ಕನ್ನಡ ಸುದ್ದಿ  /  Cricket  /  Wpl 2024 Delhi Capitals Vs Mumbai Indians Women Second Fight In Womens Premier League At Arun Jaitley Stadium Jra

WPL 2024: ದೆಹಲಿ ಹಂತದ ಮೊದಲ ಪಂದ್ಯದಲ್ಲಿ ಮುಂಬೈಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು; ಸೋಲಿನ ಸೇಡಿಗೆ ಆತಿಥೇಯರ ಪ್ಲಾನ್

DCW vs MIW: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ವನಿತೆಯರ ತಂಡಗಳು ಮುಖಾಮುಖಿಯಾಗುತ್ತಿವೆ. ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಮೆಗ್‌ ಲ್ಯಾನಿಂಗ್‌ ಪಡೆ ಕಾತರದಲ್ಲಿದೆ.

ದೆಹಲಿ ಹಂತದ ಮೊದಲ ಪಂದ್ಯದಲ್ಲಿ ಮುಂಬೈಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು
ದೆಹಲಿ ಹಂತದ ಮೊದಲ ಪಂದ್ಯದಲ್ಲಿ ಮುಂಬೈಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು

ಡಬ್ಲ್ಯೂಪಿಎಲ್‌ 2024ರ ಮೊದಲ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ 11 ಪಂದ್ಯಗಳ ಬಳಿಕ, ಇದೀಗ ಟೂರ್ನಿಯ ಉಳಿದ ಪಂದ್ಯಗಳಿಗಾಗಿ ಎಲ್ಲಾ ಐದು ತಂಡಗಳು ರಾಷ್ಟ್ರ ರಾಜಧಾನಿ ದೆಹಲಿಯತ್ತ ಮುಖ ಮಾಡಿವೆ. ಉದ್ಯಾನ ನಗರಿಯಲ್ಲಿ ನಡೆದ ಕೊನೆಯ ಪಂದ್ಯದಲ್ಲಿ, ಆತಿಥೇಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು, ಯುಪಿ ವಾರಿಯರ್ಸ್‌ ವಿರುದ್ಧ ಗೆಲುವಿನೊಂದಿಗೆ ತವರಿನ ಅಭಿಮಾನಿಗಳಿಗೆ ವಿದಾಯ ಹೇಳಿದೆ. ಇದೀಗ ಮಾರ್ಚ್ 5ರ ಮಂಗಳವಾರ, ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ವನಿತೆಯರ ತಂಡಗಳು ಮುಖಾಮುಖಿಯಾಗುತ್ತಿವೆ. ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಆತಿಥೇಯ ಡೆಲ್ಲಿ ಕಾತರದಲ್ಲಿದೆ.

ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ಪ್ರಸಕ್ತ ಆವೃತ್ತಿಯ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗದ ವಿರುದ್ಧ ತಂಡ ಸೋತಿತ್ತು. ಆ ಬಳಿಕ ನಡೆದ ಎಲ್ಲಾ ಮೂರು ಪಂದ್ಯಗಳಲ್ಲೂ ಲ್ಯಾನಿಂಗ್‌ ಪಡೆ ಗೆದ್ದಿದೆ. ಅತ್ತ ಮುಂಬೈ ತಂಡವು ಸತತ ಎರಡು ಗೆಲುವಿನ ಬಳಿಕ, ಯುಪಿ ವಿರುದ್ಧ ಮುಗ್ಗರಿಸಿತು. ಆದರೆ, ನ್ಯಾಟ್ ಸಿವರ್ ಬ್ರಂಟ್ ನಾಯಕತ್ವದಲ್ಲಿ ಆಡಿದ ಎರಡನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ತಂಡ ಗೆದ್ದಿದೆ.

