WPL 2025: ಅಂಪೈರ್ ಒಂದಲ್ಲ, ಬರೋಬ್ಬರಿ 3 ಸಲ ತಪ್ಪು ಮಾಡಿದ್ರು!, ಹಾಗೆ, ಮುಂಬಯಿ ಇಂಡಿಯನ್ಸ್ ಕೈ ಜಾರಿತು ಮ್ಯಾಚು
WPL 2025: ಮಹಿಳಾ ಪ್ರೀಮಿಯರ್ ಲೀಗ್ 2025 (ಡಬ್ಲ್ಯುಪಿಎಲ್ 2025)ನ ಎರಡನೇ ಪಂದ್ಯದ ಮೂರು ತೀರ್ಪುಗಳು ಈಗ ಗಮನಸೆಳೆದಿವೆ. ಅಂಪೈರ್ ಒಂದಲ್ಲ, ಬರೋಬ್ಬರಿ 3 ಸಲ ತಪ್ಪು ಮಾಡಿದ್ದು ಇದಕ್ಕೆ ಕಾರಣ. ಹೀಗಾಗಿ, ಮ್ಯಾಚು ಮುಂಬಯಿ ಇಂಡಿಯನ್ಸ್ ಕೈ ಜಾರಿತು ಎಂದು ಹೇಳಲಾಗುತ್ತಿದೆ.

WPL 2025: ಮಹಿಳಾ ಪ್ರೀಮಿಯರ್ ಲೀಗ್ 2025 (ಡಬ್ಲ್ಯುಪಿಎಲ್ 2025) ರ ಎರಡನೇ ಪಂದ್ಯವು ಅತ್ಯಂತ ರೋಮಾಂಚಕಾರಿಯಾಗಿತ್ತು. ವಡೋದರಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಇದಾಗಿತ್ತು. ಥರ್ಡ್ ಅಂಪೈರ್ ತೀರ್ಮಾನ ಫಲಿತಾಂಶವನ್ನೇ ತಲೆಕೆಳಗು ಮಾಡಿತು. ಥರ್ಡ್ ಅಂಪೈರ್ ಮೂರು ತಪ್ಪುಗಳನ್ನು ಎಸಗಿದ ಕಾರಣ ರೋಮಾಂಚಕಾರಿ ಮ್ಯಾಚ್ ಮುಂಬೈ ಇಂಡಿಯನ್ಸ್ ಕೈ ಜಾರಿ ಹೋಯಿತು. ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿತು. ಸೂಪರ್ ಓವರ್ ಆಡಬಲ್ಲ ಸಾಮರ್ಥ್ಯ ಹೊಂದಿದ್ದ ಮುಂಬೈ ಇಂಡಿಯನ್ಸ್ ಸೋಲು ಕಾಣಬೇಕಾಯಿತು. ಥರ್ಡ್ ಅಂಪೈರ್ ಗಾಯತ್ರಿ ವೇಣುಗೋಪಾಲ ಅವರು ಮೂರು ಬಾರಿ ರನ್ ಔಟ್ ಅನ್ನು ನಾಟ್ ಔಟ್ ಎಂದು ತೀರ್ಮಾನಿಸಿದ್ದರಿಂದ ಹೀಗಾಯಿತು.
