ಲಂಡನ್ನಲ್ಲಿ ಜನಿಸಿದ ವಿರಾಟ್ ಕೊಹ್ಲಿ ಪುತ್ರ ಅಕಾಯ್ ಬ್ರಿಟನ್ ಪೌರತ್ವ ಹೊಂದುತ್ತಾರಾ, ನಿಯಮ ಹೇಳುವುದೇನು? ಇಲ್ಲಿದೆ ವಿವರ
Virat Kohli son Akaay Citizenship : ವಿರಾಟ್ ಕೊಹ್ಲಿ ಮಗ ಅಕಾಯ್ ಲಂಡನ್ನಲ್ಲಿ ಜನಿಸಿದ ಕಾರಣ ಇದೀಗ ಪೌರತ್ವದ ಪ್ರಶ್ನೆ ಎದ್ದಿದೆ. ಬ್ರಿಟಿಷ್ ಪ್ರಜೆ ಅಥವಾ ಭಾರತೀಯ.. ಎರಡರಲ್ಲಿ ಅಕಾಯ್ಗೆ ಸಿಗುವ ಪೌರತ್ವ ಯಾವುದು ಎಂಬ ಗೊಂದಲ ಹುಟ್ಟಿದೆ.
ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಫೆಬ್ರವರಿ 15ರಂದು ಜನಿಸಿದ ಗಂಡು ಮಗುವಿಗೆ ಅಕಾಯ್ (Akaay) ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ಫೆಬ್ರವರಿ 20ರಂದು ಕೊಹ್ಲಿ ಅಧಿಕೃತವಾಗಿ ಪೋಸ್ಟ್ ಮಾಡುವ ಮೂಲಕ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಆದರೆ ಮಗ ಲಂಡನ್ನಲ್ಲಿ ಜನಿಸಿದ ಕಾರಣ ಇದೀಗ ಪೌರತ್ವದ ಪ್ರಶ್ನೆ ಎದ್ದಿದೆ. ಬ್ರಿಟಿಷ್ ಪ್ರಜೆ ಅಥವಾ ಭಾರತೀಯ ಎರಡರಲ್ಲಿ ಅಕಾಯ್ಗೆ ಸಿಗುವ ಪೌರತ್ವ ಯಾವುದು ಎಂಬ ಗೊಂದಲ ಹುಟ್ಟಿದೆ.
ಪೌರತ್ವ ಯಾವುದು ಸಿಗಲಿದೆ?
ವಿರಾಟ್ ಕೊಹ್ಲಿ ಪುತ್ರ ಅಕಾಯ್ ಲಂಡನ್ನಲ್ಲಿ ಜನಿಸಿದ ಮಾತ್ರಕ್ಕೆ ಬ್ರಿಟನ್ ಪೌರತ್ವ ನೀಡಲು ಸಾಧ್ಯವಾಗುವುದಿಲ್ಲ. ಬ್ರಿಟಿಷ್ ಪ್ರಜೆ ಆಗುವುದಿಲ್ಲ. ಪೋಷಕರಲ್ಲಿ ತಂದೆ ಅಥವಾ ತಾಯಿ ಒಬ್ಬರು ಬ್ರಿಟನ್ ನಾಗರಿಕರಾಗಿದ್ದರೆ ಅಥವಾ ಮಗುವಿಗೆ 18 ವರ್ಷ ತುಂಬುವ ಮುನ್ನವೇ ಅಲ್ಲಿ ಶಾಶ್ವತ ಸಿಟಿಜನ್ಶಿಪ್ ಪಡೆಯದೇ ಇದ್ದರೆ ಆತನನ್ನು ಆ ದೇಶದ ನಾಗರಿಕ ಎಂದು ಪರಿಗಣಿಸಲು ಸಾಧ್ಯವಿಲ್ಲ. ಸದ್ಯ ಕೊಹ್ಲಿ ಮತ್ತು ಅನುಷ್ಕಾ ಇಬ್ಬರೂ ಭಾರತದ ಪ್ರಜೆಗಳಾಗಿರುವ ಕಾರಣ ಮಗ ಅಕಾಯ್ಗೂ ಮತ್ತೊಂದು ದೇಶದ ನಾಗರಿಕತ್ವ ಸಿಗುವುದಿಲ್ಲ.
