Explainer: ನ್ಯೂಜಿಲೆಂಡ್ ಸರಣಿ ಸೋತರೆ ಭಾರತದ ಮುಂದೆ ಬೆಟ್ಟದಂಥಾ ಸವಾಲು; ಡಬ್ಲ್ಯುಟಿಸಿ ಫೈನಲ್ ಅರ್ಹತೆಗೆ ಇಷ್ಟು ಗೆಲುವು ಬೇಕು
World Test Championship: ಡಬ್ಲ್ಯುಟಿಸಿ ಇತಿಹಾಸದಲ್ಲಿ ಭಾರತವು ಎಲ್ಲಾ ಎರಡು ಬಾರಿ ಫೈನಲ್ ತಲುಪಿದೆ. ಇದೀಗ ಹ್ಯಾಟ್ರಿಕ್ ಫೈನಲ್ ಸಾಧನೆಗೆ ತಂಡದ ಮುಂದೆ ಬೆಟ್ಟದಂಥಾ ಸವಾಲಿದೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಸೋತರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವು ಟೀಮ್ ಇಂಡಿಯಾಗೆ ಅನಿವಾರ್ಯವಾಗಲಿದೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಸುಲಭವಾಗಿ ಗೆಲ್ಲಬಹುದು ಎಂದು ಲೆಕ್ಕ ಹಾಕಿದ್ದ ಭಾರತ ತಂಡ, ಗೆಲುವಿಗಾಗಿ ಇಷ್ಟು ತಿಣುಕಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಮಳೆ ಬಾಧಿಸಿದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ಸೋಲು ಕಂಡ ರೋಹಿತ್ ಶರ್ಮಾ ಪಡೆಯು, ಇದೀಗ ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲೂ ಸೋಲಿನ ದವಡೆಯಲ್ಲಿದೆ. ಇನ್ನೂ ಮೂರು ದಿನಗಳ ಆಟ ಬಾಕಿ ಉಳಿದಿದ್ದರೂ, ಭಾರತದ ಮುಂದೆ ದೊಡ್ಡ ಬೆಟ್ಟದಂಥಾ ಸವಾಲಿದೆ. ಸದ್ಯ ಗೆಲುವು ಅಸಾಧ್ಯವಂತೂ ಅಲ್ಲ. ಆದರೆ, ಎರಡನೇ ಇನ್ನಿಂಗ್ಸ್ ಆಡುತ್ತಿರುವ ಟಾಮ್ ಲಥಮ್ ಬಳಗವನ್ನು ಬಲುಬೇಗನೆ ಔಟ್ ಮಾಡಿ, ಬೃಹತ್ ಮೊತ್ತವನ್ನು ಚೇಸ್ ಮಾಡಬೇಕಿದೆ. ಆದರೆ, ಸದ್ಯ ಬ್ಯಾಟಿಂಗ್‌ನಲ್ಲಿ ಹೆಣಗಾಡುತ್ತಿರುವ ಭಾರತ, ಕಿವೀಸ್ ಸ್ಪಿನ್ನರ್‌ಗಳ ಸವಾಲನ್ನು ಹೇಗೆ ಎದುರಿಸಲಿದೆ ಎಂಬುದು ಸದ್ಯದ ಸವಾಲು.
ಸೋಲಿನ ಆತಂಕದ ನಡುವೆ, ರೋಹಿತ್ ಶರ್ಮಾ ಪಡೆಯು 2025ರ ಜೂನ್ ತಿಂಗಳಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಲು ಇರುವ ಎಲ್ಲಾ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ನೋಡುತ್ತಿದೆ.
“ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಮುಂದಿನ ಜೂನ್ ತಿಂಗಳಲ್ಲಿ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯು ನವೆಂಬರ್ 22ರಿಂದ ನಡೆಯಲಿದೆ. ಸದ್ಯ ನ್ಯೂಜಿಲೆಂಡ್ ಸರಣಿ ಮಾತ್ರ ನಮ್ಮ ಮನಸ್ಸಿನಲ್ಲಿದೆ. ತವರಿನ ಸರಣಿ ಬಿಟ್ಟು ಬೇರೆ ಏನೂ ಇಲ್ಲ” ಎಂದು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಕಿವೀಸ್ ವಿರುದ್ಧದ ಸರಣಿಯ ಆರಂಭದಲ್ಲಿ ಹೇಳಿದ್ದರು. ಇದೀಗ ಅದೇ ಸರಣಿ ಭಾರತಕ್ಕೆ ಕಂಟಕವಾಗಿದೆ.
ಪುಣೆ ಟೆಸ್ಟ್ ಪಂದ್ಯದಲ್ಲಿ ಪ್ರಸ್ತುತ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 301 ರನ್‌ಗಳ ಹಿನ್ನಡೆಯಲ್ಲಿದೆ. ಕಿವೀಸ್ ತಂಡ ಇನ್ನೂ ಎರಡನೇ ಇನ್ನಿಂಗ್ಸ್ ಮುಗಿಸಿಲ್ಲ. ಹೀಗಾಗಿ ಸವಾಲಿನ ಗುರಿ ಭಾರತಕ್ಕೆ ಖಚಿತ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದರೆ, 0-2 ಅಂತರದಿಂದ ಸರಣಿ ಗೆಲುವು ಸಾಧಿಸಲಿದೆ. ಆಗ ಮುಂಬೈನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕುತ್ತದೆ. ಟೆಸ್ಟ್ ಚಾಂಪಿಯನ್‌ಶಿಪ್ ಉದ್ದೇಶ ಮಾತ್ರವಲ್ಲದೆ, ತವರಿನಲ್ಲಿ ವೈಟ್‌ವಾಶ್ ಮುಖಭಂಗದಿಂದ ಭಾರತ ಹೊರಬರಬೇಕಾಗುತ್ತದೆ. ಅತ್ತ ಲಾರ್ಡ್ಸ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್‌ಗೆ ಟಿಕೆಟ್ ಖಾತರಿಪಡಿಸಿಕೊಳ್ಳಲು, ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ನಡೆಯುವ ಐದು ಪಂದ್ಯಗಳಲ್ಲಿ ಕನಿಷ್ಠ ಮೂರು ಗೆಲುವುಗಳು ಭಾರತಕ್ಕೆ ಬೇಕಾಗುತ್ತವೆ.
ಹೇಗಿದೆ ಡಬ್ಲ್ಯುಟಿಸಿ ಅಂಕಪಟ್ಟಿ?
ಪ್ರಸ್ತುತ ಭಾರತ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವುಗಳೊಂದಿಗೆ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದ ಶೇಕಡಾವಾರು ಅಂಕಗಳ ಪ್ರಮಾಣ 68.06 ಅಂಕಗಳು. ಈಗ ಅಗ್ರಸ್ಥಾನವಿದ್ದರೆ, ಅದೇ ಸ್ಥಾನ ಉಳಿಯುವ ಭರವಸೆ ಖಂಡಿತಾ ಇಲ್ಲ. ಅತ್ತ ದಕ್ಷಿಣ ಆಫ್ರಿಕಾ ತಂಡದ ಅಂಕಗಳಲ್ಲಿ ಏರಿಕೆ ಕಾಣುತ್ತಿದ್ದು, ನಿಧಾನವಾಗಿ ಅಂಕಪಟ್ಟಿಯಲ್ಲಿ ಎಲ್ಲವೂ ಬದಲಾಗಬಹುದು. ಒಂದು ವೇಳೆ ದಕ್ಷಿಣ ಆಫ್ರಿಕಾ ತನ್ನ ಉಳಿದ ಎಲ್ಲಾ ಐದು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಭಾರತಕ್ಕೆ ಭಾರಿ ನಷ್ಟವಾಗಲಿದೆ. ಆಗ ಭಾರತವು ತನ್ನ ಮುಂದಿನ ಎಲ್ಲಾ ಸರಣಿಯಲ್ಲೂ ಗೆಲ್ಲುವುದು ಬಿಟ್ಟರೆ ಬೇರೆ ದಾರಿ ಇಲ್ಲ.