ರನ್ ಔಟ್ ತೀರ್ಮಾನ ಹೇಗೆ, ಮಿಥಾಲಿ ರಾಜ್ ಏನು ಹೇಳಿದ್ರು
ನಿಯಮ ಪ್ರಕಾರ, ಎಲ್‌ಇಡಿ ಸ್ಟಂಪ್ಸ್ ಇದ್ದರೆ, ರನ್ ಔಟ್ ವೇಳೆ ಅವುಗಳಲ್ಲಿರುವ ದೀಪ ಬೆಳಗಿದೆಯೇ ಎಂಬುದನ್ನು ಗಮನಿಸಬೇಕು. ಥರ್ಡ್ ಅಂಪೈರ್ ಒಂದಲ್ಲ, ಮೂರು ಬಾರಿ ರನ್ ಔಟ್ ಆದಾಗಲೂ ನಾಟ್ ಔಟ್ ತೀರ್ಪು ನೀಡಿದ್ದರು. ರನ್ ಔಟ್ ವೇಳೆ ದಾಂಡಿಗ ಕ್ರೀಸ್‌ಗೆ ತಲುಪಿರಲಿಲ್ಲ. ಸ್ಟಂಪ್ಸ್ ಬೆಳಕು ಉರಿದಿತ್ತು. ಇಎಸ್‌ಪಿಎನ್ ಕ್ರಿಕ್ ಇನ್ಫೋ ಪ್ರಕಾರ, ಥರ್ಡ್ ಅಂಪೈರ್ ಎಲ್‌ಇಡಿ ಸ್ಟಂಪ್ಸ್ ಬೆಳಗಿದ್ದನ್ನು ಗಮನಿಸಿಲ್ಲ ಅಥವಾ ನಿರ್ಲಕ್ಷಿಸಿ ತಪ್ಪು ಮಾಡಿದ್ದಾರೆ. ಪಂದ್ಯದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಟೀಂಇಂಡಿಯಾದ ಮಾಜಿ ನಾಯಕಿ ಮಿಥಾಲಿ ರಾಜ್, ಈ ಎರಡು ತೀರ್ಪುಗಳು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಬರಬೇಕಾಗಿತ್ತು ಎಂದು ಹೇಳಿದ್ದು ಗಮನಸೆಳೆದಿದೆ.
ಜಿಯೋ ಹಾಟ್‌ಸ್ಟಾರ್‌ನಲ್ಲಿ ಕ್ರಿಕೆಟ್ ಮ್ಯಾಚ್ ಬಗ್ಗೆ ಮಾತನಾಡಿದ ಮಿಥಾಲಿ ರಾಜ್, “ಪಾಂಡೆ ನಾಟ್ ಔಟ್ ಅಂತ ಹೇಳಿದ್ರು. ಆದರೆ, ಬ್ಯಾಟ್ಸ್‌ಮನ್ ಬ್ಯಾಟ್ ಕ್ರೀಸ್‌ನ ಲೈನ್‌ನಲ್ಲಿತ್ತು. ಕ್ರೀಸ್‌ಗೆ ಬಂದಾಗ ಬ್ಯಾಟ್ಸ್‌ಮನ್ ಬ್ಯಾಟ್ ಮೊದಲು ಕ್ರೀಸ್‌ಗೆ ತಾಗಿ ಮೇಲೇಳುತ್ತದೆ. ಅದು ಹೊರಗಿಲ್ಲ. ಆದರೆ, ರಾಧಾ ಯಾದವ್ ವಿಷಯದಲ್ಲಿ ಗಮನಿಸಿದರೆ, ಎಲ್‌ಇಡಿ ಸ್ಟಂಪ್ಸ್ ಬೆಳಗಿದಾಗ ಅವರು ಅಥವಾ ಅವರ ಬ್ಯಾಟು ಕ್ರೀಸ್‌ನಲ್ಲಿ ಇರಲಿಲ್ಲ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ಗೋಚರಿಸಿರುವಂಥದ್ದು” ಎಂದು ವಿವರಿಸಿದ್ದಾರೆ.
