MIW vs UPW: ಮುಂಬೈ ಇಂಡಿಯನ್ಸ್ ತಂಡಕ್ಕೆ ಕೌರ್ ಬದಲು ಸಿವರ್ ಬ್ರಂಟ್ ನಾಯಕಿ; ಯುಪಿ ತಂಡದಲ್ಲೂ ಒಂದು ಬದಲಾವಣೆ
Mumbai Indians Women vs UP Warriorz: ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿಮೆನ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಈವರೆಗೆ 3 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ ತಂಡವೇ ಮೇಲುಗೈ ಸಾಧಿಸಿದೆ.
ವಿಮೆನ್ಸ್ ಪ್ರೀಮಿಯರ್ ಲೀಗ್‌ನ (Womens Premier League 2024) ಎರಡನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಅಲಿಸ್ಸಾ ಹೀಲಿ ನಾಯಕತ್ವದ ಯುಪಿ ವಾರಿಯರ್ಸ್ (Mumbai Indians Women vs UP Warriorz) ಮುಖಾಮುಖಿಯಾಗುತ್ತಿವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ನಾಯಕಿ ಹೀಲಿ ನಿರೀಕ್ಷೆಯಂತೆಯೇ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಇಂದಿನ ಪಂದ್ಯಕ್ಕೆ ಮುಂಬೈ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಬದಲಿಗೆ ಇಂದು ಮುಂಬೈ ತಂಡವನ್ನು ನಾಟ್ ಸಿವರ್ ಬ್ರಂಟ್ ಮುನ್ನಡೆಸುತ್ತಿದ್ದಾರೆ. ಸಣ್ಣ ಗಾಯದಿಂದಾಗಿ ಕೌರ್‌ಗೆ ವಿಶ್ರಾಂತಿ ನೀಡಲಾಗಿದೆ. ಹುಮೈರಾ ಕಾಜಿ ಮತ್ತು ಇಸ್ಸಿ ವಾಂಗ್ ತಂಡ ಸೇರಿಕೊಂಡಿದ್ದಾರೆ. ಅತ್ತ ಯುಪಿ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದೆ. ಗೌಹರ್ ಸುಲ್ತಾನ ಬದಲಿಗೆ ಅಂಜಲಿ ಸರ್ವಾಣಿ ಆಡುತ್ತಿದ್ದಾರೆ.
ಇದನ್ನೂ ಓದಿ | ಆಟಗಾರರ ವಾರ್ಷಿಕ ಒಪ್ಪಂದ ಪ್ರಕಟಿಸಿದ ಬಿಸಿಸಿಐ; ಇಶಾನ್-ಅಯ್ಯರ್ಗೆ ಗೇಟ್ಪಾಸ್, ಜಡೇಜಾ, ರಿಂಕು ಸೇರಿ ಹಲವರಿಗೆ ಬಡ್ತಿ
ಮುಂಬೈ ತಂಡವು ಟೂರ್ನಿಯಲ್ಲಿ ಆಡಿದ ಕಳೆದೆರಡು ಪಂದ್ಯಗಳಲ್ಲಿ ಸತತ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಯುಪಿ ವಾರಿಯರ್ಸ್ ತಂಡವು ಆಡಿದ ಎರಡೂ ಪಂದ್ಯಗಳನ್ನು ಸೋತು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆದ್ದು ಮುನ್ನಡೆ ಕಾಯ್ದುಕೊಳ್ಳುವ ತವಕದಲ್ಲಿ ತಂಡವಿದೆ.
ಮುಖಾಮುಖಿ ದಾಖಲೆ
ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮುಂಬೈ ಮತ್ತು ಯುಪಿ ತಂಡಗಳು ಈವರೆಗೆ ಪರಸ್ಪರ 3 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ ತಂಡವು ಎರಡು ಪಂದ್ಯಗಳನ್ನು ಗೆದ್ದರೆ, ಒಂದು ಪಂದ್ಯದಲ್ಲಿ ಯುಪಿ ಜಯದ ನಗೆ ಬೀರಿದೆ.
