WPL 2025: ಆರ್ಸಿಬಿಗೆ ಟ್ರೋಫಿ ಗೆದ್ದುಕೊಟ್ಟ ಸೋಫಿ ಮೊಲಿನೆಕ್ಸ್ ಔಟ್; ಇಂಗ್ಲೆಂಡ್ ಆಟಗಾರ್ತಿಗೆ ಅವಕಾಶ
Sophie Molineux: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟ ಆಸ್ಟ್ರೇಲಿಯಾದ ಆಲ್‌ರೌಂಡರ್ ಸೋಫಿ ಮೊಲಿನೆಕ್ಸ್ ಅವರು ಗಾಯಗೊಂಡು ಡಬ್ಲ್ಯುಪಿಎಲ್ನಿಂದ ಹೊರಬಿದ್ದಿದ್ದಾರೆ.

2024ರ ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಡಲು ಮಹತ್ವದ ಪಾತ್ರವಹಿಸಿದ್ದ ಆಸ್ಟ್ರೇಲಿಯಾ ಆಟಗಾರ್ತಿ ಸೋಫಿ ಮೊಲಿನೆಕ್ಸ್ ಅವರು 3ನೇ ಆವೃತ್ತಿಯ ಟೂರ್ನಿ ಆರಂಭಕ್ಕೂ ಮುನ್ನವೇ ಗಾಯಗೊಂಡು ಹೊರಬಿದ್ದಿದ್ದಾರೆ. ಇದು ಆರ್ಸಿಬಿ ತಂಡಕ್ಕೆ ದೊಡ್ಡ ನಷ್ಟವುಂಟು ಮಾಡಿದೆ. ಇದೀಗ ಸೋಫಿ ಅವರಿಂದ ತೆರವಾದ ಸ್ಥಾನಕ್ಕೆ ಬದಲಿ ಆಟಗಾರ್ತಿಯಾಗಿ ಇಂಗ್ಲೆಂಡ್‌ನ ಚಾರ್ಲಿ ಡೀನ್ ಆಯ್ಕೆಯಾಗಿದ್ದಾರೆ.
ಮೊಣಕಾಲಿನ ಗಾಯದಿಂದಾಗಿ ಆಟಗಾರ್ತಿ ಸೋಫಿ ಮೊಲಿನೆಕ್ಸ್ ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ 2025ರ ಋತುವನ್ನು ಕಳೆದುಕೊಳ್ಳಲಿದ್ದಾರೆ. ಅವರ ಬದಲಿಗೆ ಚಾರ್ಲಿ ಡೀನ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ಆರ್ಸಿಬಿ ಅಧಿಕೃತವಾಗಿ ತಿಳಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಮಹಿಳಾ ತಂಡವನ್ನು ಪ್ರತಿನಿಧಿಸುವ ಡೀನ್, 3 ಟೆಸ್ಟ್, 39 ಏಕದಿನ ಮತ್ತು ಜತೆಗೆ 36 ಟಿ20ಐ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಒಟ್ಟು 122 ವಿಕೆಟ್ ಕಿತ್ತಿದ್ದಾರೆ. ಇಂಗ್ಲೆಂಡ್ ಆಲ್‌ರೌಂಡರ್ 30 ಲಕ್ಷಕ್ಕೆ ಆರ್ಸಿಬಿ ಸೇರಿಕೊಳ್ಳಲಿದ್ದಾರೆ ಎಂದು ಆರ್ಸಿಬಿ ಉಲ್ಲೇಖಿಸಿದೆ.
