ಕನ್ನಡ ಸುದ್ದಿ  /  Cricket  /  Yashasvi Jaiswal And Rohit Sharma Century Partnership In India Vs England 5th Test Shubman Gill Kuldeep Yadav Spin Jra

IND vs ENG: ಜೈಸ್ವಾಲ್‌-ರೋಹಿತ್ ಶರ್ಮಾ ಶತಕದ ಜೊತೆಯಾಟ; ಮೊದಲ ದಿನದಾಟದ ಅಂತ್ಯಕ್ಕೆ ಸುಸ್ಥಿತಿಯಲ್ಲಿ ಭಾರತ

India vs England 5th Test: ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ಇಂಗ್ಲೆಂಡ್‌ ನಡುವಿನ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸುಸ್ಥಿತಿಯಲ್ಲಿದೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತವು 1 ವಿಕೆಟ್‌ ಕಳೆದುಕೊಂಡು 135 ರನ್‌ ಕಲೆ ಹಾಕಿದೆ. ನಾಯಕ ರೋಹಿತ್‌ ಹಾಗೂ ಶುಭ್ಮನ್‌ ಗಿಲ್‌ ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಯಶಸ್ವಿ ಜೈಸ್ವಾಲ್‌ ಮತ್ತು ರೋಹಿತ್ ಶರ್ಮಾ ಶತಕದ ಜೊತೆಯಾಟವಾಡಿದರು
ಯಶಸ್ವಿ ಜೈಸ್ವಾಲ್‌ ಮತ್ತು ರೋಹಿತ್ ಶರ್ಮಾ ಶತಕದ ಜೊತೆಯಾಟವಾಡಿದರು (AFP)

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿಯೂ, ಭಾರತ ಮುನ್ನಡೆ ಕಾಯ್ದುಕೊಂಡಿದೆ. ಧರ್ಮಶಾಲಾದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ರೋಹಿತ್‌ ಶರ್ಮಾ ಪಡೆ ಸುಸ್ಥಿತಿಯಲ್ಲಿದೆ. ದಿನದ ಅಂತ್ಯಕ್ಕೆ ಭಾರತವು ರನ್‌ಗಳ ಲೆಕ್ಕದಲ್ಲಿ ಹಿನ್ನಡೆಯಲ್ಲಿದ್ದರೂ, ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಇಂಗ್ಲೆಂಡ್‌ ತಂಡದ ಮೊದಲ ಇನ್ನಿಂಗ್ಸ್‌ ವೇಳೆ ಭಾರತದ ಸ್ಪಿನ್ನರ್‌ಗಳು ಅಬ್ಬರಿಸಿದರೆ, ಬಳಿಕ ಬ್ಯಾಟಿಂಗ್‌ನಲ್ಲಿ ಟೀಮ್‌ ಇಂಡಿಯಾ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ಯಶಸ್ವಿ‌ ಜೈಸ್ವಾಲ್ ಮಿಂಚಿದ್ದಾರೆ. ಜೈಸ್ವಾಲ್‌ ದಾಖಲೆಗಳು ದಿನದಾಟದ ಮೆರುಗು ಹೆಚ್ಚಿಸಿತು.

5ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡವು, ಉತ್ತಮ ಆರಂಭದ ಹೊರತಾಗಿಯೂ ಅಲ್ಪ ಮೊತ್ತಕ್ಕೆ ಕುಸಿಯಿತು. ಕುಲ್ದೀಪ್ ಯಾದವ್ ಸ್ಪಿನ್‌ ಮೋಡಿಗೆ ನಲುಗಿದ ಆಂಗ್ಲರು ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡ ಪರಿಣಾಮವಾಗಿ ಕೇವಲ 57.4 ಓವರ್‌ಗಳಲ್ಲಿ 218 ರನ್ ಗಳಿಸಿ ಆಲೌಟ್‌ ಆಯ್ತು. ಇದಕ್ಕೆ ಪ್ರತಿಯಾಗಿ ಮೊದಲ ದಿನವೇ ತನ್ನ ಪಾಲಿನ ಮೊದಲ ಇನ್ನಿಂಗ್ಸ್‌ ನಡೆಸಿದ ಭಾರತ, ವೇಗದ ಆಟಕ್ಕೆ ಕೈ ಹಾಕಿತು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಜೈಸ್ವಾಲ್‌ ಶತಕದ ಜೊತೆಯಾಟವಾಡಿದರು. ಪರಿಣಾಮ ದಿನದಾಟದ ಅಂತ್ಯಕ್ಕೆ ಭಾರತವು 30 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಕಳೆದುಕೊಂಡು 135 ರನ್‌ ಕಲೆ ಹಾಕಿದೆ. ನಾಯಕ ರೋಹಿತ್‌ ಹಾಗೂ ಶುಭ್ಮನ್‌ ಗಿಲ್‌, ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ದಿನದ ಅಂತ್ಯಕ್ಕೆ ಭಾರತವು 83 ರನ್‌ಗಳ ಹಿನ್ನಡೆಯಲ್ಲಿದೆ. ಸದ್ಯ ಟೀಮ್‌ ಇಂಡಿಯಾ ಒಂದು ವಿಕೆಟ್‌ ಮಾತ್ರ ಕಳೆದುಕೊಂಡಿದ್ದು, ಎರಡನೇ ದಿನದಾಟದಲ್ಲಿ ಮತ್ತೆ ಅಬ್ಬರಿಸುವ ಸುಳಿವು ಕೊಟ್ಟಿದೆ.

ಇದನ್ನೂ ಓದಿ | ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ 1000 ರನ್‌ ಗಡಿ ದಾಟಿದ ಜೈಸ್ವಾಲ್;‌ ಹಲವು ರೆಕಾರ್ಡ್ ಬ್ರೇಕ್;‌ ಹೀಗಿದೆ ದಾಖಲೆಗಳ ಪಟ್ಟಿ

ಭಾರತದ ಪರ ಇನ್ನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್‌ ಆಕರ್ಷಕ ಅರ್ಧಶತಕ ಸಿಡಿಸಿದರು. ಅಲ್ಲದೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 1000 ರನ್ ಗಡಿ ದಾಟಿದ ವಿಶೇಷ ಮೈಲಿಗಲ್ಲು ತಲುಪಿದರು. ಆ ಮೂಲಕ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ವೇಗವಾಗಿ ಈ ಮೈಲಿಗಲ್ಲು ತಲುಪಿದ ಎರಡನೇ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಅವರು, ಸ್ಫೊಟಕ ಆಟಕ್ಕೆ ಕೈ ಹಾಕಿದಾಗ ಶೋಯೆಬ್‌ ಬಶೀರ್‌ ಎಸೆತದಲ್ಲಿ ಸ್ಪಂಪ್‌ ಔಟ್‌ ಆದರು. 58 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 57 ರನ್‌ ಗಳಿಸಿದರು. ಇದರೊಂದಿಗೆ ಸರಣಿಯಲ್ಲಿ ಈವರೆಗೆ ಒಟ್ಟು 712 ರನ್‌ ಗಳಿಸಿದ ದಾಖಲೆ ನಿರ್ಮಿಸಿದರು.

ಅತ್ತ ರಕ್ಷಣಾತ್ಮಕ ಆಟವಾಡಿದ ನಾಯಕ ರೋಹಿತ್‌ ಶರ್ಮಾ, 83 ಎಸೆತಗಳಲ್ಲಿ52 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.‌ ಹಿಟ್‌ಮ್ಯಾನ್‌ ಇನ್ನಿಂಗ್ಸ್‌ನಲ್ಲಿ 2 ಸಿಕ್ಸರ್‌ ಕೂಡಾ ಸೇರಿದೆ. ಮತ್ತೊಂದೆಡೆ ಜೈಸ್ವಾಲ್‌ ಔಟಾದ ಬಳಿಕ ನಾಯಕನೊಂದಿಗೆ 31 ರನ್‌ ಜೊತೆಯಾಟವಾಡಿದ ಶುಭ್ಮನ್‌ ಗಿಲ್‌, 66.67ರ ಸರಾಸರಿಯಲ್ಲಿ 26 ರನ್‌ ಕಲೆ ಹಾಕಿದ್ದಾರೆ. ಇವರಿಬ್ಬರೂ ಎರಡನೇ ದಿನ ಬ್ಯಾಟಿಂಗ್‌ ಮುಂದುವರೆಸಲಿದ್ದಾರೆ.

