ಯಶಸ್ವಿ ಜೈಸ್ವಾಲ್ ಕೈಬಿಟ್ಟಿದ್ದಕ್ಕೆ ರೋಹಿತ್ ಶರ್ಮಾ ಸ್ವಾರ್ಥಿ ಎಂದ ನೆಟ್ಟಿಗರು; ಸರಿಯಾಗಿ ತಿರುಗೇಟು ಕೊಟ್ಟ ಫ್ಯಾನ್ಸ್
Yashasvi Jaiswal: ವಿರಾಟ್ ಕೊಹ್ಲಿ ಮರಳಲು ದಾರಿ ಮಾಡಿಕೊಡಲು ಮೊದಲ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಯಶಸ್ವಿ ಜೈಸ್ವಾಲ್, ಇದೀಗ ಎರಡನೇ ಏಕದಿನದಲ್ಲಿ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ.

ಕಟಕ್ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಯಶಸ್ವಿ ಜೈಸ್ವಾಲ್ ಅವರನ್ನು ಕೈಬಿಟ್ಟ ನಂತರ ಭಾರತದ ನಾಯಕ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ವಿರಾಟ್ ಕೊಹ್ಲಿ ಮರಳಲು ದಾರಿ ಮಾಡಿಕೊಡಲು ಮೊದಲ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಜೈಸ್ವಾಲ್, ಇದೀಗ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಜೈಸ್ವಾಲ್ ಬಲಿಪಶುವನ್ನಾಗಿ ಮಾಡಿದ್ದಕ್ಕಾಗಿ ರೋಹಿತ್ರನ್ನು ಕ್ರೂರವಾಗಿ ಟೀಕಿಸಲಾಗುತ್ತಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಐದು ಇನ್ನಿಂಗ್ಸ್ಗಳಲ್ಲಿ 31 ರನ್ಗಳಿಸಿದ್ದನ್ನು ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನದಲ್ಲಿ ಕಳಪೆ ಪ್ರದರ್ಶನ ನೀಡಿದ್ದನ್ನು ನೆನಪಿಸಿದ ನೆಟ್ಟಿಗರು, ಸ್ವಾರ್ಥಿ ಎಂದು ಜರಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಜೈಸ್ವಾಲ್ 22 ಎಸೆತಗಳಲ್ಲಿ 3 ಬೌಂಡರಿ ಸಹಿತ 15 ರನ್ ಸಿಡಿಸಿ ಔಟಾಗಿದ್ದರು. ಕೊಹ್ಲಿಗಿಂತ ಅತಿ ಹೆಚ್ಚು ಪಂದ್ಯಗಳನ್ನಾಡುವ ಅರ್ಹತೆ ಈ ಯುವ ಆಟಗಾರನಿಗಿದೆ. ಬಿಸಿಸಿಐ ಆಟಗಾರರನ್ನು ಅವರ ಪರಂಪರೆಯ ಆಧಾರದ ಮೇಲೆ ಆಡಿಸುವುದನ್ನು ನಿಲ್ಲಿಸಬೇಕು ಎಂದು ಮಹಿ ನಾಯಕ್ ಎನ್ನುವ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ರೋಹಿತ್ ಸಮರ್ಥಿಸಿಕೊಂಡ ಅಭಿಮಾನಿಗಳು
ರೋಹಿತ್ ಶರ್ಮಾ ತಂಡದಲ್ಲಿ ತನ್ನನ್ನು ತಾನು ಉಳಿಸಿಕೊಳ್ಳುವುದು ಮತ್ತು ಜೈಸ್ವಾಲ್ ಅವರನ್ನು ಕೈಬಿಡುವುದು, ಇಂತಹ ಹೊಣೆಗಾರಿಕೆಗೆ ನಾಚಿಕೆಪಡುತ್ತೇನೆ, ಇಂದು ಪ್ರದರ್ಶನ ನೀಡದಿದ್ದರೆ ವಿರಾಟ್‌ಗೂ ಅಷ್ಟೇ ಎಂದು ಸರಿತ್ ಮೊಹಾಂತಿ ಎನ್ನುವವರು ಪ್ರತಿಕ್ರಿಯಿಸಿದ್ದಾರೆ. ಜೈಸ್ವಾಲ್ ಒಬ್ಬ ಬಲಿ ಪಶು ಎಂದು ಹೇಳಿದ್ದಾರೆ. ಆದರೆ ಕೆಲವರು ರೋಹಿತ್ ನಿರ್ಧಾರವವನ್ನು ಸಮರ್ಥಿಸಿಕೊಂಡಿದ್ದು, ಬೆಂಬಲಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ವಿರಾಟ್ ಕೊಹ್ಲಿ ಅಗತ್ಯ ಇದೆ. ಅವರು ತಂಡದ ಆಧಾರ ಸ್ಥಂಭ. ಜೈಸ್ವಾಲ್ಗೆ ಇನ್ನೂ ಉತ್ತಮ ಭವಿಷ್ಯ ಇದೆ ಎಂದು ಹೇಳಿದ್ದಾರೆ.
ಜೈಸ್ವಾಲ್ ಅವಕಾಶ ಪಡೆದಿದ್ದೇ ವಿರಾಟ್ ಅಲಭ್ಯತೆಯ ಕಾರಣ. ಹಾಗಾಗಿ ವಿರಾಟ್ ಕೊಹ್ಲಿ ಮರಳಿದ್ದು, ಜೈಸ್ವಾಲ್ ಜಾಗ ಬಿಟ್ಟು ಕೊಟ್ಟಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂಬುದು ಹಲವರ ಅಭಿಪ್ರಾಯ. ಜೈಸ್ವಾಲ್ ಕೈಬಿಟ್ಟಿರುವುದರಲ್ಲಿ ಸ್ವಾರ್ಥ ಏನಿದೆ? ಕೊಹ್ಲಿಯನ್ನೇ ಬಿಟ್ಟು ಜೈಸ್ವಾಲ್ಗೆ ಅವಕಾಶ ನೀಡಬೇಕು ಎನ್ನುವ ಆರೋಪವನ್ನು ಯಾವ ಕಾರಣಕ್ಕೆ ಮಾಡುತ್ತಿದ್ದೀರೋ ಅರ್ಥವೇ ಆಗುತ್ತಿಲ್ಲ ಎಂದು ಹಿಟ್ಮ್ಯಾನ್ ಅಭಿಮಾನಿಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಒಂದೆರಡು ಪಂದ್ಯಗಳಲ್ಲಿ ಸರಿಯಾಗಿ ಆಡಿಲ್ಲ ಎಂಬ ಮಾತ್ರ ಕೊಹ್ಲಿಯನ್ನೇ ತಂಡದಿಂದ ಕೈಬಿಡಬೇಕು ಎನ್ನುವ ಮನಸ್ಥಿತಿಗಳಿಗೆ ಏನೆನ್ನಬೇಕು ಎಂಬುದು ಹಲವರ ಮಾತು.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
ಇಂಗ್ಲೆಂಡ್ ತಂಡ
ಜೋ ರೂಟ್, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್ಸ್ಟನ್, ಜೇಮಿ ಓವರ್ಟನ್, ಗಸ್ ಅಟ್ಕಿನ್ಸನ್, ಆದಿಲ್ ರಶೀದ್, ಮಾರ್ಕ್ ವುಡ್, ಸಾಕಿಬ್ ಮಹಮೂದ್.
