ಭಾರತ-ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆಗೆ ಸುನಿಲ್ ಗವಾಸ್ಕರ್ ವಿಶೇಷ ಸಲಹೆ; ಇದು ವರ್ಕೌಟ್ ಆಗುತ್ತಾ?
Sunil Gavaskar: ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಕೊನೆಯದಾಗಿ ದ್ವಿಪಕ್ಷೀಯ ಸರಣಿ ನಡೆದಿದ್ದು 2012-13ರಲ್ಲಿ. ಅಂದು ಜರುಗಿದ್ದ ಏಕದಿನ ಸರಣಿಯಲ್ಲಿ ಪಾಕಿಸ್ತಾನ 2-1ರಲ್ಲಿ ಜಯದ ನಗೆ ಬೀರಿತ್ತು. ಅದು ಕೂಡ ಭಾರತದಲ್ಲೇ ಜರುಗಿದ್ದ ಸರಣಿ ಇದಾಗಿತ್ತು. ಭಾರತ-ಪಾಕಿಸ್ತಾನ ನಡುವೆ ನಿರಂತರವಾಗಿ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯಿಂದ ದ್ವಿಪಕ್ಷೀಯ ಸರಣಿಗಳು ಸ್ಥಗಿತಗೊಂಡಿವೆ. ಅಂದಿನಿಂದ ಕೇವಲ ಐಸಿಸಿ ಟೂರ್ನಿಗಳು, ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿ ಆಗುತ್ತಿದೆ. 1952-53ರಲ್ಲಿ ಮೊದಲ ಬಾರಿಗೆ 2 ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆಗೊಂಡಿತ್ತು. ಇದೀಗ ದಶಕದ ನಂತದ ಉಭಯ ದೇಶಗಳ ಮಧ್ಯೆ ಸರಣಿ ಆಯೋಜನೆಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ವಿಶೇಷ ಸಲಹೆಯೊಂದರ ಮೂಲಕ ಒತ್ತಾಯಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆಗೆ ಹಲವು ದೇಶಗಳು ಮುಂದೆ ಬಂದಿವೆ. ಇದಕ್ಕೆ ಪಾಕಿಸ್ತಾನ ಸಮ್ಮತಿ ಸೂಚಿಸಿದೆಯಾದರೂ ಭಾರತ ಇದಕ್ಕೆ ಆಸಕ್ತಿ ತೋರಿಲ್ಲ. ಹೀಗಿರುವಾಗ ಸುನಿಲ್ ಗವಾಸ್ಕರ್ ಷರತ್ತೊಂದನ್ನು ಮುಂದಿಟ್ಟು 2 ದೇಶಗಳ ನಡುವೆ ಸರಣಿ ಆಯೋಜಿಸಲು ಸಲಹೆ ನೀಡಿದ್ದಾರೆ. ವಾಹಿನಿಯೊಂದರಲ್ಲಿ ಮಾತನಾಡಿದ ಗವಾಸ್ಕರ್, ಇಂಡೋ-ಪಾಕ್ ಸರಣಿ ಆಯೋಜನೆಗೆ ಇರುವ ಏಕೈಕ ಮಾರ್ಗವೆಂದರೆ ಎರಡೂ ದೇಶಗಳ ಗಡಿಯಲ್ಲಿ ಶಾಂತಿ ನೆಲೆಸುವುದರಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಇದಕ್ಕೆ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತವೆ ಎಂಬುದು ಕುತೂಹಲ ಮೂಡಿಸಿದೆ.
ಗವಾಸ್ಕರ್ ಕೊಟ್ಟ ಸಲಹೆ ಇದು
‘ಎರಡು ರಾಷ್ಟ್ರಗಳ ಬಾರ್ಡರ್ಗಳಲ್ಲಿ ಶಾಂತಿ ಇಲ್ಲದೆ ಇಂಡೋ-ಪಾಕ್ ದ್ವಿಪಕ್ಷೀಯ ಸರಣಿ ಅಸಾಧ್ಯ. ಗಡಿಗಳಲ್ಲಿ ಸಂಪೂರ್ಣ ಶಾಂತಿ ನೆಲೆಸಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಒಂದೊಮ್ಮೆ ಶಾಂತಿ ನೆಲೆಸಿದ್ದೇ ಆದರೆ ಎರಡು ಸರ್ಕಾರಗಳು ಈ ಬಗ್ಗೆ ಚರ್ಚಿಸಬಹುದು. ಇನ್ಮುಂದೆ ಗಡಿಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುವ ಪರಿಸ್ಥಿತಿಗೆ ಬಂದರಷ್ಟೇ ಇದು ಸಾಧ್ಯ’ ಎಂದು ಹೇಳಿಕೆ ನೀಡಿದ್ದಾರೆ. ‘ಆಕ್ರಮಣಗಳ ಕಾರಣದಿಂದ ನಡೆಯುತ್ತಿರುವ ದಾಳಿಗಳು ಹಿನ್ನಡೆಗೆ ಕಾರಣವಾಗುತ್ತಿವೆ. ಅದಕ್ಕಾಗಿ ಭಾರತ ಸರ್ಕಾರವು ಇದೆಲ್ಲವೂ ನಿಲ್ಲುವವರೆಗೆ ಮಾತನಾಡಲು ಮುಂದಾಗುತ್ತಿಲ್ಲ’ ಎಂದಿದ್ದಾರೆ. ಹೀಗಿದ್ದರೂ ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆಗೆ ಅವಕಾಶ ಇದೆ.
ದುಬೈನಲ್ಲಿ ಇಂಡೋ-ಪಾಕ್ ಆಯೋಜಿಸಬಹುದು
ಭಾರತ-ಪಾಕಿಸ್ತಾನ ದೇಶಗಳ ನಡುವೆ ಉದ್ವಿಗ್ನತೆ ಇದ್ದರೂ ಎರಡೂ ದೇಶಗಳ ನಡುವೆ ಸರಣಿ ಆಯೋಜಿಸಲು ಅವಕಾಶ ಇದೆ. ಅದು ಹೇಗೆಂದರೆ ತಟಸ್ಥ ಸ್ಥಳದಲ್ಲಿ ಆಯೋಜನೆ ಮಾಡಬಹುದು. ದುಬೈ ಅಥವಾ ಬೇರೆ ದೇಶಗಳಲ್ಲಿ ದ್ವಿಪಕ್ಷೀಯ ಸರಣಿ ಆಯೋಜನೆ ಮಾಡಬಹುದು. ಇಂಗ್ಲೆಂಡ್-ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳು ಇಂಡೋ-ಪಾಕ್ ದ್ವಿಪಕ್ಷೀಯ ಸರಣಿ ಆಯೋಜನೆಗೆ ಆಸಕ್ತಿ ತೋರಿದ್ದವು. ಆದರೆ, ಬಿಸಿಸಿಐ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಮುಖಾಮುಖಿ ದಾಖಲೆ (ಟೆಸ್ಟ್, ಏಕದಿನ, ಟಿ20ಐ)
ಏಕದಿನ ಕ್ರಿಕೆಟ್ನಲ್ಲಿ ಉಭಯ ತಂಡಗಳು 135 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 58, ಪಾಕಿಸ್ತಾನ 73 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಐದು ಪಂದ್ಯಗಳು ಫಲಿತಾಂಶ ಇಲ್ಲದೆ ರದ್ದುಗೊಂಡಿವೆ. ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಉಭಯ ತಂಡಗಳು 59 ಸಲ ಮುಖಾಮುಖಿಯಾಗಿದ್ದು, ಭಾರತ 9, ಪಾಕಿಸ್ತಾನ 12ರಲ್ಲಿ ಜಯಿಸಿದೆ. ಒಟ್ಟು 38 ಪಂದ್ಯಗಳು ಡ್ರಾಗೊಂಡಿವೆ. ಇನ್ನು ಟಿ20ಐ ಕ್ರಿಕೆಟ್ನಲ್ಲಿ ಭಾರತ 10, ಪಾಕಿಸ್ತಾನ 3 ಪಂದ್ಯಗಳಲ್ಲಿ ಗೆಲುವಿನ ರುಚಿ ನೋಡಿವೆ. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತ್ತು.
