ವಿಶ್ವಕಪ್‌ಗೆ ಭಾರತದ 2ನೇ ಅತ್ಯಂತ ಹಳೆಯ ಸ್ಟೇಡಿಯಂ ನವೀಕರಣ; ಟೀಮ್‌ ಇಂಡಿಯಾ ಅದೃಷ್ಟದ ಮೈದಾನದ ವೈಶಿಷ್ಟ್ಯಗಳಿವು
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್‌ಗೆ ಭಾರತದ 2ನೇ ಅತ್ಯಂತ ಹಳೆಯ ಸ್ಟೇಡಿಯಂ ನವೀಕರಣ; ಟೀಮ್‌ ಇಂಡಿಯಾ ಅದೃಷ್ಟದ ಮೈದಾನದ ವೈಶಿಷ್ಟ್ಯಗಳಿವು

ವಿಶ್ವಕಪ್‌ಗೆ ಭಾರತದ 2ನೇ ಅತ್ಯಂತ ಹಳೆಯ ಸ್ಟೇಡಿಯಂ ನವೀಕರಣ; ಟೀಮ್‌ ಇಂಡಿಯಾ ಅದೃಷ್ಟದ ಮೈದಾನದ ವೈಶಿಷ್ಟ್ಯಗಳಿವು

ಇದು ಭಾರತದ ಎರಡನೇ ಅತ್ಯಂತ ಹಳೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ. ರಾಷ್ಟ್ರ ರಾಜಧಾನಿಯ ಪ್ರಮುಖ ಮೈದಾನವು ಇದೀಗ ಏಕದಿನ ವಿಶ್ವಕಪ್‌ ಪಂದ್ಯಗಳ ಆತಿಥ್ಯಕ್ಕೆ ಸಜ್ಜಾಗಿದೆ.

ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂ
ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂ (Rahul Singh)

ಈ ಹಿಂದೆ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂ (Feroz Shah Kotla) ಎಂದು ಕರೆಯಲಾಗುತ್ತಿದ್ದ ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣವು (Arun Jaitley Stadium), ಭಾರತದ ಎರಡನೇ ಅತ್ಯಂತ ಹಳೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಈ ಮೈದಾನವು ಸುಲ್ತಾನ್ ಫಿರೋಜ್ ಷಾ ತುಘಲಕ್ ನಿರ್ಮಿಸಿದ ಕೋಟೆಯಾದ ಫಿರೋಜ್ ಷಾ ಕೋಟ್ಲಾ ಸಮೀಪದಲ್ಲಿದೆ. ಹೀಗಾಗಿ ಕ್ರೀಡಾಂಗಣಕ್ಕೆ ಈ ಹೆಸರು ಬಂದಿದೆ.

  • ಕ್ರೀಡಾಂಗಣದ ಹೆಸರು: ಅರುಣ್ ಜೇಟ್ಲಿ ಕ್ರೀಡಾಂಗಣ.
  • ಹಳೆಯ ಹೆಸರು: ಫಿರೋಜ್ ಷಾ ಕೋಟ್ಲಾ
  • ಸ್ಥಳ: ದೆಹಲಿ
  • ಆರಂಭ: 1883
  • ಸಾಮರ್ಥ್ಯ: 55,000
  • ಎಂಡ್ಸ್: ಸ್ಟೇಡಿಯಂ ಎಂಡ್, ಪೆವಿಲಿಯನ್ ಎಂಡ್

