ಇಂಗ್ಲೆಂಡ್ ಟೆಸ್ಟ್​ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡೋದು ಅಸಾಧ್ಯ? ಅದಕ್ಕಿರುವುದು ಒಂದೇ ಮಾರ್ಗ, ಏನದು?
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ಟೆಸ್ಟ್​ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡೋದು ಅಸಾಧ್ಯ? ಅದಕ್ಕಿರುವುದು ಒಂದೇ ಮಾರ್ಗ, ಏನದು?

ಇಂಗ್ಲೆಂಡ್ ಟೆಸ್ಟ್​ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡೋದು ಅಸಾಧ್ಯ? ಅದಕ್ಕಿರುವುದು ಒಂದೇ ಮಾರ್ಗ, ಏನದು?

Virat Kohli: ಜೂನ್ 20ರಿಂದ ಆರಂಭವಾಗುವ ಇಂಗ್ಲೆಂಡ್ ಟೆಸ್ಟ್​ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡುತ್ತಾರೆ ಎನ್ನುವುದು ಅಸಾಧ್ಯ? ಆದರೆ ಕೌಂಟಿ ಆಡಲೇಬೇಕು ಎಂದುಕೊಂಡರೆ ಒಂದೇ ಒಂದು ಮಾರ್ಗ ಅವರ ಮುಂದಿದೆ? ಏನದು? ಇಲ್ಲಿದೆ ವಿವರ.

ಇಂಗ್ಲೆಂಡ್ ಟೆಸ್ಟ್​ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡೋದು ಅಸಾಧ್ಯ? ಅದಕ್ಕಿರುವುದು ಒಂದೇ ಮಾರ್ಗ
ಇಂಗ್ಲೆಂಡ್ ಟೆಸ್ಟ್​ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡೋದು ಅಸಾಧ್ಯ? ಅದಕ್ಕಿರುವುದು ಒಂದೇ ಮಾರ್ಗ (AP)

ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು (Virat Kohli) 2025ರ ಇಂಡಿಯನ್ ಪ್ರೀಮಿಯರ್ ಲೀಗ್​ ನಂತರ ಮತ್ತು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಕೌಂಟಿ ಕ್ರಿಕೆಟ್ ಆಡಲಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಹಿನ್ನೆಲೆ ಆಂಗ್ಲರ ಟೆಸ್ಟ್ ಸರಣಿಯಲ್ಲಿ ಲಯಕ್ಕೆ ಮರಳಲು ಹಾಗೂ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಲುವಾಗಿ ಕೌಂಟಿ ಕ್ರಿಕೆಟ್​​ ಆಡಲಿದ್ದಾರೆಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ವಾಸ್ತವ ಏನೆಂದರೆ ಕೊಹ್ಲಿ, ಇಂಗ್ಲೆಂಡಿನ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ ಇದೆ.

ಬಾರ್ಡರ್​-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ವಿರಾಟ್, ಒಟ್ಟಾರೆ 9 ಇನ್ನಿಂಗ್ಸ್​ಗಳಲ್ಲಿ 23.75ರ ಸರಾಸರಿಯಲ್ಲಿ 190 ರನ್‌ ಗಳಿಸಿದ್ದರು. ಈ ಪ್ರದರ್ಶನ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಹೀಗಾಗಿ, ಇಂಗ್ಲೆಂಡ್​ ಸರಣಿಗೂ ಮುನ್ನ ಅವರದ್ದೇ ನೆಲದಲ್ಲಿ ಕೌಂಟಿ ಆಡುವ ಮೂಲಕ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಮತ್ತು ಟೆಸ್ಟ್​​ನಲ್ಲಿ ಲಯಕ್ಕೆ ಮರಳಲು ಕೊಹ್ಲಿ ಕೌಂಟಿ ಆಡುತ್ತಾರೆ. ಇದು ಮಹತ್ವದ ಸಿರೀಸ್​ಗೂ ಮುನ್ನ ಭರ್ಜರಿ ತಾಲೀಮು ಆಗಲಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಇದು ಅಸಾಧ್ಯ.

ಆಸ್ಟ್ರೇಲಿಯಾ ಪ್ರವಾಸದ ನಂತರ ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಐಪಿಎಲ್​​ನಲ್ಲಿ ಕಣಕ್ಕಿಳಿಯಲಿದ್ದಾರೆ. ಮುಂದಿನ ಟೆಸ್ಟ್ ಸರಣಿಗೂ ಮುನ್ನ ಸಂಪೂರ್ಣ ವೈಟ್ ಬಾಲ್ ಕ್ರಿಕೆಟ್​​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2025ರ ಐಪಿಎಲ್‌ ವೇಳಾಪಟ್ಟಿ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ ಟೂರ್ನಿಯು ಮಾರ್ಚ್ ಮೂರನೇ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಆದರೆ, ಫೈನಲ್ ಪಂದ್ಯ ಮೇ ಕೊನೆಯ ವಾರದಲ್ಲಿ ನಡೆಸಲಾಗುತ್ತದೆ. ಅಂದಾಜಿನ ಪ್ರಕಾರ, ಈ ಬಾರಿ ಮೇ 25 ರಂದು ಫೈನಲ್ ನಡೆಯಲಿದೆ ಎಂದು ಹೇಳಲಾಗಿದೆ.

