ಇಶಾನ್ ಕಿಶನ್ ಮಾಡಿದ್ರು ಮತ್ತೊಂದು ದೊಡ್ಡ ತಪ್ಪು; ನಿಯಮ ಉಲ್ಲಂಘಿಸಿದ ವಿಕೆಟ್ ಕೀಪರ್ಗೆ ಭಾರಿ ದಂಡ ಸಾಧ್ಯತೆ!
Ishan Kishan : ತಪ್ಪಿನ ಮೇಲೆ ತಪ್ಪು ಮಾಡುತ್ತಿರುವ ವಿಕೆಟ್ ಕೀಪರ್ ಇಶಾನ್ ಕಿಶನ್ ಈಗ ಮತ್ತೊಂದು ತಪ್ಪು ಮಾಡುವ ಬಿಸಿಸಿಐ ಕೆಂಗಣ್ಣಿಗೆ ಮತ್ತೊಮ್ಮೆ ಗುರಿಯಾಗಿದ್ದಾರೆ.
ಭಾರತ ತಂಡದ ಯುವ ಆಟಗಾರ ಇಶಾನ್ ಕಿಶನ್ ಹೆಸರು, ಕ್ರಿಕೆಟ್ ಲೋಕದ ಅತಿ ದೊಡ್ಡ ಚರ್ಚಾ ವಿಷಯದ ವಸ್ತು ಆಗಿದೆ. ಸೋಷಿಯಲ್ ಮೀಡಿಯಾ, ಸಾರ್ವಜನಿಕವಾಗಿ, ಮಾಜಿ ಕ್ರಿಕೆಟರ್ಸ್, ಕ್ರಿಕೆಟ್ ಪಂಡಿತರ ಬಾಯಲ್ಲಿ ಎಲ್ಲೆಲ್ಲೂ ಕಿಶನ್ ಹೆಸರೇ ಪ್ರತಿಧ್ವನಿಸುತ್ತಿದೆ. ಈಗಷ್ಟೇ ಕ್ರಿಕೆಟ್ ಲೋಕದಲ್ಲಿ ಬೆಳೆಯುತ್ತಿರುವ ಆಟಗಾರ ಅಶಿಸ್ತಿಗೆ ಗುರಿಯಾಗಿದ್ದಾರೆ. ತಪ್ಪಿನ ಮೇಲೆ ತಪ್ಪು ಮಾಡುತ್ತಿರುವ ಇಶಾನ್ ಕಿಶನ್ ಈಗ ಮತ್ತೊಂದು ತಪ್ಪು ಮಾಡುವ ಬಿಸಿಸಿಐ ಕೆಂಗಣ್ಣಿಗೆ ಮತ್ತೊಮ್ಮೆ ಗುರಿಯಾಗಿದ್ದಾರೆ.
ಸೌತ್ ಆಫ್ರಿಕಾ ಟೆಸ್ಟ್ ಸರಣಿಗೂ ಮುನ್ನ ಮಾನಸಿಕ ಆಯಾಸೆವೆಂದು ಹೇಳಿ ತಂಡದಿಂದ ಹೊರಬಂದ ಕಿಶನ್, ಈವರೆಗೂ ಭಾರತ ತಂಡದಲ್ಲಿ ಅವಕಾಶ ಪಡೆಯಲು ಸಾಧ್ಯವಾಗಿಲ್ಲ. ಬಿಸಿಸಿಐ, ಸೆಲೆಕ್ಟರ್ಸ್ ಮತ್ತು ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಆದೇಶವನ್ನು ನಿರ್ಲಕ್ಷಿಸಿದ ಯಂಗ್ ಬ್ಯಾಟರ್, ಬಿಸಿಸಿಐ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಇದೀಗ ಮತ್ತೊಂದು ತಪ್ಪಿನ ಮೂಲಕ ಬಿಸಿಸಿಐ ಕೋಪವನ್ನು ಮತ್ತಷ್ಟು ಏರಿಸಿದ್ದಾರೆ.