ಇಂಗ್ಲೆಂಡ್‌ ಅನಿರೀಕ್ಷಿತ ಕುಸಿತ

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡ ಉತ್ತಮ ಆರಂಭ ಪಡೆಯಿತು. ಆದರೆ, ಉತ್ತಮ ಆರಂಭವನ್ನು ದೊಡ್ಡ ಮೊತ್ತಕ್ಕೆ ಪರಿವರ್ತಿಸಲು ಟೀಮ್‌ ಇಂಡಿಯಾ ಸ್ಪಿನ್ನರ್‌ಗಳು ಅವಕಾಶ ನೀಡಲಿಲ್ಲ. ಆಂಗ್ಲರ ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ಗಳನ್ನು ಭಾರತದ ಸ್ಪಿನ್ನರ್‌ಗಳೇ ಕಬಳಿಸಿದ್ದು ವಿಶೇಷ. 17.6 ಓವರ್‌ಗಳಲ್ಲಿ 64 ರನ್ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್‌, ಮತ್ತೆ ಮೇಲೇಳಲೇ ಇಲ್ಲ. ಝಾಕ್ ಕ್ರಾಲಿ ಗಳಿಸಿದ 79 ರನ್ ತಂಡದ ವೈಯಕ್ತಿಕ ಗರಿಷ್ಠ ಸ್ಕೋರ್ ಎನಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ತಂಡದ ಮೊತ್ತ 175 ಆಗಿದ್ದಾಗ ಮೂವರು ಘಟಾನುಘಟಿ ಆಟಗಾರರು ಔಟಾದರು. ಜಾನಿ ಬೈರ್‌ಸ್ಟೋ (29), ಜೋ ರೂಟ್ (26) ಮತ್ತು ಬೆನ್ ಸ್ಟೋಕ್ಸ್ (0) ಔಟಾಗುವ ಮೂಲಕ ತಂಡದ ಭಾರಿ ಕುಸಿತ ಕಂಡಿತು. ಅದಕ್ಕೂ ಮುನ್ನ ಬೆನ್ ಡಕೆಟ್ 27 ಹಾಗೂ ಒಲಿ ಪೋಪ್ 11 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು.

ವಿಕೆಟ್ ಕೀಪರ್ ಬೆನ್ ಫೋಕ್ಸ್ 24 ರನ್‌ ಗಳಿಸಿದರೆ, ಟಾಮ್ ಹಾರ್ಟ್ಲಿ 6 ರನ್‌ ಗಳಿಸಿದರು. ಮಧ್ಯಮ ಕ್ರಮಾಂಕ ಕುಸಿದಂತೆ ಕೆಳಕ್ರಮಾಂಕದ ಬ್ಯಾಟರ್‌ಗಳು ಕೂಡಾ ಬೇಗನೆ ವಿಕೆಟ್‌ ಒಪ್ಪಿಸಿದರು.

ಕುಲ್ದೀಪ್‌ ಯಾದವ್ ವೇಗದ ಸಾಧನೆ

ಭಾರತದ ಪರ ಕುಲ್ದೀಪ್ ಯಾದವ್ ಒಟ್ಟು 5 ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ಅತಿ ಕಡಿಮೆ ಎಸೆತಗಳಲ್ಲಿ ವೇಗವಾಗಿ 50 ಟೆಸ್ಟ್‌ ವಿಕೆಟ್‌ ಕಬಳಿಸಿದ ಸಾಧನೆ ಮಾಡಿದರು. ಆರ್ ಅಶ್ವಿನ್ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 1 ವಿಕೆಟ್ ಕಿತ್ತರು.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com )

IPL_Entry_Point