ಕನ್ನಡ ಸುದ್ದಿ  /  Cricket  /  Wpl 2024 Up Warriorz Vs Royal Challengers Bangalore Women Second Fight In Womens Premier League Smriti Mandhana Jra

WPL 2024: ಆರ್‌ಸಿಬಿ vs ಯುಪಿ ವಾರಿಯರ್ಸ್ 2ನೇ ಮುಖಾಮುಖಿ; ತವರು ಅಭಿಮಾನಿಗಳಿಗೆ ಗೆಲುವಿನ ವಿದಾಯಕ್ಕೆ ಮಂಧಾನ ಪಡೆ ಸಜ್ಜು

ಡಬ್ಲ್ಯೂಪಿಎಲ್ 2024ರಲ್ಲಿ ಬೆಂಗಳೂರು ಹಂತದ ಕೊನೆಯ ಪಂದ್ಯದಲ್ಲಿ ಸ್ಮೃತಿ ಮಂಧಾನ ನೇತೃತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಅಲಿಸ್ಸಾ ಹೀಲಿ ನೇತೃತ್ವದ ಯುಪಿ ವಾರಿಯರ್ಸ್ ಸವಾಲೆಸುತ್ತಿದೆ. ಉಭಯ ತಂಡಗಳ ನಡುವೆ ಪ್ರಸಕ್ತ ಆವೃತ್ತಿಯ ಎರಡನೇ ಮುಖಾಮುಖಿ ಇದಾಗಿದ್ದು, ಗೆಲುವಿನೊಂದಿಗೆ ಬೆಂಗಳೂರು ಅಭಿಮಾನಿಗಳಿಗೆ ವಿದಾಯ ಹೆಳಲು ಆರ್‌ಸಿಬಿ ಸಜ್ಜಾಗಿದೆ.

ಆರ್‌ಸಿಬಿ vs ಯುಪಿ ವಾರಿಯರ್ಸ್ 2ನೇ ಮುಖಾಮುಖಿ
ಆರ್‌ಸಿಬಿ vs ಯುಪಿ ವಾರಿಯರ್ಸ್ 2ನೇ ಮುಖಾಮುಖಿ (PTI)

ತವರು ನೆಲ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕೊನೆಯ ಪಂದ್ಯವನ್ನು ಆಡಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore Women) ತಂಡ ಸಜ್ಜಾಗಿದೆ. ತವರಿನ ಅಭಿಮಾನಿಗಳ ಅಪಾರ ಬೆಂಬಲದೊಂದಿಗೆ ತುಂಬಿದ ಕ್ರೀಡಾಂಣದಲ್ಲಿ ಯುಪಿ ವಾರಿಯರ್ಸ್‌ (UP Warriorz) ತಂಡವನ್ನು ಆರ್‌ಸಿಬಿ ಎದುರಿಸುತ್ತಿದೆ. ಮಾರ್ಚ್‌ 4ರ ಸೋಮವಾರ ಮಹಿಳಾ ಪ್ರೀಮಿಯರ್ ಲೀಗ್ 2024ರ (Womens Premier League 2024) 11ನೇ ಹಾಗೂ ಬೆಂಗಳೂರು ಹಂತದ ಕೊನೆಯ ಪಂದ್ಯದಲ್ಲಿ ಸ್ಮೃತಿ ಮಂಧಾನ ಬಳಗಕ್ಕೆ ಅಲಿಸ್ಸಾ ಹೀಲಿ ಪಡೆ ಸವಾಲೆಸುತ್ತಿದೆ. ಉಭಯ ತಂಡಗಳ ನಡುವೆ ಪ್ರಸಕ್ತ ಆವೃತ್ತಿಯ ಎರಡನೇ ಮುಖಾಮುಖಿ ಇದಾಗಿದ್ದು, ಹೀಲಿ ಬಳಗದ ವಿರುದ್ಧ ಸತತ ಎರಡನೇ ಗೆಲುವಿಗೆ ಆರ್‌ಸಿಬಿ ಹವಣಿಸುತ್ತಿದೆ.

ಟೂರ್ನಿಯಲ್ಲಿ ಆರ್‌ಸಿಬಿಯ ಅಭಿಯಾನ ಅಮೋಘವಾಗಿತ್ತು. ತವರು ಮೈದಾನದಲ್ಲಿ ಸತತ ಎರಡು ಗೆಲುವುಗಳೊಂದಿಗೆ ಸ್ಫೋಟಕ ಆರಂಭ ಪಡೆದ ತಂಡವು, ಆ ಬಳಿಕ ಡೆಲ್ಲಿ ಹಾಗೂ ಮುಂಬೈ ವಿರುದ್ಧ ಸತತ ಎರಡು ಸೋಲುಗಳೊಂದಿಗೆ ಮುಗ್ಗರಿಸಿತು.

