WPL: ಗುಜರಾತ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 25 ರನ್‌ಗಳ ಗೆಲುವು; ಸತತ 4 ಸೋಲು ಕಂಡ ಜೈಂಟ್ಸ್ ಪ್ಲೇಆಫ್‌ನಿಂದ ಬಹುತೇಕ ಹೊರಕ್ಕೆ
WPL: ಡಬ್ಲ್ಯೂಪಿಎಲ್‌ನ 10ನೇ ಪಂದ್ಯದಲ್ಲಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 25 ರನ್‌ಗಳ ಗೆಲುವು ಸಾಧಿಸಿದೆ. ಸತತ 4 ಸೋಲು ಕಂಡ ಜೈಂಟ್ಸ್ ಪ್ಲೇಆಫ್‌ನಿಂದ ಬಹುತೇಕ ಹೊರ ಬಿದ್ದಂತಾಗಿದೆ.
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್-ಡಬ್ಲ್ಯೂಪಿಎಲ್ 10ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 25 ರನ್‌ಗಳ ಗೆಲುವು ಸಾಧಿಸಿದೆ. ಡಿಸಿ ವಿರುದ್ಧ ಸೋತ ಬೆತ್ ಮೂನಿ ನೇತೃತ್ವ ಗುಜರಾತ್ ತಂಡ ಸತತ ನಾಲ್ಕನೇ ಸೋಲು ಕಂಡಿತು. ಆ ಮೂಲಕ 2ನೇ ಆವೃತ್ತಿಯ ಡಬ್ಲ್ಯೂಪಿಎಲ್‌ನಲ್ಲಿ ಪ್ಲೇಆಫ್ ತಲುವ ಆಸೆಯನ್ನು ಕೈಬಿಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತ್ತು. 164 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಲಷ್ಟೇ ಶಕ್ತವಾಯಿತು.
ಡಿಸಿ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಮೆಗ್ ಲ್ಯಾನಿಂಗ್ ಅವರ 55 ರನ್‌ಗಳ ಅರ್ಧ ಶತಕದ ನೆರವಿನಿಂದ 163 ರನ್ ಗಳಿಸಿತು. ಆಲಿಸ್ ಕ್ಯಾಪ್ಸಿ 27 ರನ್ ಹಾಗೂ ಅನ್ನಾಬೆಲ್ ಸದರ್ಲ್ಯಾಂಡ್ 20 ರನ್ ಗಳಿಸಿ ತಂಡದ ಮೊತ್ತ 150 ಗಡಿ ದಾಟಲು ನೆರವಾದರು. ಗುಜರಾತ್ ಜೈಂಟ್ಸ್ ಪರ ಮೇಘನಾ ಸಿಂಗ್ 4 ವಿಕೆಟ್ ಪಡೆದು ಮಿಂಚಿದರು. ಆಶ್ಲೇ ಗಾರ್ಡ್ನರ್ 2 ವಿಕೆಟ್ ಕಿತ್ತರೆ, ತನುಜಾ ಕನ್ವರ್ ಹಾಗೂ ಮನ್ನತ್ ಕಶ್ಯಪ್ ತಲಾ 1 ವಿಕೆಟ್ ಪಡೆದರು.
164 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಜೈಂಟ್ಸ್ ಆರಂಭಿಕ ಆಘಾತ ಅನುಭವಿಸಿತು. ಲಾರಾ ವೊಲ್ವಾರ್ಡ್ಟ ಎರಡನೇ ಓವರ್‌ನ 3ನೇ ಎಸೆತದಲ್ಲೇ ಶೂನ್ಯಕ್ಕೆ ಔಟಾದರು. ಲಿಚ್‌ಫೀಲ್ಡ್ 15, ಕನ್ನಡದ ವೇದಾ ಕೃಷ್ಣಮೂರ್ತಿ 12 ರನ್ ಗಳಿಸಿ ನಿರಾಸೆ ಮೂಡಿಸಿದರು. ಆಶ್ಲೇ ಗಾರ್ಡ್ನರ್ 40 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ಯತ್ನಿಸಿ ವಿಫಲರಾದರು. ಡಿಸಿ ಪರ ಜೆಸ್ ಜೊನಾಸೆನ್ 4 ಓವರ್‌ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದರು.
ಗುಜರಾತ್ ಜೈಂಟ್ಸ್ 11ರ ಬಳಗ
ಲಾರಾ ವೊಲ್ವಾರ್ಡ್ಟ್, ಬೆತ್ ಮೂನಿ (ನಾಯಕಿ, ವಿಕೆಟ್ ಕೀಪರ್) ಫೀಬಿ ಲಿಚ್‌ಫೀಲ್ಡ್, ಆಶ್ಲೇ ಗಾರ್ಡ್ನರ್, ವೇದಾ ಕೃಷ್ಣಮೂರ್ತಿ, ದಯಾಲನ್ ಹೇಮಲತಾ, ಕ್ಯಾಥರಿನ್ ಬ್ರೈಸ್, ತನುಜಾ ಕನ್ವರ್, ತರನ್ನುಮ್ ಪಠಾಣ್, ಮೇಘನಾ ಸಿಂಗ್, ಮನ್ನತ್ ಕಶ್ಯಪ್.
ಡೆಲ್ಲಿ ಕ್ಯಾಪಿಟಲ್ಸ್ 11ರ ಬಳಗ
ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಜೆಮಿಮಾ ರೋಡ್ರಿಗಸ್, ಅನ್ನಾಬೆಲ್ ಸದರ್ಲ್ಯಾಂಡ್, ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಟಿಟಾಸ್ ಸಧು, ರಾಧಾ ಯಾದವ್, ಶಿಖಾ ಪಾಂಡೆ.