ಬಂಡೆಗಲ್ಲಿನಂತೆ ನಿಂತು ಆಸ್ಟ್ರೇಲಿಯಾ ಬೌಲಿಂಗ್ ಎದುರಿಸಿದ ರಾಹುಲ್-ಜೈಸ್ವಾಲ್; ಅಜೇಯ 172 ರನ್ ಜೊತೆಯಾಟ, ಭರ್ಜರಿ ಮುನ್ನಡೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಬಂಡೆಗಲ್ಲಿನಂತೆ ನಿಂತು ಆಸ್ಟ್ರೇಲಿಯಾ ಬೌಲಿಂಗ್ ಎದುರಿಸಿದ ರಾಹುಲ್-ಜೈಸ್ವಾಲ್; ಅಜೇಯ 172 ರನ್ ಜೊತೆಯಾಟ, ಭರ್ಜರಿ ಮುನ್ನಡೆ

ಬಂಡೆಗಲ್ಲಿನಂತೆ ನಿಂತು ಆಸ್ಟ್ರೇಲಿಯಾ ಬೌಲಿಂಗ್ ಎದುರಿಸಿದ ರಾಹುಲ್-ಜೈಸ್ವಾಲ್; ಅಜೇಯ 172 ರನ್ ಜೊತೆಯಾಟ, ಭರ್ಜರಿ ಮುನ್ನಡೆ

ಪರ್ತ್‌ ಟೆಸ್ಟ್‌ನ ಎರಡನೇ ದಿನದಾಟವು ಅಚ್ಚರಿಯ ತಿರುವು ಪಡೆದಿದೆ. ಪಿಚ್‌ ಸ್ವರೂಪ ಕೂಡಾ ಬದಲಾಗಿದೆ. ಮೊದಲ ದಿನದಾಟದಲ್ಲಿ‌ ಒಟ್ಟು 17 ವಿಕೆಟ್‌ ಪತನವಾಗಿತ್ತು. ಆದರೆ, ಎರಡನೇ ದಿನದಾಟದ ವೇಳೆಗೆ ಕೇವಲ 3 ವಿಕೆಟ್‌ಗಳು ಮಾತ್ರವೇ ಉರುಳಿವೆ. ಆಸ್ಟ್ರೇಲಿಯಾ ವಿರುದ್ಧ ಕೆಎಲ್‌ ರಾಹುಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಶತಕದ ಜೊತೆಯಾಟವಾಡಿದ್ದಾರೆ.

ರಾಹುಲ್-ಜೈಸ್ವಾಲ್ ಅಜೇಯ 172 ರನ್ ಜೊತೆಯಾಟ; ಟೀಮ್‌ ಇಂಡಿಯಾ ಭರ್ಜರಿ ಮುನ್ನಡೆ
ರಾಹುಲ್-ಜೈಸ್ವಾಲ್ ಅಜೇಯ 172 ರನ್ ಜೊತೆಯಾಟ; ಟೀಮ್‌ ಇಂಡಿಯಾ ಭರ್ಜರಿ ಮುನ್ನಡೆ (AFP)

ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ ಮೊದಲ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ, ಭಾರತ ತಂಡ ಭರ್ಜರಿ ಮುನ್ನಡೆಯಲ್ಲಿದೆ. ಮೊದಲ ದಿನದಾಟದಲ್ಲಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದ ಟೀಮ್‌ ಇಂಡಿಯಾ, ಆ ಬಳಿಕ ಬೌಲಿಂಗ್‌ನಲ್ಲಿ ಮ್ಯಾಜಿಕ್‌ ಮಾಡಿತು. ಇದೀಗ ಎರಡನೇ ದಿನದಾಟದಲ್ಲಿ ಮತ್ತೆ ಬ್ಯಾಟಿಂಗ್‌ನಲ್ಲೀ ಗತ್ತಿನ ಪ್ರದರ್ಶನ ನೀಡಿದೆ. ಟೀಮ್‌ ಇಂಡಿಯಾ ಆರಂಭಿಕ ಜೋಡಿಯಾದ ಯಶಸ್ವಿ ಜೈಸ್ವಾಲ್‌ ಹಾಗೂ ಕೆಎಲ್‌ ರಾಹುಲ್‌, ಮುರಿಯದ ಮೊದಲ ವಿಕೆಟ್‌ಗೆ 172 ರನ್‌ಗಳ ದಾಖಲೆಯ ಜೊತೆಯಾಟವಾಡಿದ್ದಾರೆ. ಇದರೊಂದಿಗೆ ಸದ್ಯ ಭಾರತ ತಂಡವು 218 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ. ಅಲ್ಲದೆ ಪಂದ್ಯದಲ್ಲಿ ಗೆಲುವಿನ ಲೆಕ್ಕಾಚಾರ ಹೆಚ್ಚಾಗಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು 150 ರನ್‌ಗಳಿಗೆ ಆಲೌಟ್‌ ಆಗಿತ್ತು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ ತಂಡ ಕೇವಲ 104 ರನ್‌ ಗಳಿಸಿ ಸರ್ವಪತನವಾಯ್ತು. ಬೌಲಿಂಗ್‌ನಲ್ಲಿ ಅಬ್ಬರಿಸಿದ ನಾಯಕ ಜಸ್ಪ್ರೀತ್‌ ಬುಮ್ರಾ ಹಾಗೂ ಹರ್ಷಿತ್‌ ರಾಣಾ, ಕಾಂಗರೂಗಳನ್ನು ಅವರದ್ದೇ ನೆಲದಲ್ಲಿ ಕಟ್ಟಿಹಾಕಿದರು. ಇದರೊಂದಿಗೆ 46 ರನ್‌​ಗಳ ಮುನ್ನಡೆಯೊಂದಿಗೆ ಭಾರತ ತಂಡ ಎರಡನೇ ಇನ್ನಿಂಗ್ಸ್‌ ಆರಂಭಿಸಿತು.