ಆರ್ಸಿಬಿ ಪರ ಕಣಕ್ಕಿಳಿಸಿದ್ದ ಎಡಗೈ ಸ್ಪಿನ್ ಬೌಲಿಂಗ್ ಆಲ್-ರೌಂಡರ್ ಸೋಫಿ ಮೊಲಿನೆಕ್ಸ್ 10 ಪಂದ್ಯಗಳಲ್ಲಿ 7.31ರ ಎಕಾನಮಿಯಲ್ಲಿ 12 ವಿಕೆಟ್ ಕಬಳಿಸಿದ್ದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಸ್ಮರಣೀಯ 3 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದಕ್ಕೂ ಮುನ್ನ 2024ರಲ್ಲಿ ಯುಪಿ ವಾರಿಯರ್ಸ್ ಪರ ಕಣಕ್ಕಿಳಿದಿದ್ದ ಇಂಗ್ಲೆಂಡ್ ತಂಡದ ಡ್ಯಾನಿಯಲ್ ವ್ಯಾಟ್ ಅವರು ಟ್ರೇಡಿಂಗ್ ಮೂಲಕ ಆರ್ಸಿಬಿ ಸೇರಿದ್ದರು. ಮಿನಿ ಹರಾಜಿನಲ್ಲೂ ಇನ್ನೂ ನಾಲ್ವರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಡ್ಯಾನಿಯಲ್ ವ್ಯಾಟ್ ಅದ್ಭುತ ಫೀಲ್ಡರ್, ಸ್ಫೋಟಕ ಆರಂಭಿಕ ಆಟಗಾರ್ತಿಯೂ ಹೌದು. ಟಿ20ಐ ಕ್ರಿಕೆಟ್‌ನಲ್ಲಿ 3000 ರನ್ಗಳ ಸಮೀಪ ಹೊಂದಿರುವ (2979) ವ್ಯಾಟ್, 127.85 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಚುಟುಕು ಕ್ರಿಕೆಟ್ ಸ್ವರೂಪದಲ್ಲಿ ಅತ್ಯಂತ ವಿನಾಶಕಾರಿ ಬ್ಯಾಟರ್‌ಗಳಲ್ಲಿ ಒಬ್ಬರಾದ ವ್ಯಾಟ್, ಕಳೆದ ವರ್ಷ ನಡೆದ ಮಹಿಳೆಯರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡವು ಕಳಪೆ ಪ್ರದರ್ಶನ ನೀಡಿದರೂ ಡ್ಯಾನಿ ಅಬ್ಬರಿಸಿದ್ದರು. ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಅವರು 4 ಇನ್ನಿಂಗ್ಸ್‌ಗಳಲ್ಲಿ 151 ರನ್ ಗಳಿಸುವ ಮೂಲಕ ಇಂಗ್ಲೆಂಡ್‌ನ ಅತ್ಯಂತ ಸ್ಥಿರ ಸ್ಕೋರರ್ ಆಗಿದ್ದರು.
ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟ ಆರ್ಸಿಬಿ
ಐಪಿಎಲ್ ಆರಂಭಗೊಂಡು 17 ಆವೃತ್ತಿ ಪೂರ್ಣಗೊಂಡಿದೆ. ಈ ಪೈಕಿ ಆರ್ಸಿಬಿ 3 ಬಾರಿ ಫೈನಲ್ಗೂ ಪ್ರವೇಶಿಸಿದೆ. ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಆದರೆ, ಡಬ್ಲ್ಯುಪಿಎಲ್ ಆರಂಭವಾದ 2ನೇ ಆವೃತ್ತಿಯಲ್ಲೇ ಆರ್ಸಿಬಿ ಟ್ರೋಫಿ ಗೆದ್ದು ಬೀಗಿದೆ. ಇದೀಗ ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟಿರುವ ಆರ್ಸಿಬಿ, ಹೊಸ ತಂಡದೊಂದಿಗೆ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದುನೋಡೋಣ.
ಡಬ್ಲ್ಯುಟಿಸಿ 2025ಗಾಗಿ ಆರ್ಸಿಬಿ ಪರಿಷ್ಕೃತ ತಂಡ
ಸ್ಮೃತಿ ಮಂಧಾನ (ನಾಯಕ), ಸಬ್ಬಿನೇನಿ ಮೇಘನಾ, ರಿಚಾ ಘೋಷ್ (ವಿಕೆಟ್ ಕೀಪರ್), ಎಲ್ಲಿಸ್ ಪೆರಿ, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಆಶಾ ಶೋಭಾನ, ಸೋಫಿ ಡಿವೈನ್, ರೇಣುಕಾ ಸಿಂಗ್, ಚಾರ್ಲಿ ಡೀನ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ, ಡ್ಯಾನಿಯಲ್ ವ್ಯಾಟ್, ಪ್ರೇಮಾ ರಾವತ್, ಜೋಶಿತಾ ವಿಜೆ, ರಾಘ್ವಿ ಬಿಸ್ಟ್, ಮತ್ತು ಜಾಗರವಿ ಪವಾರ್.
