ಭಾರತ ತಂಡಕ್ಕೆ ಪದಾರ್ಪಣೆಗೈದ ಮಯಾಂಕ್ ಯಾದವ್, ನಿತೀಶ್ ರೆಡ್ಡಿಗೆ 11 ಕೋಟಿ; ಐಪಿಎಲ್ ಹರಾಜಿಗೂ ಮುನ್ನವೇ ಬಿಲೇನಿಯರ್ಸ್?
IPL 2025: ಭಾರತದ ಇಬ್ಬರು ಕ್ರಿಕೆಟಿಗರಾದ ಮಯಾಂಕ್ ಯಾದವ್ ಮತ್ತು ನಿತೀಶ್ ರೆಡ್ಡಿ ಅವರು ರಾತ್ರೋರಾತ್ರಿ 11 ಕೋಟಿ ರೂಪಾಯಿಗೆ ಒಡೆಯರಾಗಲು ಸಜ್ಜಾಗಿದ್ದಾರೆ. ಐಪಿಎಲ್ ಹರಾಜಿಗೂ ಮುನ್ನವೇ ಬಿಲೇನಿಯರ್ ಆಗುವ ಸಾಧ್ಯತೆ ಇದೆ. ಅದು ಹೇಗೆ ಅಂತೀರಾ ಇಲ್ಲಿದೆ ವಿವರ.
ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಗ್ವಾಲಿಯರ್ನಲ್ಲಿ ಅಬ್ಬರಿಸಿದ ಭಾರತ ಈಗ ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುವ 2ನೇ ಟಿ20 ಪಂದ್ಯಕ್ಕೆ ಸಜ್ಜಾಗುತ್ತಿದೆ. ಟೀಮ್ ಇಂಡಿಯಾ ಪರ ಪದಾರ್ಪಣೆಗೈದ ಮಯಾಂಕ್ ಯಾದವ್ ಮತ್ತು ನಿತೀಶ್ ರಾಣಾ 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಬಂಪರ್ ಲಾಟರಿ ಹೊಡೆದಿದ್ದಾರೆ. ಕ್ರಮವಾಗಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ತಲಾ 11 ಕೋಟಿ ನೀಡಿ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೇಗೆ ಸಾಧ್ಯ ಎಂಬುದನ್ನು ಈ ಮುಂದೆ ತಿಳಿಯೋಣ.
ಮೊದಲ ಟಿ20ಐನಲ್ಲಿ ಭಾರತಕ್ಕೆ ಪದಾರ್ಪಣೆ ಮಾಡಿದ ಮಯಾಂಕ್ ಯಾದವ್, ನಿತೀಶ್ ರೆಡ್ಡಿ ಬಂಪರ್ ಲಾಟರಿಯ ನಿರೀಕ್ಷೆ ಹೊಂದಿದ್ದಾರೆ. ಐಪಿಎಲ್ ಫ್ರಾಂಚೈಸಿಗಳು ತಮ್ಮ ಧಾರಣ ಪಟ್ಟಿಯಲ್ಲಿ ಬಿಸಿಸಿಐಗೆ ಸಲ್ಲಿಸುವ ಕೆಲವು ವಾರಗಳ ಮೊದಲೇ ಇಬ್ಬರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಹೀಗಾಗಿ, ಅವರನ್ನು ಅನ್‌ಕ್ಯಾಪ್ಡ್ ಆಟಗಾರರನ್ನಾಗಿ ತಂಡದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಬಿಸಿಸಿಐ ನಿಯಮಗಳ ಪ್ರಕಾರ ಅನ್‌ಕ್ಯಾಪ್ಡ್ ಆಟಗಾರನನ್ನು 4 ಕೋಟಿ ರೂ.ಗೆ ಉಳಿಸಿಕೊಳ್ಳಬಹುದು. ಆದರೆ, ಇವರು ಕ್ಯಾಪ್ಡ್ ಆಟಗಾರರಾದ ಕಾರಣ ಇಬ್ಬರು ಆಯಾ ತಂಡಗಳು ಉಳಿಸಿಕೊಂಡಿದ್ದೇ ಆದರೆ ನೂತನ ಐಪಿಎಲ್ ನಿಯಮಗಳ ಪ್ರಕಾರ 11 ಕೋಟಿ ಪಡೆಯಲಿದ್ದಾರೆ.
