನಲ್ಲಿ 9ನೇ ಸ್ಥಾನ ಪಡೆದಿದ್ದ ಲಂಕಾ, ಕೆಟ್ಟ ರನ್​ರೇಟ್​ನೊಂದಿಗೆ ಅರ್ಹತಾ ಸುತ್ತಿನ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡಿತ್ತು. 8ನೇ, 9ನೇ ಮತ್ತು 10ನೇ ಸ್ಥಾನದಲ್ಲಿದ್ದ ತಂಡಗಳು ಒಂದೇ ಅಂಕ (4) ಪಡೆದಿದ್ದವು. 9, 10ನೇ ಸ್ಥಾನದಲ್ಲಿದ್ದ ತಂಡಗಳಿಗಿಂತ 8ನೇ ಸ್ಥಾನಿ ಬಾಂಗ್ಲಾ ಉತ್ತಮ ರನ್ ರೇಟ್ ಹೊಂದಿತ್ತು.

ಬಾಂಗ್ಲಾದೇಶ -1.087 ನೆಟ್​ ರನ್​ರೇಟ್​ನೊಂದಿಗೆ ಚಾಂಪಿಯನ್ಸ್ ಟ್ರೋಫಿಗೆ ಕೊನೆಯ ತಂಡವಾಗಿ ಅರ್ಹತೆ ಪಡೆದರೆ, ಶ್ರೀಲಂಕಾ -1.419 ನೆಟ್ ರನ್ ರೇಟ್​ನೊಂದಿಗೆ 9ನೇ ಸ್ಥಾನದಲ್ಲಿ ಟೂರ್ನಿ ಮುಗಿಸಿತ್ತು. ನೆದರ್ಲ್ಯಾಂಡ್ಸ್ -1.825 ನೆಟ್​ ರನ್​ರೇಟ್​ನೊಂದಿಗೆ 10ನೇ ಸ್ಥಾನ ಪಡೆದು ಅಭಿಯಾನ ಮುಗಿಸಿತ್ತು. 2004ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ವೆಸ್ಟ್ ಇಂಡೀಸ್, 2023ರ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಹೀಗಾಗಿ, 2025 ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ.

ಚಾಂಪಿಯನ್ಸ್ ಟ್ರೋಫಿ ಆಡುವ ತಂಡಗಳು

ಆಸ್ಟ್ರೇಲಿಯಾ, ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ, ಅಫ್ಘಾನಿಸ್ತಾನ, ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಎಂಟು ತಂಡಗಳಾಗಿವೆ. ಫೆಬ್ರವರಿ 19ರಿಂದ 9ರ ತನಕ ಪಾಕಿಸ್ತಾನ ಮತ್ತು ಯುಇಎನಲ್ಲಿ ಪಂದ್ಯಗಳು ನಡೆಯಲಿವೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner