ಸ್ನಿಕೋದಲ್ಲಿ ಸ್ಪೈಕ್ ಬರಲಿಲ್ಲ ಏಕೆ? ಯಶಸ್ವಿ ಜೈಸ್ವಾಲ್ ವಿವಾದಾತ್ಮಕ ಔಟ್‌ಗೆ ಇಲ್ಲಿದೆ ಅಸಲಿ ಕಾರಣ
Yashasvi Jaiswal: ಬಿಬಿಜಿ ಸ್ಪೋರ್ಟ್ಸ್ ಕಂಪನಿಯಲ್ಲಿ ಸ್ನಿಕೋ ನಿರ್ವಹಿಸುವ ವಾರೆನ್ ಬ್ರೆನ್ನನ್ ಅವರು ಯಶಸ್ವಿ ಜೈಸ್ವಾಲ್ ಅವರ ವಿವಾದಾತ್ಮಕ ಔಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸ್ನಿಕೋದಲ್ಲಿ ಸ್ಪೈಕ್ ಏಕೆ ಬರಲಿಲ್ಲ ಎಂದು ವಿವರಿಸಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟ ಯಾವುದೇ ಬ್ಲಾಕ್ಬಸ್ಟರ್ ಸಿನಿಮಾದ ಕ್ಲೈಮ್ಯಾಕ್ಸ್ಗಿಂತ ಕಡಿಮೆ ಇರಲಿಲ್ಲ. ಆಟದ ಹರಿವು ದಿನವಿಡೀ ಕುತೂಹಲ ಹಿಡಿದಿಟ್ಟುಕೊಳ್ಳುವಂತೆ ಮಾಡಿತು. ವಿಕೆಟ್ ಬಿದ್ದಾಗ ಸಂಭ್ರಮ, ವಿಕೆಟ್ ರಕ್ಷಿಸಲು ಬ್ಯಾಟರ್ಗಳು ಹಾಕಿದ ಶ್ರಮ, ಪ್ರತಿ ಬೌಂಡರಿ-ಸಿಕ್ಸರ್, ಪ್ರತಿ ರನ್, ಪ್ರತಿ ಎಸೆತವೂ ಮೈದಾನದಲ್ಲಿದ್ದ ಪ್ರೇಕ್ಷಕರ ಎದೆಬಡಿತ ಹೆಚ್ಚಿಸುವಂತೆ ಮಾಡಿತು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ತಮ್ಮ ಹಾದಿಯನ್ನು ಸುಗಮಗೊಳಿಸಿಕೊಳ್ಳಲು ನಡೆದ ಈ ಕದನದಲ್ಲಿ ಆತಿಥೇಯ ಆಸ್ಟ್ರೇಲಿಯಾವೇ ಮೇಲುಗೈ ಸಾಧಿಸಿತು. ಭಾರತ ತಂಡದ ವಿರುದ್ಧ 184 ರನ್ಗಳ ಭರ್ಜರಿ ಗೆಲುವಿನೊಂದಿಗೆ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿತು. ಆದರೆ ಇದೆಲ್ಲದರ ನಡುವೆ ಎದ್ದಿರುವ ವಿವಾದವೊಂದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಅದುವೇ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಔಟ್.
ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಅಂತಿಮ ಹಾಗೂ 5ನೇ ದಿನದಂದು ಟೀಮ್ ಇಂಡಿಯಾ ಪಡೆದಿದ್ದು 340 ರನ್ಗಳ ಬೃಹತ್ ಗುರಿ. ಆದರೆ ಭಾರತೀಯ ಬ್ಯಾಟರ್ಗಳು ಮತ್ತೊಮ್ಮೆ ತಮ್ಮ ವೈಫಲ್ಯ ಮುಂದುವರೆಸಿದರು. ಅನುಭವಿ ಬ್ಯಾಟರ್ಗಳ ದಂಡೇ ಇದ್ದರೂ ಆಸೀಸ್ ಬೌಲರ್ಗಳ ಎದುರು ಶರಣಾಗದೆ ಬೇರೆ ಆಯ್ಕೆ ಇಲ್ಲವೇನೋ ಎನ್ನುವಂತೆ ಪ್ರದರ್ಶನ ನೀಡಿದರು. ವಿರಾಟ್ ಕೊಹ್ಲಿ (5), ರೋಹಿತ್ ಶರ್ಮಾ (9), ಕೆಎಲ್ ರಾಹುಲ್ (0), ರಿಷಭ್ ಪಂತ್ (30)… ಹೀಗೆ ಒಬ್ಬರ ಹಿಂದೆ ಒಬ್ಬರು ಔಟಾಗಿ ಪೆವಿಲಿಯನ್ ಸೇರಿದರು. ಇದರ ನಡುವೆಯೂ ಯಶಸ್ವಿ ಜೈಸ್ವಾಲ್ ನಡೆಸಿದ ಏಕಾಂಗಿ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಎರಡನೇ ಇನ್ನಿಂಗ್ಸ್ನಲ್ಲೂ ತಮ್ಮ ಸ್ಕೋರ್ ಅನ್ನು 50ರ ಗಡಿ ದಾಟಿಸಿದರು. ತಂಡವನ್ನು ರಕ್ಷಿಸುವುದರ ಜತೆಗೆ ಶತಕದತ್ತ ದಾಪುಗಾಲಿಡುತ್ತಿದ್ದ ಜೈಸ್ವಾಲ್ 84 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು.
ಆದರೆ ಈ ಔಟ್, ವಿವಾದದ ಬೆಂಕಿಯನ್ನೇ ಹೊತ್ತಿ ಉರಿಸಿತು. ಕ್ರಿಕೆಟ್ ವಲಯದಲ್ಲಿ ಹೊಸ ಪರ-ವಿರೋಧಗಳ ಚರ್ಚೆಗೆ ನಾಂದಿ ಹಾಕಿಕೊಟ್ಟಿತು. ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತು. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಎಸೆದ 71ನೇ ಓವರ್ನ 5ನೇ ಎಸೆತವನ್ನು, ಜೈಸ್ವಾಲ್ ಫುಲ್ ಶಾಟ್ ಮಾಡಲು ಯತ್ನಿಸಿದರು. ಆದರೆ ಬ್ಯಾಟ್ ತಪ್ಪಿಸಿ ಹೋದ ಚೆಂಡು ನೇರವಾಗಿ ವಿಕೆಟ್ ಕೀಪರ್ ಕೈ ಸೇರಿತು. ತಕ್ಷಣವೇ ವಿಕೆಟ್ ಕೀಪರ್ ಸೇರಿದಂತೆ ಆಸೀಸ್ ಆಟಗಾರರು ಔಟ್ಗಾಗಿ ಅಪೀಲ್ ಮಾಡಿದರು. ಆದರೆ ಆನ್ಫೀಲ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ಕೊಟ್ಟರು. ಬಳಿಕ ಈ ತೀರ್ಪಿನ ವಿರುದ್ಧ ಪ್ಯಾಟ್ ಕಮಿನ್ಸ್ ಮೇಲ್ಮನವಿ ಸಲ್ಲಿಸಿದರು. ಬಳಿಕ 3ನೇ ಅಂಪೈರ್ ಅಲ್ಟ್ರಾ ಎಡ್ಜ್ ಅನ್ನು ಹಲವು ಬಾರಿ ಪರಿಶೀಲನೆ ನಡೆಸಿದರು. ಎಲ್ಲಾ ಕೋನಗಳಲ್ಲೂ ಪರಿಶೀಲಿಸಿದರು. ಆದರೆ ಸ್ನೀಕೋ ಮೀಟರ್ನಲ್ಲಿ ಚೆಂಡು ಬ್ಯಾಟ್ಗೆ ಅಥವಾ ಗ್ಲೌಸ್ಗೆ ತಾಗದೇ ಇರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಚೆಂಡು ವಿಕೆಟ್ ಕೀಪರ್ ಕೈಸೇರುವುದಕ್ಕೂ ಮುನ್ನ ದಿಕ್ಕು ಬದಲಿಸಿದ ಕಾರಣ, ತಾಗಿರಬಹುದು ಎಂದು ಅಂದಾಜಿಸಿ 3ನೇ ಅಂಪೈರ್ ಔಟ್ ಎಂದು ಕೊಟ್ಟರು. ಇದು ವಿವಾದಕ್ಕೆ ಕಾರಣವಾಗಿದೆ.
ವಿವಾದಕ್ಕೆ ತೆರೆ ಎಳೆದ ಸ್ನಿಕೋ ನಿರ್ವಹಣೆಗಾರ
ಮೂರನೇ ಅಂಪೈರ್ ಆಗಿದ್ದ ಬಾಂಗ್ಲಾದೇಶದ ಶರ್ಫುದ್ದೌಲಾ ಅವರು ರಿಪ್ಲೇಯನ್ನು ಎಲ್ಲಾ ಕೋನಗಳಿಂದ ನೋಡಿದರು. ಸ್ನಿಕೋದಲ್ಲಿ ಯಾವುದೇ ಸ್ಪೈಕ್ ಕಾಣಲಿಲ್ಲ. ಆದರೂ ಹೇಗೆ ಔಟ್ ಕೊಟ್ಟರು ಎಂದು ಕ್ರಿಕೆಟ್ ಸರ್ಕಲ್ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಯಶಸ್ವಿ ಜೈಸ್ವಾಲ್ ಸಹ ಆನ್ಫೀಲ್ಡ್ ಅಂಪೈರ್ಸ್ ಜೊತೆಗೆ ಇದನ್ನೇ ವಾದ ಮಾಡಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ವಿವಾದ ಭುಗಿಲೆದ್ದಿರುವ ಈ ಹೊತ್ತಿನಲ್ಲಿ ಬಿಬಿಜಿ ಸ್ಪೋರ್ಟ್ಸ್ ಕಂಪನಿಯಲ್ಲಿ ಸ್ನಿಕೋವನ್ನು ನಿರ್ವಹಿಸುವ ವಾರೆನ್ ಬ್ರೆನ್ನನ್ ಅವರು ಈ ಸ್ನಿಕೋದಲ್ಲಿ ಸ್ಪೈಕ್ ಏಕೆ ಬರಲಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಸ್ನಿಕೋದಲ್ಲಿ ಸ್ಪೈಕ್ ಏಕೆ ಬರಲಿಲ್ಲ?
‘ಜೈಸ್ವಾಲ್ ಅವರು ಎದುರಿಸಿದ ಶಾಟ್ ಯಾವುದೇ ಶಬ್ದವಿಲ್ಲದ ಗ್ಲಾನ್ಸ್-ಶಾಟ್‌ಗಳಲ್ಲಿ ಒಂದಾಗಿತ್ತು. ಹೀಗಾಗಿ, ಸ್ನಿಕೋ ಯಾವುದೇ ಶಬ್ದವನ್ನು ತೋರಿಸಲು ಸಾಧ್ಯವಾಗಿಲ್ಲ’ ಎಂದು ಬ್ರೆನ್ನನ್ ಅವರು ಕೋಡ್ ಸ್ಪೋರ್ಟ್ಸ್ಗೆ ತಿಳಿಸಿದ್ದಾರೆ. ‘ನಾನು ಆಡಿಯೋ ನಿರ್ದೇಶಕರೊಂದಿಗೆ ಪರಿಶೀಲಿಸಿದೆ. ಅವರು ಯಾವುದೇ ಶಬ್ದ ಇರಲಿಲ್ಲ ಎಂದು ಹೇಳಿದರು. ಬಹುಶಃ ದೃಶ್ಯ ಸಾಕ್ಷ್ಯ ಸತ್ಯವಾಗಿದ್ದರಿಂದ ಔಟ್ ನೀಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಇವರ ಬೆನ್ನಲ್ಲೇ ಮಾಜಿ ಟೆಸ್ಟ್ ಅಂಪೈರ್ ಸೈಮನ್ ಟಫೆಲ್ ಕೂಡ ಜೈಸ್ವಾಲ್ ಅವರ ಔಟ್ ಬಗ್ಗೆ 3ನೇ ಅಂಪೈರ್ ನಿರ್ಧಾರವನ್ನು ಬೆಂಬಲಿಸಿದ್ದಾರೆ. “3ನೇ ಅಂಪೈರ್ ಕೊನೆಯಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡರು” ಎಂದು ಅವರು ಚಾನೆಲ್ 7ಗೆ ತಿಳಿಸಿದ್ದಾರೆ. ಆಡಿಯೋ ಪುರಾವೆಗಳು ಇಲ್ಲದೇ ಇರಬಹುದು. ಆದರೆ ಚೆಂಡಿನ ಚಲನೆಗೆ ಅನುಗುಣವಾಗಿ ನಿರ್ಧಾರ ಕೈಗೊಂಡಿದ್ದಾರೆ. ನನ್ನ ಪ್ರಕಾರ ಇದು ಸರಿಯಾದ ನಿರ್ಧಾರ ಎಂದು ಹೇಳಿದ್ದಾರೆ. ಆದರೆ ಯಾರು ಏನೇ ಹೇಳಿದರೂ ಪರ-ವಿರೋಧ ಚರ್ಚೆಗಳು ಮಾತ್ರ ನಿಂತಿಲ್ಲ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope