ಅಡಿಲೇಡ್ ಟೆಸ್ಟ್ ಸೋತ ಟೀಮ್ ಇಂಡಿಯಾಗೆ ಆಘಾತ, WTC ಅಂಕಪಟ್ಟಿಯಲ್ಲಿ ಭಾರೀ ಕುಸಿತ; ಅಗ್ರಸ್ಥಾನಕ್ಕೆ ಆಸ್ಟ್ರೇಲಿಯಾ ನೆಗೆತ
WTC Points Table Update: ಅಡಿಲೇಡ್ನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಪಂದ್ಯದ ನಂತರ ವಿಶ್ವ ಟೆಸ್ಟ್ ಚಾಂಪಿಯನ್ ಪಾಯಿಂಟ್ಸ್ ಟೇಬಲ್ ಹೀಗಿದೆ ನೋಡಿ. ಯಾವ ತಂಡ ಎಷ್ಟು ಅಂಕ ಗಳಿಸಿದೆ ಎಂಬುದನ್ನು ನೋಡಿ.
ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಕಾಡೆ ಮಲಗಿದ ಟೀಮ್ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್-2025 ಪಾಯಿಂಟ್ಸ್ ಟೇಬಲ್ನಲ್ಲೂ ಅಗ್ರಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. 10 ವಿಕೆಟ್ಗಳ ಘೋರ ಪರಾಜಯದೊಂದಿಗೆ ಫೈನಲ್ಗೆ ಅರ್ಹತೆ ಪಡೆಯುವುದಕ್ಕೂ ಕಂಟಕ ಏರ್ಪಟ್ಟಿದೆ. ಮತ್ತೊಂದೆಡೆ ಐತಿಹಾಸಿಕ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ ಮೊದಲ ಸ್ಥಾನಕ್ಕೆ ಏರಿದೆ. ದಕ್ಷಿಣ ಆಫ್ರಿಕಾ ತಂಡ ಪ್ರಸ್ತುತ 2ನೇ ಸ್ಥಾನದಲ್ಲಿದೆ. ಶ್ರೀಲಂಕಾ ಸಹ ಫೈನಲ್ ಪ್ರವೇಶೀಸುವ ಪೈಪೋಟಿಯಲ್ಲಿದೆ.
ಅಡಿಲೇಡ್ನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಅಥವಾ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 10 ವಿಕೆಟ್ಗಳ ಸೋಲನುಭವಿಸಿದೆ. ಭರ್ಜರಿ ಜಯದೊಂದಿಗೆ ಸರಣಿ ಸಮಬಲಗೊಳಿಸಿದ ಆಸೀಸ್, ಅಂಕಪಟ್ಟಿಯಲ್ಲೂ ಪ್ರಾಬಲ್ಯ ಸಾಧಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ 180 ರನ್ ಗಳಿಸಿದ ಭಾರತಕ್ಕೆ ತಿರುಗೇಟು ನೀಡಿದ ಆಸ್ಟ್ರೇಲಿಯಾ 337 ರನ್ ಸಿಡಿಸಿ 157 ರನ್ಗಳ ಮುನ್ನಡೆ ಪಡೆಯಿತು. ದ್ವಿತೀಯ ಇನ್ನಿಂಗ್ಸ್ನಲ್ಲಿ 175ಕ್ಕೆ ಆಲೌಟ್ ಆದ ಭಾರತ ಕೇವಲ 19 ರನ್ಗಳ ಗುರಿ ನೀಡಿತು. ಅಂತಿಮವಾಗಿ ಆಸೀಸ್ 10 ವಿಕೆಟ್ಗಳ ಸುಲಭ ಗೆಲುವು ದಾಖಲಿಸಿತು.
ಡಬ್ಲ್ಯುಟಿಸಿ ಅಂಕಪಟ್ಟಿ
1. ಆಸ್ಟ್ರೇಲಿಯಾ - 14 ಪಂದ್ಯ, 9 ಗೆಲುವು, 4 ಸೋಲು, 1 ಟೈ, 102 ಅಂಕ, ಗೆಲುವಿನ ಶೇಕಡವಾರು 60.71
2. ದಕ್ಷಿಣ ಆಫ್ರಿಕಾ - 09 ಪಂದ್ಯ, 5 ಗೆಲುವು, 3 ಸೋಲು, 1 ಟೈ, 64 ಅಂಕ, ಗೆಲುವಿನ ಶೇಕಡವಾರು 59.26
3. ಭಾರತ - 16 ಪಂದ್ಯ, 9 ಗೆಲುವು, 6 ಸೋಲು, 1 ಟೈ, 110 ಅಂಕ, ಗೆಲುವಿನ ಶೇಕಡವಾರು 57.29
4. ಶ್ರೀಲಂಕಾ - 10 ಪಂದ್ಯ, 5 ಗೆಲುವು, 5 ಸೋಲು, 0 ಟೈ, 60 ಅಂಕ, ಗೆಲುವಿನ ಶೇಕಡವಾರು 50.00
5. ಇಂಗ್ಲೆಂಡ್ - 21 ಪಂದ್ಯ, 11 ಗೆಲುವು, 09 ಸೋಲು, 1 ಟೈ, 114 ಅಂಕ, ಗೆಲುವಿನ ಶೇಕಡವಾರು 45.24
6. ನ್ಯೂಜಿಲೆಂಡ್ - 13 ಪಂದ್ಯ, 06 ಗೆಲುವು, 7 ಸೋಲು, 0 ಟೈ, 69 ಅಂಕ, ಗೆಲುವಿನ ಶೇಕಡವಾರು 44.23
7. ಪಾಕಿಸ್ತಾನ - 10 ಪಂದ್ಯ, 4 ಗೆಲುವು, 6 ಸೋಲು, 0 ಟೈ, 40 ಅಂಕ, ಗೆಲುವಿನ ಶೇಕಡವಾರು 33.33
8. ಬಾಂಗ್ಲಾದೇಶ - 12 ಪಂದ್ಯ, 4 ಗೆಲುವು, 8 ಸೋಲು, 0 ಟೈ, 45 ಅಂಕ, ಗೆಲುವಿನ ಶೇಕಡವಾರು 31.25
9. ವೆಸ್ಟ್ ಇಂಡೀಸ್ - 11 ಪಂದ್ಯ, 2 ಗೆಲುವು, 7 ಸೋಲು, 2 ಟೈ, 32 ಅಂಕ, ಗೆಲುವಿನ ಶೇಕಡವಾರು 24.24
ಫೈನಲ್ ಪ್ರವೇಶಿಸಲು ಭಾರತ ಏನು ಮಾಡಬೇಕು?
ಪ್ರಸ್ತುತ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಉಳಿದ ಮೂರು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಇದು ಸಾಧ್ಯವಾದರೆ ಅಂಕಪಟ್ಟಿಯಲ್ಲಿ ಗೆಲುವಿನ ಶೇಕಡವಾರು 64.03ಕ್ಕೆ ತಲುಪಿ ಫೈನಲ್ ಸ್ಥಾನವನ್ನು ಭದ್ರ ಮಾಡಿಕೊಳ್ಳಲಿದೆ. ಮತ್ತೊಂದೆಡೆ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಅಂತಿಮ ಪಂದ್ಯದಲ್ಲಿ ಸೋಲಬೇಕು. ಆಸೀಸ್ ಉಳಿದೆಲ್ಲಾ ಪಂದ್ಯ ಸೋತರೆ ದಕ್ಷಿಣ ಆಫ್ರಿಕಾ ತನ್ನ ಕೊನೆಯ ಟೆಸ್ಟ್ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದರೆ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಒಂದು ವೇಳೆ ಸೋತರೆ ಭಾರತ ತಂಡಕ್ಕೆ ಮತ್ತಷ್ಟು ಲಾಭ ತಂದುಕೊಡಲಿದೆ. ಏಕೆಂದರೆ ಭಾರತ ತನ್ನ ಮುಂದಿನ ಪಂದ್ಯದಲ್ಲಿ ಸೋತರೂ ಮತ್ತೊಂದು ಅವಕಾಶ ಇರಲಿದೆ.