ನೀನು ನಮ್ಮ ಪ್ರಮುಖ ಬೌಲರ್ ಎಂದು ಮೊದಲ ದಿನವೇ ಆರ್‌ಸಿಬಿ ಹೇಳಿತ್ತು; ಕಂಬ್ಯಾಕ್ ಕುರಿತು ಯಶ್ ದಯಾಳ್ ಮಾತು
Yash Dayal: ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ಎಸೆದು ಆರ್‌ಸಿಬಿಗೆ ವೀರೋಚಿತ ಗೆಲುವು ತಂದುಕೊಟ್ಟವರು ಯಶ್ ದಯಾಳ್. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಹತಾಶೆ ಅನುಭವಿಸಿದ್ದ ಅವರು ಈ ಬಾರಿ ಕಂಬ್ಯಾಕ್ ಮಾಡಿದ ಕುರಿತು ಮಾತನಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ತಂಡಗಳ ನಡುವಿನ ಅತಿರೋಚಕ ಪಂದ್ಯ ಅಭಿಮಾನಿಗಳಿಗೆ ಹೇಗೆ ತಾನೆ ಮರೆಯಲು ಸಾಧ್ಯ. ಐಪಿಎಲ್ 2024ರ ಅತ್ಯಂತ ಕುತೂಹಲಕಾರಿ ಪಂದ್ಯ ಇದಾಗಿತ್ತು. ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಆರ್‌ಸಿಬಿ ತಂಡವು ಪ್ಲೇಆಫ್ ಹಂತಕ್ಕೆ ಲಗ್ಗೆ ಹಾಕಿತು. ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿಗೆ ಕಾರಣರಾದವರು ಅನ್‌ಕ್ಯಾಪ್ಡ್ ಭಾರತೀಯ ವೇಗಿ ಯಶ್ ದಯಾಳ್. ಕೊನೆಯ ಓವರ್‌ನಲ್ಲಿ ಸಿಎಸ್‌ಕೆ ತಂಡದ ಬಲಿಷ್ಠ ಬ್ಯಾಟರ್‌ಗಳಾದ ಎಂಎಸ್ ಧೋನಿ ಹಾಗೂ ರವೀಂದ್ರ ಜಡೇಜಾ ಅವರನ್ನು ಕಟ್ಟಿ ಹಾಕಿ ತಂಡದ ರೋಚಕ ಗೆಲುವಿನಲ್ಲಿ ಪಾಲು ಪಡೆದರು. ಅದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಹೀರೋ ಆಗಿ ಮಾರ್ಪಟ್ಟರು.
ಪಂದ್ಯದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಾಯಕ ಫಾಫ್ ಡು ಪ್ಲೆಸಿಸ್ ಕೂಡ, ತಮಗೆ ಸಿಕ್ಕ ಪ್ರಶಸ್ತಿಯನ್ನು ದಯಾಳ್‌ಗೆ ಅರ್ಪಿಸಿದರು. ಅಂತಿಮ ಓವರ್‌ನಲ್ಲಿ ಎಡಗೈ ವೇಗಿಯ ಬೌಲಿಂಗ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ದಯಾಳ್ ಪಾಲಿಗೆ ಇದು ಮರೆಯಲಾಗದ ಪಂದ್ಯ ಹಾಗೂ ಸೀಸನ್. ಟೂರ್ನಿಯುದ್ದಕ್ಕೂ ಅಮೋಘ ಬೌಲಿಂಗ್ ಮಾಡಿದ ವೇಗಿ, ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್. ಆದರೆ, ದಯಾಳ್ ಪಾಲಿಗೆ ಕಳೆದ ಆವೃತ್ತಿ ಹಾಗೂ ಈ ಬಾರಿಯ ಟೂರ್ನಿಯ ಆರಂಭ ಅಂದುಕೊಂಡಂತಿರಲಿಲ್ಲ. ಸಾಕಷ್ಟು ಟೀಕೆ ಟಿಪ್ಪಣಿಗಳನ್ನು ಎದುರಿಸಿದ್ದರು. ಇದೀಗ ಸಿಎಸ್‌ಕೆ ವಿರುದ್ಧದ ಗೆಲುವಿನ ನಂತರ ಆರ್‌ಸಿಬಿ ವೇಗಿ ತಾನು ಎದುರಿಸಿದ ಟೀಕೆಗಳ ಕುರಿತು ಮಾತನಾಡಿದರು.