ಭಾರತದ ಅದೃಷ್ಟದ ಮೈದಾನ

ಭಾರತೀಯ ಕ್ರಿಕೆಟ್ ತಂಡದ ಪಾಲಿಗೆ ಈ ಮೈದಾನವು ಅದೃಷ್ಟದ ಮೈದಾನವೆಂದೇ ಕರೆಯಲಾಗಿದೆ. 1993ರಿಂದ 2007ರವರೆಗೆ ಭಾರತವು ಇಲ್ಲಿ ಸತತ 7 ಟೆಸ್ಟ್‌ ಪಂದ್ಯಗಳನ್ನು ಗೆದ್ದಿತ್ತು. ಮತ್ತೊಂದೆಡೆ, ಕೋಟ್ಲಾ ಮೈದಾನದಲ್ಲಿ ಭಾರತ ಆಡಿದ ಕೊನೆಯ 10 ಟೆಸ್ಟ್‌ ಪಂದ್ಯಗಳಲ್ಲಿ 9ರಲ್ಲಿ ಗೆದ್ದಿದೆ. ಉಳಿದ 1 ಪಂದ್ಯ ಡ್ರಾಗೊಂಡಿದೆ. 1987ರಲ್ಲಿ ಭಾರತವು ಇಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯದಲ್ಲಿ ಸೋತಿತ್ತು.‌ ಆ ಬಳಿಕ ಇಲ್ಲಿ ಗೆಲುವಿನ ದಾಖಲೆ ಮುಂದುವರೆಸಿದೆ. ಈ ಮೈದಾನದಲ್ಲಿ ಭಾರತದ ಏಕದಿನ ದಾಖಲೆ ಕೂಡಾ ಕೆಟ್ಟದಾಗಿ ಏನೂ ಇಲ್ಲ. 2005ರ ಏಪ್ರಿಲ್ ತಿಂಗಳಿಂದ, ಟೀಮ್‌ ಇಂಡಿಯಾ ಇಲ್ಲಿ 6 ಪಂದ್ಯಗಳಲ್ಲಿ ಗೆದ್ದಿದೆ. ಒಂದು ಪಂದ್ಯ ರದ್ದುಗೊಂಡಿದೆಯೇ ಹೊರತು, ಯಾವೊಂದು ಪಂದ್ಯವನ್ನು ಭಾರತ ಸೋತಿಲ್ಲ.

ದೆಹಲಿಯಲ್ಲಿ ನಡೆಯಲಿರುವ ವಿಶ್ವಕಪ್‌ ಪಂದ್ಯಗಳು

  • ಅಕ್ಟೋಬರ್ 7: ದಕ್ಷಿಣ ಆಫ್ರಿಕಾ Vs ಶ್ರೀಲಂಕಾ, ಮಧ್ಯಾಹ್ನ 2 ಗಂಟೆಗೆ
  • ಅಕ್ಟೋಬರ್ 11: ಭಾರತ Vs ಅಫ್ಘಾನಿಸ್ತಾನ, ಮಧ್ಯಾಹ್ನ 2 ಗಂಟೆಗೆ
  • ಅಕ್ಟೋಬರ್ 15: ಇಂಗ್ಲೆಂಡ್ Vs ಅಫ್ಘಾನಿಸ್ತಾನ, ಮಧ್ಯಾಹ್ನ 2 ಗಂಟೆಗೆ
  • ಅಕ್ಟೋಬರ್ 25: ಆಸ್ಟ್ರೇಲಿಯಾ Vs ನೆದರ್ಲ್ಯಾಂಡ್ಸ್, ಮಧ್ಯಾಹ್ನ 2 ಗಂಟೆಗೆ
  • ನವೆಂಬರ್ 6: ಬಾಂಗ್ಲಾದೇಶ Vs ಶ್ರೀಲಂಕಾ, ಮಧ್ಯಾಹ್ನ 2 ಗಂಟೆಗೆ