ಯುಕೆಯಲ್ಲಿ ಜನಿಸಿದವರು ಸ್ವಯಂಚಾಲಿತವಾಗಿ ಪೌರತ್ವವನ್ನು ನೀಡುವುದಿಲ್ಲ ಎಂದು ನಿಯಮಗಳು ಸೂಚಿಸುತ್ತವೆ. ಅರ್ಹತೆ ಪಡೆಯಲು, ಕನಿಷ್ಠ ಒಬ್ಬ ಪೋಷಕರು ಬ್ರಿಟಿಷ್ ಪ್ರಜೆಯಾಗಿರಬೇಕು ಅಥವಾ ವಿಸ್ತೃತ ಅವಧಿಯ ನಂತರ ನೆಲೆಸಿದ ಸ್ಥಾನಮಾನವನ್ನು ಪಡೆದಿರಬೇಕು. ಅನುಷ್ಕಾ ಮತ್ತು ವಿರಾಟ್ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2021 ಜನವರಿಯಲ್ಲಿ ಅವರು ತಮ್ಮ ಮೊದಲ ಮಗು ವಮಿಕಾಳನ್ನು ಸ್ವಾಗತಿಸಿದರು. ಇದೀಗ ಅಕಾಯ್ ಜನನದ ಮೂಲಕ ಮನೆಗೆ ಮತ್ತೊಬ್ಬ ಸದಸ್ಯ ಸೇರ್ಪಡೆಯಾಗಿದ್ದಾರೆ.
ಲಂಡನ್ನಲ್ಲಿ ಮನೆ ಖರೀದಿ?
ಲಂಡನ್ನಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಅವರು ಮನೆ ಖರೀದಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆದರೆ ಅವರು ಅಲ್ಲಿ ಶಾಶ್ವತವಾಗಿ ನೆನೆಸಿಲ್ಲ. ಶಾಶ್ವತ ನಿವಾಸದ ಸ್ಥಾನಮಾನ ಕೂಡ ಅವರು ಹೊಂದಿಲ್ಲ. ಹಾಗಾಗಿ ಅಕಾಯ್ ಬೇರೆ ದೇಶದ ಪೌರತ್ವ ಹೊಂದಲು ಸಾಧ್ಯವಿಲ್ಲ. ಇದರೊಂದಿಗೆ ಹಲವು ದಿನಗಳಿಂದ ಎದ್ದಿದ್ದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಇದರ ಜೊತೆಗೆ ವಿರಾಟ್ ಪುತ್ರನ ಹೆಸರಿನ ಬಗ್ಗೆಯೂ ಹೆಚ್ಚು ಹುಡುಕಾಟ ನಡೆದಿತ್ತು.
ಅಕಾಯ್ ಎಂಬುದಕ್ಕೆ ಎರಡು ಅರ್ಥಗಳು ಸಿಗುತ್ತವೆ. ಅಕಾಯ್ ಎಂಬುದು ಸಂಸ್ಕೃತ ಮೂಲವನ್ನು ಹೊಂದಿದೆ. ಇದರ ಅರ್ಥ ಏನೆಂದರೆ ನಿರಾಕಾಯ ಅಥವಾ ದೈಹಿಕ ಶಕ್ತಿಗಿಂತ ಮಿಗಿಲಾದವನು. ಶಿವಪುರಾಣದಲ್ಲಿ 'ಅಕಾಯ್' ಎಂಬುದು ಶಿವನ ಹೆಸರಾಗಿದೆ. ಇನ್ನು ಇದೇ ಹೆಸರು ಟರ್ಕಿಶ್ ಭಾಷೆಯಲ್ಲೂ ಇದ್ದು, ಅಲ್ಲಿ ‘ಹೊಳೆಯುವ ಚಂದ್ರ’ ಎಂಬರ್ಥವನ್ನು ಹೊಂದಿದೆ. ಮಗಳು ವಮಿಕಾ ಹೆಸರಿನ ಅರ್ಥ ದುರ್ಗಾ ದೇವಿ ಎಂಬುದು.
ಮಗುವಿನ ಕುರಿತು ಕೊಹ್ಲಿ ಅಪ್ಡೇಟ್ ನೀಡಿದ್ದ ಪೋಸ್ಟ್ನಲ್ಲೇನಿತ್ತು?
ತುಂಬಾ ಸಂತೋಷ ಮತ್ತು ನಮ್ಮ ಹೃದಯ ಪ್ರೀತಿಯಿಂದ ತುಂಬಿದೆ. ಫೆಬ್ರವರಿ 15 ರಂದು ನಾವು ನಮ್ಮ ಗಂಡು ಮಗು ಅಕಾಯ್, ವಮಿಕಾಳ ಪುಟ್ಟ ಸಹೋದರನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ತಿಳಿಸಲು ನಾವು ಸಂತೋಷಪಡುತ್ತೇವೆ! ಎಂದು ವಿರಾಟ್ ಕೊಹ್ಲಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಕೋರುತ್ತೇವೆ. ಈ ಸಮಯದಲ್ಲಿ ದಯವಿಟ್ಟು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ವಿನಂತಿಸುತ್ತೇವೆ. ಪ್ರೀತಿ ಮತ್ತು ಕೃತಜ್ಞತೆ. ಇಂತಿ ವಿರಾಟ್ ಮತ್ತು ಅನುಷ್ಕಾ ಎಂದು ಪತ್ರದ ಮೂಲಕ ವಿರಾಟ್ ದಂಪತಿ ಮಾಹಿತಿ ಹಂಚಿಕೊಂಡಿದ್ದಾರೆ.