ಇದೆಲ್ಲಾ ಆದ ಬಳಿಕ ಇಂಗ್ಲೆಂಡ್ vs ಭಾರತ ನಡುವಿನ ಟೆಸ್ಟ್​ ಸರಣಿಯು ಜೂನ್ 20 ರಂದು ಹೆಡಿಂಗ್ಲಿಯಲ್ಲಿ ಪ್ರಾರಂಭವಾಗಲಿದೆ. ನಂತರ ಎಡ್ಜ್​​ಬಾಸ್ಟನ್, ಲಾರ್ಡ್ಸ್ ಮತ್ತು ಓಲ್ಡ್ ಟ್ರಾಫರ್ಡ್‌ಗೆ ತೆರಳಲಿದೆ. ಅಂತಿಮ ಟೆಸ್ಟ್ ಜುಲೈ 31 ರಿಂದ ಲಂಡನ್‌ನ ಐಕಾನಿಕ್ ಓವಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಐಪಿಎಲ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಡುವೆ ಸುಮಾರು ಒಂದು ತಿಂಗಳ ಅಂತರವಿದ್ದರೂ, ಈ ಅವಧಿಯಲ್ಲಿ ಯಾವುದೇ ರೆಡ್ ಬಾಲ್ ಪಂದ್ಯವನ್ನು ನಿಗದಿಪಡಿಸದ ಕಾರಣ ಕೊಹ್ಲಿ ಕೌಂಟಿ ಕ್ರಿಕೆಟ್​ ಆಡಲು ಸಾಧ್ಯವಾಗುವುದಿಲ್ಲ. ಇಂಡೋ-ಆಂಗ್ಲನ್ನರ ಟೆಸ್ಟ್​ ಸರಣಿ ಆರಂಭವಾದ ನಂತರವೇ ಕೌಂಟಿಯ 9ನೇ ಸುತ್ತಿನ ಪಂದ್ಯಗಳು ಆರಂಭಗೊಳ್ಳಲಿವೆ.

ಏಪ್ರಿಲ್ 4ರಿಂದಲೇ ಕೌಂಟಿ ಆರಂಭ

2025ರ ಕೌಂಟಿ ಚಾಂಪಿಯನ್‌ಶಿಪ್ ಏಪ್ರಿಲ್ 4ರಿಂದ ಆರಂಭವಾಗಲಿದೆ. ಇದು ಮೊದಲ ಸುತ್ತು. ಈ ನಡುವೆ ಐಪಿಎಲ್ ಕೂಡ ನಡೆಯುತ್ತಿರುತ್ತದೆ. 8ನೇ ಸುತ್ತಿನ ಪಂದ್ಯಗಳು ಮೇ 23-26 ರಂದು ನಡೆಯಲಿವೆ. ಇದರ ನಂತರ 9ನೇ ಸುತ್ತಿನ ಪಂದ್ಯಗಳು ಜೂನ್ 22ರಿಂದ ಆರಂಭವಾಗಲಿವೆ. ಈ ನಡುವೆ ಇಂಗ್ಲೆಂಡ್​ನ ಕೌಂಟಿ ತಂಡಗಳು ಮೇ 29ರಿಂದ ಶುರುವಾಗುವ ಟಿ20 ಬ್ಲಾಸ್ಟ್​ ಟೂರ್ನಿಯಲ್ಲಿ ಕಣಕ್ಕಿಳಿಯಲಿವೆ. ಒಂದು ವೇಳೆ ಕೌಂಟಿ ಆಡಬೇಕು ಎಂದರೆ ಐಪಿಎಲ್​​ ತ್ಯಜಿಸುವುದು ಕೊಹ್ಲಿ ಮುಂದಿರುವ ಏಕೈಕ ಮಾರ್ಗ. ಭಾರತದ ಅಗ್ರಮಾನ್ಯ ಆಟಗಾರನೊಬ್ಬ ಇಂತಹ ಕ್ರಮ ಕೈಗೊಂಡರೆ ಅಭೂತಪೂರ್ವ ಎಂದರೂ ತಪ್ಪಾಗಲ್ಲ.

ಟೆಸ್ಟ್​​ನಲ 2020ರಿಂದ ವಿರಾಟ್ ಕೊಹ್ಲಿ ಪ್ರದರ್ಶನ

ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಕೊಹ್ಲಿ, ರೆಡ್-ಬಾಲ್ ಕ್ರಿಕೆಟ್‌ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ. 2020ರ ಆರಂಭದಿಂದ ಇಲ್ಲಿಯವರೆಗೂ 39 ಪಂದ್ಯಗಳಲ್ಲಿ (69 ಇನ್ನಿಂಗ್ಸ್) ಕೇವಲ 3 ಶತಕಗಳೊಂದಿಗೆ ಕೇವಲ 2028 ರನ್​​ ಸಿಡಿಸಿದ್ದಾರೆ. 2024-25ರ ಋತುವಿನಲ್ಲಿ ಕೊಹ್ಲಿ 10 ಪಂದ್ಯಗಳಲ್ಲಿ (19 ಇನ್ನಿಂಗ್ಸ್) 22.87 ಸರಾಸರಿಯಲ್ಲಿ ಕೇವಲ 382 ರನ್ ಗಳಿಸಿದ್ದಾರೆ. ಈ ಹಿಂದೆಯೂ ಕೌಂಟಿ ಆಡಲು ಕೊಹ್ಲಿ ಸರ್ರೆ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಕುತ್ತಿಗೆ ಗಾಯದಿಂದ ಅವರು ಕಣಕ್ಕಿಳಿಯಲು ಸಾಧ್ಯವಾಗಿರಲಿಲ್ಲ. ಕೊಹ್ಲಿ ಮತ್ತೊಮ್ಮೆ ಕೌಂಟಿಯತ್ತ ಕಾಲಿಡುತ್ತಾರಾ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ.

Whats_app_banner