ಅಯೋಧ್ಯೆಯ ರಾಮ ಮಂದಿರಕ್ಕೆ ಖಂಡಿತ ಭೇಟಿ ನೀಡುತ್ತೇನೆ; ಮತ್ತೆ ಭಾರತೀಯರ ಹೃದಯ ಗೆದ್ದ ಸೌತ್ ಆಫ್ರಿಕಾ ಕ್ರಿಕೆಟಿಗ
Keshav Maharaj: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ಖಂಡಿತವಾಗಿಯೂ ಭೇಟಿ ನೀಡುತ್ತೇನೆ ಎಂದು ಸೌತ್ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಕೇಶವ್ ಮಹಾರಾಜ್ ಹೇಳಿದ್ದಾರೆ.
500 ವರ್ಷಗಳಷ್ಟು ಹಳೆಯದಾದ ದೇಶದ ಅತಿದೊಡ್ಡ ರಾಜಕೀಯ ಮತ್ತು ಧಾರ್ಮಿಕ ವಿವಾದ ಜನವರಿ 22ರಂದು ಕೊನೆಗೊಳ್ಳಲಿದೆ. ಅದೇ ದಿನ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ಮತ್ತು ದೈವಿಕ ರಾಮಮಂದಿರದಲ್ಲಿ ರಾಮಲಲಾ ಪ್ರತಿಷ್ಠಾಪನೆ ಕಾರ್ಯಕ್ರಮ (Ram Mandir in Ayodhya Uttar pradesh) ಆಯೋಜಿಸಲಾಗಿದೆ. ಈ ಬಗ್ಗೆ ದೇಶಾದ್ಯಂತ ಉತ್ಸಾಹ ಮೂಡಿದ್ದು, ರಾಮ ಭಕ್ತರಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ.
ಈಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಪ್ರತಿಧ್ವನಿ ವಿದೇಶಗಳಲ್ಲಿಯೂ ಕೇಳಿಬರುತ್ತಿದೆ. ಇದೀಗ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಾರೆ ಕೇಶವ್ ಮಹಾರಾಜ್ (Keshav Maharaj) ಕೂಡ ರಾಮಮಂದಿರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ಖಂಡಿತವಾಗಿಯೂ ಭೇಟಿ ನೀಡಲು ಬಯಸುವುದಾಗಿ ಅವರು ಹೇಳಿದ್ದಾರೆ.
ರಾಮಮಂದಿರಕ್ಕೆ ಭೇಟಿ ನೀಡುತ್ತೇನೆ ಎಂದ ಕೇಶವ್
ಗಣ್ಯರನ್ನು, ಸಾಧು-ಸಂತರು ಸೇರಿದಂತೆ ಇಡೀ ದೇಶದ ಜನತೆಯನ್ನೇ ಈ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆಗೆ ಆಹ್ವಾನಿಸಲಾಗುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಿಸಲಾಗುತ್ತಿದೆ. ಅಲ್ಲಿಗೆ ಹೋಗಲು ಏನಾದರೂ ಯೋಜನೆ ಇದೆಯೇ ಎಂದು ತಮ್ಮ ಸಹೋದ್ಯೋಗಿ ದಿ ಲಾಲನ್‌ಟಾಪ್ ಪ್ರಶ್ನೆಗೆ ಉತ್ತರಿಸಿದ ಮಹಾರಾಜ್, ಖಂಡಿತವಾಗಿಯೂ ಅಲ್ಲಿಗೆ ಹೋಗಲು ಬಯಸುತ್ತೇನೆ ಎಂದು ಇಚ್ಛೆ ವ್ಯಕ್ತಪಡಿಸಿದ್ದಾರೆ.
ಮುಂದಿನ ವಾರ ಅಲ್ಲಿ ಮಹಾಮಸ್ತಕಾಭಿಷೇಕದ ಕಾರ್ಯಕ್ರಮವಿದೆ. ಆದರೆ ಆ ಸಮಯದಲ್ಲಿ ದಕ್ಷಿಣ ಆಫ್ರಿಕಾದ ಟಿ20 ಪಂದ್ಯ ನಡೆಯಲಿದೆ. ಆದ್ದರಿಂದ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ನಾನು ಅಲ್ಲಿ ಇರಲು ಸಾಧ್ಯವಾಗುವುದಿಲ್ಲ. ಆದರೆ ಅಯೋಧ್ಯೆಗೆ ಹೋಗಲು ಬಯಸುತ್ತೇನೆ. ರಾಮಮಂದಿರಕ್ಕೆ ಹೋಗಲು ತುಂಬಾ ಸಂತಸ ಇದೆ ಎಂದಿದ್ದಾರೆ. ಮಹಾರಾಜ್ ಶ್ರೀರಾಮ ಮತ್ತು ಹನುಮನ ಅಪ್ಪಟ ಭಕ್ತ.
ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದ ಕೇಶವ್
ಕೇಶವ್ ಮಹಾರಾಜ್, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದೊಂದಿಗೆ ಭಾರತ ಪ್ರವಾಸಕ್ಕೆ ಬಂದಿದ್ದರು. ಈ ಅವಧಿಯಲ್ಲಿ ಕೇಶವ್ ಕೇರಳದ ಪ್ರಸಿದ್ಧ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾಮ-ಹನುಮಂತನ ಭಕ್ತನಾದ ಕ್ರಿಕೆಟಿಗನ ಬ್ಯಾಟ್ ಮೇಲೆ ಓಂ ಎಂದು ಬರೆಯಲಾಗಿದೆ. ಈ ಹಿಂದೆ ಸಾಕಷ್ಟು ಬಾರಿ ರಾಮ-ಹನುಮನ ಬಗ್ಗೆ ಮಾತನಾಡಿದ್ದಾರೆ.
ಮಹಾರಾಜ್ ಬ್ಯಾಟ್ ಹಿಡಿದು ಕ್ರೀಸ್ಗೆ ಬರುವ ವೇಳೆ ರಾಮ್ ಸಿಯಾ ರಾಮ್ ಹಾಡನ್ನು ಮೈದಾನದಲ್ಲಿ ಹಾಕಲಾಗುತ್ತದೆ. ಹಾಡು ಕೇಳಿದರೆ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತಂತೆ. ಈ ಬಗ್ಗೆ ಅವರು ಹಿಂದೆ ಹೇಳಿದ್ದರು. ಈ ಕಾರಣದಿಂದ ಭಾರತದಲ್ಲಿ ವಿಶೇಷ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಅವರು. ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದರೂ ಭಾರತಕ್ಕೆ ಬಂದಾಗಲೆಲ್ಲಾ ಕುಟುಂಬ ಸಮೇತ ಇಲ್ಲಿನ ದೇವಾಲಯಗಳಿಗೆ ಭೇಟಿ ನೀಡುತ್ತಾರೆ.
ಅವರ ಪೂರ್ವಜರು ಉತ್ತರ ಪ್ರದೇಶದವರು
ಕೇಶವ್ ಮಹಾರಾಜ್ ಉತ್ತರ ಪ್ರದೇಶದ ಸುಲ್ತಾನಪುರಕ್ಕೆ ಸೇರಿದವರು. ಅವರ ಪೂರ್ವಜರು ಸುಲ್ತಾನಪುರದಲ್ಲಿ ವಾಸಿಸುತ್ತಿದ್ದರು. 1874ರಲ್ಲಿ, ಅವರ ಪೂರ್ವಜರು ದಕ್ಷಿಣ ಆಫ್ರಿಕಾದ ಡರ್ಬನ್ ನಗರಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆಸಿದ್ದಾರೆ.