ಕನ್ನಡ ಸುದ್ದಿ  /  Cricket  /  Wpl 2024 Delhi Capitals Women Vs Up Warriorz 2nd Fight In Womens Premier League 2024 Meg Lanning Alyssa Healy Jra

WPL 2024: ಡೆಲ್ಲಿ ಕ್ಯಾಪಿಟಲ್ಸ್‌ vs ಯುಪಿ ವಾರಿಯರ್ಸ್‌ ಎರಡನೇ ಮುಖಾಮುಖಿ; ಒತ್ತಡದಲ್ಲಿ ಅಲಿಸ್ಸಾ‌ ಹೀಲಿ ಪಡೆ

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್‌ ತಂಡಗಳು ಡಬ್ಲ್ಯೂಪಿಎಲ್‌ 2024ರಲ್ಲಿ ಎರಡನೇ ಬಾರಿ ಮುಖಾಮುಖಿಯಾಗಲು ಸಜ್ಜಾಗಿವೆ. ಮೊದಲ ಪಂದ್ಯದಲ್ಲಿ ಅಲಿಸ್ಸಾ ಹೀಲಿ ಬಳಗದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 9 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು.

ಡೆಲ್ಲಿ ಕ್ಯಾಪಿಟಲ್ಸ್‌ vs ಯುಪಿ ವಾರಿಯರ್ಸ್‌ ಎರಡನೇ ಮುಖಾಮುಖಿ
ಡೆಲ್ಲಿ ಕ್ಯಾಪಿಟಲ್ಸ್‌ vs ಯುಪಿ ವಾರಿಯರ್ಸ್‌ ಎರಡನೇ ಮುಖಾಮುಖಿ (Women's Premier League (WPL) Twi)

ವಿಮೆನ್ಸ್ ಪ್ರೀಮಿಯರ್ ಲೀಗ್ (WPL‌ 2024) ಎರಡನೇ ಆವೃತ್ತಿಯ 15ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್‌ (Delhi Capitals Women vs UP Warriorz) ತಂಡಗಳು ಮುಖಾಮುಖಿಯಾಗುತ್ತಿವೆ. ಮಾರ್ಚ್ 8ರ ಶುಕ್ರವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಗುರುವಾರವಷ್ಟೇ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ವಿರುದ್ಧ ಸೋತ ಅಲಿಸ್ಸಾ‌ ಹೀಲಿ ಬಳಗ, ವಿಶ್ರಾಂತಿ ಇಲ್ಲದೆ ಇಂದು ಸತತ ಎರಡನೇ ದಿನವೂ ಪಂದ್ಯ ಆಡುತ್ತಿದೆ. ಈಗಾಗಲೇ ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ, ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಜಯದ ಓಟ ಮುಂದುವರೆಸುವ ನಿರೀಕ್ಷೆಯಲ್ಲಿದೆ.

ಅಲಿಸ್ಸಾ ಹೀಲಿ ಬಳಗವು ಇದುವರೆಗೆ ಆಡಿದ 6 ಪಂದ್ಯಗಳಿಂದ ಎರಡು ಗೆಲುವು ಮಾತ್ರ ಕಂಡಿದೆ. ಕೇವಲ ನಾಲ್ಕು ಅಂಕ ಗಳಿಸಿರುವ ತಂಡವು ಟೂರ್ನಿಯಲ್ಲಿ ನಾಕೌಟ್‌ ಹಂತಕ್ಕೆ ಲಗ್ಗೆ ಹಾಕಲು ಮುಂದೆ ಗೆಲುವ ಕಾಣುವುದು ಅನಿವಾರ್ಯವಾಗಿದೆ. ಆರ್‌ಸಿಬಿ ಮತ್ತು ಮುಂಬೈ ವಿರುದ್ದದ ಸತತ ಸೋಲುಗಳು ತಂಡದ ಪ್ಲೇ ಆಫ್‌ ಹಾದಿಯನ್ನು ದುರ್ಗಮಗೊಳಿಸಿದೆ.

ಅತ್ತ ಡಬ್ಲ್ಯುಪಿಎಲ್ 2024ರ ಆವೃತ್ತಿಯಲ್ಲಿ ಕ್ಯಾಪಿಟಲ್ಸ್‌ ಭರ್ಜರಿ ಫಾರ್ಮ್‌ನಲ್ಲಿದೆ. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿರುವ ತಂಡವು ಪ್ಲೇ ಆಫ್‌ಗೆ ಅಗ್ರಸ್ಥಾನಿಯಾಗಿ ಎಂಟ್ರಿ ಕೊಡುವ ಉತ್ಸಾಹದಲ್ಲಿದೆ. ಬಲಿಷ್ಠ ಆಟಗಾರರ ಸಂಯೋಜನೆಯೊಂದಿಗೆ ಪ್ರಬಲ ಆಡುವ ಬಳಗ ಹೊದಿರುವ ಮೆಗ್ ಲ್ಯಾನಿಂಗ್ ಪಡೆ, ಫೀಲ್ಡಿಂಗ್‌ ವಿಭಾಗದಲ್ಲೂ ಬಲಿಷ್ಠವಾಗಿದೆ. ಉಭಯ ತಂಡಗಳ ನಡುವೆ ಪ್ರಸಕ್ತ ಆವೃತ್ತಿಯಲ್ಲಿ ಇದು ಎರಡನೇ ಮುಖಾಮುಖಿಯಾಗಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 9 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು.

