ಕೆಎಲ್ ರಾಹುಲ್ಗೆ ವಿಶ್ರಾಂತಿ, ನಿಕೋಲಸ್ ಪೂರನ್ ನಾಯಕ? ಗುಜರಾತ್ ಟೈಟಾನ್ಸ್ ಕದನಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ XI
LSG Playing XI vs GT: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನಾಯಕ ಕೆಎಲ್ ರಾಹುಲ್ ಅಲಭ್ಯರಾಗುತ್ತಾರಾ? ಹೇಗಿರಲಿದೆ ಪ್ಲೇಯಿಂಗ್ ಇಲೆವೆನ್? ಇಲ್ಲಿದೆ ವಿವರ.

ಲಕ್ನೋ ಸೂಪರ್ ಜೈಂಟ್ಸ್ (LSG) ತನ್ನ 4ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ಎದುರಿಸಲು ಸಜ್ಜಾಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಳಪೆ ಆರಂಭದ ನಂತರ ಎಲ್ಎಸ್ಜಿ ಲಯಕ್ಕೆ ಮರಳಿದ್ದು, ತನ್ನ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸಿತ್ತು. ಬಳಿಕ 3ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿದ ಕೆಎಲ್ ರಾಹುಲ್ ಪಡೆ, 3 ರಲ್ಲಿ 2 ಗೆಲುವುಗಳೊಂದಿಗೆ 4 ಅಂಕ ಪಡೆದು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಜಿಟಿ 7ನೇ ಸ್ಥಾನದಲ್ಲಿದೆ.
ಎಲ್ಎಸ್ಜಿ ತನ್ನ ತವರಿನ ಮೈದಾನದಲ್ಲಿ ಹ್ಯಾಟ್ರಿಕ್ ಜಯದ ನಗೆ ಬೀರಲು ಸಜ್ಜಾಗಿದೆ. 2ನೇ ಪಂದ್ಯದಲ್ಲಿ ಸಣ್ಣ ಗಾಯದಿಂದ ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದ ನಾಯಕ ಕೆಎಲ್ ರಾಹುಲ್ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿದಿದ್ದರು. ಅವರ ಬದಲಿಗೆ ನಿಕೋಲಸ್ ಪೂರನ್ ತಂಡವನ್ನು ಮುನ್ನಡೆಸಿದ್ದರು. ಬಳಿಕ ಆರ್ಸಿಬಿ ಪಂದ್ಯಕ್ಕೆ ಮರಳಿದ ಕೆಎಲ್ ರಾಹುಲ್, ಗುಜರಾತ್ ವಿರುದ್ಧ ಕಣಕ್ಕಿಳಿಯುವುದರ ಬಗ್ಗೆ ಅನುಮಾನ ಉಂಟಾಗಿದೆ.
ಹಾಗಾದರೆ ನಿಜವಾಗಲೂ ರಾಹುಲ್ ಮತ್ತೆ ವಿಶ್ರಾಂತಿ ಪಡೆಯುತ್ತಾರಾ? ನಿಕೋಲಸ್ ಪೂರನ್ ಮತ್ತೆ ನಾಯಕನಾಗಲಿದ್ದಾರೆಯೇ? ಯಾರಿಗೆ ಅವಕಾಶ ಸಿಗಲಿದೆ? ಯಾರು ಅವಕಾಶ ಕಳೆದುಕೊಳ್ಳಬಹುದು? ಗುಜರಾತ್ ಟೈಟಾನ್ಸ್ ವಿರುದ್ಧದ ಸೆಣಸಾಟಕ್ಕೆ ಲಕ್ನೋ ಆಡುವ 11ರ ಬಳಗ ಹೇಗಿರಲಿದೆ ಎಂಬುದನ್ನು ನೋಡೋಣ.