2023ರ ಡಿಸೆಂಬರ್ ಬಳಿಕ ಭಾರತ ತಂಡದಿಂದ ಹೊರಗುಳಿದಿರುವ ವಿಕೆಟ್ ಕೀಪರ್, ಇತ್ತೀಚೆಗೆ ರಣಜಿ ಟ್ರೋಫಿ ಪಂದ್ಯಗಳನ್ನು ಆಡಲಿಲ್ಲ. ಭಾರತ ತಂಡಕ್ಕೆ ಮರಳಬೇಕೆಂದರೆ ರಣಜಿ ಟೂರ್ನಿ ಆಡುವುದು ಕಡ್ಡಾಯ ಎಂದು ಬಿಸಿಸಿಐ ಸೂಚಿಸಿತ್ತು. ಆದರೆ ಐಪಿಎಲ್ಗಾಗಿ ರಣಜಿ ಆಡದೆ ಹಿಂದೆ ಸರಿದ ಇಶಾನ್ಗೆ ಗುತ್ತಿಗೆ ಪಟ್ಟಿಯಿಂದ ಕಿತ್ತಾಕಿ ಶಿಕ್ಷೆ ನೀಡಿತು. ಆದರೆ ಮುಂಬೈನಲ್ಲಿ ಜರುಗುತ್ತಿರುವ ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಕಣಕ್ಕಿಳಿದು ಇಶಾನ್ ತಪ್ಪೆಸೆಗಿದ್ದಾರೆ.
ಇಶಾನ್ ಮಾಡಿದ ತಪ್ಪೇನು?
ಭಾರತ ತಂಡಕ್ಕೆ ಕಂಬ್ಯಾಕ್ ಮಾಡುವ ಅವರ ಹಾದಿ ಕಠಿಣವಾಗಿದೆ. ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ರಿಲಯನ್ಸ್ 1 ತಂಡದ ಪರ ಆಡುತ್ತಿರುವ ಇಶಾನ್, ಪ್ರಥಮ ಪಂದ್ಯದಲ್ಲಿ ಬಿಸಿಸಿಐ ನಿಮಯಗಳನ್ನು ಉಲ್ಲಂಘಿಸಿದ್ದಾರೆ. ಈ ವೇಳೆ ಆತನ ಬ್ಯಾಟಿಂಗ್‌ಗಿಂತ ಹೆಲ್ಮೆಟ್ ಎಲ್ಲರ ಗಮನ ಸೆಳೆದಿದ್ದು ವಿಶೇಷ. ಈ ವಿಕೆಟ್ ಕೀಪರ್ ಹೆಲ್ಮೆಟ್ ಮೇಲೆ ಬಿಸಿಸಿಐ ಲೋಗೋ ಇರುವುದು ಕಂಡು ಬಂದಿದೆ. ಇದರೊಂದಿಗೆ ದೊಡ್ಡ ತಪ್ಪೊಂದನ್ನು ಎಸೆಗಿದ್ದಾರೆ.
ಆಟಗಾರರು ದೇಶೀಯ ಪಟ್ಟದಲ್ಲಿ ಯಾವುದೇ ಪಂದ್ಯವನ್ನಾಡುವಾಗ ಹೆಲ್ಮೆಟ್, ಜೆರ್ಸಿ ಮತ್ತು ಇತರೆ ಯಾವುದೇ ಸಲಕರಣೆಗಳ ಮೇಲೆ ಬಿಸಿಸಿಐ ಲೋಗೋ ಬಳಕೆಗೆ ಅವಕಾಶ ಇಲ್ಲ. ಇದು ಬಿಸಿಸಿಐ ಆಟಗಾರರಿಗೆ ಸೂಚಿಸಿರುವ ಕಟ್ಟುನಿಟ್ಟಾದ ನಿಮಯವಾಗಿದೆ. ಬಿಸಿಸಿಐನ ಪ್ರಮುಖ ನಿಯಮವನ್ನು ಗಾಳಿಗೆ ತೂರಿದ್ದು ಶಿಕ್ಷೆಗೆ ಒಳಪಡುವ ಸಾಧ್ಯತೆ ಇದೆ. ಈ ಹಿಂದೆ ಭಾರತ ಪರ ಆಡುವ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ತಂಡಗಳಿಗೆ ಆಡುವಾಗ ಬಳಕೆ ಮಾಡುತ್ತಿದ್ದರು.
ಆದರೆ, ಕೆಲವೇ ವರ್ಷಗಳ ಹಿಂದೆ ಬಿಸಿಸಿಐ ಲೋಗೋ ಬಳಸುವಂತಿಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿತ್ತು. ಅಂತಹ ಹೆಲ್ಮೆಟ್ ಧರಿಸಿದ ಆಟಗಾರರು ಬಿಸಿಸಿಐ ಲೋಗೋ ಮೇಲೆ ಟೇಪ್ ಹಾಕುವ ಮೂಲಕ ಅವುಗಳನ್ನು ಮರೆಮಾಡಬೇಕು. ಆದರೆ, ಕಿಶನ್ ಈ ವಿಚಾರದಲ್ಲೂ ನಿರ್ಲಕ್ಷ್ಯ ವಹಿಸಿದ್ದು, ಭಾರಿ ದಂಡಕ್ಕೆ ಒಳಗಾಗುವ ಸಾಧ್ಯತೆ ಇದೆ.