ಉಭಯ ತಂಡಗಳ ನಡುವಣ ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ನೀಡಿದ 152 ರನ್‌ಗಳ ಅಲ್ಪ ಗುರಿ ಬೆನ್ನಟ್ಟಿದ್ದ ಯುಪಿ, ಕೇವಲ ಎರಡು ರನ್‌ಗಳಿಂದ ಸೋಲು ಕಂಡಿತು. ಕಳೆದ ಆವೃತ್ತಿಯಲ್ಲಿ ಫಾರ್ಮ್‌ ಕಳೆದುಕೊಂಡಿದ್ದ ನಾಯಕಿ ಸ್ಮೃತಿ ಈ ಬಾರಿ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ. ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 139 ರನ್‌ ಗಳಿಸಿ ತಂಡದ ಅಧಿಕ ರನ್‌ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಇದೇ ವೇಳೆ ಕಳೆದ ಆವೃತ್ತಿಯಲ್ಲಿ ಸ್ಫೋಟಕವಾಗಿದ್ದ ಸೋಫಿ ಡಿವೈನ್, ಈ ಆವೃತ್ತಿಯಲ್ಲಿ ಮಂಕಾಗಿದ್ದಾರೆ. ಅತ್ತ ಸಬ್ಬಿನೇನಿ ಮೇಘನಾ ಆಟ ತಂಡಕ್ಕೆ ಬಲ ತುಂಬಿದೆ. ಟೂರ್ನಿಯಲ್ಲಿ 136 ರನ್‌ ಪೇರಿಸಿರುವ ಅವರು, ಆರ್‌ಸಿಬಿಯ ಎರಡನೇ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಎಲಿಸ್‌ ಪೆರ್ರಿ, ಮುಂಬೈ ವಿರುದ್ಧದ ಪಂದ್ಯದಲ್ಲಿ ಜವಾಬ್ದಾರಿಯುತ ಆಟವಾಡಿದ್ದಾರೆ.

ಇದನ್ನೂ ಓದಿ | WPL: ಗುಜರಾತ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 25 ರನ್‌ಗಳ ಗೆಲುವು; ಸತತ 4 ಸೋಲು ಕಂಡ ಜೈಂಟ್ಸ್ ಪ್ಲೇಆಫ್‌ನಿಂದ ಬಹುತೇಕ ಹೊರಕ್ಕೆ

ಆರ್‌ಸಿಬಿ ಮತ್ತು ಯುಪಿ ವಾರಿಯರ್ಸ್‌ ತಂಡಗಳ ನಡುವಿನ ವಿಮೆನ್ಸ್‌ ಪ್ರೀಮಿಯರ್ ಲೀಗ್‌ ಪಂದ್ಯವನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಪಂದ್ಯವನ್ನು ಸಂಪೂರ್ಣ ಉಚಿತವಾಗಿ ವೀಕ್ಷಿಸಬಹುದು. ಟಿವಿ ಮೂಲಕ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು. ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು ಇಲ್ಲಿ ನೋಡಬಹುದು.

ಆರ್‌ಸಿಬಿ ಸಂಭಾವ್ಯ ಆಡುವ ಬಳಗ

ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್‌ ಕೀಪರ್), ಸೋಫಿ ಮೊಲಿನ್, ಜಾರ್ಜಿಯಾ ವೇರ್ಹಮ್, ಶ್ರೇಯಾಂಕ ಪಾಟೀಲ್, ಸಿಮ್ರಾನ್ ಬಹದ್ದೂರ್, ಆಶಾ ಸೋಭಾನಾ, ರೇಣುಕಾ ಠಾಕೂರ್ ಸಿಂಗ್.

ಯುಪಿ ವಾರಿಯರ್ಸ್‌ ಸಂಭಾವ್ಯ ಆಡುವ ಬಳಗ

ಅಲಿಸ್ಸಾ ಹೀಲಿ (ನಾಯಕಿ ಮತತ್ತು ವಿಕೆಟ್‌ ಕೀಪರ್), ಕಿರಣ್ ನವಗಿರೆ, ಚಾಮರಿ ಅಥಾಪತ್ತು, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್, ಪೂನಮ್ ಖೇಮ್ನಾರ್, ಸೈಮಾ ಠಾಕೋರ್, ಸೋಫಿ ಎಕ್ಲೆಸ್ಟನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.

ಮಹಿಳಾ ಪ್ರೀಮಿಯರ್ ಲೀಗ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point