ಡಬ್ಲ್ಯುಪಿಎಲ್ 2025ರ ಆಟದ ನಿಯಮಗಳೇನಿವೆ
ಡಬ್ಲ್ಯುಪಿಎಲ್ 2025 ರ ಆಟದ ನಿಯಮ ಪ್ರಕಾರ, ಆಟಗಾರರನ್ನು ಔಟ್ ಮಾಡುವ ವೇಳೆ ಸ್ಟಂಪ್‌ಗಳನ್ನು ಚೆಂಡು ಮುಟ್ಟಿದಾಗ ಅದು ಬೆಳಗಿದರೆ ಅಥವಾ ಚೆಂಡು ನೇರವಾಗಿ ವಿಕೆಟ್‌ಗೆ ಬಿದ್ದು ಸ್ಟಂಪ್ಸ್ ಬೆಳಗಿದರೆ, ಅಥವಾ ಸ್ಟಂಪ್ಸ್‌ಗಳ ಬೆಳಕು ಕಂಡರೆ ಅದು ಚೆಂಡು ತಾಗಿ ಆಗಿರುವಂಥದ್ದು ಎಂದು ಪರಿಗಣಿಸಲಾಗುತ್ತದೆ.
ಡಬ್ಲ್ಯುಪಿಎಲ್‌ನ ನಿಯಮ ಪ್ರಕಾರ, ಸರಳವಾದ ಸ್ಟಂಪ್‌ಗಳನ್ನು ಬಳಸುತ್ತಿದ್ದರೆ, ಬೇಲ್ಸ್ ಯಾವಾಗ ಮೇಲೆದ್ದು ಬಂತು ಎಂಬುದನ್ನು ರನ್ ಔಟ್ ಅಥವಾ ಸ್ಟಂಪಿಂಗ್ ಸಂದರ್ಭದಲ್ಲಿ ಅಂಪೈರ್ ನೋಡಬೇಕಾಗುತ್ತದೆ, ಆದರೆ ಎಲ್ಇಡಿ ಸ್ಟಂಪ್‌ಗಳನ್ನು ಬಳಸಿದಾಗ, ಯಾವಾಗ ಸ್ಟಂಪ್ಸ್‌ನ ಎಲ್‌ಇಡಿ ಬಲ್ಬ್ ಬೆಳಗಿದೆ, ಬೇಲ್ಸ್ ಮೇಲೆದ್ದು ಬಂತೋ ಇಲ್ಲವೋ ಎಂಬುದನ್ನು ಅಂಪೈರ್ ಗಮನಿಸಬೇಕು. ಒಂದೊಮ್ಮೆ ಬೇಲ್ಸ್ ಮೇಲೆದ್ದು ಹೋಗಿದ್ದರೆ, ರಿವ್ಯೂ ಮಾಡುವಾಗ ಮೊದಲ ಫ್ರೇಮ್‌ನ ದೃಶ್ಯವನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಬೇಕು.
ಶಿಖಾ ಪಾಂಡೆ ಔಟ್ ವಿವಾದ
ಡೆಲ್ಲಿ ಕ್ಯಾಪಿಟಲ್ಸ್ ವರ್ಸಸ್ ಮುಂಬಯಿ ಇಂಡಿಯನ್ಸ್ ಪಂದ್ಯದಲ್ಲಿ ಶಿಖಾ ಪಾಂಡೆ ಔಟ್ ವಿಚಾರದಲ್ಲಿ ಅಂಪೈರ್ ಮೊದಲ ತಪ್ಪು ಎಸಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಕೊಟ್ಟ ಗುರಿಯನ್ನು ಬೆನ್ನಟ್ಟುವಾಗ 18ನೇ ಓವರ್‌ನಲ್ಲಿ ತನ್ನ ಮೊದಲ ಬಾಲ್ ಎದುರಿಸಿದ್ದ ಶಿಖಾ, ಬೈ ರನ್ ತೆಗೆದುಕೊಳ್ಳಲು ಮುಂದಾಗಿದ್ದರು. ಆದರೆ ನಿಕ್ಕಿ ಪ್ರಸಾದ್ ಆಕೆಯನ್ನು ಹಿಂದೆ ಹೋಗುವಂತೆ ತಿಳಿಸಿದ್ದು, ಆಗ ಈ ರನ್ ಔಟ್ ಕುರಿತ ತೀರ್ಪು ಬಂದಿದೆ. ಇದರ ರಿವ್ಯೂ ಆಯಿತು.