ಈಗಾಗಲೇ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿರುವ ದಕ್ಷಿಣ ಆಫ್ರಿಕಾಗೆ, ಮತ್ತೊಂದು ಪಂದ್ಯ ಕೂಡಾ ತುಲನಾತ್ಮಕವಾಗಿ ಸುಲಭವಾಗಲಿದೆ. ಇದಾದ ಬಳಿಕ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧವೂ ತನ್ನದೇ ತವರಿನಲ್ಲಿ ತಲಾ ಎರಡು ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಆತಂಕವಾಗಲಿದೆ.
ಆಸೀಸ್ ಸರಣಿಯಲ್ಲಿ ಮಾಡು ಇಲ್ಲವೇ ಮಡಿ ಸವಾಲು
ಸದ್ಯ ಭಾರತದ ಮುಂದೆ ಮುಂಬೈ ಟೆಸ್ಟ್ ಗೆಲುವು ಅನಿವಾರ್ಯವಾಗಿದೆ. ಪುಣೆ ಟೆಸ್ಟ್ ಸೋತು ಆ ಬಳಿಕ ಆಸ್ಟ್ರೇಲಿಯಾ ತಂಡವನ್ನು 3-2 ಅಂತರದಿಂದ ಸೋಲಿಸಿದರೂ ಫೈನಲ್ ತಲುಪುವ ಸಾಧ್ಯತೆ ಕಡಿಮೆ. ಇದು ಸಾಧ್ಯವಾಗಬೇಕಾದರೆ ಕಿವೀಸ್ ತಂಡವನ್ನು ಇಂಗ್ಲೆಂಡ್ ತಂಡ 3-0 ಅಂತರದಿಂದ ಸೋಲಸಬೇಕಾಗುತ್ತದೆ.
ಅತ್ತ ಆಸ್ಟ್ರೇಲಿಯಾ ತಂಡವು ಭಾರತ ವಿರುದ್ಧ 3-2 ಅಂತರದಲ್ಲಿ ಜಯ ಗಳಿಸಿದರೆ, ಫೈನಲ್‌ಗೆ ಮುನ್ನಡೆಯುವುದು ಸುಲಭವಾಗಲಿದೆ. ಆದರೆ ಆಸೀಸ್ ಕೂಡಾ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳ ಕಠಿಣ ಸವಾಲು ಎದುರಿಸಬೇಕಾಗಬಹುದು.
ಸತತ ಎರಡು ಆವೃತ್ತಿಯ ಡಬ್ಲ್ಯುಟಿಸಿಯಲ್ಲಿ ಅಗ್ರಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದ ರೋಹಿತ್ ಶರ್ಮಾ ಪಡೆಗೆ, ಸದ್ಯದ ಶೋಚನೀಯ ತಿರುವು ಸಿಗುವ ನಿರೀಕ್ಷೆ ಖಂಡಿತಾ ಇರಲಿಲ್ಲ. ಡಬ್ಲ್ಯುಟಿಸಿ ಇತಿಹಾಸದಲ್ಲಿ ಭಾರತವು ಎರಡು ಬಾರಿ ಫೈನಲ್ ತಲುಪಿದ್ದು, 2021ರಲ್ಲಿ ನ್ಯೂಜಿಲೆಂಡ್ ಮತ್ತು 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋತಿದೆ. ಹೀಗಾಗಿ ಈ ಬಾರಿ ಟ್ರೋಫಿ ಗೆಲುವಿನ ಮೇಲೆ ತಂಡ ಕಣ್ಣಿಟ್ಟಿದೆ.