ಒಳಚರಂಡಿ ಮತ್ತು ಹೊರಾಂಗಣ

ಮೈದಾನದ ಉಸ್ತುವಾರಿಯನ್ನು ಡಿಡಿಸಿಎ ನೋಡಿಕೊಳ್ಳುತ್ತದೆ. ಸಂಪೂರ್ಣ ಮೈದಾನವನ್ನು ರಕ್ಷಿಸುವ ಅತ್ಯಾಧುನಿಕ ಹೊದಿಕೆಯನ್ನು ಡಿಡಿಸಿಎ ಖರೀದಿಸಿದೆ. ಈ ಕವರ್ ಕಡಿಮೆ ತೂಕದ್ದಾಗಿದ್ದು, ಮಳೆಯ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಸುಲಭ. ಈ ಮೈದಾನದಲ್ಲಿಯೂ ಒಳಚರಂಡಿ ವ್ಯವಸ್ಥೆ ಇದ್ದು, ಮಳೆ ನಿಂತ 15 ನಿಮಿಷಗಳಲ್ಲಿ ಮೈದಾನವು ಆಟಕ್ಕೆ ಸಿದ್ಧಗೊಳ್ಳುತ್ತದೆ. ಹೀಗಾಗಿ ಮಳೆ ಬಂದರೆ ಮೈದಾನ ಒಣಗಲು ಹೆಚ್ಚು ಸಮಯ ಬೇಕಾಗಿಲ್ಲ.

ಮೈದಾನದಲ್ಲಿನ ಸೌಲಭ್ಯಗಳು

ಮೈದಾನದಲ್ಲಿ ಸಂಪೂರ್ಣವಾಗಿ ನವೀಕರಿಸಿದ ಡ್ರೆಸ್ಸಿಂಗ್ ಕೊಠಡಿಗಳಿದ್ದು, ಸುಧಾರಿತ ಸೌಲಭ್ಯಗಳು ಆಟಗಾರರಿಗೆ ನೆರವಾಗಲಿವೆ. 400 ಎಲ್‌ಇಡಿ ಫಿಕ್ಚರ್‌ಗಳನ್ನು ಹೊಂದಿರುವ ನಾಲ್ಕು ಎಲ್‌ಇಡಿ ಟವರ್‌ಗಳಿವೆ. ಮೈದಾನದ ಆಸನಗಳಿಗೆ ನೀಲಿ, ಕಿತ್ತಳೆ ಮತ್ತು ಹಸಿರು ಬಣ್ಣಗಳನ್ನು ಹಚ್ಚಲಾಗಿದೆ. ಮೆಟ್ಟಿಲುಗಳಿಗೆ ವಿಭಿನ್ನ ಬಣ್ಣವನ್ನು ನೀಡಲಾಗಿದೆ. ಇದರಿಂದ ಮೈದಾನಕ್ಕೆ ಬರು ಅಭಿಮಾನಿಗಳಿಗೆ ತುರ್ತು ಸಂದರ್ಭದಲ್ಲಿ ಮೆಟ್ಟಿಲುಗಳನ್ನು ಗುರುತಿಸಲು ಸುಲಭವಾಗುತ್ತದೆ.

ಕ್ರೀಡಾಂಗಣದ ಸಮೀಪವೇ ಮೆಟ್ರೋ ನಿಲ್ದಾಣವಿದ್ದು, ಪಂದ್ಯಗಳಿರುವ ದಿನಗಳಲ್ಲಿ ಹೆಚ್ಚುವರಿ ಅವಧಿಗೆ ಮೆಟ್ರೋ ರೈಲುಗಳು ಓಡುತ್ತವೆ. ಕ್ರೀಡಾಂಗಣದಲ್ಲಿ ಉಚಿತ ಕುಡಿಯುವ ನೀರು ಲಭ್ಯವಿದೆ. ಅಲ್ಲದೆ ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಕೈಗೆಟಕುವ ದರದಲ್ಲಿ ತಿನಿಸುಗಳು ಲಭ್ಯವಿರುತ್ತವೆ.

ಈ ಮೈದಾನದಲ್ಲಿ ಈವರೆಗೆ 37 ಟೆಸ್ಟ್‌ ಪಂದ್ಯಗಳು ನಡೆದಿದ್ದು, 28 ಏಕದಿನ ಹಾಗೂ 13 ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಿದೆ.

Whats_app_banner