ಆರಂಭಿಕರು
ಕೆಎಲ್ ರಾಹುಲ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲಿ ಅಥವಾ ಫಿಟ್ ಆಗಿರಲಿ, ಕ್ವಿಂಟನ್ ಡಿ ಕಾಕ್ ಅವರೊಂದಿಗೆ ಇನ್ನಿಂಗ್ಸ್ ತೆರೆಯುವುದು ಖಚಿತವಾಗಿದೆ. ಡಿ ಕಾಕ್ ಆರ್ಸಿಬಿ ವಿರುದ್ಧ 56 ಎಸೆತಗಳಲ್ಲಿ 81 ರನ್ ಗಳಿಸಿ ಮಿಂಚಿದ್ದರು. ರಾಹುಲ್ ಚೇತರಿಸಿಕೊಂಡಿದ್ದು, ಸಂಪೂರ್ಣ ಆಟ ಆಡುವುದರ ಜತೆಗೆ ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರೂ ಉತ್ತಮ ಪ್ರದರ್ಶನ ಅದಾಗಿರಲಿಲ್ಲ.
ಮಧ್ಯಮ ಕ್ರಮಾಂಕ
ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಮಾಡುವುದು ಬೇಡ ಎಂದು ಮ್ಯಾನೇಜ್ಮೆಂಟ್ ಚಿಂತಿಸಿದೆ. ಸತತ ಕಳಪೆ ಪ್ರದರ್ಶನ ನೀಡುತ್ತಿರುವ ದೇವದತ್ ಪಡಿಕ್ಕಲ್ ಮತ್ತು ಆಯುಷ್ ಬದೋನಿಗೆ ಮತ್ತೆ ಅವಕಾಶ ನೀಡಲು ನಿರ್ಧರಿಸಿದೆ. ನಿಕೋಲಸ್ ಪೂರನ್ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದು, ಗುಜರಾತ್ ಟೈಟಾನ್ಸ್ ಬೌಲರ್ಸ್ಗೆ ಬೆಂಡೆತ್ತಲು ಸಿದ್ಧವಾಗಿದ್ದಾರೆ.
ಆಲ್ರೌಂಡರ್ಗಳು
ಕೃನಾಲ್ ಪಾಂಡ್ಯ ಮತ್ತು ಮಾರ್ಕಸ್ ಸ್ಟೊಯಿನಿಸ್ ಎಲ್ಎಸ್ಜಿ ಆಡುವ 11ರ ಬಳಗದಲ್ಲಿ ಕಣಕ್ಕಿಳಿಯುವುದು ಖಚಿತ. ಅವರು ಎರಡೂ ವಿಭಾಗಗಳಲ್ಲಿ ಕೊಡುಗೆ ನೀಡುವುದನ್ನು ಮುಂದುವರಿಸುತ್ತಾರೆ. ಅಲ್ಲದೆ, ಇಬ್ಬರು ಸಹ ಮಧ್ಯಮ ಕ್ರಮಾಂಕಕ್ಕೆ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ.
ಬೌಲರ್‌ಗಳು
ಎಲ್ಎಸ್ಜಿ ಬೌಲಿಂಗ್ ಲೈನ್‌ಅಪ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರವಿ ಬಿಷ್ಣೋಯ್, ಯಶ್ ಠಾಕೂರ್, ನವೀನ್-ಉಲ್-ಹಕ್, ಮಯಾಂಕ್ ಯಾದವ್ ಮತ್ತು ಎಂ ಸಿದ್ಧಾರ್ಥ್ ಬೌಲಿಂಗ್ ಜವಾಬ್ದಾರಿಯನ್ನು ಹಂಚಿಕೊಳ್ಳಲು ಸಜ್ಜಾಗಿದ್ದಾರೆ. ಮತ್ತೊಮ್ಮೆ ಮಯಾಂಕ್ ಯಾದವ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಮಯಾಂಕ್ ತನ್ನ ವೇಗದ ವೇಗದಿಂದ ಗಮನ ಸೆಳೆದಿದ್ದು, ಅವರು ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಅದಕ್ಕಾಗಿ ಇದೇ ಫಾರ್ಮ್ ಮುಂದುವರೆಸಬೇಕಿದೆ. ಮಯಾಂಕ್ 2 ಪಂದ್ಯಗಳಲ್ಲಿ 6 ವಿಕೆಟ್ ಕಬಳಿಸಿದ್ದು, ಆಡಿದ ಎರಡೂ ಪಂದ್ಯಗಳಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ಪ್ಲೇಯಿಂಗ್ XI
ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಯಶ್ ಠಾಕೂರ್, ಎಂ ಸಿದ್ಧಾರ್ಥ್, ನವೀನ್-ಉಲ್-ಹಕ್, ಮಯಾಂಕ್ ಯಾದವ್.