ಇದನ್ನೂ ಓದಿ | ಆರ್‌ಸಿಬಿ vs ಆರ್‌ಆರ್, ಕೆಕೆಆರ್ vs ಎಸ್‌ಆರ್‌ಎಚ್ ಪ್ಲೇಆಫ್ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್ ಹವಾಮಾನ ವರದಿ ಹೀಗಿದೆ
“ನಾನು ಆರ್‌ಸಿಬಿ ತಂಡಕ್ಕೆ ಆಯ್ಕೆಯಾದಾಗ, ತಂಡದಲ್ಲಿ ನನ್ನ ಸ್ಥಾನದ ಕುರಿತು ಸಾಕಷ್ಟು ಟೀಕೆ ಹಾಗೂ ಪ್ರಶ್ನೆಗಳನ್ನು ಎದುರಿಸಿದೆ. ಆದರೆ ನನ್ನ ಮನಸ್ಥಿತಿ ಒಂದೇ ಆಗಿತ್ತು. ನಾನು ಜನರಿಗೆ ತಪ್ಪು ಎಂದು ಸಾಬೀತುಪಡಿಸಲು ಬಯಸಲಿಲ್ಲ. ನನಗೆ ನಾನು ಯಾರೆಂಬುದನ್ನು ಸಾಬೀತುಪಡಿಸಬೇಕಾಗಿತ್ತು,” ಎಂದು ದಯಾಳ್ ಹೇಳಿದರು.
ನೀನು ತಂಡದ ಪ್ರಮುಖ ಆಟಗಾರ
"ನಾನು ಆರ್‌ಸಿಬಿ ತಂಡ ಸೇರಿಕೊಂಡ ಮೊದಲ ದಿನದಿಂದಲೂ, ನೀನು ನಮ್ಮ ತಂಡದ ಪ್ರಮುಖ ಆಟಗಾರ ಎಂದು ಆರ್‌ಸಿಬಿ ಹೇಳಿತ್ತು. ತಂಡ ನನ್ನನ್ನು ಬೆಂಬಲಿಸಿದು. ಅದರ ಫಲಿತಾಂಶ ನೀವೀಗ ನೋಡುತ್ತಿದ್ದೀರಿ. ಆರ್‌ಸಿಬಿ ಫ್ರಾಂಚೈಸಿಯು ನನ್ನ ಮೇಲಿಟ್ಟ ನಂಬಿಕೆ ಹಾಗೂ ಅವರ ಬೆಂಬಲವೇ ಇದಕ್ಕೆಲ್ಲಾ ಕಾರಣ ಎಂದು ದಯಾಳ್ ಹೇಳಿದ್ದಾರೆ.
“ಕಳೆದ ಬಾರಿ (ಕೆಕೆಆರ್ ವಿರುದ್ಧ) ಆದ ಸನ್ನಿವೇಶದಿಂದ ಈ ಬಾರಿಯೂ ಕೊನೆಯ ಓವರ್ ಬೌಲಿಂಗ್ ಮಾಡಲು ನನಗೆ ಆತಂಕವಿತ್ತು. ಮೊದಲ ಎಸೆತದಲ್ಲಿ ಸಿಕ್ಸರ್ ಹೊಡೆದಾಗ, ನಾನು ನಿರಾಶೆಗೊಳ್ಳಲಿಲ್ಲ. ಏಕೆಂದರೆ ನಾನು ಅದಕ್ಕೂ ಹಿಂದೆ ಚೆನ್ನಾಗಿ ಬೌಲಿಂಗ್ ಮಾಡಿದ್ದೇನೆ. ಸರಿಯಾಗಿ ಉತ್ತಮ ಬೌಲಿಂಗ್ ಮಾಡುವುದು ನನ್ನ ತಲೆಯಲ್ಲಿ ಓಡುತ್ತಿತ್ತು. ಸ್ಕೋರ್‌ಬೋರ್ಡ್ ಅಥವಾ ಫಲಿತಾಂಶದ ಕಡೆ ನಾನು ತಲೆಕೆಡಿಸಿಕೊಳ್ಳಲಿಲ್ಲ. ನನ್ನ ಕಾರ್ಯತಂತ್ರದ ಪ್ರಕಾರ ಚೆನ್ನಾಗಿ ಬೌಲ್ ಮಾಡಿದೆ”.
“ನಾನು 19ನೇ ಓವರ್ ಬೌಲ್ ಮಾಡಬೇಕಿತ್ತು. ಆ ನಡುವೆ ದಿನೇಶ್ ಕಾರ್ತಿಕ್ ಮತ್ತು ಫಾಫ್ ಪರಸ್ಪರ ಮಾತನಾಡಿಕೊಂಡರು. ಆ ಬಳಿಕ ಲಾಕಿ ಫರ್ಗುಸನ್ 19ನೇ ಓವರ್ ಹಾಗೂ ನನಗೆ ಕೊನೆಯ ಓವರ್ ಬೌಲಿಂಗ್ ಮಾಡಲು ನಿರ್ಧರಿಸಲಾಯಿತು. ನಾನು ಯಾವುದಕ್ಕೂ ಸಿದ್ಧನಾಗಿದ್ದೆ,” ಎಂದು ದಯಾಳ್ ಆತ್ಮವಿಶ್ವಾಸದ ಮಾತುಗಳನ್ನಾಡಿದರು.
ಇದನ್ನೂ ಓದಿ | RCB vs RR: ಒಂದೂ ಸೋಲದ ಮತ್ತು ಒಂದೂ ಗೆಲ್ಲದ ತಂಡಗಳ ನಡುವೆ ಎಲಿಮಿನೇಟರ್ ಫೈಟ್; ಯಾರ ಕೈ ಹಿಡಿಯುತ್ತೆ ಅದೃಷ್ಟ?
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