ಇಬ್ಬರನ್ನೂ ಉಳಿಸಿಕೊಳ್ಳುತ್ತವಯೇ ತಂಡಗಳು
ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಪರ ಮಯಾಂಕ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಪರ ನಿತೀಶ್ ರೆಡ್ಡಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು. ಆ ಮೂಲಕ ಕ್ರಿಕೆಟ್ ಲೋಕಕ್ಕೆ ಪರಿಚಿತರಾದರು. ಟೀಮ್ ಮ್ಯಾನೇಜ್ಮೆಂಟ್ಗಳು ಕೂಡ ಇವರ ಆಟಕ್ಕೆ ಮನ ಸೋತಿದ್ದವು. ಹಾಗಾಗಿ, 2025ರ ಐಪಿಎಲ್ ಆವೃತ್ತಿಗೆ ಇಬ್ಬರನ್ನೂ ಉಳಿಸಿಕೊಳ್ಳಲು ಆಯಾ ತಂಡಗಳು ಚಿಂತನೆ ನಡೆಸುತ್ತಿವೆ. ಒಂದು ವೇಳೆ ಇಬ್ಬರನ್ನು ಎಲ್‌ಎಸ್‌ಜಿ, ಎಸ್ಆರ್ಹೆಚ್ ಉಳಿಸಿಕೊಳ್ಳಲು ಮುಂದಾದರೆ ಕನಿಷ್ಠ ಅವರಿಗೆ 11 ಕೋಟಿ ನೀಡಬೇಕು. ಆದರೆ ಎಲ್‌ಎಸ್‌ಜಿ, ಎಸ್ಆರ್ಹೆಚ್ ಇಷ್ಟು ಮೊತ್ತ ನೀಡುತ್ತವೆಯೇ ಅಥವಾ ತಂಡದಿಂದ ಕೈಬಿಡುತ್ತವೆಯೇ ಎನ್ನುವುದೇ ದೊಡ್ಡ ಪ್ರಶ್ನೆ.
ಐಪಿಎಲ್ ಮೂಲಗಳು ಮಯಾಂಕ್ ಯಾದವ್ಗೆ ಸಂಬಂಧಿಸಿ ಬ್ಲಾಕ್ಬಸ್ಟರ್ ಅಪ್ಡೇಟ್ ನೀಡಿವೆ. ಎಲ್‌ಎಸ್‌ಜಿ ಮಯಾಂಕ್ರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತ ಎಂದು ದೃಢಪಡಿಸಿದೆ. ಎಲ್‌ಎಸ್‌ಜಿಯು ಮಯಾಂಕ್‌ನಂತಹ ಅಪರೂಪದ ಬೌಲರ್ ಅನ್ನು ಮತ್ತೆ ಹರಾಜು ಪೂಲ್‌ಗೆ ಸೇರಿಸುವುದಿಲ್ಲ. ಫ್ರಾಂಚೈಸಿಯು ಕಳೆದ ಎರಡು ಸೀಸನ್‌ಗಳಲ್ಲಿ ಆತನ ಮೇಲೆ ಹೂಡಿಕೆ ಮಾಡಿದೆ. 150+ ಕಿ.ಮೀ ವೇಗದಲ್ಲಿ ಚೆಂಡೆಯುವ ಮಯಾಂಕ್ ಅಗ್ರ ಮೂರು ಧಾರಣಗಳಲ್ಲಿ ಒಬ್ಬರಾಗುತ್ತಾರೆ ಎಂದು ಐಪಿಎಲ್ ಮೂಲಗಳು ಪಿಟಿಐಗೆ ತಿಳಿಸಿವೆ. ಐಪಿಎಲ್ 2023ರ ಮಿನಿ ಹರಾಜಿನಲ್ಲಿ ಮಯಾಂಕ್ ತನ್ನ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ಎಲ್‌ಎಸ್‌ಜಿ ಸೇರಿದ್ದರು.
ನಿತೀಶ್ಗೆ ಆರ್ಟಿಎಂ ಕಾರ್ಡ್ ಸಾಧ್ಯತೆ
ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿದು 4 ಓವರ್ಗಳಲ್ಲಿ 1 ಮೇಡನ್ ಸಹಿತ 21 ರನ್ ನೀಡಿ 1 ವಿಕೆಟ್ ಪಡೆದಿದ್ದ ಮಯಾಂಕ್, 17ನೇ ಆವೃತ್ತಿಯ ಐಪಿಎಲ್ನಲ್ಲಿ ಕೇವಲ 4 ಪಂದ್ಯಗಳನ್ನು ಆಡಿದ್ದರು. ಉತ್ತಮ ನೀಡಿದ ಹಿನ್ನೆಲೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಮಯಾಂಕ್ ಈವರೆಗೆ ಒಂದು ಪ್ರಥಮ ದರ್ಜೆ ಪಂದ್ಯ ಮಾತ್ರ ಆಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನವೇ ಭಾರತ ಎ ತಂಡಕ್ಕೆ ಅವಕಾಶ ಪಡೆದು ಸಾಬೀತುಪಡಿಸಿದರೆ, ಟೆಸ್ಟ್ ತಂಡಕ್ಕೆ ಆಯ್ಕೆ ಆಗುವ ಸಾಧ್ಯತೆ ಇದೆ. 22 ವರ್ಷದ ವೇಗಿ ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದು ಪ್ರಥಮ ದರ್ಜೆ, 17 ಲಿಸ್ಟ್ ಎ ಮತ್ತು 15 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆಲ್ರೌಂಡರ್ ನಿತೀಶ್ ರೆಡ್ಡಿ ಅವರನ್ನು ಸನ್ರೈಸರ್ಸ್ ಹೈದರಾಬಾದ್ ಅನ್‌ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಆರ್ಟಿಎಂ ಕಾರ್ಡ್ ಬಳಸಿ ನಿತೀಶ್ರನ್ನು ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆ ಇದೆ.