ಕನ್ನಡ ಸುದ್ದಿ  /  Cricket  /  Wpl 2024 Mumbai Indians Women Beat Up Warriorz By 42 Runs In Womens Premier League 2024 Harmanpreet Kaur Healy Jra

WPL 2024: ಮುಂಬೈ ಇಂಡಿಯನ್ಸ್‌ ಆಲ್‌ರೌಂಡ್‌ ಆಟಕ್ಕೆ ಮಣಿದ ಯುಪಿ ವಾರಿಯರ್ಸ್‌; ಕೌರ್‌ ಪಡೆಗೆ ನಾಲ್ಕನೇ ಗೆಲುವು

Womens Premier League 2024: ಯುಪಿ ವಾರಿಯರ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಭರ್ಜರಿ ಜಯ ಗಳಿಸಿದೆ. ಯುಪಿ ಪರ ಉತ್ತಮ ರನ್‌ ಗಳಿಸಿದವರು ದೀಪ್ತಿ ಶರ್ಮಾ ಮಾತ್ರ. ಕೊನೆಯವರೆಗೂ ಕ್ರೀಸ್‌ಕಚ್ಚಿ ಆಡಿದ ಆಲ್‌ರೌಂಡರ್‌, 53 ರನ್‌ ಗಳಿಸಿ ಅಜೇಯರಾಗಿ ಉಳಿದರು. ಇದು ಈ ಪಂದ್ಯದಲ್ಲೇ ದಾಖಲಾದ ಗರಿಷ್ಠ ಮೊತ್ತ.

ಮುಂಬೈ ಇಂಡಿಯನ್ಸ್‌ ಆಲ್‌ರೌಂಡ್‌ ಆಟಕ್ಕೆ ಮಣಿದ ಯುಪಿ ವಾರಿಯರ್ಸ್‌
ಮುಂಬೈ ಇಂಡಿಯನ್ಸ್‌ ಆಲ್‌ರೌಂಡ್‌ ಆಟಕ್ಕೆ ಮಣಿದ ಯುಪಿ ವಾರಿಯರ್ಸ್‌ (PTI)

ಯುಪಿ ವಾರಿಯರ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ವನಿತೆಯರ ತಂಡ ಸುಲಭ ಜಯ ಸಾಧಿಸಿದೆ. ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ (Womens Premier League 2024) ಎರಡನೇ ಆವೃತ್ತಿಯ 14ನೇ ಪಂದ್ಯದಲ್ಲಿ, ಹರ್ಮನ್‌ಪ್ರೀತ್‌ ಕೌರ್‌ ಬಳಗವು ಜಯದ ಹಳಿಗೆ ಮರಳಿದೆ. ಅಲಿಸ್ಸಾ ಹೀಲಿ ಬಳಗದ ವಿರುದ್ಧ 42 ರನ್‌ಗಳ ಅಂತರದಿಂದ ಭರ್ಜರಿ ಅಂತರದಿಂದ ಗೆದ್ದ ಮುಂಬೈ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ ತಂಡವು, ಆರಂಭಿಕ ಕುಸಿತದ ನಡುವೆಯೂ 6 ವಿಕೆಟ್‌ ಕಳೆದುಕೊಂಡು 160 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಹಾಲಿ ಚಾಂಪಿಯನ್‌ ಪರ ನ್ಯಾಟ್‌ ಸಿವರ್‌ ಬ್ರಂಟ್‌ 45 ರನ್‌ ಕಲೆ ಹಾಕಿದರು. ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಯುಪಿ, ಆರಂಭದಿಂದಲೂ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ತಂಡದ ಪರ ಉತ್ತಮ ರನ್‌ ಗಳಿಸಿದವರು ದೀಪ್ತಿ ಶರ್ಮಾ ಮಾತ್ರ. ಕೊನೆಯವರೆಗೂ ಕ್ರೀಸ್‌ಕಚ್ಚಿ ಆಡಿದ ದೀಪ್ತಿ 53 ರನ್‌ ಗಳಿಸಿದರು. ಇದು ಈ ಪಂದ್ಯದ ಗರಿಷ್ಠ ಮೊತ್ತ. ಅವರ ಹೊರತಾಗಿ ಯಾರಿಂದಲೂ ಪೈಪೋಟಿ ಬರದ ಕಾರಣದಿಂದ ಯುಪಿ ತಂಡ ಸೋಲನುಭವಿಸಿತು.

ಚೇಸಿಂಗ್‌ಗಿಳಿದ ಯುಪಿ ಪರ, ಆರಂಭಿಕರಾದ ಕಿರಣ್‌ ನಾವಿಗೆರೆ 7 ರನ್‌ ಗಳಿಸಿ ಔಟಾದರು. ಲಂಕಾದ ಅನುಭವಿ ಆಟಗಾರ್ತಿ ಚಾಮರಿ ಅಥಾಪಟ್ಟು 3 ರನ್‌ಗೆ ಔಟಾಗಿ ನಿರಾಶೆ ಮೂಡಿಸಿದರು. ನಾಯಕಿ ಹೀಲಿ ಆಟ 3 ರನ್‌ಗೆ ಅಂತ್ಯವಾಯ್ತು. ಅಬ್ಬರಿಸುವ ಸೂಚನೆ ನೀಡಿದ ಗ್ರೇಸ್‌ ಹ್ಯಾರಿಸ್‌ 15‌ ರನ್‌ ಗಳಿಸಿ ಔಟಾದರು. ಶ್ವೇತಾ 17 ರನ್‌ ಗಳಿಸಿ ಔಟಾದರು. ದೀಪ್ತಿ ಒಬ್ಬರೇ ಗೆಲ್ಲಿಸುವ ಪ್ರಯತ್ನ ಪಟ್ಟರು. ಆದರೆ ಅವರಿಗೆ ಉತ್ತಮ ಜೊತೆಯಾಟ ಸಿಗಲಿಲ್ಲ. ಕೊನೆಗೆ 118 ರನ್‌ಗೆ 9 ವಿಕೆಟ್‌ ಕಳೆದುಕೊಂಡು ಇನ್ನಿಂಗ್ಸ್‌ ಮುಗಿಸಿತು.

ಇದನ್ನೂ ಓದಿ | ಟೆಸ್ಟ್ ಕ್ರಿಕೆಟ್ ಎಂದರೆ ನಿಜವಾದ ಜೀವನ, ಬದುಕು ಕಲಿಸುವುದಕ್ಕಿಂತ ಹೆಚ್ಚು ಟೆಸ್ಟ್‌ ಕಲಿಸುತ್ತದೆ; ಆರ್ ಅಶ್ವಿನ್

ಮುಂಬೈ ಪರ ಸೈಕಾ ಇಶಾಕ್‌ 3 ವಿಕೆಟ್‌ ಪಡೆದರೆ, ನ್ಯಾಟ್‌ ಸಿವರ್‌ ಬ್ರಂಟ್‌ 2 ವಿಕೆಟ್ ಪಡೆದರು. ಮುಂಬೈ ತಂಡದ ಅದ್ಭುತ ಫೀಲ್ಡಿಂಗ್‌, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಮುಂಬೈ ಸ್ಪರ್ಧಾತ್ಮಕ ಮೊತ್ತ

ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಪರ ಯಾಸ್ತಿಕಾ ಹಾಗೂ ಮ್ಯಾಥ್ಯೂಸ್‌ ಒಂದಕಿ ಮೊತ್ತಕ್ಕೆ ಔಟಾದರು. ಈ ವೇಳೆ ನ್ಯಾಟ್‌ ಸಿವರ್‌ ಬ್ರಂಟ್‌ ಮತ್ತು ನಾಯಕಿ ಕೌರ್ ಉತ್ತಮವಾಗಿ ಬ್ಯಾಟ್‌ ಬೀಸಿದರು. ಬ್ರಂಟ್‌ 45 ರನ್‌ ಗಳಿಸಿ ಬೋಲ್ಡ್‌ ಆದರು. ಕೌರ್ ಕೂಡಾ 33 ರನ್‌ ಗಳಿಸಿದ್ದಾಗ ಚೊಚ್ಚಲ ಪಂದ್ಯ ಆಡಿದ ಸೈಮಾ ಠಾಕೋರ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ಅಮೇಲಿಯಾ ಕೆರ್‌ 39 ರನ್‌ ಗಳಿಸಿದರೆ, ಸಜನಾ 22 ರನ್‌ ಕಲೆ ಹಾಕಿ ತಂಡದ ಮೊತ್ತ ಹೆಚ್ಚಿಸಿದರು.

ಈ ಗೆಲುವಿನೊಂದಿಗೆ ಮುಂಬೈ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಎರಡನೇ ಸ್ಥಾನದಲ್ಲಿದ್ದ ಆರ್‌ಸಿಬಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಅತ್ತ ಯುಪಿ ವಾರಿಯರ್ಸ್‌ ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದೆ.

ಮುಂಬೈ ಇಂಡಿಯನ್ಸ್‌ ಆಡುವ ಬಳಗ

ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್‌ ಕೀಪರದದ), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಅಮಂಜೋತ್ ಕೌರ್, ಎಸ್ ಸಜನಾ, ಹುಮೈರಾ ಕಾಜಿ, ಶಬ್ನಿಮ್ ಇಸ್ಮಾಯಿಲ್, ಸೈಕಾ ಇಶಾಕ್.

ಯುಪಿ ವಾರಿಯರ್ಸ್‌ ಆಡುವ ಬಳಗ

ಅಲಿಸ್ಸಾ ಹೀಲಿ (ನಾಯಕಿ ಮತ್ತು ವಿಕೆಟ್‌ ಕೀಪರ್), ಕಿರಣ್ ನವಗಿರೆ, ಚಾಮರಿ ಅಥಾಪತ್ತು, ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಪೂನಂ ಖೇಮ್ನಾರ್, ಸೋಫಿ ಎಕ್ಲೆಸ್ಟನ್, ಉಮಾ ಚೆಟ್ರಿ, ರಾಜೇಶ್ವರಿ ಗಾಯಕ್ವಾಡ್, ಸೈಮಾ ಠಾಕೋರ್.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಮಹಿಳಾ ಪ್ರೀಮಿಯರ್ ಲೀಗ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point