ಐದು ವಿಕೆಟ್ ಕಿತ್ತ ಯಶ್ ಠಾಕೂರ್; ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲುವು
Lucknow Super Giants vs Gujarat Titans: ಐಪಿಎಲ್ನ 21ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 33 ರನ್ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು.
ಯಶ್ ಠಾಕೂರ್ (30/5) ಮತ್ತು ಕೃನಾಲ್ ಪಾಂಡ್ಯ (11/3) ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಅತ್ಯಮೋಘ ಗೆಲುವು ಸಾಧಿಸಿತು. ಜಿಟಿ ಬ್ಯಾಟರ್ಗಳ ವೈಫಲ್ಯದ ಪರಿಣಾಮ ಎದುರಾಳಿ ಕೆಎಲ್ ರಾಹುಲ್ ನೇತೃತ್ವದ ತಂಡವು 33 ರನ್ಗಳಿಂದ ಜಯದ ನಗೆ ಬೀರಿದೆ. ಇದು ಎಲ್ಎಸ್ಜಿಗೆ ಹ್ಯಾಟ್ರಿಕ್ ಗೆಲುವಾಗಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ ಗುಜರಾತ್ 3 ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲೇ ಉಳಿದಿದೆ.
ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಮಾರ್ಕಸ್ ಸ್ಟೋಯ್ನಿಸ್ ಅವರ ಅರ್ಧಶತಕದ ಸಹಾಯದಿಂದ ಎಲ್ಎಸ್ಜಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಬ್ಯಾಟರ್ಸ್ ಲಕ್ನೋ ಬೌಲರ್ಗಳ ದಾಳಿಗೆ ತತ್ತರಿಸಿತು. ಕೇವಲ 130 ರನ್ಗಳಿಗೆ ಆಲೌಟ್ ಆಯಿತು. ಉತ್ತಮ ಆರಂಭ ಹೊರತಾಗಿಯೂ ಜಿಟಿ ಆಟಗಾರರು ಪೆವಿಲಿಯನ್ ಪೆರೇಡ್ ನಡೆಸಿದರು. ಯಶ್ ಠಾಕೂರ್ 5 ವಿಕೆಟ್ ಮತ್ತು ಕೃನಾಲ್ 3 ವಿಕೆಟ್ ಪಡೆದು ಮಿಂಚಿದರು.
ಯಶ್ ಮತ್ತು ಕೃನಾಲ್ ಅಬ್ಬರ
ಕಾಂಪಿಟೇಟಿವ್ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ಉತ್ತಮ ಆರಂಭ ಪಡೆಯಿತು. ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಮೊದಲ ವಿಕೆಟ್ಗೆ 54 ರನ್ ಪೇರಿಸಿತು. ಆದರೆ ಆ ಬಳಿಕ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಕೃನಾಲ್ ಪಾಂಡ್ಯ ಮತ್ತು ಯಶ್ ಠಾಕೂರ್ ಅವರ ಬೌಲಿಂಗ್ ದಾಳಿಗೆ ಜಿಟಿ ಬ್ಯಾಟರ್ಸ್ ತತ್ತರಿಸಿದರು. ಸಾಯಿ ಸುದರ್ಶನ್ (31), ಬಿಆರ್ ಶರಥ್ (2) ಮತ್ತು ದರ್ಶನ್ ನಲ್ಕಂಡೆಗೆ (12) ಕೃನಾಲ್ ಗೇಟ್ ಪಾಸ್ ನೀಡಿದರು.
ಮತ್ತೊಂದೆಡೆ ಶುಭ್ಮನ್ ಗಿಲ್ (19), ವಿಜಯ್ ಶಂಕರ್ (17), ರಾಹುಲ್ ತೆವಾಟಿಯಾ (30), ನೂರ್ ಅಹ್ಮದ್ (4) ಮತ್ತು ರಶೀದ್ ಖಾನ್ ಅವರನ್ನು ಯಶ್ ಠಾಕೂರ್ ಔಟ್ ಮಾಡಿದರು. ಕೇನ್ ವಿಲಿಯಮ್ಸನ್ (1) ಮತ್ತು ಉಮೇಶ್ ಯಾದವ್ಗೆ ಕ್ರಮವಾಗಿ ರವಿ ಬಿಷ್ಣೋಯ್ ಮತ್ತು ನವೀನ್ ಉಲ್ ಹಕ್ ಅವರನ್ನು ಔಟ್ ಮಾಡಿದರು. ಆದರೆ ಗುಜರಾತ್ ಪರ ಒಬ್ಬರೂ ಕ್ರೀಸ್ ಕಚ್ಚಿನ ನಿಲ್ಲುವ ಕೆಲಸಕ್ಕೆ ಕೈಹಾಕಲಿಲ್ಲ. ಅಂತಿಮವಾಗಿ ಜಿಟಿ 130 ರನ್ಗಳಿಗೆ ಸರ್ಪಪತನ ಕಂಡಿತು. ಕೃನಾಲ್ 4 ಓವರ್ಗೆ 11 ರನ್ ನೀಡಿ 3 ವಿಕೆಟ್ ಪಡೆದರೆ, ಯಶ್ ಠಾಕೂರ್ 3.5 ಓವರ್ಗಳಲ್ಲಿ 30 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದು ಮಿಂಚಿದರು.
ಮಾರ್ಕಸ್ ಸ್ಟೋಯ್ನಿಸ್ ಅರ್ಧಶತಕದ ಬಲ
ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ನಡೆಸಿದ ಲಕ್ನೋ ಪರ ಕ್ವಿಂಟನ್ ಡಿ ಕಾಕ್ ಮೊದಲ ಓವರ್ನಲ್ಲೇ ಸಿಕ್ಸರ್ ಸಿಡಿಸಿ ಔಟಾದರು. ನಂತರ ಕ್ರೀಸ್ಗೆ ಬಂದ ದೇವದತ್ ಪಡಿಕ್ಕಲ್ (7) ಮತ್ತೆ ವಿಫಲರಾದರು. ಆರಂಭಿಕ ಡಬಲ್ ಆಘಾತದ ಬಳಿಕ ನಾಯಕ ಕೆಎಲ್ ರಾಹುಲ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಜವಾಬ್ದಾರಿಯುತ ಬ್ಯಾಟಿಂಗ್ಗೆ ಒತ್ತು ನೀಡಿದರು. ಈ ಹಂತದಲ್ಲಿ ಜಿಟಿ ಬೌಲರ್ಗಳು ಸಹ ರನ್ ವೇಗಕ್ಕೆ ಕಡಿವಾಣ ಹಾಕಿದರು.
3ನೇ ವಿಕೆಟ್ಗೆ 73 ರನ್ಗಳು ಹರಿದು ಬಂದವು. ಆದರೆ ಈ ವೇಳೆ ಕೆಎಲ್ ರಾಹುಲ್ 31 ಎಸೆತಗಳಲ್ಲಿ 33 ರನ್ ಗಳಿಸಿದರು. ಮತ್ತೊಂದೆಡೆ ಸ್ಟೋಯ್ನಿಸ್ 8ನೇ ಐಪಿಎಲ್ ಅರ್ಧಶತಕವನ್ನು ಪೂರೈಸಿದರು. 43 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 58 ರನ್ ಗಳಿಸಿ ಔಟಾದರು. ಆಯುಷ್ ಬದೋನಿ 20, ನಿಕೋಲಸ್ ಪೂರನ್ 32 ರನ್ ಸಿಡಿಸಿ ತಂಡದ ಮೊತ್ತವನ್ನು 165ಕ್ಕೆ ಕೊನೆಗೊಳಿಸಿದರು.