ಕನ್ನಡ ಸುದ್ದಿ  /  Cricket  /  Wpl 2024 Up Warriorz Win Toss Choose Bowl Vs Gujarat Giants In Womens Premier League Laura Wolvaardt Athapaththu Jra

ಗುಜರಾತ್‌ ಜೈಂಟ್ಸ್‌ ಆಡುವ ಬಳಗಕ್ಕೆ ವೊಲ್ವಾರ್ಡ್ಟ್ ಎಂಟ್ರಿ; ಯುಪಿ ವಾರಿಯರ್ಸ್‌ ತಂಡ ಸೇರಿಕೊಂಡ ಚಾಮರಿ ಅಥಾಪತ್ತು

UPW vs GG: ವಿಮೆನ್ಸ್‌ ಪ್ರೀಮಿಯರ್‌ ಲೀಗ್ ಇತಿಹಾಸದಲ್ಲಿ ಗುಜರಾತ್ ಜೈಂಟ್ಸ್ ವಿರುದ್ದ ಆಡಿದ ಎರಡೂ ಪಂದ್ಯಗಳಲ್ಲಿ ಯುಪಿ‌ ವಾರಿಯರ್ಸ್ ಜಯ ಗಳಿಸಿದೆ. ಇದೀಗ ಬೆತ್‌ ಮೂನಿ ಬಳಗದ ವಿರುದ್ಧ ಅಜೇಯ ಓಟ ಮುಂದುವರೆಸಲು ಅಲಿಸ್ಸಾ ಹೀಲಿ ಪಡೆ ಸಜ್ಜಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ.

ಗುಜರಾತ್‌ ಜೈಂಟ್ಸ್‌ ಆಡುವ ಬಳಗಕ್ಕೆ ವೊಲ್ವಾರ್ಡ್ಟ್ ಎಂಟ್ರಿ
ಗುಜರಾತ್‌ ಜೈಂಟ್ಸ್‌ ಆಡುವ ಬಳಗಕ್ಕೆ ವೊಲ್ವಾರ್ಡ್ಟ್ ಎಂಟ್ರಿ

ವಿಮೆನ್ಸ್ ಪ್ರೀಮಿಯರ್ ಲೀಗ್‌ (Womens Premier League 2024) ಎರಡನೇ ಆವೃತ್ತಿಯ ಎಂಟನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ಮತ್ತು ಗುಜರಾತ್ ಜೈಂಟ್ಸ್ (UP Warriorz vs Gujarat Giants) ತಂಡಗಳು ಮುಖಾಮುಖಿಯಾಗುತ್ತಿವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಟಾಸ್‌ ಗೆದ್ದ ಯುಪಿ ತಂಡವು ನಿರೀಕ್ಷೆಯಂತೆಯೇ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.‌ ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ಗುಜರಾತ್ ಜೈಂಟ್ಸ್, ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಅತ್ತ ಸತತ ಎರಡು ಸೋಲುಗಳ ಬಳಿಕ ಕೊನೆಯ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿದ ಅಲಿಸ್ಸಾ ಹೀಲಿ ಬಳಗವು, ಗೆಲುವಿನ ಓಟ ಮುಂದುವರೆಸುವ ಉತ್ಸಾಹದಲ್ಲಿದೆ.

ಸತತ ಸೋಲಿನಿಂದ ಕಂಗೆಟ್ಟಿರುವ ಗುಜರಾತ್‌, ಇಂದು ತಮ್ಮ ಬತ್ತಳಿಕೆಯಲ್ಲಿರುವ ಪ್ರಬಲ ಬ್ಯಾಟಿಂಗ್‌ ಅಸ್ತ್ರವನ್ನು ಆಡುವ ಬಳಗಕ್ಕೆ ಕರೆತಂದಿದೆ. ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ್ತಿ ಲಾರಾ ವೊಲ್ವಾರ್ಡ್ ತಹುಹು ಬದಲಿಗೆ ತಂಡ ಸೇರಿಕೊಂಡಿದ್ದಾರೆ. ಅತ್ತ ಯುಪಿ ತಂಡದ ಪರ ಶ್ರೀಲಂಕಾ ನಾಯಕಿ ಚಾಮರಿ ಅಥಾಪತ್ತು  ಆಡಲಿದ್ದಾರೆ. ತಾಹ್ಲಿಯಾ ಮೆಕ್‌ಗ್ರಾತ್‌ ಆಡುವ ಬಳಗದಿಂದ ಹೊರಬಿದ್ದಿದ್ದಾರೆ. ಉಭಯ ತಂಡಗಳಿಗೆ ಬಲಿಷ್ಠ ಆಟಗಾರ್ತಿಯರ ಸೇರ್ಪಡೆಯಾಗಿದ್ದು, ಇಂದಿನ ಪಂದ್ಯ ಕುತೂಹಲ ಮೂಡಿಸಿದೆ.