ಇದನ್ನೂ ಓದಿ | WPL 2024: ಯುಪಿ ವಿರುದ್ಧ ಗೆದ್ದು ಆರ್‌ಸಿಬಿಯನ್ನು ಕೆಳಕ್ಕೆ ತಳ್ಳಿದ ಮುಂಬೈ ಇಂಡಿಯನ್ಸ್;‌ ಹೀಗಿದೆ ಅಂಕಪಟ್ಟಿ

ದೆಹಲಿ ಪಿಚ್‌ ವರದಿ

ದೆಹಲಿಯಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಹೈಸ್ಕೋರಿಂಗ್‌ ಪಂದ್ಯಗಳು ನಡೆದಿವೆ. ಇಲ್ಲಿ ನಡೆದ ಮೊದಲ ಎರಡು ಪಂದ್ಯಗಳ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 196. ಇಲ್ಲಿ ಈವರೆಗೆ ನಡೆದ ಎಲ್ಲಾ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿವೆ. ಅಲ್ಲದೆ ಟಾಸ್‌ ಗೆದ್ದ ತಂಡವು ಬ್ಯಾಟಿಂಗ್‌ ಮಾಡಲು ಆದ್ಯತೆ ನೀಡಿವೆ. ಇಂದು ನಡೆಯಲಿರುವ ಪಂದ್ಯದಲ್ಲ ಡೆಲ್ಲಿ ಮತ್ತು ಯುಪಿ ತಂಡಗ‌ ಮೊದಲು ಬ್ಯಾಟಿಂಗ್‌ ನಡೆಸಿ ಅಧಿಕ ರನ್‌ ಕಲೆ ಹಾಕಲು ಆದ್ಯತೆ ನೀಡಲಿವೆ.

ಲೈವ್‌ ಸ್ಟ್ರೀಮಿಂಗ್‌ ವಿವರ

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್‌ ತಂಡಗಳ ನಡುವಿನ ಡಬ್ಲ್ಯೂಪಿಎಲ್‌ ಪಂದ್ಯವನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಪಂದ್ಯವನ್ನು ಸಂಪೂರ್ಣ ಉಚಿತವಾಗಿ ವೀಕ್ಷಿಸಬಹುದು. ಟಿವಿ ಮೂಲಕ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಡೆಲ್ಲಿ ಕ್ಯಾಪಿಟಲ್ಸ್‌ ಸಂಭಾವ್ಯ ಆಡುವ ಬಳಗ

ಮೆಗ್ ಲ್ಯಾನಿಂಗ್, ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಜೆಮಿಮಾ ರೋಡ್ರಿಗಸ್, ಮರಿಜಾನ್ನೆ ಕಪ್, ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ, ರಾಧಾ ಯಾದವ್, ಶಿಖಾ ಪಾಂಡೆ, ತನಿಯಾ ಭಾಟಿಯಾ, ಟಿಟಾಸ್ ಸಾಧು.

ಯುಪಿ ವಾರಿಯರ್ಸ್‌ ಸಂಭಾವ್ಯ ಆಡುವ ಬಳಗ

ಅಲಿಸ್ಸಾ ಹೀಲಿ, ಕಿರಣ್ ನವಗಿರೆ, ಚಾಮರಿ ಅಥಾಪತ್ತು, ಶ್ವೇತಾ ಸೆಹ್ರಾವತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಪೂನಂ ಖೇನ್ಮಾರ್, ಉಮಾ ಚೆಟ್ರಿ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ/ಸೈಮಾ ಠಾಕೋರ್, ರಾಜೇಶ್ವರಿ ಗಾಯಕ್ವಾಡ್.

ಇದನ್ನೂ ಓದಿ | WPL 2024: ಮುಂಬೈ ಇಂಡಿಯನ್ಸ್‌ ಆಲ್‌ರೌಂಡ್‌ ಆಟಕ್ಕೆ ಮಣಿದ ಯುಪಿ ವಾರಿಯರ್ಸ್‌; ಕೌರ್‌ ಪಡೆಗೆ ನಾಲ್ಕನೇ ಗೆಲುವು

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point