ಕನ್ನಡ ಸುದ್ದಿ  /  Cricket  /  Yashasvi Jaiswal Enters Top 10 Of Icc Test Batting Rankings Virat Kohli Up 1 Spot To 8 Rohit Sharma Ind Vs Eng Test Jra

ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಅಗ್ರ 10ಕ್ಕೆ ಲಗ್ಗೆ ಇಟ್ಟ ಯಶಸ್ವಿ ಜೈಸ್ವಾಲ್, ಆಡದಿದ್ದರೂ 8ಕ್ಕೇರಿದ ವಿರಾಟ್

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ 11ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅತ್ತ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಅಬ್ಬರಿಸುತ್ತಿರುವ ಯಶಸ್ವಿ ಜೈಸ್ವಾಲ್‌ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಇದೇ ಮೊದಲ ಬಾರಿಗೆ ಅಗ್ರ ಹತ್ತರೊಳಗೆ ಸ್ಥಾನ ಪಡೆದಿದ್ದಾರೆ.

ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಅಗ್ರ 10ಕ್ಕೆ ಲಗ್ಗೆ ಇಟ್ಟ ಯಶಸ್ವಿ ಜೈಸ್ವಾಲ್
ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಅಗ್ರ 10ಕ್ಕೆ ಲಗ್ಗೆ ಇಟ್ಟ ಯಶಸ್ವಿ ಜೈಸ್ವಾಲ್

ಭಾರತ ಮತ್ತು ಇಂಗ್ಲೆಂಡ್‌‌ (India vs England) ತಂಡಗಳ ನಡುವಿನ ಟೆಸ್ಟ್‌ ಸರಣಿಯ 5ನೇ ಪಂದ್ಯಕ್ಕೂ ಮುನ್ನವೇ, ಟೀಮ್‌ ಇಂಡಿಯಾ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ಗೆ (Yashasvi Jaiswal) ಭಾರಿ ಬಡ್ತಿ ಪಡೆದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿರುವ ಜೈಸ್ವಾಲ್, ಶ್ರೇಯಾಂಕದಲ್ಲಿ ಎರಡು ಸ್ಥಾನ ಜಿಗಿದು ಪ್ರಸ್ತುತ 727 ರೇಟಿಂಗ್ ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದ್ದಾರೆ. ಅತ್ತ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ 11ನೇ ಸ್ಥಾನದಲ್ಲಿದ್ದಾರೆ.

2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 22 ವರ್ಷದ ಬ್ಯಾಟರ್‌, ಭಾರತದ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಎರಡು ದ್ವಿಶತಕಗಳನ್ನು ಬಾರಿಸಿರುವ ಅವರು, ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಆ ಮೂಲಕ ಟೆಸ್ಟ್ ಸರಣಿಯೊಂದರಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಗೆ ಯುವ ಆಟಗಾರ ಸೇರಿಕೊಂಡಿದ್ದಾರೆ.

ಪ್ರಸಕ್ತ ಸರಣಿಯಲ್ಲಿ ಆಡಿದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 93.57ರ ಸರಾಸರಿಯಲ್ಲಿ ಜೈಸ್ವಾಲ್‌ 655 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಮತ್ತು ಎರಡು ಶತಕಗಳು ಸೇರಿವೆ. ಈ ಎರಡೂ ಶತಕಗಳನ್ನು ಅವರು ದ್ವಿಶತಕಗಳಾಗಿ ಪರಿವರ್ತಿಸಿದ್ದಾರೆ.

ವಿರಾಟ್‌ ಕೊಹ್ಲಿ 8ನೇ ಸ್ಥಾನ, ರೋಹಿತ್‌ಗೆ 11ನೇ ಸ್ಥಾನ

ಅತ್ತ ರಾಜ್‌ಕೋಟ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ನಂತರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಶ್ರೇಯಾಂಕದಲ್ಲಿ 11ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅತ್ತ ವೈಯಕ್ತಿಕ ಕಾರಣಗಳಿಂದಾಗಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಕೂಡ ಒಂದು ಸ್ಥಾನ ಮೇಲಕ್ಕೇರಿ ಎಂಟನೇ ಸ್ಥಾನಕ್ಕೆ ತಲುಪಿದ್ದಾರೆ.

ನ್ಯೂಜಿಲೆಂಡ್‌ ತಂಡದ ಕೇನ್ ವಿಲಿಯಮ್ಸನ್ ಮತ್ತೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ರಾಂಚಿ ಟೆಸ್ಟ್‌ನಲ್ಲಿ ಶತಕ ಸಿಡಿಸುವುದರೊಂದಿಗೆ ಫಾರ್ಮ್‌ಗೆ ಮರಳಿದ್ದ ಜೋ ರೂಟ್, ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ.

ಇದನ್ನೂ ಓದಿ | ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್‌ಗೆ ಚಳಿಯೊಂದಿಗೆ ಮಳೆ ಕಾಟ; ಧರ್ಮಶಾಲಾ ಪಿಚ್ ಹಾಗೂ ಹವಾಮಾನ ಮುನ್ಸೂಚನೆ ಹೀಗಿದೆ

ಬೌಲಿಂಗ್ ಶ್ರೇಯಾಂಕದಲ್ಲಿ ಭಾರತದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಒಂದು ಸ್ಥಾನ ಕುಸಿದು ಏಳನೇ ಸ್ಥಾನದಲ್ಲಿದ್ದಾರೆ. ಭಾರತದ ಸ್ಟಾರ್ ಬೌಲಿಂಗ್ ಜೋಡಿಯಾದ ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಅಗ್ರ ಎರಡು ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಆ ಮೂಲಕ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.

ಬೌಲಿಂಗ್‌ ಶ್ರೇಯಾಂಕದಲ್ಲಿ ಆಸ್ಟ್ರೇಲಿಯನ್ನರು ಪ್ರಾಬಲ್ಯ ಮುಂದುವರೆಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ 172 ರನ್‌ಗಳ ಭರ್ಜರಿ ಜಯ ಸಾಧಿಸಿದ ನಂತರ, ವೇಗಿ ಜೋಶ್ ಹೇಜಲ್‌ವುಡ್ ಮತ್ತು ನಾಥನ್ ಲಿಯಾನ್ ಕ್ರಮವಾಗಿ ನಾಲ್ಕು ಮತ್ತು ಆರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ನಾಲ್ವರು ಆಟಗಾರರು ಅಗ್ರ 12ರಲ್ಲಿ ಸ್ಥಾನ ಪಡೆದಿದ್ದಾರೆ. ನಾಯಕ ಪ್ಯಾಟ್ ಪ್ಯಾಟ್ ಕಮಿನ್ಸ್ ಐದನೇ ಸ್ಥಾನದಲ್ಲಿದ್ದರೆ, ಮಿಚೆಲ್ ಸ್ಟಾರ್ಕ್ 12ನೇ ಸ್ಥಾನದಲ್ಲಿದ್ದಾರೆ.‌

ಇದನ್ನೂ ಓದಿ | ಆರ್‌ಸಿಬಿ ವಿರುದ್ಧ ಬ್ಯಾಟಿಂಗ್‌ ಆಯ್ಕೆ ಮಾಡಿದ ಗುಜರಾತ್‌ ಜೈಂಟ್ಸ್‌; ಇಂದಿನ ಪಂದ್ಯಕ್ಕೂ ಶ್ರೇಯಾಂಕಾ ಪಾಟೀಲ್‌ ಅಲಭ್ಯ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point