ಮುಖಾಮುಖಿ ದಾಖಲೆ

ಡಬ್ಲ್ಯೂಪಿಎಲ್ 2023ರ ಮೊದಲ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ವಿರುದ್ದದ ಎರಡೂ ಪಂದ್ಯಗಳಲ್ಲಿಯೂ ಯುಪಿ ಮೂರು ವಿಕೆಟ್‌ಗಳಿಂದ ಜಯ ಗಳಿಸಿತ್ತು. ವಿಶೇಷವೆಂದರೆ, ಈ ಎರಡೂ ಪಂದ್ಯಗಳಲ್ಲಿಯೂ ಒಂದು ಎಸೆತ ಬಾಕಿ ಇರುವಂತೆಯೇ ಯುಪಿ ಚೇಸಿಂಗ್‌ ಪೂರ್ಣಗೊಳಿಸಿತ್ತು. ಮತ್ತೊಂದೆಡೆ ಗ್ರೇಸ್ ಹ್ಯಾರಿಸ್ ಎರಡೂ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಚಿನ್ನಸ್ವಾಮಿ ಮೈದಾನದ ಪಿಚ್‌ ವರದಿ

ಪ್ರಸಕ್ತ ಆವೃತ್ತಿಯ ಡಬ್ಲ್ಯೂಪಿಎಲ್‌‌ ಪಂದ್ಯಾವಳಿಯಲ್ಲಿ ಕೇವಲ ಎರಡು ಬಾರಿ ಮಾತ್ರ ಮೊದಲು ಬ್ಯಾಟಿಂಗ್‌ ಮಾಡಿದ ತಂಡಗಳು ಗೆದ್ದಿವೆ. ಉಳಿದ ಐದು ಪಂದ್ಯಗಳಲ್ಲಿ ಚೇಸಿಂಗ್‌ ನಡೆಸಿದ ತಂಡ ಗೆದ್ದಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ ಬ್ಯಾಟಿಂಗ್ ಮಾಡಲು ಟ್ರ್ಯಾಕ್ ಹೇಳಿ ಮಾಡಿಸಿದಂತಿರುತ್ತದೆ. ಆದರೆ, 150ಕ್ಕೂ ಅಧಿಕ ಟಾರ್ಗೆಟ್‌ ಇದ್ದರೆ, ಚೇಸಿಂಗ್‌ ಕೂಡಾ ಕಠಿಣವಾಗುವ ಸಾಧ್ಯತೆ ಇದೆ. 150-160 ಟಾರ್ಗೆಟ್‌ ಸಿಕ್ಕರೆ, ಸ್ಪರ್ಧಾತ್ಮಕ ಪೈಪೋಟಿ ನಿರೀಕ್ಷಿಸಬಹುದು.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಗುಜರಾತ್‌ ಜೈಂಟ್ಸ್‌ ಆಡುವ ಬಳಗ

ಹರ್ಲೀನ್ ಡಿಯೋಲ್, ಬೆತ್ ಮೂನಿ (ನಾಯಕಿ ಮತ್ತು ವಿಕೆಟ್‌ ಕೀಪರ್), ಲಾರಾ ವೊಲ್ವಾರ್ಡ್ಟ್, ಫೋಬ್ ಲಿಚ್‌ಫೀಲ್ಡ್, ಆಶ್ಲೀ ಗಾರ್ಡ್ನರ್, ದಯಾಲನ್ ಹೇಮಲತಾ, ಕ್ಯಾಥರಿನ್ ಬ್ರೈಸ್, ಸ್ನೇಹ ರಾಣಾ, ತನುಜಾ ಕನ್ವರ್, ಮನ್ನತ್ ಕಶ್ಯಪ್, ಮೇಘನಾ ಸಿಂಗ್.

ಯುಪಿ ವಾರಿಯರ್ಸ್‌ ಆಡುವ ಬಳಗ

ಅಲಿಸ್ಸಾ ಹೀಲಿ‌ (ನಾಯಕಿ ಮತ್ತು ವಿಕೆಟ್‌ ಕೀಪರ್), ಕಿರಣ್ ನವಗಿರೆ, ಚಾಮರಿ ಅಥಾಪತ್ತು, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಸೈಮಾ ಠಾಕೋರ್, ಶ್ವೇತಾ ಸೆಹ್ರಾವತ್, ಪೂನಂ ಖೇಮ್ನಾರ್, ಸೋಫಿ ಎಕ್ಲೆಸ್ಟನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.

ಮಹಿಳಾ ಪ್ರೀಮಿಯರ್ ಲೀಗ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)