ಪಿಚ್ ವರದಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೊಡ್ಡ ಮೊತ್ತ ಕಲೆಹಾಕಬಹುದಾದರೂ, ಈ ಬಾರಿಯ ಆವೃತ್ತಿಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳು ವೇಗದ ಆಟವಾಡುವಲ್ಲಿ ವಿಫಲವಾಗಿವೆ. ಇಬ್ಬನಿಯಿಂದಾಗಿ ಚೇಸಿಂಗ್ ಮಾಡುವ ತಂಡಗಳು ಪಂದ್ಯದ ಲಾಭ ಪಡೆದಿವೆ. ಹೀಗಾಗಿ ಟಾಸ್ ಗೆದ್ದ ತಂಡವು ಚೇಸಿಂಗ್ ಆಯ್ಕೆ ಮಾಡುವ ಸಾಧ್ಯತೆಯೇ ಹೆಚ್ಚು.
ಇದನ್ನೂ ಓದಿ | WPL 2024: ಗುಜರಾತ್ ವಿರುದ್ಧದ ಪಂದ್ಯದ ವೇಳೆ ಶ್ರೇಯಾಂಕ ಪಾಟೀಲ್‌ಗೆ ಪ್ರಪೋಸ್ ಮಾಡಿದ RCB ಅಭಿಮಾನಿ; ಫೋಟೋ ವೈರಲ್
ಲೈವ್ ಸ್ಟ್ರೀಮಿಂಗ್ ವಿವರ
ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ವನಿತೆಯರ ತಂಡಗಳ ನಡುವಿನ ಡಬ್ಲ್ಯೂಪಿಎಲ್ ಪಂದ್ಯವನ್ನು ಟಿವಿ ಮೂಲಕ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಸಂಪೂರ್ಣ ಉಚಿತವಾಗಿ ಪಂದ್ಯವನ್ನು ವೀಕ್ಷಿಸಬಹುದು. ಅಲ್ಲದೆ ನಮ್ಮ ಇಂಟರ್ನೆಟ್ ವೇಗಕ್ಕೆ ಅನುಗುಣವಾಗಿ ಗುಣಮಟ್ಟದ ವಿಡಿಯೋ ವೀಕ್ಷಿಸಬಹುದು. ಲೀಗ್‌ನ ಎಲ್ಲಾ ಪಂದ್ಯಗಳು ಇಲ್ಲಿಯೇ ನೇರಪ್ರಸಾರವಾಗಲಿದೆ.
ಮುಂಬೈ ಇಂಡಿಯನ್ಸ್ ಆಡುವ ಬಳಗ
ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಅಮನ್ಜೋತ್ ಕೌರ್, ಇಸ್ಸಿ ವಾಂಗ್, ಎಸ್ ಸಜನಾ, ಹುಮೈರಾ ಕಾಜಿ, ಕೀರ್ತನಾ ಬಾಲಕೃಷ್ಣನ್, ಸೈಕಾ ಇಶಾಕ್.
ಯುಪಿ ವಾರಿಯರ್ಜ್ ಆಡುವ ಬಳಗ
ಅಲಿಸ್ಸಾ ಹೀಲಿ (ನಾಯಕಿ ಮತ್ತು ವಿಕೆಟ್ ಕೀಪರ್), ವೃಂದಾ ದಿನೇಶ್, ತಹ್ಲಿಯಾ ಮೆಗ್ರಾತ್, ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ಪೂನಂ ಖೇಮ್ನಾರ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.
ಇದನ್ನೂ ಓದಿ | Photo: ಮೂರನೇ ಮಗುವಿಗೆ ತಂದೆಯಾದ ಕೇನ್ ವಿಲಿಯಮ್ಸನ್; ರಾಜಕುಮಾರಿಯ ಮೊದಲ ಫೋಟೋ ಹಂಚಿಕೊಂಡ ಕಿವೀಸ್ ಆಟಗಾರ
(This copy first appeared in Hindustan Times Kannada website. To read more like this please logon to kannada.hindustantimes.com)