ಎಲ್ಇಡಿ ಸ್ಟಂಪ್ ಅನ್ನು ಮೊದಲ ಬಾರಿಗೆ ಬೆಳಗಿದಾಗ, ಪಾಂಡೆಯ ಬ್ಯಾಟ್ ಕ್ರೀಸ್ ಸಾಲಿನಲ್ಲಿದೆ ಎಂದು ರೀಪ್ಲೇ ಬಹಿರಂಗಪಡಿಸಿತು. ಆದಾಗ್ಯೂ, ಥರ್ಡ್ ಅಂಪೈರ್ ಆನಂತರದ ಫ್ರೇಮ್ ಅನ್ನು ಪರಿಗಣಿಸಿದರು. ಮುಂಬಯಿ ಇಂಡಿಯನ್ ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್ ಅವರು ಈ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಫೀಲ್ಡ್ ಅಂಪೈರ್‌ಗಳಾದ ಎನ್ ಜನನಿ ಮತ್ತು ಅನೀಶ್ ಸಹಸ್ರಬುದ್ಧೆ ಜತೆಗೆ ಚರ್ಚಿಸಿ ತೀರ್ಮಾನ ಪ್ರಕಟಿಸಿದರು.
ಕೊನೆಯ ಬಾಲ್‌ನಲ್ಲೂ ಹೈ ಡ್ರಾಮಾ
ಐದನೇ ಎಸೆತದಲ್ಲಿ ನಿಕ್ಕಿ ಪ್ರಸಾದ್ ಹೊರಗಿದ್ದರಿಂದ ಅರುಂಧತಿ ರೆಡ್ಡಿ ಕೊನೆಯ ಚೆಂಡು ಎದುರಿಸುವುದಕ್ಕಾಗಿ ಕ್ರೀಸ್‌ಗೆ ಬಂದರು. ಕೊನೆಯ ಬಾಲ್ ಅನ್ನು ರೆಡ್ಡಿ ಕವರ್ ಮೇಲೆತ್ತಿ ಹೊಡೆದರು. ಚೆಂಡು ಹರ್ಮನ್‌ಪ್ರೀತ್ ಅವರಿಂದ ಸ್ವಲ್ಪ ದೂರ ಬಿದ್ದಿತು. ಆದರೆ ಈ ಮಧ್ಯೆ ರೆಡ್ಡಿ ಎರಡನೇ ರನ್‌ಗಾಗಿ ಓಡಿದ್ದರು. ಹರ್ಮನ್‌ಪ್ರೀತ್ ಅವರು ಬಾಲ್ ಅನ್ನು ಭಾಟಿಯಾ ಕಡೆಗೆ ಎಸೆದರು. ಚೆಂಡು ಹಿಡಿದ ಯಸ್ತಿಕಾ ಸ್ಪಂಪ್ ಎಗರಿಸಿದರು. ಅವರು ಥರ್ಡ್ ಅಂಪೈರ್ ಹತ್ತಿರ ಇದ್ದರು. ರೆಡ್ಡಿ ಮತ್ತು ಅವರ ಬ್ಯಾಟ್ ಕ್ರೀಸ್‌ನಲ್ಲಿ ಇರಲಿಲ್ಲ. ಆಗ ಸ್ಟಂಪ್ಸ್ ಎಲ್‌ಇಡಿ ಬೆಳಗಿತು. ಅದಕ್ಕೂ ಮೊದಲೇ ಬ್ಯಾಟ್ ಕ್ರೀಸ್ ಒಳಗಿತ್ತು ಎಂದು ಥರ್ಡ್ ಅಂಪೈರ್ ತೀರ್ಪು ನೀಡಿದ್ದರು. ಹೀಗೆ ಥರ್ಡ್ ಅಂಪೈರ್ ತೀರ್ಪುಗಳು ಈಗ ಚರ್ಚೆಗೆ ಒಳಗಾಗಿವೆ.
