ಚಿನ್ನಸ್ವಾಮಿ ಮೈದಾನದ ಕೊನೆಯ ಪಂದ್ಯದಿಂದ ಕನ್ನಡತಿ ಶ್ರೇಯಾಂಕ ಪಾಟೀಲ್ ಔಟ್; ಆರ್‌ಸಿಬಿಗೆ ಏಕ್ತಾ ಬಿಶ್ತ್ ಪದಾರ್ಪಣೆ
ಮಹಿಳಾ ಪ್ರೀಮಿಯರ್ ಲೀಗ್ 2024ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕೊನೆಯ ಪಂದ್ಯ ನಡೆಯುತ್ತಿದೆ. ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನೊಂದಿಗೆ ಗೆಲುವಿನೊಂದಿಗೆ ತವರಿನ ಅಭಿಮಾನಿಗಳಿಗೆ ಮನರಂಜನೆ ನೀಡಲು ಮುಂದಾಗಿದೆ.
ಡಬ್ಲ್ಯೂಪಿಎಲ್ ಎರಡನೇ ಆವೃತ್ತಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore Women) ಮತ್ತು ಯುಪಿ ವಾರಿಯರ್ಸ್ (UP Warriorz) ತಂಡಗಳು ಮುಖಾಮುಖಿಯಾಗುತ್ತಿವೆ. ಮಹಿಳಾ ಪ್ರೀಮಿಯರ್ ಲೀಗ್ 2024ರ (Womens Premier League 2024) 11ನೇ ಪಂದ್ಯದಲ್ಲಿ ಟಾಸ್ ಗೆದ್ದ ಯಪಿ ನಾಯಕಿ ಅಲಿಸ್ಸಾ ಹೀಲಿ ಚೇಸಿಂಗ್ ಆಯ್ಕೆ ಮಾಡಿದ್ದಾರೆ.
ಇಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಕನ್ನಡತಿ ಶ್ರೇಯಾಂಕ ಪಾಟೀಲ್ ಇಂದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಏಕ್ತಾ ಬಿಶ್ತ್ ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅತ್ತ ಯುಪಿ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಉಭಯ ತಂಡಗಳ ನಡುವಣ ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ನೀಡಿದ 152 ರನ್‌ಗಳ ಅಲ್ಪ ಗುರಿ ಬೆನ್ನಟ್ಟಿದ್ದ ಯುಪಿ, ಕೇವಲ ಎರಡು ರನ್‌ಗಳಿಂದ ಸೋಲು ಕಂಡಿತು. ಕಳೆದ ಆವೃತ್ತಿಯಲ್ಲಿ ಫಾರ್ಮ್ ಕಳೆದುಕೊಂಡಿದ್ದ ನಾಯಕಿ ಸ್ಮೃತಿ ಈ ಬಾರಿ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ. ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 139 ರನ್ ಗಳಿಸಿ ತಂಡದ ಅಧಿಕ ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಇದೇ ವೇಳೆ ಕಳೆದ ಆವೃತ್ತಿಯಲ್ಲಿ ಸ್ಫೋಟಕವಾಗಿದ್ದ ಸೋಫಿ ಡಿವೈನ್, ಈ ಆವೃತ್ತಿಯಲ್ಲಿ ಮಂಕಾಗಿದ್ದಾರೆ.
ಇದನ್ನೂ ಓದಿ | ಮತ್ತೆ ಮಿಂಚಿದ ಕೆಳಕ್ರಮಾಂಕದ ಆಟಗಾರರು; ತಮಿಳುನಾಡು ಮಣಿಸಿ 48ನೇ ಬಾರಿ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ ಮುಂಬೈ
ಅತ್ತ ಸಬ್ಬಿನೇನಿ ಮೇಘನಾ ಆಟ ತಂಡಕ್ಕೆ ಬಲ ತುಂಬಿದೆ. ಟೂರ್ನಿಯಲ್ಲಿ 136 ರನ್ ಪೇರಿಸಿರುವ ಅವರು, ಆರ್‌ಸಿಬಿಯ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಎಲಿಸ್ ಪೆರ್ರಿ, ಮುಂಬೈ ವಿರುದ್ಧದ ಪಂದ್ಯದಲ್ಲಿ ಜವಾಬ್ದಾರಿಯುತ ಆಟವಾಡಿದ್ದಾರೆ.
ಆರ್‌ಸಿಬಿ ಆಡುವ ಬಳಗ
ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಸೋಫಿ ಮೊಲಿನ್, ಜಾರ್ಜಿಯಾ ವೇರ್ಹಮ್, ಏಕ್ತಾ ಬಿಶ್ತ್, ಸಿಮ್ರಾನ್ ಬಹದ್ದೂರ್, ಆಶಾ ಸೋಭಾನಾ, ರೇಣುಕಾ ಠಾಕೂರ್ ಸಿಂಗ್.
ಯುಪಿ ವಾರಿಯರ್ಸ್ ಆಡುವ ಬಳಗ
ಅಲಿಸ್ಸಾ ಹೀಲಿ (ನಾಯಕಿ ಮತ್ತು ವಿಕೆಟ್ ಕೀಪರ್), ಕಿರಣ್ ನವಗಿರೆ, ಚಾಮರಿ ಅಥಾಪತ್ತು, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್, ಪೂನಮ್ ಖೇಮ್ನಾರ್, ಸೈಮಾ ಠಾಕೋರ್, ಸೋಫಿ ಎಕ್ಲೆಸ್ಟನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.
ಮಹಿಳಾ ಪ್ರೀಮಿಯರ್ ಲೀಗ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)