ಇಂದಿನ ಪಂದ್ಯವು ಅಂಕಪಟ್ಟಿಯ ಅಗ್ರಸ್ಥಾನಿಗಳ ಕಾದಾಟ. ಅಲ್ಲದೆ, ಇಂದು ಗೆದ್ದ ತಂಡವು ಅಗ್ರಸ್ಥಾನದಲ್ಲಿ ಭದ್ರವಾಗಿ ಉಳಿಯಲಿದೆ. ಸದ್ಯ ಪಂದ್ಯ ದೆಹಲಿಯಲ್ಲಿ ನಡೆಯುತ್ತಿರುವುದರಿಂದ, ಈ ಮೈದಾನವು ಉಭಯ ತಂಡಗಳಿಗೂ ಹೊಸದಾಗಿದೆ.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಮುಖಾಮುಖಿ ದಾಖಲೆ

ಡಬ್ಲ್ಯೂಪಿಎಲ್‌ ಮೊದಲ ಆವೃತ್ತಿಯಲ್ಲಿ ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ ಮುಂಬೈ ಗೆದ್ದಿತ್ತು. ಆದರೆ, ಎರಡನೇ ಮುಖಾಮುಖಿಯಲ್ಲಿ ಕ್ಯಾಪಿಟಲ್ಸ್‌ ಸೇಡು ತೀರಿಸಿಕೊಂಡಿತು. ಆ ಎರಡೂ ಪಂದ್ಯಗಳು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದಿದ್ದವು. ಉಭಯ ತಂಡಗಳು ಸೀಸನ್ 1ರ ಫೈನಲ್‌ ಪಂದ್ಯದಲ್ಲಿ ಮತ್ತೆ ಮುಖಾಮುಖಿಯಾದವು. ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆದ್ದ ಮುಂಬೈ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯದಲ್ಲಿಯೂ ಮುಂಬೈ ಗೆದ್ದಿದೆ. ಹೀಗಾಗಿ ಉಭಯ ತಂಡಗಳ ವಿರುದ್ಧದ ಪಂದ್ಯಗಳಲ್ಲಿ ಮುಂಬೈ 3-1 ಅಂತರದಿಂದ ಮೇಲುಗೈ ಸಾಧಿಸಿದೆ.

ಪಿಚ್‌ ವರದಿ

ದೆಹಲಿಯ ಅರುಣ್‌ ಜೇಟ್ಲಿ ಮೈದಾನದ ಪಿಚ್‌ ತುಲನಾತ್ಮಕವಾಗಿ ಬ್ಯಾಟರ್‌ಗಳಿಗೆ ಹೆಚ್ಚು ನೆರವಾಗುವ ನಿರೀಕ್ಷೆ ಇದೆ. ಹೀಗಾಗಿ ಇಲ್ಲಿಯೂ ರನ್‌ ನಿರೀಕ್ಷಿಸಬಹುದು. ಆದರೆ, ಇಲ್ಲಿ ವೇಗಿಗಳಿಗಿಂತ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಲಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಪರಿಣಾಮಕಾರಿಯಾಗಲಿದ್ದಾರೆ. ಮೊದಲು ಬ್ಯಾಟಿಂಗ್‌ ಮಾಡುವ ತಂಡಗಳು 160-170 ರನ್‌ ಕಲೆ ಹಾಕಿದರೆ, ಚೇಸಿಂಗ್‌ ತುಂಬಾ ಕಠಿಣವಾಗಲಿದೆ.

ಮುಂಬೈ ಇಂಡಿಯನ್ಸ್ ಸಂಭಾವ್ಯ ಆಡುವ ಬಳಗ

ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್‌ ಕೀಪರ್), ನ್ಯಾಟ್ ಸಿವರ್ ಬ್ರಂಟ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಎಸ್ ಸಜನಾ, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಕೀರ್ತನಾ ಬಾಲಕೃಷ್ಣನ್, ಸೈಕಾ ಇಶಾಕ್.

ಡೆಲ್ಲಿ ಕ್ಯಾಪಿಟಲ್ಸ್‌ ಸಂಭಾವ್ಯ ಆಡುವ ಬಳಗ

ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್, ಅನ್ನಾಬೆಲ್ ಸದರ್ಲ್ಯಾಂಡ್, ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್), ಟಿಟಾಸ್ ಸಾಧು, ರಾಧಾ ಯಾದವ್, ಶಿಖಾ ಪಾಂಡೆ.‌

ಇದನ್ನೂ ಓದಿ | ಯುಪಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ ಆರ್​ಸಿಬಿ; ಪ್ಲೇಆಫ್​ನತ್ತ ದಿಟ್ಟ ಹೆಜ್ಜೆ

ಮಹಿಳಾ ಪ್ರೀಮಿಯರ್ ಲೀಗ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point