ಪರ್ತ್‌ನಲ್ಲಿ ಎರಡನೇ ದಿನದಾಟವು ಅಚ್ಚರಿಯ ತಿರುವು ಪಡೆದಿದೆ. ಆಪ್ಟಸ್‌ ಸ್ಟೇಡಿಯಂ ಪಿಚ್‌ನ ಸ್ವರೂಪ ಕೂಡಾ ನಾಟಕೀಯವಾಗಿ ಬದಲಾಗಿದೆ. ಭಾರತದ ಎರಡನೇ ಇನ್ನಿಂಗ್ಸ್‌ ವೇಳೆ ಚೆಂಡಿನ ಚಲನೆ ಹಾಗೂ ಬೌನ್ಸ್‌ ತುಸು ಕಡಿಮೆಯಾಗಿರುವುದು ಕಂಡುಬಂದಿದೆ. ಮೊದಲ ದಿನದಾಟದಲ್ಲಿ‌ ಒಟ್ಟು 17 ವಿಕೆಟ್‌ ಪತನವಾಗಿತ್ತು. ಆದರೆ, ಎರಡನೇ ದಿನದಾಟದ ವೇಳೆಗೆ ಕೇವಲ 3 ವಿಕೆಟ್‌ಗಳು ಮಾತ್ರವೇ ಉರುಳಿವೆ.

ಶತಕ ಸಮೀಪ ಯಶಸ್ವಿ ಜೈಸ್ವಾಲ್

ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಜೋಡಿಯು, ಆಸೀಸ್‌ನ 7 ಬೌಲರ್‌ಗಳು ದಾಳಿಯಿಟ್ಟರೂ, ಬಂಡೆಗಲ್ಲಿನಂತೆ ನಿಂತು ಸಮರ್ಥವಾಗಿ ಎದುರಿಸಿದರು. ಈ ಇಬ್ಬರು ಭಾರತೀಯ ಆರಂಭಿಕರು ಎರಡು ಪೂರ್ಣ ಅವಧಿಗಳಲ್ಲಿ ಬ್ಯಾಟ್ ಬೀಸಿದರು. ಸದ್ಯ ಟೀಮ್‌ ಇಂಡಿಯಾ ಮುನ್ನಡೆ 218ಕ್ಕೆ ಏರಿಕೆಯಾಗಿದ್ದು, ಮೂರನೇ ದಿನದಾಟದ ಆಟ ಕುತೂಹಲ ಮೂಡಿಸಿದೆ. ಜೈಸ್ವಾಲ್ 193 ಎಸೆತಗಳಲ್ಲಿ 90 ರನ್‌ ಗಳಿಸಿದ್ದು, ಶತಕ ಸಿಡಿಸಲು ಕೇವಲ 10 ರನ್‌ ದೂರದಲ್ಲಿದ್ದಾರೆ. ಅತ್ತ ಜವಾಬ್ದಾರಿಯುತ ಆಟವಾಡುತ್ತಿರುವ ರಾಹುಲ್ 62 ರನ್ ಗಳಿಸಿ ಆಡುತ್ತಿದ್ದಾರೆ.

ರಾಹುಲ್‌ ಹಾಗೂ ಜೈಸ್ವಾಲ್‌ ಅವರ 172 ರನ್‌ಗಳ ಜೊತೆಯಾಟವು, 2010ರ ನಂತರ ಆಸೀಸ್‌ ನೆಲದಲ್ಲಿ ಪ್ರವಾಸಿ ತಂಡವೊಂದರಿಂದ ದಾಖಲಾದ ಮೊದಲ 150+ ರನ್‌ ಜೊತೆಯಾಟವಾಗಿದೆ. 2010ರಲ್ಲಿ MCGಯಲ್ಲಿ ಇಂಗ್ಲೆಂಡ್‌ನ ಆಂಡ್ರ್ಯೂ ಸ್ಟ್ರಾಸ್ ಮತ್ತು ಅಲಿಸ್ಟೇರ್ ಕುಕ್ 159 ರನ್‌ ಗಳಿಸಿದ್ದರು.

ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತದ ಎರಡೂ ಆರಂಭಿಕ ಬ್ಯಾಟರ್‌ಗಳು 50 + ರನ್ ಗಳಿಸಿದ ಸಂದರ್ಭ

  • ಸುನಿಲ್ ಗವಾಸ್ಕರ್ (70) ಮತ್ತು ಚೇತನ್ ಚೌಹಾಣ್ (85) -ಮೆಲ್ಬೋರ್ನ್, 1981
  • ಸುನಿಲ್ ಗವಾಸ್ಕರ್ (166*) & ಕ್ರಿಸ್ ಶ್ರೀಕಾಂತ್ (51) -ಅಡಿಲೇಡ್, 1985
  • ಸುನಿಲ್ ಗವಾಸ್ಕರ್ (172) ಮತ್ತು ಕ್ರಿಸ್ ಶ್ರೀಕಾಂತ್ (116) -ಸಿಡ್ನಿ, 1986
  • ಯಶಸ್ವಿ ಜೈಸ್ವಾಲ್ (68*) ಮತ್ತು ಕೆಎಲ್ ರಾಹುಲ್ (50*) -ಪರ್ತ್, 2024

Whats_app_banner